ಆನೆಗಳ ಸಂರಕ್ಷಣೆಗೆಂದು ಅಧುನಿಕ ತಂತ್ರಜ್ಞಾನ

Share Button

ವಿಘ್ನವಿನಾಶ ವಿನಾಯಕನ ಹಬ್ಬವನ್ನು ಸಂಭ್ರಮದಿಂದ ನಾವು ಆಚರಿಸುತ್ತಿರುವಂತೆ, ದಂತಗಳಿಗಾಗಿ ಆನೆಗಳನ್ನು ಕೊಲ್ಲುವ ಪ್ರಕರಣಗಳು ವಿಶ್ವಾದಂತ್ಯ ವರದಿಯಾಗುತ್ತಿವೆ. ಆನೆಗಳ ಸಂತತಿ ಕಣ್ಮರೆಯಾಗದಂತೆ ತಡೆಯಲು ಅಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತಿದೆ ಎಂದು ಸಂಕ್ಷಿಪ್ತ ಪರಿಚಯವನ್ನು ಈ ಲೇಖನದಲ್ಲಿ ನೀಡಲಾಗಿದೆ.

ಆಫ್ರಿಕಾದ ದೇಶ ಬೋಟ್ಸ್‍ವಾನಾದ ಅಭಯಾರಣ್ಯಗಳಲ್ಲಿ 3 ಲಕ್ಷ 50 ಸಾವಿರಕ್ಕೂ ಹೆಚ್ಚು ಆನೆಗಳಿವೆ ಎಂದು ವರ್ಷ 2015ರಲ್ಲಿ ನೆಡೆದ ಆಫ್ರಿಕಾ ದೇಶಗಳಲ್ಲಿರುವ ಆನೆಗಳ ಗಣತಿಯಲ್ಲಿ ಅಂದಾಜು ಮಾಡಲಾಗಿದೆ. ದಂತಕ್ಕಾಗಿ ಆನೆಗಳನ್ನು ಹತ್ಯೆ ಮಾಡುವ ಅಪರಾಧಿಗಳನ್ನು ಗುಂಡಿಟ್ಟು ಕೊಲ್ಲುವ ಅಧಿಕಾರ ಮತ್ತು ಕಾಡಿಗೆ ನುಗ್ಗುವ ದಂತಕಳ್ಳರ ಚಲನವಲನಗಳನ್ನು ಪತ್ತೆ ಮಾಡಲು ಅತ್ಯಾಧುನಿಕ ಉಪಕರಣಗಳನ್ನು ಬೋಟ್ಸವಾನಾದ ವನ್ಯಜೀವಿ ಸಂರಕ್ಷಣಾ ಪಡೆಗಳಿಗೆ ನೀಡಲಾಗಿತ್ತು.

ಜುಲೈ 2018ರಲ್ಲಿ ಬೋಟ್ಸ್‍ವಾನಾದ ಅಭಯಾರಣ್ಯಗಳ ವೈಮಾನಿಕ ಸಮೀಕ್ಷೆ ನೆಡೆಸುವಾಗ, ದಂತಕಳ್ಳರು ಕೊಂದಿರುವ 90ಕ್ಕೂ ಹೆಚ್ಚು ಆನೆಗಳು ಪತ್ತೆಯಾದವು. ಆನೆಗಳನ್ನು ಕೊಂದು, ದಂತಗಳಿಗಾಗಿ ಆನೆಗಳ ತಲೆಯನ್ನು ಕಡಿದು ದಂತಕಳ್ಳರು ತಗೆದುಕೊಂಡು ಹೋಗಿರುವುದು ತಿಳಿದಾಗ, ಇಷ್ಟೊಂದು ಸುರಕ್ಷತೆ ಇರುವ ಅಭಯಾರಣ್ಯದಲ್ಲಿ ಇಷ್ಟೊಂದು ಆನೆಗಳ ಹತ್ಯೆ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ಎದುರಾಗುತ್ತದೆ.


ವನ್ಯಜೀವಿ ಪ್ರೇಮಿಯಾಗಿದ್ದ ಅಧ್ಯಕ್ಷರ ಅವಧಿಯಲ್ಲಿ ಬೋಟ್ಸವಾನಾದಲ್ಲಿ ವನ್ಯಜೀವಿ ಸಂರಕ್ಷಣೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಯಿತು. ಆನೆಗಳ ಹಂತಕರು ಈ ದೇಶದೊಳಗೆ ಪ್ರವೇಶಿಸಲು ಹಿಂಜರಿದರು. ಸುರಕ್ಷಿತ ಅಭಯಾರಣ್ಯಗಳಿಗೆ ಬೇರೆ ದೇಶಗಳಿಂದ ಆನೆಗಳು ವಲಸೆ ಬಂದವು ಕೂಡಾ. ಆಫ್ರಿಕಾದ ಆನೆಗಳ ಸಂರಕ್ಷಣೆಯಲ್ಲಿ ಮಾದರಿ ರಾಷ್ಟ್ರವಾಯಿತು ಬೋಟ್ಸವಾನಾ. ಈ ಅಧ್ಯಕ್ಷರು ಏಪ್ರೀಲ್‍ 2018ರಲ್ಲಿ ನಿವೃತ್ತಿಯಾಗಿ ಹೊಸ ಅಧ್ಯಕ್ಷರು ಬಂದರು. ದಂತಕಳ್ಳರು ಮತ್ತು ವನ್ಯಜೀವಿ ಹಂತಕರನ್ನು ಕೊಲ್ಲುವ ಅಧಿಕಾರವನ್ನು ವನ್ಯಜೀವಿ ಸಂರಕ್ಷಣಾ ಪಡೆಯಿಂದ ಹಿಂಪಡೆಯಲಾಯಿತು. ವನ್ಯಜೀವಿ ಹಂತಕರ ಚಲನವಲನಗಳನ್ನು ಗುರುತಿಸಲು ಬಳಸಲಾಗುತ್ತಿದ್ದ ಅಧುನಿಕ ಉಪಕರಣಗಳ ಕಾರ್ಯಚರಣೆ ನಿಲ್ಲಿಸಲಾಯಿತು. ಈಗ ಯಾವ ಅಡೆತಡೆ ಇಲ್ಲದೆ ದಂತಕಳ್ಳರು ಬೋಟ್ಸ್‍ವಾನಾ ಕಾಡುಗಳಿಗೆ ನುಗ್ಗುತ್ತಿದ್ದಾರೆ ಎಂದು ಆಫ್ರಿಕಾದ ದೇಶಗಳಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಸಂಶೋಧಕ ರಾಸ್‍ ಹಾರ್ವೆ ವಿವರಿಸುತ್ತಾರೆ.

ಅಧ್ಯಕ್ಷ, ಆಡಳಿತ ಪಕ್ಷ, ರಾಜಕೀಯ ಅಸ್ಥಿರತೆ, ಯುದ್ಧಗಳಂತಹ ಸನ್ನಿವೇಶಗಳಲ್ಲಿ ವನ್ಯಜೀವಿ ಸಂರಕ್ಷಣೆಗೆ ಕುತ್ತಾಗಬಾರದು ಎಂದು ಹೊಸ ಯೋಜನೆಯೊಂದು ಸಿದ್ಧವಾಗಿದೆ. ಫ್ರಾನ್ಸ್ ದೇಶದ ನವೋದ್ಯಮ ಕೀನಿಸ್‍, ಸಂರಕ್ಷಣೆ ಮಾಡಬೇಕಾದ ಆನೆಗಳಂತಹ ಪ್ರಾಣಿಗಳಿಗೆ ಐಓಟಿ ತಂತ್ರಜ್ಞಾನ ಆಧಾರಿತ ಸೂಕ್ಷ್ಮಗ್ರಾಹಕ ( ಸೆನ್ಸರ್‍) ಬಿಲ್ಲೆಗಳನ್ನು ತೊಡಿಸಿ, ನ್ಯಾನೋ ಉಪಗ್ರಹಗಳ ಸಹಾಯದಿಂದ  ಈ ಆನೆಗಳ ಚಲನವಲನವನ್ನು ಗಮನಿಸುವ ಯೋಜನೆಯನ್ನು ರೂಪಿಸಿದೆ.

ಷೂಗಳನ್ನು ಖರೀದಿಸಿದಾಗ ದೊರೆಯುವ ರಟ್ಟಿನ ಬಾಕ್ಸಿನ ಗಾತ್ರ ನ್ಯಾನೋ ಉಪಗ್ರಹಗಳನ್ನು ಉಡಾಯಿಸಲು ಫ್ರಾನ್ಸ್‍ನ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಕೀನಿಸ್‍ ಕೆಲಸ ಮಾಡುತ್ತಿದೆ. ಸುಮಾರು 600 ಕಿಲೋಮೀಟರ್‍ ಎತ್ತರದಲ್ಲಿ ಕೆಲಸ ಮಾಡುವ ಒಟ್ಟು 20 ಇಂತಹ ನ್ಯಾನೋ ಉಪಗ್ರಹಗಳ ಜಾಲವನ್ನು ನಿರ್ಮಿಸಿ, 10 ಲಕ್ಷಕ್ಕೂ ಹೆಚ್ಚು ವನ್ಯಜೀವಿಗಳ ಚಲನವಲನಗಳನ್ನು ಗುರುತಿಸುವ ಮತ್ತು ಅಪಾಯದ ಸಮಯದಲ್ಲಿ ವನ್ಯಜೀವಿಗಳನ್ನು ಸುರಕ್ಷಿತ ಸ್ಥಳಕ್ಕೆ ಚಲಿಸುವಂತೆ ಆದೇಶಗಳನ್ನು ನೀಡುವ ವ್ಯವಸ್ಥೆ ಇದಾಗಿದೆ. ವರ್ಷ 2021ರ ಹೊತ್ತಿಗೆ 20 ನ್ಯಾನೋ ಉಪಗ್ರಹಗಳ ಜಾಲ ಕೆಲಸ ಮಾಡುತ್ತಿರುತ್ತದೆ. ಪ್ರತಿ 15 ನಿಮಿಷಕ್ಕೊಮ್ಮೆ ಪ್ರಾಣಿಗಳ ಚಲನವಲನಗಳ ಮಾಹಿತಿಯನ್ನು ಈ ಉಪಗ್ರಹ ಜಾಲದಿಂದ ಪಡೆಯಬಹುದು. ವನ್ಯಜೀವಿ ಸಂಶೋಧಕರು, ಸಂರಕ್ಷಕ ಪಡೆಗಳು ಮೊದಲಾದವರಿಗೆ ದಂತಕಳ್ಳರು ಮೊದಲಾದ ಅಪರಾಧಿಗಳನ್ನು ಕುರಿತು ಮಾಹಿತಿಯನ್ನು ಅತ್ಯಂತ ಸುಲಭ ದರದಲ್ಲಿ ನೀಡಲು ಕೀನಿಸ್‍ ಉದ್ದೇಶಿಸಿದೆ.

ನಮ್ಮ ದೇಶದಲ್ಲಿ ಇಂತಹ ನವೋದ್ಯಮಗಳಿಗೆ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ಥರಾದವರನ್ನು ಗುರುತಿಸಿವುದು, ಪರಿಸರ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ, ಮೀನುಗಾರರಿಗೆ ಮೀನುಗಳು ಹೆಚ್ಚಾಗಿ ದೊರೆಯುವ ಮಾಹಿತಿ ನೀಡುವುದು, ಹೀಗೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶವಿದೆ.

– ಉದಯಶಂಕರ ಪುರಾಣಿಕ 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: