ಅಂತರ್ಜಾಲ ಬಳಕೆ-ಚೌಕಟ್ಟನ್ನು ಮೀರದಿರಲಿ

Share Button

ಯಾವುದೇ ಒಂದು ಸಂಶೋಧನೆಯಾಗಲಿ,ಆವಿಷ್ಕಾರವಾಗಲಿ ಪ್ರಕೃತಿ ಹಾಗೂ ಮನುಕುಲದ ಒಳಿತಿಗಾಗಿ ಇರಬೇಕು. ಅವುಗಳ ಹಿಂದೆ ಜ್ಞಾನವೃದ್ಧಿ,ಆರೋಗ್ಯ, ಪರಿಸರದ ಬಗ್ಗೆ ಕಾಳಜಿಯಂತಹ ರಚನಾತ್ಮಕ ಉದ್ದೇಶಗಳ ನೆಲೆಗಟ್ಟಿರಬೇಕು. ಎರಡು ದಶಕದಿಂದೀಚೆಗೆ ಕಂಪ್ಯೂಟರ್ ಹಾಗೂ ಮೊಬೈಲ್‌ಗಳು ನಮ್ಮ ಬದುಕಿನಲ್ಲಿ ಸದ್ದು ಮಾಡಿದಷ್ಟು ಇನ್ನಾವ ಆವಿಷ್ಕಾರಗಳೂ ಸದ್ದು ಮಾಡಿಲ್ಲ. ಅಂತರ್ಜಾಲ ವ್ಯವಸ್ಥೆ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿ ಹೋಗಿದೆ. ಕೇವಲ ನಮ್ಮ ಒಂದೇ ಒಂದು ಬೆರಳಿಗೆ ಕೆಲಸ ಕೊಟ್ಟರೆ ವಿಶ್ವರೂಪವೇ ತೆರೆದುಕೊಳ್ಳುತ್ತದೆ. ಇದರಲ್ಲಿ ಏನೆಲ್ಲ ಇದೆ ಎನ್ನುವುದಕ್ಕಿಂತ ಏನೇನಿಲ್ಲ ಎನ್ನುವ ಮಾತು ಸಮಂಜಸವಾದೀತು. ಇಂಥ ಅನುಕೂಲತೆಯನ್ನು ಹೊಂದಿದ ನಾವು ಕಂಪ್ಯೂಟರ್ ಬಗೆಗಾಗಲೀ ಅದರಲ್ಲಿ ಸಿಗುವ ಜಾಲತಾಣಗಳ ಬಗೆಗೆ ನಕಾರಾತ್ಮಕವಾಗಿಯಾಗಲಿ ಇಲ್ಲ ನಿರಾಶಾದಾಯಕವಾಗಿಯಾಗಲಿ ಮಾತನಾಡುವುದು ಮೂರ್ಖತನ.

ಒಂದೇ ಕಡ್ಡಿಯನ್ನು ಗೀರಿ ಇಬ್ಬರು ವ್ಯಕ್ತಿಗಳಿಗೆ ಕೊಟ್ಟಾಗ ಒಬ್ಬ ನಂದಾದೀಪವನ್ನು ಹಚ್ಚಿದರೆ ಮತ್ತೊಬ್ಬ ಜಗತ್ತನ್ನೇ ದಹಿಸಬಹುದು. ಇದೇ ಪರಿಸ್ಥಿತಿ ಇಂದಿನ ಅಂತರ್ಜಾಲ,ಸಾಮಾಜಿಕ ಜಾಲತಾಣಗಳದ್ದಾಗಿದೆ. ಕಾಣೆಯಾಗುತ್ತಿರುವ ಅವಿಭಕ್ತ ಕುಟುಂಬಗಳು,ಬಿರುಕು ಬಿಟ್ಟ ಬಾಂದವ್ಯಗಳು, ಹತಾಶ ಮನೋಭಾವನೆ, ಜಡತ್ವ, ವಿಕೃತ ಮನೋಭಾವನೆಗಳು ಇಂದಿನ ಯುವಜನಾಂಗವನ್ನು ದಾರಿ ತಪ್ಪುವಂತೆ ಮಾಡುತ್ತಿವೆ. ಶಿಕ್ಷಣ ಕ್ಷೇತ್ರ, ವೃತ್ತಿ,ವ್ಯವಹಾರಗಳಲ್ಲಿ ಅನಿವಾರ್ಯವಾಗಿರುವ ಅಂತರ್ಜಾಲ ಸದುಪಯೋಗವಾಗುತ್ತಿರುವುದಕ್ಕಿಂತ ದುರುಪಯೋಗವಾಗುತ್ತಿರುವುದೇ ಹೆಚ್ಚು. ಶಾಲಾ ಮಕ್ಕಳಾದಿಯಾಗಿ ಇಂದು ಸಾಮಾಜಿಕ ಜಾಲತಾಣಗಳ ಸದಸ್ಯರಾಗಿದ್ದಾರೆ. ದಿನ ದಿನವೂ ಹೊಸ ಹೊಸ ಹೆಸರಿನೊಂದಿಗೆ ಸ್ಥಳ ಗಿಟ್ಟಿಸಿಕೊಳ್ಳುತ್ತಿರುವ ಸಾಮಾಜಿಕ ಜಾಲತಾಣ ಸೇವೆಗಳು ಈ ವಿಶಾಲ ಜಗತ್ತನ್ನು ಕಿರಿದಾಗಿಸುತ್ತಿವೆ. ಫೇಸ್‌ಬುಕ್,ಟ್ವಿಟರ್‌ನಂತಹ ಸುಲಭ ಸೇವೆಗಳಿಂದ ಅಭಿವ್ಯಕ್ತಿಗೆ ಕೊಡಲಿ ಏಟು ಬೀಳುತ್ತಿದೆ. ಪತ್ರ ಮುಖೇನ ಹಂಚಿಕೊಳ್ಳಬೇಕಾದ ನವಿರಾದ ಸ್ನೇಹ,ಪ್ರೀತಿಯ ಭಾವನೆಗಳು ಮೊಬೈಲ್ ಸಂದೇಶ,ಫೇಸ್‌ಬುಕ್ಗಳಿಗೆ ಸೀಮಿತವಾಗಿ ಅದೇ ಹಳಸಲು ಶಬ್ದಗಳೇ ಪುನರಾವರ್ತನೆಯಾಗುತ್ತವೆ. ಯಾರೋ ರಚಿಸಿದ ರೆಡಿಮೇಡ್ ಅಭಿನಂದನೆಗಳು,ಶುಭಹಾರೈಕೆಗಳೇ ಒಬ್ಬರಿಂದ ಮತ್ತೊಬ್ಬರಿಗೆ ಫಾರ್‌ವರ್ಡ್ ಆಗುತ್ತಿರುತ್ತವೆ. ಇಲ್ಲಿ ಹೊಸತನಕ್ಕೆ ಅವಕಾಶವೆಂಬುದೇ ಇರುವುದಿಲ್ಲ.

ಇನ್ನು ಯುವಜನಾಂಗದ ಚಿಂತನಾ ಶಕ್ತಿಯ ವಿಷಯಕ್ಕೆ ಬಂದರಂತೂ ಬೇಸರವಾಗುತ್ತದೆ. ಸ್ಕೂಲು,ಕಾಲೇಜಿನಲ್ಲಿ ಪಾಠಗಳ ಕಡೆಗೆ ಗಮನ ಹರಿಸದೇ ವರ್ಷ ಪೂರ್ತಿ ಜಾಲಿಯಾಗಿ ಕಳೆದುಬಿಡುತ್ತಾರೆ. ಪರೀಕ್ಷಾ ವೇಳೆಗೆ ಇಂಟರ್‌ನೆಟ್ ಕೇಂದ್ರಗಳಿಗೆ ಅಲೆದಾಡಿ ರೆಡಿಮೇಡ್ ನೋಟ್ಸಗಳನ್ನು ಡೌನ್‌ಲೋಡ್ ಮಾಡಿಸಿಕೊಳ್ಳಲು ಹೆಣಗಾಡುತ್ತಾರೆ. ಜ್ಞಾನಾರ್ಜನೆಗಾಗಿರಬೇಕಾದ ಓದು ಕೇವಲ ಪರೀಕ್ಷೆ ಪಾಸಾಗಲು ಮಾತ್ರ ಸೀಮಿತಗೊಳ್ಳುತ್ತಿದೆ. ಯುವಜನಾಂಗದ ಚಿಂತನಾಶೀಲತೆ, ಕಠಿಣ ಪರಿಶ್ರಮ ಮನೋಭಾವ ನಶಿಸಿ ಹೋಗುತ್ತಿದೆ.

ಲೈಂಗಿಕ ವಿಷಯದ ಕುರಿತಂತೆ ನಮ್ಮ ಸಮಾಜ ಹೊಂದಿರುವ ಸಂಕುಚಿತ ಮನೋಭಾವನಯಿಂದ ಮಕ್ಕಳು, ಯುವಜನಾಂಗ ದಾರಿ ತಪ್ಪಲು ಅವಕಾಶ ಮಾಡಿಕೊಟ್ಟಂತಾಗಿದೆ. ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ವಿಷಯವನ್ನು ಅಳವಡಿಸುವಲ್ಲಿ ಕೆಲ ಮಡಿವಂತರು ಹಿಂಜರಿಯುತ್ತಿದ್ದಾರೆ. ಕುತೂಹಲಕ್ಕೆ ಒಳಗಾದ ಮಕ್ಕಳು ಹಾಗೂ ಯುವಕರು ಸಾಮಾಜಿಕ ಜಾಲತಾಣಗಳತ್ತ ಮುಖ ಮಾಡಿ ತಮ್ಮ ವಯೋಸಹಜ ಕುತೂಹಲವನ್ನು ತಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕಂಡದ್ದನ್ನ ಪ್ರಯೋಗಕ್ಕಿಳಿಸಿ ಅಪಾಯವನ್ನು ತಂದೊಡ್ಡಿಕೊಳ್ಳುವುದಷ್ಟೇ ಅಲ್ಲ ಸಮಾಜದ ಸ್ವಾಸ್ಥ್ಯವನ್ನೂ ಕೆಡಿಸುತ್ತಿದ್ದಾರೆ. ಜ್ಞಾನವೃದ್ಧಿಗಾಗಿ, ಸಂವಹನಕ್ಕಾಗಿ ಸಹಕಾರಿಯದ ಜಾಲತಾಣಗಳು ದುರುಪಯೋಗಕ್ಕೊಳಗಾಗಿ ಲೈಂಗಿಕ ಶೋಷಣೆಗೆ ಕಾರಣವಾಗುತ್ತಿವೆ. ನಿತ್ಯ ಕಣ್ಣಿಗೆ ರಾಚುವ ಅತ್ಯಾಚಾರ ಪ್ರಕರಣಗಳಿಗೆ ಸಾಮಾಜಿಕ ಜಾಲತಾಣಗಳು ಪರೋಕ್ಷವಾಗಿ ಪ್ರಚೋದನೆ ನೀಡುತ್ತಿವೆ.

ಹಾಗಂತ ಅಂತರ್ಜಾಲವನ್ನಾಗಲೀ,ಸಾಮಾಜಿಕ ಜಾಲತಾಣಗಳನ್ನಾಗಲೀ ದೂರುವುದು ಮೂರ್ಖತನ. ಇಂದಿನ ದಿನಗಳಲ್ಲಿ ಈ ವ್ಯವಸ್ಥೆ ಇಲ್ಲದೇ ಹುಲ್ಲುಕಡ್ಡಿ ಕೂಡ ಅಲುಗಾಡಲಾರದೆಂಬ ಅನಿವಾರ್ಯತೆಯನ್ನು ಸೃಷ್ಠಿಸಿಕೊಂಡು ಬಿಟ್ಟಿದ್ದೇವೆ. ಬದುಕನ್ನು ಸರಳೀಕರಣಗೊಳಿಸಿರುವ ಫೇಸ್‌ಬುಕ್,ಗೂಗಲ್,ವಾಟ್ಸ್-ಆಪ್,ಟ್ವಿಟರ್,ವಿ-ಚಾಟ್‌ಗಳು ಇಂದಿನ ಮೂಲಭೂತ ಅವಶ್ಯಕತೆಗಳಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿವೆ. ಇಂತಹ ಜನೋಪಯೋಗಿ ವ್ಯವಸ್ಥೆಯ ಉಪಯೋಗ ಪಡೆಯಬೇಕೇ ಹೊರತು ದುರುಪಯೋಗವನ್ನಲ್ಲ. ಯುವಜನಾಂಗವು ಅನಾರೋಗ್ಯಕರ ಕುತೂಹಲಕ್ಕೆ ಕಡಿವಾಣ ಹಾಕಿ ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳಬೇಕಿದೆ. ನಮ್ಮ ಇತಿ-ಮಿತಿಗಳ ಚೌಕಟ್ಟಿನಲ್ಲಿದ್ದರೆ ಯಾವುದೂ ಅಪಾಯಕಾರಿಯಲ್ಲ.ಅತ್ಯಲ್ಪ ಪ್ರಮಾಣದ ವಿಷ ಕೆಲವೊಮ್ಮೆ ಮನುಷ್ಯನ ಪ್ರಾಣವನ್ನು ಉಳಿಸುವ ಔಷಧಿಯಾಗಬಲ್ಲದು. ಅಗತ್ಯಕ್ಕಿಂತ ಜಾಸ್ತಿಯಾದಲ್ಲಿ ಅಮೃತವೂ ಹಾಲಾಹಲವಾಗಬಲ್ಲದು.

 -ಗೌರಿ ಚಂದ್ರಕೇಸರಿ, ಶಿವಮೊಗ್ಗ.

3 Responses

  1. Pallavi Bhat says:

    ಹೌದು.ನಾವೆಲ್ಲರೂ ಇಂದು ಅಂತರ್ಜಾಲದ ದಾಸರಾಗಿ ಬಿಟ್ಟಿದ್ದೇವೆ.ಉತ್ತಮ ಬರಹ.

  2. Nalini Bheemappa says:

    Nice article gouri

Leave a Reply to Pallavi Bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: