ವೃತ್ತಿ… ನಿವೃತ್ತಿ… ಪ್ರವೃತ್ತಿ…
” ಏ ಶೀಲಾ, ಎಷ್ಟು ವರ್ಷಗಳಾದ್ವೇ ನಿನ್ನನ್ನು ನೋಡಿ…ಎಲ್ಲಿದ್ದೀಯಾ..?.ನಿನಗೂ ನಿವೃತ್ತಿ ಆಗಿರ್ಬೇಕಲ್ವಾ.?.ಈಗ ಏನ್ಮಡ್ಕೊಂಡಿದ್ದೀಯಾ.?.ತುಂಬಾ ಇಳಿದು ಹೋಗಿದ್ದೀಯಲ್ಲಾ.. ?” ತುಂಬಾ ವರುಷಗಳ ಬಳಿಕ ಭೇಟಿಯಾದ ಕಾಲೇಜು ಗೆಳತಿಯನ್ನು ಕಂಡು ಗೌರಿಗೆ ತುಂಬಾ ಖುಷಿ ಯಾಗಿತ್ತು. ಬಡಬಡನೆ ಎಲ್ಲಾ ಪ್ರಶ್ನೆಗಳೂ ಒಟ್ಟಿಗೇ ಬಂದಿದ್ದವು.ಒಟ್ಟಿಗೇ ವಿಜ್ಞಾನ ಪದವಿ ಮುಗಿಸಿ ಬೇರೆ ಬೇರೆ ಕಡೆ ನೌಕರಿ ಹಿಡಿದು ಹೋಗಿದ್ದು..ಸುಮಾರು 40 ವರ್ಷಗಳ ಬಳಿಕ ಸೇರಿದ್ದರು. ಶೀಲಾ ಬಿ.ಎಡ್.ಮಾಡಿ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸೇರಿದ್ದರೆ, ಗೌರಿಗೆ ಬ್ಯಾಂಕ್ ಒಂದರಲ್ಲಿ ನೌಕರಿ ಸಿಕ್ಕಿತ್ತು. ಇಬ್ಬರೂ ತಮ್ಮ ತಮ್ಮ ನೌಕರಿ,ಮದುವೆ, ಸಂಸಾರ, ಮಕ್ಕಳು ಇತ್ಯಾದಿಗಳಲ್ಲಿ ತೊಡಗಿಸಿಕೊಂಡು ನೆಮ್ಮದಿಯಾಗಿಯೇ ಇದ್ದರು. ಆದರೂ ಹೆಣ್ಣು ಮಕ್ಕಳಿಗೆ ನೌಕರಿ ಮತ್ತು ಸಂಸಾರವನ್ನು ತೂಗಿಸುವುದೆಂದರೆ ಒಂದು ಥರಹದ ಮಹಾಯಜ್ಞವೇ ಸರಿ…! ಅಲ್ವಾ??
ನೌಕರಿ ಮಾಡುವ ಮಹಿಳೆಯರಿಗೆ ಸಾಧಾರಣವಾಗಿ ಸಮಯವೇ ಸಾಕಾಗುವುದಿಲ್ಲ. ಹಾಗೆಯೇ ಮಕ್ಕಳ ವಿದ್ಯಾಭ್ಯಾಸ ಇತ್ಯಾದಿಗಳ ಹೊಣೆ ಹೊತ್ತ ಮೇಲೆ ತಮ್ಮನ್ನು ಇತರ ಕಾರ್ಯಗಳು ಯಾ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ವಾಗುವುದೂ ಇಲ್ಲ. ಗಂಡ,ಮಕ್ಕಳು,ಮನೆಯ ಇನ್ನಿತರರ ಆರೋಗ್ಯ ಗಮನಿಸುತ್ತಾ ತಮ್ಮ ಆರೋಗ್ಯದ ಏರುಪೇರುಗಳ ಬಗ್ಗೆ ಗಮನವೇ ಇರುವುದಿಲ್ಲ. ಈ ಎಲ್ಲದರ ನಡುವೆಯೂ ನಗು ನಗುತ್ತಾ ಉತ್ಸಾಹದಿಂದಿರುವ ಮಹಿಳೆಯರು ಕಾಣಸಿಗುತ್ತಾರೆ ಅಲ್ಲಲ್ಲಿ..ಅಪರೂಪಕ್ಕೆ. ..
ಶೀಲಾ ಹಾಗೂ ಗೌರಿಯರ ಸ್ವಭಾವಗಳಲ್ಲೂ ವ್ಯತ್ಯಾಸವಿತ್ತೆನ್ನಬಹುದು. ಶೀಲಳದು ಸಾಧು ಸ್ವಭಾವದ , ಶಾಲೆಯಲ್ಲಿ ಇಡೀ ದಿನ ನಿಂತುಕೊಂಡು ಪಾಠ ಮಾಡಿ ಮಾಡಿ,ಸಂಜೆಯಾಗುತ್ತಿದ್ದಂತೆ ದೇಹ ಸುಸ್ತು ಹೊಡೆಯುತ್ತಿತ್ತು. ಇನ್ನು ಉತ್ಸಾಹ ಉಳಿಯುವುದೆಲ್ಲಿಂದ ಬಂತು..? ಮನೆಗೆ ಬಂದ ಮೇಲೆ ಮನೆ, ಮಕ್ಕಳ ಜವಾಬ್ದಾರಿಯಿಂದಾಗಿ ಕುಗ್ಗಿ ಹೋಗಿದ್ದಳು.ಇತ್ತ ಗೌರಿಯದಾದರೋ ಉತ್ಸಾಹ ಪ್ರವೃತ್ತಿ..ಸದಾ ಉತ್ಸಾಹದ ಚಿಲುಮೆ.!. ಬ್ಯಾಂಕಿನಲ್ಲಿ ಎಲ್ಲರೊಡನೆಯೂ ಬೆರೆತು ಮಾತಾಡಿಸುತ್ತಾ..ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದಳು. ದಿನದ ಕೊನೆಯ ವರೆಗೂ ಮನದ ತಾಜಾತನವನ್ನು ಉಳಿಸಿಕೊಳ್ಳುವವಳು. ಮನೆಯಲ್ಲಿ ಕೂಡಾ ಉತ್ಸಾಹದಿಂದಲೇ ಇರುತ್ತಿದ್ದುದು ವಿಶೇಷ…!ಈಗಲೂ ಸಮಾಜದಲ್ಲಿ ವಿವಿಧ ರೀತಿಯ ಜನರನ್ನು ಕಾಣುತ್ತೇವೆ.ಇಡೀ ದಿನ ರೇಗಾಟ ಇವರ ಹಕ್ಕು ಎನ್ನುವಂತೆ ವರ್ತಿಸುವವರೂ ಇದ್ದಾರೆ… ಇರಲಿ ಬಿಡಿ…
ನಿವೃತ್ತಿಯೆಂಬುದು ವೃತ್ತಿ ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಬೆಳಗ್ಗಿನಿಂದ ಸಾಯಂಕಾಲ ತನಕ ಎಡೆಬಿಡದೆ ತಮ್ಮನ್ನು ಕೆಲಸಗಳಲ್ಲಿ ತೊಡಗಿಸಿಕೊಂಡಿರುವಾಗ ನಿವೃತ್ತಿಯ ಮರುದಿನವೇ, ದಿನಾ ಕಚೇರಿಯಲ್ಲಿ ಮಾಡುತ್ತಿದ್ದ ಕಲಸಗಳಿಲ್ಲದೆ ತಾನೇನು ಮಾಡಲಿ… ಹೇಗೆ ಸಮಯ ಕಳೆಯಲಿ.. ಎಂದು ಕಕ್ಕಾಬಿಕ್ಕಿಯಾಗುವುದು ಸಹಜ ತಾನೇ…? ಬಿಕೋ ಎನ್ನುವ ಮನಸ್ಸು ಏನೂ ಮಾಡಗೊಡುವುದಿಲ್ಲ.ಮನಸ್ಸಿನ ಸಮತೋಲನ ಕಾಪಿಡುವುದು ಈ ಸಮಯದಲ್ಲಿ ಬಹಳ ಮುಖ್ಯ. ಮಹಿಳೆಯರಿಗೂ ಮನೆಯಲ್ಲಿ ಕೆಲಸಗಳು ಬಹಳ ಭೇಗ ಮುಗಿದು ಹೋಗುವುದು.. ಇರುವುದು ಇಬ್ಬರೇ ತಾನೇ ?ಮತ್ತೆ, ದೂರದರ್ಶನದ ಧಾರಾವಾಹಿಗಳ ಗೀಳು ಹತ್ತಿದರೆ ಅವರನ್ನು ದೇವರೇ ಕಾಪಾಡಬೇಕಷ್ಟೆ..! ಕೆಲವು ಜನ ಗಂಡಸರು ಬೆಳಿಗ್ಗೆದ್ದು ಕಾಪಿ ಕುಡಿದು, ಪೇಪರಿನ ಒಂದಕ್ಷರವನ್ನೂ ಬಿಡದೆ ಓದಿ,ಮಲಗಿ ಕಾಲಕಳೆಯುವುದನ್ನು ನೋಡಬಹುದು. ಈ ಜೀವನ ಸ್ವಲ್ಪ ಸಮಯದಲ್ಲೇ ಬೇಸರ ಬರುವುದು ಖಚಿತ. ಒಂದಿಗೇ “ಕೆಲಸಗಳಿಲ್ಲದ ಮನ ದೆವ್ವಗಳ ಅರಮನೆ” ಎಂಬಂತೆ ಚಿಂತೆಗಳು ಮುತ್ತಲು ಸುರುವಾಗುವುದು. ತಗೊಳ್ಳಿ… ಆಮೇಲೆ ಸರದಿಯಂತೆ ಒಂದೊಂದೇ ರೋಗಗಳು ಆಗಮನ… ಇದಕ್ಕೇ ಬೇಕು.. ಸದಾ ಮನಸ್ಸಿಗೂ ದೇಹಕ್ಕೂ ಕೆಲಸಗಳು..ಅದೇ ಉತ್ತಮ ಹವ್ಯಾಸಗಳು…ವಿವಿಧ ರೀತಿಯ ಮನೋವೃತ್ತಿಯವರಿಗೆ ತಮ್ಮ ವೃತ್ತಿಯ ಬಳಿಗ ನಿವೃತ್ತಿ ಜೀವನದಲ್ಲಿ ಈ ಉತ್ತಮ ಪ್ರವೃತ್ತಿಗಳೇ ಶಕ್ತಿ ತುಂಬುವುವು.ಸಾಧಾರಣ 58-60 ವರ್ಷ ವಯಸ್ಸಿನ ಬಳಿಕ ತಮ್ಮ ಮಕ್ಕಳ ಜವಾಬ್ದಾರಿಯೆಲ್ಲಾ ಮುಗಿದು ಮಕ್ಕಳು ಸ್ವತಂತ್ರರಾಗಿರುತ್ತಾರೆ. ಆಮೇಲೆ ಮನೆಯಲ್ಲಿ ಇಬ್ಬರೇ.. ನಿನಗೆ ನಾನು..ನನಗೆ ನೀನು ಎಂಬಂತೆ. ಮಕ್ಕಳು, ಮೊಮ್ಮಕ್ಕಳು ಹತ್ತಿರವಿದ್ದರೆ ರಜೆಗಳಲ್ಲಿ ಆಗಾಗ ಆಗಮನ. ದೂರವಿದ್ದರೆ ಆಗಮನದ ಕಾಲವೂ ದೂರ.
ದಾರಿಯುದ್ದಕ್ಕೂ ಎಲ್ಲೆ ಇಲ್ಲದೆ ಹಾಸಿ ಹರಡಿರುವ ಸಮಯವನ್ನು ಸಮಾಜಸೇವೆಯಂತಹ ಸಾಮಾಜಿಕ ಕೆಲಸಗಳಲ್ಲಿ ಸದುಪಯೋಗ ಪಡಿಸಿಕೊಂಡರೆ, ಮನಸ್ಸಿಗೆ ಸಿಗುವ ಆನಂದ ಅಧ್ಭುತ…!!ಗೌರಿಯಂತಹ ಇನ್ನೊಬ್ಬ ಹೆಣ್ಣು ಮಗಳು ತನ್ನ ನಿವೃತ್ತಿಯ ಬಳಿಕವೂ ಒಳ್ಳೇ ಅರೋಗ್ಯವಂತಳಾಗಿ ಖುಷಿ ಖುಷಿಯಾಗಿರುವುದರ ಗುಟ್ಟೇನು ಗೊತ್ತೇ..?..ಅವಳು ರೂಢಿಸಿಕೊಂಡಿರುವ ವಿವಿಧ ಹವ್ಯಾಸಗಳು.. ಅವು ನಿಜಕ್ಕೂ ಮೆಚ್ಚುವಂತಹುದು… ಅಗತ್ಯವಿರುವ ಮಕ್ಕಳಿಗೆ ಉಚಿತವಾಗಿ ಪಾಠ,ಅಕ್ಕ ಪಕ್ಕದವರಲ್ಲಿ ಮನದುಂಬಿ ಹೊಂದಿಕೊಂಡು, ಅಗತ್ಯವಿದ್ದಾಗ ಕೈಲಾದ ಸಹಾಯ, ಯಾವುದೋ ಉಚಿತ ವೈದ್ಯಕೀಯ ಶಿಬಿರಗಳಲ್ಲಿ ಆಗಾಗ ತನ್ನನ್ನು ತೊಡಗಿಸಿಕೊಳ್ಳುವುದು ಅನಾಥಾಶ್ರಮದ ಮಕ್ಕಳೊಡನೆ ಅವರ ಅಗತ್ಯಕ್ಕನುಗುಣವಾಗಿ ಸಹಾಯ ಮಾಡುತ್ತಾ ಸ್ವಲ್ಪ ಕಾಲ ಕಳೆಯುವುದು ಇತ್ಯಾದಿ. ಇಳಿ ವಯಸ್ಸಿನಲ್ಲಿ ಸಹಜವಾಗಿ ಕಾಣುವ ಕೆಲವು ತೊಂದರೆಗಳಿಗೆ ಹೆದರದೆ ಪ್ರವೃತ್ತಿಗಳನ್ನು ಪ್ರೀತಿಯಿಂದ ಮಾಡಿದರೆ ತುಂಬಾ ಒಳ್ಳೆಯದಲ್ಲವೇ..? ಹಣಗಳಿಸುವ ಮೂಲಗಳು ಸಾಕಷ್ಟಿದ್ದರೂ ಅದನ್ನು ಬಯಸದೆ,ಸಾಂದರ್ಭಿಕ ಸಹಾಯ ಹಸ್ತವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಚಾಚುವುದು,ಮನೋವಿಕಾಸ ಹಾಗೂ ಮನಸ್ಸಂತೋಷಕ್ಕೆ ಕಾರಣವಾಗುತ್ತದೆ. ಒಂದಿಗೇ ನೌಕರಿಯಲ್ಲಿ್ರುವಾಗ ಹಣವು ಅಪವ್ಯಯವಾಗದಂತೆ ಜಾಗರೂಕರಾಗಿ ಮುಂದಿನ ಭವಿಷ್ಯ ಚಿಂತನೆಯೊಂದಿಗೆ ಉಳಿಸಿ ನಿವೃತ್ತಿಯ ಬಳಿಕ ಸ್ವಾವಲಂಬಿಗಳಾಗಿರುವಂತೆ ತಮ್ಮನ್ನು ರೂಪಿಸಿಕೊಳ್ಳುವುದೂ ಬಹು ಮುಖ್ಯ.ಇಳಿವಯಸ್ಸು ಹೊರೆಯಲ್ಲ..ಅದನ್ನು ಪ್ರೀತಿಸಿ ಜೀವಿಸಬಹುದು…ಸರಿಯಾಗಿ ರೂಪಿಸಿಕೊಂಡರೆ ..ಅಲ್ಲವೇ..??
-ಶಂಕರಿ ಶರ್ಮ, ಪುತ್ತೂರು
ಪ್ರವೃತ್ತಿಗಳನ್ನು ಪ್ರೀತಿಯಿಂದ ಮಾಡೀದರೆ….
ಬಂಗಾರದಂಥಹ ನುಡಿಗಳು…
ಧನಾತ್ಮಕವಾಗಿ ಚಿಂತನೆಯ ಚಃದದ ಲೇಖನ.
ಕೆ.ವಿ.ರಾಜಲಕ್ಷ್ಮಿ, ಬೆಂಗಳೂರು
ನಿಜವಾದ ಮಾತುಗಳು 🙂
ನಿವೃತ್ತಿ ಎಂದರೆ ಲೈಫು ಇಷ್ಟೇನೇ? ಎಂದು ಹತಾಶೆಯಾಗಬೇಕಿಲ್ಲ…ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು.. ಆಗಷ್ಟೇ ಬದುಕು ಸುಂದರ…
ರಾಜಲಕ್ಷಿ ಹಾಗೂ ಪಲ್ಲವಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು
ನಿಮ್ಮದೇ ಅನುಭವವನ್ನು ಬರೆದಿದ್ದೀರಿ. ಚೆನ್ನಾಗಿದೆ.