ಮರಿ ಹಾಕದ ನವಿಲುಗರಿ…
ಪಾಪಿ ನೀನು …
ಮರಳಿನ ದಿಬ್ಬದಂತಹ
ಸೊಂಟದ ಮೇಲೆ ಹೊಯ್ಗೆ ಹೋಯ್ದಂತೆ
ನೇಯುವುದು ಗೊತ್ತಿತ್ತು ನಿನಗೆ…
ಎತ್ತರದ ಕಣಿವೆಯ ಮೇಲಿಂದ ಸ್ವೇದ ಬಿಂದು
ಜಾರದಂತೆ ನಾಲಿಗೆಯಡಿಗೆ
ಎಟುಕಿಸಿಕೊಳ್ಳುವುದಲ್ಲಿ ಪಾಮರ ನೀನು..
ಸಿಡಿಲತೊಡೆಗಳ ಆಳದಿಂದ ಧಗ್ಗನೇಳುವ
ಅಗ್ನಿಗೆ ಸಾಕ್ಷಿಯಾಗುವಂತೆ ಅರ್ಘ್ಯ
ಹೊಯ್ಯುವುದರಲ್ಲಂತೆ ಭೊರ್ಗರೆವ ಹುಚ್ಚು ಸಮುದ್ರ…
ಕಿಬ್ಬೊಟ್ಟೆಯಾಳದಲ್ಲೆಲ್ಲೋ ಪ್ರಳಯವಾದಂತೆ
ಝೆಂಕರಿಸುವ ನಿನ್ನ ಢಮರುಗದ ನಾದಕ್ಕೆ
ಸೋತು ಹೋದಂತೆ ದ್ರವಿಸಿಬಿಟ್ಟರೂ ..
ಮೊದಲ ಮಳೆಗೆ ಹುಚ್ಚು ಹಿಡಿದ ಜಲಪಾತದಂತೆ
ವರ್ಣವರ್ಣವಾಗಿ ಧುಮಕಿ ಖಾಲಿಯಾಗುತ್ತಿದ್ದೇನೆ ಎನ್ನಿಸಿದರೂ
ನಿನ್ನ ಬೆರಳ ತುದಿಯ ಮೀಟುವಿಕೆಗೆ ಮತ್ತೆ ಮತ್ತೆ
ಉಡಿಬಿಚ್ಚಿ ನವಿಲಾಗುವಂತೆ ಅವಿರ್ಭವಿಸುವ ನನ್ನ
ಎದೆಯ ಕಣಿವೆಯ ಮಧ್ಯದಲ್ಲೇ
ಭಾಷ್ಪಿಕರಣಗೊಳ್ಳುವ ಉಗಿಯ ಮಧ್ಯದಲ್ಲೊಂದು
ಹಚ್ಚನೆಯ ಕ್ಷತದ ಗುರುತು ಉಳಿಸಿದ್ದರೂ ಸಾಕಿತ್ತು
ಪ್ರತಿ ಬಾರಿ ಬೆಚ್ಚನೆಯ ನೀರು ಕೊರಳು ಹಾಯ್ದು
ಹೋಗುವಾಗೆಲ್ಲ ಹುಚ್ಚು ಹಿಡಿದಂತೆ ಮುದಗೊಳ್ಳುತ್ತಿದ್ದೆ..
ಪಾಪಿ ನೀನು… ಜಿಪುಣ ನೀನು…
ಗುರುತಿಗೇ ಸಿಕ್ಕಲೊಲ್ಲದ ಮೋಹದ
ಮರಿ ಹಾಕದ ನವಿಲು ಗರಿಯಂಥವನು ನೀನು…
( ಅವಳ ಸ್ವಗತದಲ್ಲಿ )
– ಸಂತೋಷಕುಮಾರ ಮೆಹೆಂದಳೆ