ಆಷಾಡದ ಷೋಡಷ
ಬಂತಗೋ ಬಂತಗೋ ಮತ್ತದೇ ಆಷಾಢ ,ಜೋರು ಮಳೆಯ ನೆನಪಿಸುವ ಆಷಾಢ
ತಂಗಾಳಿಯ ಬಚ್ಚಿಟ್ಟು ,ಬಿರುಗಾಳಿಯ ಆರ್ಭಟದ ವೇಷ ತೊಟ್ಟ ಕಿಲಾಡಿ ಆಷಾಢ
ಗಗನಚುಂಬಿ ಮರಗಳನೇ ಆಗಸಕೆ ಚಾಮರದ ರೂಪವಿತ್ತು ಗಹಗಹಿಸಿದ ಆಷಾಢ
,
ಕೃಷಿ ಕಾರ್ಯದ ಹುರುಪು ತೋರ್ವ ರೈತನವಗೆ ಗೊರಬು ನೇಗಿಲು ಎತ್ತು ,ಗಾಡಿಯು
ಹೊಲದೊಳಗೆ ತನ್ಮಯನು, ಅವನಿಗದೇ ಸ್ವರ್ಗವು, ಮಡದಿಯವಗೆ ಜೋಡಿಯು
ಭಿತ್ತಿದಂತ ಬೀಜವಿಲ್ಲಿ ಸಸಿಯಾಗಿಹ ಸಂತಸ,ಅತಿಯಾದರೆ ಮಳೆ,ಅನುಭವಿಸುವ ಸಂಕಟ
ಹದವರಿತ ಮಳೆಯೊಳಗೆ ಬೆಳೆ ಬೆಳೆದು ಕಣಜ ಸೇರಿಸಿ ಮನೆ ನಡೆಸೋ ಸಾರಥಿ.
.
ಸಂಕವೋ ಒಡ್ಡಿಯೋ ತೆಪ್ಪವೋ ಹರಿಗೋಲೋ ಹೊಳೆದಾಟಿ ಶಾಲೆ ಸೇರೊ ಮಕ್ಕಳಿಗೂ ಅಂಜಿಕೆ
ಮಳೆಕವಚದ ವಸ್ತ್ರೋದ್ಯಮ, ಕೊಡೆ ಮಾರುವ ವಣಿಕನಿಗೆ ಆಷಾಢವೇ ಲಾಭ ಕೊಡುವ ಸಜ್ಜಿಕೆ
ಎಲ್ಲಿ ನೋಡು ನೀರ ಹರಿವು ಆಗಸವೇ ಬಿರಿದಂತೆ ತುಂಬಿ ನಗುವ ಇಳೆಯೊಳಗಿಣ ಬಿಂದಿಗೆ
ದುಡಿದು ದಣಿದು ತಣಿದ ದೇಹ ಇರುಳಾಗಲು ಮನೆ ಸೇರುವ ಶ್ರಮಿಕನಿಗೂ ಬಯಕೆಯು
ಕೆಸರು ಕೊಚ್ಚೆ ಆಟವಾಡಿ,ಕಾಗದದ ದೋಣಿಗಳ ತೇಲಿಬಿಟ್ಟ ಮಕ್ಕಳಿಗೂ ಚಪಲವು
ಕುರುಕಲೋ ಮುರುಕಲೋ ಹಪ್ಪಳ ಸಂಡಿಗೆಯೊ ಬಿಸಿ ಬಿಸಿ ಬಯಸುವಂತ ಜಿಹ್ವೆಯು
.
ಜಬ್ಬುಮೀನು ಕರಿಮೀನು ಏಡಿಯಂತೆ ಚಿಗಳಿಯಂತೆ ಅಣಬೆಯಂತೆ ಕೆಸುವಂತೆ
ಚಗಟೆಯಂತೆ ಕಳಿಲೆಯಂತೆ ಆಷಾಡಕೆ ಸಿದ್ದವಾಗೊ ತರತರದ ರುಚಿಯಾದ ಖಾದ್ಯವು
ಔಷದೀಯ ಗುಣ ಹೊತ್ತು ಆಷಾಢದ ಹೊತ್ತಿಗಷ್ಟೇ ಸಿಕ್ಕರದು ಅಡುಗೆಯಲ್ಲಿ ಮಾನ್ಯವು
,
ಕೃಷಿ ಕಾರ್ಯದ ಚಾಲನೆ ,ನಂಬಿಕೆಗೆ ಇಂಬಿತ್ತು ತಪ್ಪದೆಯೇ ಮಾಡುವರು ಪಾಲನೆ
ಹಾಗಂತಲೇ ನಂಬಿ ಮಂದಿ ಕೊಡರೆಲ್ಲೂ ಆಷಾಢದಿ ಶುಭಕಾರ್ಯಕೆ ಚಾಲನೆ
ಅತ್ತೆ ಸೊಸೆ ಹೊಂದಿಕೆಗೆ ತವರ ಸೇರಿಸಿ ಹೆಣ್ಣಿಗೆ ಮಗನಿಗೀಗ ಅಮ್ಮನದೇ ಲಾಲನೆ.
.
ಆದರೂ ಹಬ್ಬವಿಲ್ಲ ಕಬ್ಬವಿಲ್ಲ ಎನುತ ಸಾಗೋ ಮಾಸದಲೂ ಗಮ್ಮತ್ತಿನ ಮತ್ತಿದೆ
ಆರಿದ್ರ ಹುತ್ತರಿ ಆಟಿಯಂತೆ ಪ್ರಾಂತ್ಯಕೊಂದು ಹಬ್ಬಕಿಲ್ಲಿ ಆಚರಣೆಯ ಒತ್ತಿದೆ.
ಕವಿಗಳಿಗೂ ಕತೆಗಾರರಿಗೂ ತರತರದ ವಿಷಯಗಳ ಕಲ್ಪನೆಯ ಪದಗಳಲಿ ಭಿತ್ತಿದೆ
.
-ಲತಾ(ವಿಶಾಲಿ)ವಿಶ್ವನಾಥ್
,