ಭಾರತದ ರೈಲು ಪ್ರಯಾಣ ಸುರಕ್ಷತೆಗೆ ತಂತ್ರಜ್ಞಾನ
ಭಾರತದ ರೈಲ್ವೇಯನ್ನು, ವಿಶ್ವದ 3ನೆ ಅತಿ ದೊಡ್ಡ ರೈಲು ಸೇವೆ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಪ್ರತಿದಿನ ಸರಾಸರಿ 2 ಕೋಟಿ 30 ಲಕ್ಷ ಪ್ರಯಾಣಿಕರು ರೈಲು ಸೇವೆಯನ್ನು ಬಳಸುತ್ತಾರೆ.
ರೈಲು ಮತ್ತು ಪ್ರಯಾಣಿಕರ ಸುರಕ್ಷತೆಯಲ್ಲಿ ರೈಲು ಹಳಿಗಳ ನಿರ್ವಹಣೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ದೇಶಾದಂತ್ಯ 63,000 ಕಿಲೋಮೀಟರ್ ರೈಲು ಮಾರ್ಗವನ್ನು ನಿರ್ಮಿಸಲಾಗಿದೆ. ದೇಶಾದಂತ್ಯ ರೈಲು ಹಳಿಗಳ ನಿರ್ವಹಣೆಗಾಗಿ ರೈಲ್ವೇ ಇಲಾಖೆ 2 ಲಕ್ಷ ಜನ ಸಿಬ್ಬಂದಿಯನ್ನು ನಿಯೋಗಿಸಿದೆ. ಇವರನ್ನು ಮೊದಲು ಗ್ಯಾಂಗ್‍ಮೆನ್ ಎಂದು ಕರೆಯಲಾಗುತ್ತಿತ್ತು, ಈಗ ರೈಲು ಹಳಿ ನಿರ್ವಹಣೆ ಸಿಬ್ಬಂದಿಯಂದು ಕರೆಯಲಾಗುತ್ತದೆ. ಬಿಸಿಲು, ಮಳೆ, ಚಳಿಯನ್ನದೆ ಪ್ರತಿದಿನ ಕೆಲಸ ಮಾಡುವ ಈ ಸಿಬ್ಬಂದಿ, ಅರಣ್ಯ ಪ್ರದೇಶ, ಪರ್ವತಗಳಂತಹ ದುರ್ಗಮ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಅವರ ಸುರಕ್ಷತೆ ಮುಖ್ಯವಾಗುತ್ತದೆ.
ರೈಲು ಹಳಿ ನಿರ್ವಹಣೆಯಲ್ಲದೆ ರೈಲು ಕ್ರಾಸಿಂಗ್ ಗೇಟುಗಳ ನಿರ್ವಹಣೆ, ಮೇಲಾಧಿಕಾರಿಗಳು ವಹಿಸಿದ ಕೆಲಸಗಳನ್ನು ಮಾಡುವುದು, ಹೀಗೆ ವಿವಿಧ ಕೆಲಸಗಳಿಗೆ ಈ ಸಿಬ್ಬಂದಿಯನ್ನು ಬಳಸುವುದನ್ನು ತಡೆಯಲು ಭಾರತೀಯ ರೈಲ್ವೇ ಇಲಾಖೆ ಅಧುನಿಕ ತಂತ್ರಜ್ಞಾನವನ್ನು ಬಳಸಲು ಪ್ರಾರಂಭಿಸಿದೆ.
ಮೇಲಾಧಿಕಾರಿಗಳು ತಮ್ಮ ಮೊಬೈಲ್ ಫೋನ್‍ನಲ್ಲಿ ಅಳವಡಿಸಲಾಗಿರುವ Indian Railway Patrol Monitoring System ( IR-PMS) ತಂತ್ರಾಂಶವನ್ನು ಬಳಸಿ, ಸಿಬ್ಬಂದಿಯ ನಿರ್ವಹಣೆ, ಸಿಬ್ಬಂದಿಯ ಸುರಕ್ಷತೆ ಮತ್ತು ಸಿಬ್ಬಂದಿಗೆ ಬೇಕಾದ ತಾಂತ್ರಿಕ ಸಹಾಯವನ್ನು ಅದ್ಯತೆಯ ಮೇಲೆ ನೀಡಲು ಸಾಧ್ಯವಾಗುತ್ತದೆ. ರೈಲು ಹಳಿ ದೋಷ ಕುರಿತು ಬಂದ ಮಾಹಿತಿ, ರೈಲು ಹಳಿ ದುರಸ್ತಿ ಮಾಡಿದ ವಿವರಗಳು, ಹೀಗೆ ಸಮಗ್ರ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ಈ ತಂತ್ರಾಂಶ ನೀಡುತ್ತದೆ.
ಮುಂಬರುವ ದಿನಗಳಲ್ಲಿ ಭಾರತದಲ್ಲಿರುವ ಎಲ್ಲಾ 68 ರೈಲ್ವೇ ವಿಭಾಗಗಳಲ್ಲಿ ಈ ತಂತ್ರಜ್ಞಾನವನ್ನು ರೈಲು ಹಳಿ ನಿರ್ವಹಣೆ ಸಿಬ್ಬಂದಿ ಬಳಸಲಿದ್ದಾರೆ. ಯಾವ ಸಮಯದಲ್ಲಿ ಎಲ್ಲಿ ರೈಲು ಹಳಿಯಲ್ಲಿ ದೋಷ ಗುರುತಿಸಲಾಯಿತು, ಏನು ದುರಸ್ತಿ ಮಾಡಲಾಯಿತು, ಎಲ್ಲಿ ರೈಲು ಹಳಿ ಬದಲಾಯಿಸುವ ಅಗತ್ಯವಿದೆ, ಹೀಗೆ ಸಮಗ್ರ ಮಾಹಿತಿ ರೈಲ್ವೇ ಇಲಾಖೆಯ ಅಧಿಕಾರಿಗಳಿಗೆ ದೊರೆಯಲಿದ್ದು, ಅವರು ಅದ್ಯತೆಯ ಮೇಲೆ ಸೂಕ್ತ ಕ್ರಮಕೈಗೊಳ್ಳುವುದು ಸುಲಭವಾಗುತ್ತದೆ.
ರೈಲು ಹಳಿ ನಿರ್ವಹಣೆ ಸಿಬ್ಬಂದಿ ಮತ್ತು ಮೇಲಾಧಿಕಾರಿಗಳು ಕೇಳಿರುವ ಹೊಸ ಸೌಲಭ್ಯಗಳನ್ನು ಈ ತಂತ್ರಜ್ಞಾನದಲ್ಲಿ ಅಳವಡಿಸಲಾಗುತ್ತಿದೆ.
ರೈಲು ಹಳಿ ನಿರ್ವಹಣೆ ಸಿಬ್ಬಂದಿಯಂತೆ, ರೈಲು ಸಿಗ್ನಲ್ ನಿರ್ವಹಣೆ, ಟಿಕೆಟ್ ತಪಾಸಣೆ, ರೈಲು ಪ್ರಯಾಣಿಕರಿಗೆ ನೀಡಲಾದ ನೀರು, ಫ್ಯಾನ್, ಹವಾನಿಯಂತ್ರಣ, ಶೌಚಾಲಯಗಳ ನಿರ್ವಹಣೆ, ಪ್ರಯಾಣಿಕರ ಸುರಕ್ಷತೆಗಾಗಿ ಕೆಲಸ ಮಾಡುವ ರೈಲ್ವೇ ಪೋಲಿಸ್, ಹೀಗೆ ಪ್ರತಿದಿನ ಸಾವಿರಾರು ಜನ ಕೆಲಸ ಮಾಡುತ್ತಾರೆ. ಹೆಚ್ಚು ಜನ ರೈಲು ಪ್ರಯಾಣಿಕರು ಇವರನ್ನು ಗಮನಿಸುವುದೂ ಇಲ್ಲ. ಮಹತ್ವದ ಸೇವೆಯನ್ನು ಒದಗಿಸುವ ಈ ಸಿಬ್ಬಂದಿಗೂ ಮುಂಬರುವ ದಿನಗಳಲ್ಲಿ ಅಧುನಿಕ ತಂತ್ರಜ್ಞಾನ ಸಹಾಯ ಮಾಡಲಿದೆ.