ಮೊನ್ನೆ ನನ್ನ ಚಿಕ್ಕ ಮಗಳು ಹೇಳುತ್ತಿದ್ದಳು. ಅಮ್ಮಾ ನನ್ನ ಗೆಳತಿ ಭಾವನಾ ಫೋನು ಕಳೆದುಕೊಂಡುಬಿಟ್ಟಿದ್ದಾಳೆ, ಪಾಪ ತುಂಬಾ ಬೇಜಾರು ಮಾಡಿಕೊಂಡಳು ಎಂದಳು. ಅಯ್ಯೋ ಪಾಪ ಅವರಪ್ಪ ಎಷ್ಟು ದುಡ್ಡು ಕೊಟ್ಟು ದುಬಾರಿ ಸ್ಮಾರ್ಟಫೋನು ಖರೀದಿಸಿ ಕೊಟ್ಟಿದ್ದರು ಅಲ್ವಾ? ಎಷ್ಟು ಬೇಜಾರಾಗಿದ್ದಾಳೋ ಎಂದೆ. ಹೂಂ ಮಮ್ಮೀ ಅವಳು ಕ್ಯಾಂಡಿ ಕ್ರಶ್ ಸಾಗಾ 996 ಲೆವೆಲ್ ಇದ್ದಳು, ಈಗ ಮತ್ತೆ ಹೊಸ ಫೋನಿನಲ್ಲಿ ಅಷ್ಟೊಂದು ಮುಂದೆ ಹೋಗಬೇಕೆಂದರೆ ಎಷ್ಟು ಟೈಮ್ ಹಿಡಿಯುತ್ತದೆ ಅಂತಾ ತುಂಬಾ ಗೋಳಾಡಿದಳು ಅಂದಳು. ನನಗಂತೂ ನಗು ಬಂತು. ನಾವೊಂದು ರೀತಿಯಿಂದ ಯೋಚಿಸಿದರೆ ಮಕ್ಕಳ ಆಲೋಚನೆ ಮತ್ತೊಂದು ರೀತಿಯೇ ಸಾಗಿರುತ್ತದೆ ಎಂದು.
ಅಬ್ಬಾ ಮೊಬೈಲ್ ಆಟಗಳೇ? ಎನಿಸಿತು. ಸಂಜೆಯ ಹೊತ್ತು ಶಾಲೆಯಿಂದ ಬಂದು ಆಡಬೇಕಾದ ಮಕ್ಕಳು ಮೊಬೈಲಿನಲ್ಲೇ ಆಡಿಕೊಂಡು ಮೈಮರೆಯುತ್ತಾರೆ. ಅಕಸ್ಮಾತ್ ಸ್ನೇಹಿತರ ಜೊತೆ ಹೊರಹೋದರೂ ಅಲ್ಲಿಯೂ ಸಹ ಗುಂಪು ಕಟ್ಟಿಕೊಂಡು ಮೊಬೈಲ್ ಗೇಮುಗಳಲ್ಲಿ ತಲ್ಲೀನರಾಗಿರುತ್ತಾರೆ. ಕೇವಲ ತಲೆ ಹಾಗೂ ಕೈಬೆರಳುಗಳಿಗೆ ಮಾತ್ರ ಕೆಲಸ ಕೊಟ್ಟು ಉಳಿದ ದೇಹವನ್ನು ಜಡಗೊಳಿಸಿ, ಮನಸ್ಸನ್ನು ಮುದಗೊಳಿಸಿ, ಭ್ರಮೆಯ ಲೋಕದಲ್ಲೇ ತೇಲಾಡುವಂತೆ ಮಾಡುವ ಈ ಆಟಗಳ ಹುಚ್ಚಿಗೆ ಯುವಜನತೆ ಹಾಗೂ ಮಕ್ಕಳ ಭವಿಷ್ಯವೇ ಅಲ್ಲಾಡುತ್ತಿದೆ. ದೊಡ್ಡವರೂ ಹಿಂದೆ ಬಿದ್ದಿಲ್ಲ. ಓದು, ಬರಹ, ಮನೆಕೆಲಸ, ಸಾಂಸ್ಕೃತಿಕ ಚಟುವಟಿಕೆ, ಕಲೆ, ಸಾಹಿತ್ಯ, ಆಟ, ಪಾಠ ಎಲ್ಲವನ್ನೂ ನುಂಗಿ ನೀರು ಕುಡಿಯುತ್ತಿರುವ ಈ ಪರದೆಯ ಮೇಲಿನ ಆಟಗಳು ಸಂಬಂಧಗಳನ್ನೂ ಶಿಥಿಲಗೊಳಿಸುತ್ತಿವೆ. ಬ್ಲೂವೇಲಿನಂಥಹ ಆಟಗಳು ಪ್ರಾಣಕ್ಕೂ ಸಂಚಕಾರ ತಂದೊಡ್ಡುತ್ತಿವೆ. ಚಿಕ್ಕ ಮಕ್ಕಳಂತೂ ಯಾರ ಮೊಬೈಲ್ ಸಿಕ್ಕಿದರೂ ಅದರಲ್ಲಿ ಅನಾಯಾಸವಾಗಿ ಗೇಮ್ ಡೌನ್‌ಲೋಡ್ ಮಾಡಿಕೊಂಡು ಆಡಲು ಶುರುಮಾಡುತ್ತವೆ. ಸುತ್ತಮುತ್ತಲಿನ ಜಗತ್ತಿನ ಪರಿವೆಯೇ ಇರುವುದಿಲ್ಲ. ಅದನ್ನು ಕಲಿಯಲು ಯಾವ ಶಾಲೆ, ಶಿಕ್ಷಕರೂ ಬೇಕಿಲ್ಲ. ಸೋಮಾರಿತನ ಮೈಗೂಡಿಸಿಕೊಂಡು, ಚಟುವಟಿಕೆ ಇಲ್ಲದ ಬೊಜ್ಜು ದೇಹ ಬೆಳೆಸಿಕೊಂಡು, ಚಿಕ್ಕ ವಯಸ್ಸಿನಲ್ಲೇ ದೊಡ್ಡ ದೊಡ್ಡ ರೋಗಗಳಿಗೆ ತುತ್ತಾಗುತ್ತಿರುವುದನ್ನು ಗಮನಿಸಿದರೆ ಮುಂದಿನ ಯುವಪೀಳಿಗೆಯ ಭವಿಷ್ಯ ಹೇಗೆಂಬ ಚಿಂತೆ ಕಾಡುತ್ತದೆ.
ಮಕ್ಕಳನ್ನು ಸ್ಮಾರ್ಟಫೋನಿನಿಂದ ದೂರವಿಡುವುದಂತೂ ಸಾಧ್ಯವಿಲ್ಲ. ಆದರೆ ಅವರನ್ನು ಸಮಯದ ಮಿತಿಗೆ ಒಳಪಡಿಸಬೇಕು. ಓದಿಗೆ, ಬೇರೆ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಅದಕ್ಕೆ ಮೊದಲು ಪೋಷಕರೂ ಸಹ ತಮ್ಮ ಫೋನಿನ ಆಟಗಳ ಹುಚ್ಚನ್ನು ಕಡಿಮೆಗೊಳಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ ಎಂಬಂತಾಗುತ್ತದೆ.
-ನಳಿನಿ. ಟಿ. ಭೀಮಪ್ಪ
ಹೌದು ಮೊದಲು ದೊಡ್ಡೋರು ಮೊಬೈಲ್ ದೂರ ಇಟ್ಟು ಮಕ್ಕಳ ಜೊತೆ ಹೆಚ್ಚು ಹೆಚ್ಚು ಸಮಯ ಕಳೆಯಬೇಕು ಮಕ್ಕಳ ೊೊಂಂದಿಗೆ ಬೇರೆ ಹವ್ಯಾಸ ಗಳನ್ನು ರೂಢಿಸಿಕೊಳ್ಳಬೇಕು. ಇದು ನಿಧಾನವಾದರೂ ಪರಿಣಾಮಕಾರಿ ಮದ್ದು
dhanyavadagalu madam
ನೀವು ಹೇಳುವುದು ಕರೆಕ್ಟ್
ಥಾಂಕ್ ಯು ಮೇಡಂ