ಮರಳಿ ಬರಬಾರದೇ ಬಾಲ್ಯದ ಹಲಸಿನಾ ಕಾಲ…
ನನ್ನ ನೆನಪಿನಂಗಳದಲ್ಲಿ ಬಚ್ಚಿಟ್ಟ ಬಾಲ್ಯದಂಗಳದ ನೆನಪುಗಳು ಆಗಾಗ ನನ್ನನ್ನು ಕಾಡ ತೊಡಗುತ್ತಿದೆ. ನಾ ಹುಟ್ಟಿ ಬೆಳೆದ ಮನೆ, ಕಾಡ ಪರಿಸರ, ಗದ್ದೆ, ತೋಟದಿಂದ ಆವೃತವಾದ ಆ ಪುಟ್ಟ ಹಳ್ಳಿ ಮನೆ, ಹಕ್ಕಿಗಳ ಚಿಲಿಪಿಲಿ ನಿನಾದ, ಮರದ ಪೊಟರೆಯಿಂದ ಇಣುಕಿ ನೋಡುವ ಪುಟ್ಟ ಪುಟ್ಟ ಅಳಿಲುಗಳು, ಸೆಗಣಿ ಸಾರಿಸಿ ರಂಗೋಲಿ ಹಾಕಿದ ಅಂಗಳದ ನೆನಪು, ನಮ್ಮದೇ ಸಾಮ್ರಾಜ್ಯವೆಂಬಂತೆ ಕುಣಿದು ಕುಪ್ಪಳಿಸಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳಂತೆ ಕಾಡು ಮೇಡುಗಳಲ್ಲಿ ಹಣ್ಣುಗಳನ್ನು ಅರಸುತ್ತಾ ಬೇಸಗೆಯ ಶುಭ್ರ ಬೆಳಕಲ್ಲಿ ಯಾವ ಚಿಂತೆಯೂ ಇಲ್ಲದೆ ವಿಹರಿಸುತ್ತಿದ್ದ ಕಾಲವದು. ಉರಿ ಬಿಸಿಲಿದ್ದರೂ ಆಗಾಗ ಬೀಸುವ ತಣ್ಣನೆ ಗಾಳಿ ಶರೀರಕ್ಕೆ ಆಹ್ಲಾದ ಉಂಟು ಮಾಡುವುದಲ್ಲದೆ, ನಿತ್ಯ ಸಾಗುತ್ತಿರುವ ದಾರಿಯಲ್ಲಿ ಎಲ್ಲಾ ಗಿಡ ಮರಗಳೂ ಹೂ, ಕಾಯಿ, ಹಣ್ಣುಗಳಿಂದ ತುಂಬಿ ತುಳುಕುವ ದೃಶ್ಯಗಳು ಮನಕ್ಕೆ ಮುದ ನೀಡುತ್ತಿತ್ತು. ನಮ್ಮ ಮನೆಯ ಹತ್ತಿರ ಹಾಗೂ ಶಾಲೆಗೆ ಹೋಗುವ ಕಾಡ ದಾರಿಯಲ್ಲಿ ಅಲ್ಲಲ್ಲಿ ಹಲಸಿನ ಮರಗಳು, ತುಂಬಿದ ಕಾಯಿಗಳಿಂದ ತನಗೆ ಯಾರೂ ಸಾಟಿಯಿಲ್ಲವೆನ್ನುವಂತೆ ಬೀಗುತ್ತಿರುವಂತೆ ಕಂಡು ಬರುತ್ತಿತ್ತು. ನನ್ನ ನಡಿಗೆಯನ್ನು ನಿಧಾನ ಗೊಳಿಸುತ್ತಾ ಹಲಸಿನೊಂದಿಗಿನ ನನ್ನ ನಂಟಿನ ಸ್ಮರಣೆಯನ್ನು ಮೆಲುಕು ಹಾಕುತ್ತಾ ಸಾಗುತ್ತಿದ್ದೆ. ಅದೇ ದಿನ ಸಂಜೆ ಅಮ್ಮ ಫೋನ್ ಮಾಡಿ ‘ ನಿನ್ನ ಮರದಲ್ಲಿ ತುಂಬಾ ಹಲಸಿನ ಕಾಯಿಗಳು ಬಿಟ್ಟಿದೆ, ಬೆಳೆದಿದೆ ತಗೊಂಡು ಹೋಗ ಬಹುದು’ ಎಂದಾಗ ನನ್ನ ಬಾಲ್ಯದ ನೆನಪಿನಾ ಪುಟಗಳಲ್ಲಿ ಹಸಿ ಹಸಿ ಹಲಸಿನಾ ನೆನಪು ಅದರ ಜೊತೆಗಿನ ನಮ್ಮ ಬದುಕು ಗರಿ ಬಿಚ್ಚ ತೊಡಗಿತು.
ನನ್ನ ತಾಯಿ ಮನೆಯ ಸಮೀಪ ತೋಟ ಹಾಗೂ ಗದ್ದೆಗಳ ಅಕ್ಕ ಪಕ್ಕದಲ್ಲಿ ಅನೇಕ ಹಲಸಿನ ಮರಗಳಿದ್ದವು. ಅಮ್ಮನಿಗೆ ನಾವು ಐದು ಜನ ಮಕ್ಕಳು. ಆ ಮರಗಳಲ್ಲಿ ಒಂದೊಂದು ಮರಗಳನ್ನು ನಾವು ಆಯ್ಕೆ ಮಾಡಿ ಕೊಂಡಿದ್ದೆವು. ಅದರ ಜೊತೆ ನಮ್ಮ ಒಡನಾಟ ಜೊತೆಗೆ ಪರೀಕ್ಷೆ ಸಮಯದಲ್ಲಿ ಮರ ಹತ್ತಿ ಅದರ ಗೆಲ್ಲುಗಳಲ್ಲಿ ಕುಳಿತು ಓದುವ ಹವ್ಯಾಸವೂ ಇತ್ತು. ಆ ಮರದ ಬಾಂಧವ್ಯ, ನೆನಪು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಬೇಸಗೆಯ ರಜೆ ಸಮಯದಲ್ಲಿ ಅಕ್ಕ ಪಕ್ಕದ ಮನೆಯವರು, ಮಕ್ಕಳೆಲ್ಲಾ ಸೇರಿ ಕೊಂಡು ಹಲಸಿನ ಹಪ್ಪಳ ಮಾಡುವ ಸಂಭ್ರಮ. ತೊಳೆ ಬಿಡಿಸಿ ಕೊಡುವುದರಿಂದ ಹಿಡಿದು ಬಿಸಿಲಿಗೆ ಚಾಪೆಯ ಮೇಲೆ ಒಣಗಲು ಹಾಕುವ ಕೆಲಸ ನಮ್ಮದು. ಕಾಯಿ ತೊಳೆಗಳನ್ನು ಉಪ್ಪಿನಲ್ಲಿ ಹಾಕಿಡುವುದಲ್ಲದೆ, ಹಲಸಿನ ಬೀಜದಿಂದ ಸಾಂತಾಣಿ, ಹಣ್ಣುಗಳಿಂದ ಮಾಂಬಳ ತಯಾರಿ ಹೀಗೆ ಸಾಕಪ್ಪಾ ಸಾಕು ಈ ಹಲಸು ಎನ್ನುವಷ್ಟು ಮಟ್ಟಿಗೆ ಜೋರಾಗಿಯೇ ಸಿದ್ದತೆ ನಡೆಯುತ್ತಿತ್ತು. ಹಲಸಿನ ಕಾಲ ಎಂದರೆ ಕೇಳ ಬೇಕೆ ? ಕಾಯಿ ಬಿಟ್ಟಲ್ಲಿಂದ ಪ್ರಾರಂಭವಾಗಿ ಹಣ್ಣಾಗಿ ಮುಗಿಯುವ ತನಕ ಎಲ್ಲಾ ಹಂತಗಳಲ್ಲಿ ದಿನ ನಿತ್ಯ ಉಪ್ಪಿನ ಕಾಯಿಯಿಂದ ಹಿಡಿದು ಸಾಂಬಾರು, ಪಲ್ಯ, ಇಡ್ಲಿ, ದೋಸೆ ಒಂದೇ ಎರಡೇ ಮುಗಿಯುವ ತನಕ ಅದರದ್ದೇ ಕಾರು ಬಾರು. ಬೇರೆ ತರಕಾರಿಗಳ ನೆರಳೂ ಕೂಡ ಬೀಳದಂತೆ ಇವು ಇರುತ್ತಿದ್ದವು. ಹಲಸು ಇದ್ದ ಮೇಲೆ ನಮಗೆ ಬೇರೆ ಊಟ ಬೇಕೆಂದಿರಲಿಲ್ಲ. ಎಲ್ಲವೂ ಅವೇ. ನಮ್ಮಲ್ಲಿನ ಕೃಷಿಕರು ಹಸಿವೆಗೆ ಇಡೀ ಹಲಸಿನ ಹಣ್ಣನ್ನು ತಿನ್ನುವ ಕ್ರಮವಿತ್ತು. ಮಳೆಗಾಲ ಬೇರೆ, ಶಾಲೆ ಬಿಟ್ಟ ನಂತರ ನಮಗಾಗಿ ಕಾಯುತ್ತತ್ತು ದಿನಕ್ಕೊಂದರಂತೆ ತಿನ್ನಲು ಹಲಸಿನ ಹಣ್ಣು! ಕೊಯ್ದು ಕೊಡುವವಳು ಅಮ್ಮ ಸುತ್ತಲೂ ಕುಳಿತು ತಿನ್ನುವ ಮಂದಿ ನಾವು. ಆ ದೃಶ್ಯ ಈಗಲೂ ಮರೆಯಲಸಾಧ್ಯ. ‘ಹಸಿದು ಹಲಸು ಉಂಡು ಮಾವು’ ಎಂಬ ಹಿರೀಕರ ಗಾದೆ ಮಾತು ಎಷ್ಟು ಅರ್ಥವತ್ತಾಗಿದೆ ಅಲ್ಲವೇ? ಹಿಂದಿನ ತಲೆಮಾರಿನವರ ಹೊಟ್ಟೆಯ ಹಸಿವನ್ನು ನೀಗಿಸಿ ಬದುಕು ಕೊಟ್ಟದ್ದೂ ಹಲಸಿನ ಮರವೇ. ಇದಲ್ಲದೆ ಸಂಕಷ್ಟದಲ್ಲಿದ್ದ ಅನೇಕ ಕುಟುಂಬವನ್ನು ಸಾಕಿ ಸಲಹಿದ್ದೂ ಇದೇ ಮರ. ವರ್ಷವಿಡೀ ದೊರೆಯುವ ಈ ಹಲಸಿನ ಹಣ್ಣು ಎಲ್ಲರ ಹಸಿವನ್ನು ನೀಗಿಸಿದೆ ಎಂಬ ಮಾತಿನಲ್ಲಿ ಉತ್ಪ್ರೇಕ್ಷೆಯಿಲ್ಲ.
.
,
ಚೆನ್ನಾಗಿದೆ ಮೇಡಂ ನಿಮ್ಮ ಹಲಸು ಪುರಾಣ.
ನನಗೂ ಹಲಸಿನೊಂದಿಗೆ ಬಾಲ್ಯ ನೆನಪಾಯಿತು..ಸೂಪರ್ ಬರಹ..