ಮತ್ತೆ ಬಂದಿದೆ ಹಲಸಿನ ಹಣ್ಣಿನ ಕಾಲ.ಮರೆಯಾದ ಹಳೆಯ ನೆನಪೊಂದು ಮೇಲೆದ್ದು ಬಂದಿದೆ.
ಸುಮಾರು 77-78 ನೇ ಇಸವಿಯಲ್ಲಿರಬೇಕು ನಾವಾಗ ಕಾಡಿನಂಚಿನ ತೋಟದ ಮನೆಯೊಂದರಲ್ಲಿ ವಾಸಿಸುತ್ತಿದ್ದೆವು. ದೊಡ್ಡ ತೋಟ, ಕೂಗಳತೆಯ ದೂರದಲ್ಲೆಲ್ಲೂ ಇನ್ನೊಂದು ಮನೆ ಇಲ್ಲ. ರಾಜಾರೋಷವಾಗಿ ಮನೆಯ ತುಂಬೆಲ್ಲಾ ಓಡಾಡಿಕೊಂಡಿದ್ದ ಹಾವು ಚೇಳುಗಳು, ಆಗಾಗ ತನಿಖೆಗೆ ಬರುತ್ತಿದ್ದ ಕರಡಿ, ಕಾಡುಬೆಕ್ಕು ಮುಂತಾದ ತನಿಖಾಧಿಕಾರಿಗಳು. ಜೊತೆಗೆ ಬೆಂಗಳೂರು,ಮೈಸೂರು ಮುಂತಾದ ಪಟ್ಟಣಗಳನ್ನಷ್ಟೇ ಕಂಡಿದ್ದ ನಾವು. ಕಾಡಿನ ಯಾವುದೇ ಅನುಭವವಿಲ್ಲ, ಹಾಗಾಗಿ ಭಯವೂ ಇಲ್ಲ.
ಹೀಗಿರಲೊಂದುದಿನ ಬೆಳಬೆಳಗ್ಗೇನೇ ಸಾ….. ಸಾ….. ಎಂದು ಕೂಗುತ್ತಾ ಧಬಧಬನೆ ಬಾಗಿಲು ಬಡಿದ ಸದ್ದು. ಬಾಗಿಲು ತೆರೆಯುತ್ತಿದ್ದಂತೆ ಒಳ ನುಗ್ಗಿದ ಪಕ್ಕದ ತೋಟದ ಮಾಲೀಕರ ಮಗ, ಆಗ ತಾನೇ ಚಿಗುರು ಮೀಸೆ ಮೂಡುತ್ತಿದ್ದ ಹುಡುಗ ಹೆದರಿ ಕಂಗಾಲಾಗಿದ್ದಾನೆ. ನಡುಗುತ್ತಿದ್ದ ಅವನನ್ನು ಕೂರಿಸಿ ಬಿಸಿಬಿಸಿ ಕಾಫಿಮಾಡಿಕೊಟ್ಟು ಸ್ವಲ್ಪ ಸಮಾಧಾನ ವಾದ ಮೇಲೆ ಅವನು ಹೇಳಲು ಶುರು ಮಾಡಿದ.
‘ನಮ್ ಹೊಲದಾಗಿನ ಮರದಾಗೆ ಅಲಸ್ನಂಣ್ಣು ಜೋಲ್ತಾ ಬಿದ್ದಿವೆ ಸಾ.. ನಮ್ಮಪ್ಪ ತಿನ್ನಕ್ಕೂ ಒಂದೂ ಬಿಡ್ದೀರ ಎಲ್ಲಾ ಪ್ಯಾಟೆಗೆ ಮಾರ್ಕೊಂತಾನೆ ಸಾ. ಅದ್ಕೆ ನಾನು, ಬಡ್ಡ, ಸಿದ್ದ ಒಂದಣ್ಣು ಎಗರ್ಸಿ ತೋಟದಾಗಿರೋ ಮೆದೇಲಿ ಅವ್ಸಿಟ್ಟಿದ್ದೋ. ಇನ್ನೂ ಅಣ್ಣಾಗ್ಬೇಕಿತ್ತು. ನಾಳೆ ಅಣ್ಣಾಯ್ತದೆ ಬಿಚ್ಚುವ ಅಂತಿದ್ದೊ ಅಷ್ಟ್ರಾಗೆ…..‘ ಅಂತ ಹೇಳಿ ಸ್ವಲ್ಪ ಸುಧಾರಿಸಿಕೊಳ್ಳಲು ನಿಲ್ಲಿಸಿದ.
ನಾನು ಸುಮ್ಮನಿರದೆ ಅಷ್ಟರಲ್ಲಿ ನಿಮ್ಮಪ್ಪ ಕಂಡ್ಕೊಂಡ್ ಬಿಟ್ನಾ ಅಂದೆ.
‘ಏ…. ನಾವಾಡೋ ಆಟಾನೆಲ್ಲ ನಮ್ಮಪ್ಪ ಕಂಡ್ಕೊಂಬುಟ್ರೆ ಚಮ್ಡ ಸುಲ್ದು ಉಪ್ ತುಂಬ್ಬುಡ್ತಾನೆ ಓಟೆಯ . ಅದಲ್ಲ ಅಮ್ಮೋರೇ ‘ ಎಂದವನೇ ಹೆಗಲ ಮೇಲಿದ್ದ ಟವಲ್ ನಲ್ಲಿ ಬೆವರೊರೆಸಿಕೊಂಡ. ಆ ಹೊತ್ತಿಗೆ ಅವನ ಭಯವೂ ತಹಬಂದಿಗೆ ಬಂದಿತ್ತು ನಾನೂ ಮುಂದಿನ ಕಥೆ ಕೇಳಲು ಗಲ್ಲಕ್ಕೆ ಕೈಯ್ಯೂರಿ ಕುಳಿತೆ.
ನೆನ್ನೆ ರಾತ್ರಿ ನಾನು ಸಿದ್ದ ತೋಟದ ಮನನಾಗೆ ಮನ್ಕೋಬೇಕಿತ್ತು . ಈ ಸಿದ್ದ ಇದ್ದೋನು ನಿಮ್ಮಪ್ಪಾರ್ಗೆ ಹೇಳ್ ಬ್ಯಾಡ ಕಂಣ್ಲಾ ಅಂತೇಳಿ ಪ್ಯಾಟೆ ಗೆದ್ ಬುಟ್ಟ ಸಿನಿಮಾ ನೋಡಕ್ಕೆ. ನಾನೊಬ್ನೇ ಮಲಗಿದ್ನಾ. ರಾತ್ರಿ ಒಂದೊತ್ನಲ್ಲಿ ‘ವಂದ’ ಕ್ಕೆ ಅವಸರ ಆಗಿ ಬಾಕ್ಲು ತೆಕ್ಕೊಂಡೀಚೆ ಬಂದ್ನಾ ಆಲು ಚಲ್ದಂಗೆ ಬೆಳದಿಂಗಳಿತ್ತು. ಅಂಗೇ ಮುಂದೆ ಬಂದ್ರೆ ಮೆದೆ ತಾವ ನನ್ನುದ್ದಕ್ಕೂ ನಿಂತ್ಕೊಂಡ್ ಬಿಡಾದ ಕಪ್ಪಗೆ . ನೋಡದ್ರೆ ಕರ್ಡಿ. ಅಂಗೇ ವಳಕ್ಕೋಗಿ ಬಾಗ್ಲಾಕ್ಕೊಂಡೋನು ಈಗ್ಲೇ ಈಚೆ ಬಂದದ್ದು ಸಾ. ಅದ್ರ ವಟ್ಟೆ ಕಡ್ಯ ಅಣ್ಣೆಲ್ಲ ತಿಂದು ಸಿಪ್ಪೆ ಜೊತೆ ಒಂದ್ ಮಂಕ್ರಿ ಲದ್ದಿನೂ ಒಟ್ಟಿ ಓಗ್ಬುಟ್ಟದೆ ಅದನ್ನೆಲ್ಲ ಕಿಲೀನ್ ಮಾಡ್ಬೇಕ್ರ ಎಂದು ತಲೆ ಮೇಲೆ ಕೈ ಹೊತ್ತು ಕೂತ . ಪ್ರಾಣ ಉಳಿದಿದ್ದಕ್ಕೆ ಸಂತೋಷ ಪಡೋದೋ, ಹಣ್ಣು ಹೋದ್ದಕ್ಕೆ ದುಃಖ ಪಡೋದೋ, ಕಿಲೀನ್ ಮಾಡಬೇಕಲ್ಲ ಅಂತ ಬೇಸರಿಸಿಕೊಳ್ಳೋದೋ ತಿಳೀದೆ.
.