ಲಹರಿ

ಬೇಸಾಯಗಾರ ಬೇಗ ಸಾಯ… ಭಾಗ 1 

Share Button
*ಬೇಸಾಯಗಾರ ಬೇಗ ಸಾಯ* ನೀವೆಲ್ಲರೂ ಈ ಮಾತು ಕೇಳಿರಬಹುದು . ಬಹುಶಃ ಬೇಸಾಯ ಈಗ ಕಡಿಮೆಯಾದ ಕಾರಣ ನಮ್ಮ ಕಡೆ ಎಲ್ಲರೂ ಬೇಗನೇ ಗೊಟಕ್ ಆಗ್ತಾರೋ ಏನೋ . ಅದ್ಸರಿ , ಬೇಸಾಯವೇನೋ ಒಳ್ಳೆಯದೇ ಅದನ್ನು ಮುನ್ನಡೆಸುವುದು ಹೇಗೆ ಎನ್ನುವುದೇ ಈಗ ಉಳಿದಿರುವ ಯಕ್ಷ ಪ್ರಶ್ನೆ.
ಮೊದಲೆಲ್ಲಾ ಒಂದು ಕುಟುಂಬ ಎಂದರೆ ಹೆಚ್ಚು ಕಮ್ಮಿ ಹತ್ತು ಹದಿನೈದು ಮಂದಿಗೆ ಕಡಿಮೆಯಿರಲಿಲ್ಲ. ಅಣ್ಣ ತಮ್ಮ ಎಲ್ಲರಿಗೂ ಒಂದೇ ಮನೆ. ಮನೆ ತುಂಬಾ ಮಕ್ಕಳು.  ಮಕ್ಕಳಿಗೆ ಇಂದಿನಂತೆ ಮೊಬೈಲು ವೀಡಿಯೋ ಗೇಮು ಯಾವುದೂ ಇರಲಿಲ್ಲ.  ಹೊಲದಲ್ಲಿ ದುಡಿಯಬೇಕು.  ಶಾಲೆಗೆ ಹೋಗುವ ಮೊದಲು ಮನೆ ಮಂದಿ ಎಲ್ಲರೂ ಒಟ್ಟಿಗೆ ಸೇರಿ ಅಡಿಕೆ ತೋಟಕ್ಕೋ ತೆಂಗಿನ ತೋಟಕ್ಕೋ ಹೋಗಿ ಬಿದ್ದ ಕಾಯಿಗಳನ್ನು ಹೆಕ್ಕಿ ನಂತರ ಶಾಲೆಗೆ ಹೋಗಬೇಕಾದ ಪರಿಸ್ಥಿತಿ.
ಶಾಲೆಗೆ ಹೋಗುವ ಆ ದಾರಿ, ಸುಮ್ಮನೆ ಸವೆಸುತ್ತಿರಲಿಲ್ಲ. ಮನೆಯ ಯಜಮಾನ ಹಟ್ಟಿಯಿಂದ ದನಕರುಗಳನ್ನು ಹಗ್ಗ ಬಿಚ್ಚಿ ಮಕ್ಕಳೊಂದಿಗೆ ಕಳುಹಿಸಿ ಕೊಡುತ್ತಿದ್ದರು. ಒಂದು ಕಯ್ಯಲ್ಲಿ ಚೀಲ . ಇನ್ನೊಂದು ಕಯ್ಯಲ್ಲಿ ಬೆತ್ತ , ಹೊಯ್ .. ಹೋಯ್ …
ಇಲ್ಲಿಗೂ ಮುಗಿಯುವುದಿಲ್ಲ.. ಪ್ಯಾಕೆಟ್ ಹಾಲು ಅಷ್ಟಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರದ ಕಾಲ. ಅಕ್ಕ ಪಕ್ಕದ ಹೋಟೆಲ್ ಗಳಿಗೂ ಹಾಲು ಸರಬರಾಜು ಮಾಡುವ ಜವಾಬ್ದಾರಿಯನ್ನೂ ಈ ಹಳ್ಳಿ ಮಕ್ಕಳು ವಹಿಸಿಕೊಂಡ ಹಾಗಿತ್ತು. ದನಗಳನ್ನೂ ಮೇಯಲು ಬಿಟ್ಟಂಗಾಯ್ತು . ಹೋಟೆಲುಗಳಿಗೆ ಹಾಲು ಕೊಟ್ಟೂ ಆಯಿತು . ಜೊತೆಗೆ ಶಾಲಾ ವಿದ್ಯಾಭ್ಯಾಸಕ್ಕೂ ಹಾಜರ್.
ಸಂಜೆ ಕೂಡಾ ಇದೇ ಕಾಯಕ. ಗುಡ್ಡೆಯಲ್ಲೋ ಪದವಿನಲ್ಲೋ ಮೇಯುತ್ತಿದ್ದ ದನಕರುಗಳನ್ನು ವಾಪಸ್ ಕರೆತರುವ ಕೆಲಸ.
ಇಂದು ಸರೀ ವಿಪರೀತ .. ಮಕ್ಕಳನ್ನು ಶಾಲೆಯಿಂದ ಹೆತ್ತವರೇ ಹೋಗಿ ಕರೆತರಬೇಕು … :). ಇಂದು ಗುಡ್ಡೆಯೆಲ್ಲಿ .. ? ಪದವು ಎಲ್ಲಿ .. ? ಮೇವು ಎಲ್ಲಿ .. ? ಖಾಲಿ ಬಿದ್ದಿದ್ದ ಜಾಗಗಳಲ್ಲಿ ಮನೆಗಳು ತುಂಬಿಕೊಂಡಿದೆ. ಹುಲ್ಲು .. ಅಯ್ಯೋ .. ಅದರ ವಿಷಯವೇ ಬೇಡ…  ಹುಲ್ಲು ಇಲ್ಲದಿದ್ದರೇನು ಮೇವಂತೂ ಸಿಕ್ಕೇ ಸಿಕ್ಕುತ್ತೆ .. ಬಜಾರಿನಲ್ಲಿ ಗೋಣಿ ಚೀಲಗಳಲ್ಲಿ ಅಲ್ಲವೇ ?ಈ ದನಗಳು ಹಟ್ಟಿಯಲ್ಲಿ ಸುಮ್ಮನೇ ಕೂರುತ್ತಿತ್ತೇ ? ಇಲ್ಲ.  ಹಟ್ಟಿಗೆ ಒಂದಿಷ್ಟು ಸೊಪ್ಪು ಹಾಕಿದರೆ ಸಾಕು. ಕಾಮ್ ಖತಂ. ರಾತ್ರಿ ಹಗಲು ದನಕರುಗಳು ಆ ಸೊಪ್ಪಿಗೆ ಒಂದಿಷ್ಟು ಸೆಗಣಿ ಸೇರಿಸಿ ಗೊಬ್ಬರ ಮಾಡಿಕೊಡುತ್ತಿತ್ತು.   ಪೇಟೆಗೆ ಹೋಗಿ ಹಣ ಕೊಟ್ಟು ಗೋಣಿ ಚೀಲಗಳಲ್ಲಿ ಕೃತಕ ಗೊಬ್ಬರ ಹೊತ್ತು ತರಬೇಕಾದ ಪ್ರಮೇಯವೇ ಇರುತ್ತಿರಲಿಲ್ಲ.  ಅಂದು ಆ ಹಟ್ಟಿಯಿಂದ ಆ ಆಕಳುಗಳು ಹಾಡುತ್ತಿದ್ದ ಹಾಡು ಕವಿಯೊಬ್ಬರು ಮಾತ್ರ ಕೇಳಿಸಿಕೊಂಡಿದ್ದರು:

 

ಇಟ್ಟರೆ ಸೆಗಣಿಯಾದೆ
ತಟ್ಟಿದರೆ ಕುರುಳಾದೆ 

ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ ..

ಬಿಡಿ, ಆ ಕಾಲ ಹೋಯ್ತು. (ಕೆಲವೊಂದು ಅಪವಾದಗಳನ್ನು ಹೊರತುಪಡಿಸಿ).  ಕೃಷಿ ಎನ್ನುವುದು ಜೀವನ ಮಾರ್ಗವಾಗಿದ್ದ ಕಾಲ. ಆಗ ಪ್ರಾಣಿ ಪಕ್ಷಿಗಳೂ ಸೇಫ್ ಆಗಿದ್ದುವು.  ಒಂದ್ನಿಮಿಷ, ಪಕ್ಷಿಗಳು ಅಂದರೆ ಅದರಲ್ಲಿ ಕೋಳಿಯೂ ಸೇರುತ್ತದೋ ಗೊತ್ತಿಲ್ಲ. ಕೋಳಿಗಳ ಬಗ್ಗೆ ಹೇಳದಿದ್ದರೆ ಅವುಗಳೂ ಪಾಪ ಬೇಜಾರು ಮಾಡಿಕೊಂಡಾವು. ಹಿಂದಿನ ಕಾಲದಂತೆ ಈಗಲೂ ಕೋಳಿಗಳನ್ನು ಮನೆಯಲ್ಲಿ ಸಾಕಲು ಸಾಧ್ಯವೋ ಎಂದು ನೀವು ಕೇಳಬಹುದು.  ಹೌದು ಮಾರಾಯ್ರೇ .. ಕೋಳಿ ಸಾಕಿದರೆ ಇನ್ನೂ ಕಷ್ಟ ಅಲ್ಲವೇ ಮಾರಾಯ್ರೇ ..  ಅಲ್ಲಿಲ್ಲಿ ಹಿಕ್ಕೆ ಹಾಕಿದರೆ ಅದನ್ನು ಕ್ಲೀನ್ ಮಾಡಲು ತೆಂಗಿನ ಸಿಪ್ಪೆಯೋ ಇನ್ನೇನೋ ಬೇಕು. ದುರ್ವಾಸನೆ ಬೇರೆ . ಈ ಹೊಸ ತಲೆಮಾರಿನವರಿಗೆ ಸೆಗಣಿಯೋ ಹಿಕ್ಕೆಯೋ ತೆಗೆಯಲು ಗ್ಲೋಸ್ (gloves) ಬೇರೆ ಹುಡುಕಬೇಕು.  ಈಗ ನೆಂಟರಿಷ್ಟರು ಬಂದರೆ ಒಂದು ಫೋನ್ ಕಾಲ್ ಸಾಕು.  ಒಂದು ಕೋಳಿ ಕ್ಲೀನ್ ಮಾಡಿ ಕಳುಹಿಸಿ ಕೊಡಿ. ಒಂದರ್ಧ ಗಂಟೆಯೊಳಗೆ ಕಪ್ಪು ಚೀಲದಲ್ಲಿ ಫ್ರೆಶ್ ಕೋಳಿ ತುಂಡು ತುಂಡಾಗಿ ಹಾಜರ್. ಗೋವುಗಳಂತೆ ಕೋಳಿಗಳೂ ಹಾಡುತ್ತಿದ್ದಿರಬೇಕು :

ಇಟ್ಟರೆ ಮೊಟ್ಟೆಯಾದೆ .. 
ತಟ್ಟಿದರೆ ಆಮ್ಲೆಟ್ ಆದೆ . 
ತಟ್ಟದೇ ಬೇಯಿಸಿದರೆ ಬೋಯಿಲ್ಡ್ ಎಗ್ ಆದೆ .. 
ಕುತ್ತಿಗೆಯ ಸೀಳಿದರೆ .. ಚಿಕನ್ ಫ್ರೈ ಆದೆ .. ಚಿಕನ್ ಕಬಾಬ್ ಆದೆ ..  🙂

ದನ ಕರುಗಳು ಮಾತ್ರವಲ್ಲ, ಆಡು ಕೋಳಿಗಳಿಗೂ ಮನೆಯಲ್ಲಿ ಸ್ಥಾನವಿಲ್ಲ ಎಂದು ಭಾವಿಸಿ ಬಿಡಿ.  ನಾವೆಲ್ಲರೂ ಹಳ್ಳಿಯಲ್ಲಿದ್ದರೂ ಪೇಟೆಯ ಜೀವನ ಶೈಲಿಯನ್ನು ಪ್ರೀತಿಸುವವರೇ ಎನ್ನುವುದು ಚುಟುಕು.  ಇನ್ನು ಮೀನುಗಳ ಬಗ್ಗೆ ಹೇಳುವುದಾದರೆ , ಮಡೆಂಜಿ, ಡೆಂಜಿ(ಏಡಿ), ಎಟ್ಟಿ(ಸಿಗಡಿ), ಬಾಳೆ ಮೀನು …. ಇದೆಲ್ಲಾ ಮೊದಲೆಲ್ಲಾ ಊರ ಜನರಿಗೆ ಪರಿಚಿತ ಹೆಸರುಗಳು.  ಇಂದು ಹೊಳೆ, ಕೆರೆಯಲ್ಲಿ ಮೀನುಗಳಿಲ್ಲ .ಅವುಗಳೂ ಹೇಳ ಹೆಸರಿಲ್ಲದಂತಾಗಿದೆ.ನಾನು ಚಿಕ್ಕಂದಿನಲ್ಲಿ ನಮ್ಮ ಒಂದು ಸಣ್ಣ ಕೆರೆಯಲ್ಲಿ ಗಂಟೆಗಟ್ಟಲೆ ಕೂತು ಗಾಳ ಹಾಕಿದ್ದಿದೆ . ಮೀನು ಕೂಡಾ ಸಿಗುತ್ತಿತ್ತು ಮಾರಾಯ್ರೇ . ಈ ಮಡೆಂಜಿ ಮೀನು ಉಂಟಲ್ಲಾ. ಅದನ್ನು ಕಯ್ಯಲ್ಲಿ ಹಿಡಿಯುವುದೇ ಕಷ್ಟ. ಗ್ರೀಸ್ ಹಾಕಿದಂತೆ ಇದೆ . ಕಯ್ಯಲ್ಲಿ ಹಿಡಿದ ತಕ್ಷಣ ಜಾರಿ ಹೋಗುತ್ತಿತ್ತು. ಆದರೆ ಕಷ್ಟಪಟ್ಟು ಹಿಡಿದ ಮೀನನ್ನು ಮನೆಗೆ ಒಯ್ಯುವಂತಿರಲಿಲ್ಲ. ಆ ಮೀನನ್ನು ಕೊಂಡು ಹೋದರೆ ಅಮ್ಮ ಮನೆಗೆ ಸೇರಿಸುತ್ತಿರಲಿಲ್ಲ. ಗೆಳೆಯರಿಗೋ ಇನ್ನಾರಿಗೋ ಕೊಡಬೇಕಾದ ಪರಿಸ್ಥಿತಿ.  ಹಾಗೆ ಮೀನು ಹಿಡಿಯುವುದು ಒಂದು ಹಾಬಿ ಮಾತ್ರವಾಗಿ ಮುಂದುವರಿದಿತ್ತು.

 

 – ಕೆ. ಎ. ಎಂ. ಅನ್ಸಾರಿ, ಮೂಡಂಬೈಲ್.

(ಮುಂದುವರಿಯುವುದು)

One comment on “ಬೇಸಾಯಗಾರ ಬೇಗ ಸಾಯ… ಭಾಗ 1 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *