ನಾವು ಆಲೋಚನೆ ಏಕೆ ಮಾಡುತ್ತಿಲ್ಲ?
.
ಎಲ್ಲವನ್ನೂ ನಂಬುವುದರಿಂದ ನೋವು ನಮಗೆ: ಒಂದೊಂದು ಸಲ ನಾವು ಯಾವುದನ್ನೂ ಪರೀಕ್ಷಿಸುವ ಗೋಜಿಗೆ ಹೋಗದೆ ಎಲ್ಲವನ್ನೂ ನಂಬಿ ಬಿಡುವ ಮಟ್ಟಕ್ಕೂ ಬರುತ್ತೇವೆ. ಬೇರೆಯವರು ಏನಾದರೊಂದು ಹೇಳಿದಾಗ, ಅವರು ಹೇಳಿದ್ದನ್ನೆಲ್ಲಾ ಒಪ್ಪಿಕೊಂಡು ಎಲ್ಲದ್ದಕ್ಕೂ ಸರಿ ಎಂದು ಗೋಣಾಡಿಸುವ ಹಂತಕ್ಕೂ ತಲುಪುತ್ತೇವೆ. ಇಂತಹ ಪ್ರವೃತ್ತಿ ನಮ್ಮ ಸ್ವಂತ ವ್ಯಕ್ತಿತ್ವವನ್ನು ನಾಶ ಮಾಡಿ ನಾವು ಅವರಿಗೆ ಗುಲಾಮರಾಗಿ ಬಿಡುವುದಲ್ಲದೆ ಸೋಲುವ ಹಂತಕ್ಕೂ ಮುಂದುವರಿಯುವ ಸ್ಥಿತಿ. ಹೇಳಿ ಕೇಳಿ ಇದು ಆಧುನಿಕ ಯುಗ ನಮ್ಮ ಮನಸ್ಥಿತಿಯನ್ನು ತಿಳಿದು ಕೊಂಡ ಅನೇಕ ಮಂದಿ ನಮ್ಮನ್ನು ವಂಚಿಸುವ ಮಟ್ಟಕ್ಕೂ ತಲುಪಿಸಿ ಬಿಡುತ್ತಾರೆ. .
.
ನಮ್ಮ ಮನಸ್ಥಿತಿ, ಆಲೋಚನಾ ಶಕ್ತಿ ಹೇಗಿದೆಯೆಂದರೆ : ನಮ್ಮ ಮನಸ್ಥಿತಿ ಎಲ್ಲಿಯ ತನಕ ಇದೆ ಎಂಬುದಕ್ಕೆ ಅನೇಕ ಉದಾಹರಣೆಗಳನ್ನು ಕೊಡ ಬಹುದು. ಟಿವಿ ಜಾಹಿರಾತುಗಳಲ್ಲಿ ಕ್ರೀಮ್, ಶಾಂಪು ಹಾಗೂ ಇನ್ನಿತರ ವಸ್ತುಗಳು ಹೊಸದು ಕಂಡ ಕೂಡಲೇ ಅದನ್ನು ಕೊಂಡು ತರುವ ತನಕ ನಮಗೆ ಚಡಪಡಿಕೆ ತಪ್ಪಿದ್ದಲ್ಲ. ಒಂದರಿಂದ ಇನ್ನೊಂದಕ್ಕೆ ಹಾರುವ ಮಾರು ಹೊಗುವ ಸ್ಥಿತಿ ಯನ್ನು ತಲುಪುವ ಮಟ್ಟಕ್ಕೆ ಬಂದಿದ್ದೇವೆ. ಇಲ್ಲಿ ನಮ್ಮ ಆಲೋಚನೆಗಳು ಮಂಕಾಗಿ ಬಿಡುತ್ತವೆ. ಇತ್ತೀಚೆಗಂತೂ ಜಾಹಿರಾತುಗಳ ಭರಾಟೆ ಬಲು ಹೆಚ್ಚಾಗಿದೆ ಎಂದೇ ಹೇಳ ಬಹುದು. ಅದು ಒಂದು ಜಾಹಿರಾತು, ಪ್ರಚಾರ ಮಾಡುವುದೇ ಅದರ ಉದ್ದೇಶ ಅಂದ ಮೇಲೆ ನಾವು ಅದರತ್ತ ಅದರ ಅಂಶಗಳನ್ನು ವಿಚಾರ ಮಾಡದೆ ಅನೇಕ ತಪ್ಪುಗಳನ್ನು ಮಾಡುತ್ತಲಿದ್ದೇವೆ. ಸಿಗರೇಟು ಹಾನಿಕರ ಎಂದು ಪ್ಯಾಕ್ ಮೇಲೆ ಬರೆದಿರುತ್ತದೆ. ಬರೆದ ಶಾಸನದ ಎಚ್ಚರಿಕೆಯನ್ನು ಓದಿದರೂ ಜನ ಕೆಟ್ಟ ಚಾಳಿ ಬಿಡಲಾರರು. ಮದ್ಯಪಾನ, ತಂಬಾಕು ಇನ್ನಿತರ ದುಶ್ಚಟಗಳಿಂದ ಸಾವು ಸಂಭವಿಸುತ್ತದೆ, ಕ್ಯಾನ್ಸರ್ ಬರುತ್ತದೆ ಎಂದು ತಿಳಿದಿದ್ದರೂ ಆಲೋಚಿಸದೆ ಅದರ ಸೆಳೆತಕ್ಕೆ ಬಿಟ್ಟಿರಲಾರದೆ ಅಂಟಿ ಕೊಂಡು ಬಿಟ್ಟಿದ್ದೇವೆ. ಒಂದೊಂದು ಸಲ ಸುಳ್ಳನ್ನೇ ಎಲ್ಲರೂ ಹೇಳುವಂತಾದರೆ ಸುಳ್ಳೇ ಸತ್ಯವಾಗಿ ಹಾಗೂ ಆಪ್ತವಾಗಿ ಬಿಡುತ್ತದೆ. ಚೂಯಿಂಗಮ್, ಬಬಲ್ ಗಮ್ ಒಳ್ಳೆಯದಲ್ಲವೆಂದು ಗೊತ್ತಿದ್ದೂ ಮುಖದ ವ್ಯಾಯಾಮಕ್ಕೆ ಒಳ್ಳೆಯದೆಂದು ಯಾರೊ ಹೇಳಿದರೆಂದು ಇವುಗಳಿಗೆ ಎಲ್ಲಿಲ್ಲದ ಬೇಡಿಕೆ. ಟೂತ್‌ಪೇಸ್ಟ್ ಗಳಿಂದ ಹಿಡಿದು ಮುಖದ ಅಂದ ಹೆಚ್ಚಿಸುವ, ಗಡ್ಡ ತೆಗೆಯುವ ತರತರದ ಬೇರೆ ಬೇರೆ ಕಂಪನಿಗಳ ಕ್ರೀಮ್ ಗಳು, ಪೌಡರುಗಳು ಒಂದೇ ಎರಡೇ ಅಬ್ಬಬ್ಬಾ ಎನ್ನುವಷ್ಟು ಮಟ್ಟದಲ್ಲಿ ನಮ್ಮನ್ನು ಆಕರ್ಷಿಸಲ್ಪಡುತ್ತವೆ. ನಮ್ಮ ಹಿರಿಯರು ಯಾವುದೇ ಸೋಪೂ ಕ್ರೀಮೂ ಇಲ್ಲದೆ ಬರಿ ನೀರಿನಲ್ಲಿಯೇ ಗಡ್ಡ ತೆಗೆಯುತ್ತಿರಲಿಲ್ಲವೇ? ಯಾವುದೇ ಕ್ರೀಮುಗಳಿಲ್ಲದೆ ಮುಖಕ್ಕೆ ಬರೀ ಅರಶಿನ ಹಚ್ಚಿ ಕೊಂಡ ಹೆಂಗಳೆಯರ ಮುಖದ ಸೌಂದರ್ಯ ಏನಾಗಿದೆ? ” ಕಿವಿಯ ಬಣ್ಣ ಹೇಗಿದೆಯೋ ಹಾಗೆ ಮೈ ಮುಖದ ಬಣ್ಣ” ಇದು ಸತ್ಯದ ಮಾತು! ಜಾಹೀರಾತುಗಳಲ್ಲಿ ಬಿಳಿ ಹುಡುಗಿಯರನ್ನೇಕೆ ಮುಖದ ಕ್ರೀಮ್ ಹಾಗೂ ಸೋಪುಗಳ ಪ್ರಚಾರಕ್ಕೆ ಬಳಸುತ್ತಾರೆ? ಹೀಗೆ ಅನೇಕ ಪ್ರಶ್ನೆಗಳು ಏಳುವುದು ಸಹಜ.
.
ನಾವು ಸರಿಯಾಗಿ ಆಲೋಚನೆ ಮಾಡದಿದ್ದರೆ: ಜನರು ಇಟ್ಟ ದುಡ್ಡಿಗೆ ಅಧಿಕ ಬಡ್ಡಿ ದೊರಕುವಂತಾದರೆ, ಅತೀ ಕಮ್ಮಿ ಬೆಲೆಗೆ ವಸ್ತುಗಳು ಸಿಗುವಂತಾದಾಗ ಅಲ್ಲಿ ಜನರ ಗುಂಪು ಮುನ್ನುಗ್ಗುತ್ತಿರುವುದನ್ನು ನೋಡಿದಾಗ ಈ ನಮ್ಮ ಜನ ತಿಳಿದು ತಿಳಿದೂ ಇಂತಹ ಬಲೆಗೆ ಬೀಳುತ್ತಿದ್ದಾರಲ್ಲಾ ಎಂದು ಆಶ್ಚರ್ಯವಾಗುತ್ತದೆ. ಮಾತ್ರೆ ಇಂಜೆಕ್ಷನ್ ಇಲ್ಲದೆ ಬರೀ ಮಾತಿನಿಂದಲೇ ಕಾಯಿಲೆಗಳನ್ನು ಗುಣ ಪಡಿಸಲು ಸಾಧ್ಯವೆಂದು ಅಮಾಯಕ ಜನರನ್ನು ಮರಳು ಮಾಡುವ ನಕಲಿಗಳು, ಹಾಗಾದರೆ ಕಷ್ಟ ಪಟ್ಟು ಓದಿ ಜನ ಸೇವೆ ಮಾಡುವ ವೈದ್ಯರೇನು ಮಾಡ ಬೇಕು? ಇವಲ್ಲದೆ ಉದ್ಯೋಗ ಕೊಡಿಸುತ್ತೇವೆಂದು ನೆಪ ಮಾತ್ರಕ್ಕೆ ತರಗತಿಗಳನ್ನು ನಡೆಸಿ ಮೋಸ ಮಾಡುವ ಮಂದಿಗಳು, ಚೀಟಿ ವ್ಯವಹಾರ ನಡೆಸಿ ಜನರಿಂದ ಹಣ ಪಡೆದು ಕಾಣೆಯಾಗುವ ಘಟನೆಗಳನ್ನು ಪತ್ರಿಕೆ ಹಾಗೂ ಮಾಧ್ಯಮಗಳಿಂದ ತಿಳಿದು ಕೊಂಡಿರುತ್ತೇವೆ. ಸಮಾಜದಲ್ಲಿ ಇಂದು ವ್ಯಕ್ತಿಗಳ ಆಯ್ಕೆ ಮಾಡುವ ಪ್ರಕ್ರೀಯೆಯಲ್ಲೂ ಗೊತ್ತಿದ್ದೂ ಇಂತಹ ಪ್ರಮಾದಗಳನ್ನು ಮಾಡುತ್ತಲೇ ಬಂದಿದ್ದೇವೆ. ನಂಬಿಕೆಯಿಂದ ಶೋಷಣೆ ಆಗುತ್ತಿದೆ ಎಂಬುವುದಾದರೆ, ಅರ್ಥಹೀನ ಎಂದಾದಲ್ಲಿ ಅಲ್ಲಿಂದ ಹೊರ ಬರುವುದರಲ್ಲಿ ಯಾವ ತೊಡಕೂ ಆಗಲಾರದು. ಹೀಗಾಗ ಬಾರದೆಂದು ನಮಗೆ ಎಷ್ಟೇ ಆತ್ಮೀಯರಿರಲಿ, ವಿಶ್ವಾಸಿಗರಿರಲಿ ಅವರು ಆಡಿದ್ದಕ್ಕೆಲ್ಲಾ ಸೈ ಗುಟ್ಟಿ ಹೇಳಿದ್ದಕ್ಕೆಲ್ಲಾ ತಲೆದೂಗುವ ಪ್ರವೃತ್ತಿಯಿಂದ ಮೊದಲು ಕಳಚಿ ಕೊಂಡು ನಮ್ಮ ಸ್ವಂತ ನಿರ್ಧಾರ ಬುದ್ಧಿ ಶಕ್ತಿಯನ್ನು ಬೆಳೆಸಿ ಕೊಳ್ಳುವುದು ಸೂಕ್ತ.
,
–ಇಂದಿರಾ ಪಿ. ಪುತ್ತೂರು.
ಚಿಂತನೆಗೆ ಹಚ್ಚುವ ಬರಹ…ಚೆನ್ನಾಗಿದೆ.
Good article