ಆಸಿಡಿಟಿ ಬಗ್ಗೆ ಇರಲಿ ಅರಿವು
45 ವರ್ಷದ ಗಿರಿಜಾರಿಗೆ ಈಗೀಗ ಸಮಾರಂಭಗಳ ಔತಣಗಳಿಗೆ ಹೋಗಲು ಬೇಜಾರು.ಏನು ತಿಂದರೂ ಹುಳಿತೇಗು, ಹೊಟ್ಟೆ ಉಬ್ಬರಿಸುವುದು, ತಲೆಸುತ್ತು ಬರುವುದು. ಕಾಲೇಜ್ ಸ್ಟೂಡೆಂಟ್ ರಾಹುಲ್‌ಗೂ ಆಗಾಗ ತಲೆನೋವು,ವಾಕರಿಕೆ,ಹೊಟ್ಟೆ ನೋವು.
ಈ ತರಹದ ತೊಂದರೆಗಳೊಂದಿಗೆ ವೈದ್ಯರ ಬಳಿ ಬರುವವರು ಅನೇಕ.ಇವೆಲ್ಲದಕ್ಕೂ ಮುಖ್ಯ ಕಾರಣ ಆಸಿಡಿಟಿ.ನಾವು ಸೇವಿಸಿದ ಆಹಾರವು ಅನ್ನನಾಳದ ಮೂಲಕ ಜಠರವನ್ನು ಸೇರಿದ ನಂತರ ಜೀರ್ಣರಸಗಳೊಂದಿಗೆ ಮಿಶ್ರಗೊಳ್ಳುವುದು. ಜಠರದ ಜೀರ್ಣರಸದಲ್ಲಿರುವ ಮುಖ್ಯ ಘಟಕವೇ ಹೈಡ್ರೋಕ್ಲೋರಿಕ್ ಆಸಿಡ್.ಇದು ಕೆಲವೊಂದು ಕಾರಣಗಳಿಂದಾಗಿ ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ಅನ್ನನಾಳವನ್ನು ಪ್ರವೇಶಿಸುವುದು.ಆಗ ಎದೆ ಉರಿ, ಹುಳಿ ತೇಗು, ವಾಂತಿ,ಬಿಕ್ಕಳಿಕೆ, ತಲೆಸುತ್ತುವುದು ಮೊದಲಾದ ಲಕ್ಷಣಗಳನ್ನು ಉಂಟುಮಾಡುತ್ತದೆ. ಮಾತ್ರವಲ್ಲದೆ ಶರೀರದಲ್ಲಿ ಅಮ್ಲೀಯತೆಯು ಅಧಿಕವಾದಾಗ ತಲೆನೋವು ಕೂಡ ಕಾಣಿಸಿಕೊಳ್ಳುತ್ತದೆ.
ಕಾರಣಗಳು:
- ಅತಿಯಾದ ಖಾರದ,ಮಸಾಲೆಯುಕ್ತ ಪದಾರ್ಥಗಳು,ಎಣ್ಣೆಯಲ್ಲಿ ಕರಿದಂತಹ ತಿನಿಸುಗಳು, ಬೇಳೆ, ಗಡ್ಡೆಗಳು
- ಮೈದಾಯುಕ್ತ, ಸೋಡಾ ಸೇರಿಸಿದಂತಹ ಆಹಾರ
- ವಿವಿಧ ರೀತಿಯ ಸಾಸ್‌ಗಳು, ಚಾಟ್‌ಗಳ ಅತಿಯಾದಸೇವನೆ, ಅತಿಯಾದ ಕಾಫಿ-ಸಿಗರೇಟು-ಮದ್ಯ-ತಂಬಾಕು ಸೇವನೆ
- ಕಾರ್ಬೊನೇಟೆಡ್ ಪಾನೀಯಗಳು
- ಅನಿಯಮಿತ ಆಹಾರ ಸೇವನೆ
ನಿದ್ರಾಹೀನತೆ, ಮಾನಸಿಕ ಒತ್ತಡ
ಅನುಸರಿಸಬೇಕಾದಂತಹ ಕ್ರಮಗಳು:
ಸಾಮಾನ್ಯವಾಗಿ ಆಹಾರವು ಜೀರ್ಣವಾಗಲು 3 ಗಂಟೆ ಅಗತ್ಯ.ಹಾಗಾಗಿ 3ಗಂಟೆಗೊಮ್ಮೆ ಲಘುಆಹಾರ( ಜ್ಯೂಸ್,ಹಣ್ಣುಗಳು,ಒಣ ಹಣ್ಣುಗಳು) ಸೇವಿಸಬೇಕು. ಅಂದರೆ ಹೆಚ್ಚು ಹೊತ್ತು ಜಠರವನ್ನುಖಾಲಿ ಬಿಡಬಾರದು.
ಉಪಯುಕ್ತ ತರಕಾರಿಗಳು:ಬೀನ್ಸ್,ವಿವಿಧ ರೀತಿಯ ಸೊಪ್ಪುಗಳು(ಹರಿವೆ,ಪಾಲಕ್,ಮೆಂತೆ, ಬಸಳೆ,ನುಗ್ಗೆ ಸೊಪ್ಪು), ಸೋರೆಕಾಯಿ, ಕುಂಬಳ ಕಾಯಿ, ಸೌತೆಕಾಯಿ, ಹೀರೆಕಾಯಿ, ಪಡುವಲಕಾಯಿ,ಕ್ಯಾರೆಟ್
ಉಪಯುಕ್ತ ಹಣ್ಣುಗಳು: ಕಲ್ಲಂಗಡಿ, ಸೇಬು, ಚಿಕ್ಕು, ಬಾಳೆ ಹಣ್ಣು
ಪಾನೀಯಗಳು: ಎಳನೀರು, ಸಿಹಿ ಮಜ್ಜಿಗೆ, ತಂಪಾದ ಹಾಲು, ಜ್ಯೂಸ್‌ಗಳು-ಪುದೀನ, ಶುಂಠಿ,ಕುಂಬಳಕಾಯಿ ರಸ, ಮುಳ್ಳುಸೌತೆ ರಸ, ಕ್ಯಾರೆಟ್
ಕಡಿಮೆ ಕೊಬ್ಬು ಹೊಂದಿರುವಂತಹ ಮಾಂಸ-ಕೋಳಿ, ಮೀನು, ಮೊಟ್ಟೆಯ ಬಿಳಿ ಭಾಗ ಉಪಯೋಗಿಸಬಹುದು
ಇದರೊಂದಿಗೆ ಮಾನಸಿಕ ಆರೋಗ್ಯವನ್ನು ಯೋಗ, ಧ್ಯಾನ, ಧನಾತ್ಮಕ ವಿಚಾರಗಳ ಮೂಲಕ ವೃದ್ಧಿಸಬೇಕು.ಹಾಗೆಯೇ ಸಣ್ಣ ಪುಟ್ಟ ವ್ಯಾಯಾಮಗಳನ್ನೂ ಮಾಡಬೇಕು.
ಅಪಥ್ಯಗಳು:- ದ್ರಾಕ್ಷಿ,ಅನಾನಸು,ಟೊಮ್ಯಾಟೊ,ಕಿತ್ತಳೆ, ಚಾಕಲೇಟ್,ಬೆಳ್ಳುಳ್ಳಿ,ನೀರುಳ್ಳಿ, ಅತಿಯಾದ ಕೊಬ್ಬು ಹೊಂದಿರುವ ಮಾಂಸ ಹಾಗೂ ಆಹಾರಗಳು,ಚ್ಯೂಯಿಂಗ್ ಗಮ್ ಸೇವನೆ.
ಆಸಿಡಿಟಿ ಎಂಬುದು ಸಾಮಾನ್ಯ ಆರೋಗ್ಯ ಸಮಸ್ಯೆಯಾದರೂ ನಿರ್ಲಕ್ಷಿಸಿದರೆ ಕೆಲವೊಂದು ಗಂಭೀರ ಸ್ವರೂಪಗಳನ್ನು ಪಡೆದುಕೊಳ್ಳಬಹುದು. ಆದುದರಿಂದ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆಯನ್ನು ಪಡೆಯಬೇಕು.ಆದರೆ ಎಲ್ಲದಕ್ಕಿಂತಲೂ ಮೊದಲು ಈ ಸಮಸ್ಯೆಯು ಬಾರದಂತೆ ಆರೋಗ್ಯಕರ ಜೀವನ ಶೈಲಿಯನ್ನು ನಮ್ಮದಾಗಿಸಿಕೊಳ್ಳೋಣ.
-ಡಾ.ಹರ್ಷಿತಾ ಎಂ.ಎಸ್, ಉಡುಪಿ
ಮಾಹಿತಿಪೂರ್ಣ ಲೇಖನ, ಉತ್ತಮ ನಿರೂಪಣೆ.
Thank you
Thank you