ಪುಸ್ತಕಗಳೆಂಬ ಅರಿವಿನ ಬೆಳಕಿಂಡಿ

Share Button

ಎಪ್ರಿಲ್ 23 ರಂದು ವಿಶ್ವ ಪುಸ್ತಕ ದಿನಾಚರಣೆಯಾಗಿತ್ತು. ಪುಸ್ತಕಗಳು, ಲೇಖಕರು, ಎಲ್ಲಕ್ಕಿಂತ ಮಿಗಿಲಾಗಿ ಪುಸ್ತಕದ ಓದನ್ನು ಸಂಭ್ರಮಿಸುವುದೇ ಇದರ ಉದ್ದೇಶವಾಗಿತ್ತು. ಪುಸ್ತಕಗಳೆಂದರೆ ನಮ್ಮ ಅರಿವಿನ ಬೆಳಕಿಂಡಿ. ಓದು, ಓದಿನಿಂದ ಸಿಗುವ ಜ್ಞಾನ, ವಿಸ್ತಾರವಾಗುವ ಮನಸು.. ಹೀಗೆ ಪುಸ್ತಕಗಳೆಂದರೆ ನಮ್ಮ ಸ್ನೇಹಿತರೇ ಸರಿ. ಸೀರಿಯಸ್ ರೀಡಿಂಗ್, ಲೈಟ್ ರೀಡಿಂಗ್, ರಜಾ ಕಾಲದ ಟೈಂ ಪಾಸ್ ರೀಡಿಂಗ್ ಹೀಗೆ ಇದರಲ್ಲಿ ಹಲವು ವಿಧ. ಎಳೆಯ ಮಕ್ಕಳಿಗೆ ನರ್ಸರಿ ಹಂತದಲ್ಲಿಯೇ ಓದಿನ ಪ್ರೀತಿ ಬೆಳೆಸಲು ಕೊಡುವ ಹರಿಯದ, ಬಣ್ಣ ಬಣ್ಣದ ಪುಸಕಗಳಿಂದ ಹಿಡಿದು ಐ ಎ ಎಸ್ ,ಕೆ ಎ ಎಸ್ ಎಂದೆಲ್ಲ ದಪ್ಪ ದಪ್ಪ ಪುಸಕಗಳನ್ನು ಓದುವವರೆಗೆ ಅದೊಂದು ವಿಸ್ಮಯ ಪ್ರಪಂಚ.ಇಂತಹ ಓದುವ ಹವ್ಯಾಸ ಎಳವೆಯಲ್ಲಿಯೇ ರೂಢಿಗತಗೊಳ್ಳಬೆಕಾದುದು ಅವಶ್ಯ.

ನಮ್ಮ ಜೀವನದಲ್ಲಿ ಅಕ್ಷರಗಳು ಹಾಸು ಹೊಕ್ಕಾಗಿರುವುದೊಂದು ಬೆರಗು. ಕೃತಿಯೊಂದರ ಮುನ್ನುಡಿ, ಲೋಗೋದಿಂದ ಹಿಡಿದು ಪುಸ್ತಕದ ಬ್ಲರ್ಬ್ ವರೆಗೆ, ಮಾತಿನ, ಅಕ್ಷರದ ಗಾರುಡಿ. ಎಲ್ಲಾ ದೇಶ ಕಾಲಗಳಲ್ಲಿಯೂ ಹೆಚ್ಚು ಕಡಿಮೆ ಸಾಹಿತ್ಯ ಸೃಷ್ಟಿ, ಪ್ರಕಾರಗಳು ಒಂದು ‘ಪ್ಯಾಟರ್ನ್’ ನಂತೆ ಇರುವುದು ವಿಶೇಷ. ಹಾಗೆ ನೋಡಿದರೆ ಜೋಗುಳ, ಸೋಬಾನೆಗಳಿಂದ ಹಿಡಿದು ವೇದ, ಮಂತ್ರಗಳು, ಜನಪದ ಹಾಡುಗಳು ಹೀಗೆ ಎಲ್ಲವೂ ಸಾಹಿತ್ಯ ಪ್ರಕಾರಗಳೇ. ದೋಣಿ ನಡೆಸುವವರ ಪದ್ಯ, ನೇಜಿ ನೆಡುವವರ ಪದ್ಯ, ಸುಗ್ಗಿಯ ಹಾಡುಗಳು, ಮದುವೆಯ ಹಾಡುಗಳು, ಚರಮ ಗೀತೆಗಳು.. ಹೀಗೆ ಸಾಹಿತ್ಯ ಹುಟ್ಟಿನಿಂದ ಹಿಡಿದು ಸಾವಿನ ವರೆಗೆ ಜಗತ್ತಿನ ಎಲ್ಲಾ ದೇಶಗಳಲ್ಲಿ ಪ್ರಚಲಿತವಾಗಿದೆ ಎಂದರೆ ಆಶ್ಚರ್ಯವಾಗುತ್ತದೆ.

ನಮ್ಮ ಮಕ್ಕಳಿಗೆ ಜಗತ್ತಿನ ಶ್ರೇಷ್ಠ ಸಾಹಿತ್ಯ ಪರಿಚಯಿಸಲು ರಜಾ ಕಾಲವೇ ಸಕಾಲ. ಸಾಹಿತ್ಯದ ಓದು ಇಲ್ಲವಾದಲ್ಲಿ ಶಬ್ದಗಳ ಬಳಕೆ, ಧ್ವನಿ ಭಾರ, ಹೀಗೆ ಭಾಷೆಯ ಚೈತನ್ಯ ಅವರಿಗೆ ಅರಿವಾಗುವುದಾದರೂ ಹೇಗೆ? ಉದಾಹರಣೆಗೆ ‘ಮ್ಯಾಕರೋನಿ ಪದ್ಯ’ (ಎರಡು ಮೂರು ಭಾಷೆಗಳನ್ನು ಮಿಕ್ಸ್ ಮಾಡಿ ಬರೆದ ಪದ್ಯ)

ನಾವು ಪುಟ್ಟ ಮಕ್ಕಳಿದ್ದಾಗ ನಮ್ಮ ಪೈಮರಿ ಶಾಲೆಯ ಟೀಚರ್ ‘ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು’ ಎನ್ನುವ ಪದ್ಯವನ್ನು ರಾಗವಾಗಿ ಹಾಡಿಸುತ್ತಿದ್ದರು. ಹಾಗೆಯೇ ದಿನಕ್ಕೊಂದು ಕತೆ, ಮಗ್ಗಿ ಪುಸ್ತಕ ಹೀಗೆಲ್ಲ. ಅಕ್ಷರಗಳ ಅದ್ಭುತ ಪ್ರಪಂಚ ಬಾಲಮಿತ್ರ, ಚಂದಮಾಮ, ಪುಟಾಣಿ ಹೀಗೆ ಅನೇಕ ಪುಸ್ತಕಗಳಲ್ಲಿ ತೆರೆದುಕೊಳ್ಳುತ್ತಿದ್ದವು. ಆ ನಂತರ ನಾವು ಓದುತ್ತಿದ್ದುದು ಭಜನೆ ಪುಸ್ತಕ, ದೇಶಭಕ್ತರ ಕತೆಗಳು ಇಲ್ಲವೇ ಚಿತ್ರಗೀತೆಗಳ ಪುಸ್ತಕ. ವಿದ್ಯುತ್ ಕೂಡ ಇಲ್ಲದ ಅಂದಿನ ಕುಗ್ರಾಮಗಳಲ್ಲಿ ಇಂತಹ ಪುಸ್ತಕಗಳೇ ( ಪತ್ರಿಕೆ, ರೇಡಿಯೋ ಹೊರತು ಪಡಿಸಿದರೆ) ಜನರ ಜ್ಞಾನ ದಾಹ ಹಿಂಗಿಸುವ ಓದುಗಳಾಗಿದ್ದವು. ರಾಮಾಯಣ , ಮಹಾಭಾರತ ಎಂದೆಲ್ಲ ಅಜ್ಜಿಯ ಹತಿರವೋ ಪುಸ್ತಕಗಳಲ್ಲೋ ತಿಳಿದ ನಾವು ಸ್ಕೂಲು ಕಾಲೆಜುಗಳ ಲೈಬ್ರರಿಗಳಲ್ಲಿ ಸಾಮಾಜಿಕ ಕತೆಗಳು, ಕಾದಂಬರಿಗಳು ಹೀಗೆ ಓದಿಕೊಳ್ಳುತಿದ್ದೆವು. (ಕಾದಂಬರಿಗಳನ್ನು ಓದಿದರೆ ಹಾಳಾಗುತ್ತಾರೆಂದು ಮಕ್ಕಳಿಗೆ ನಿರ್ಬಂಧಿಸಲಾಗುತ್ತಿತ್ತು). ಕತೆಯೊಂದು, ಕಾದಂಬರಿಯೊಂದು, ಹಾಡೊಂದು ಹೀಗೆ ನಮ್ಮ ಭಾವ ಲಹರಿಗಳನ್ನು ಮೀಟುತ್ತ, ಸ್ಮೃತಿಯ ಕೋಶಗಳ ಭಾಗವೇ ಆಗಿ ಪರಿಣಮಿಸುತ್ತಿದ್ದುದು ಒಂದು ಅಚ್ಚರಿ.

ಈಗಿನ ಮಾಡರ್ನ್ ಯುಗದಲ್ಲೂ ಓದಿಗೆ ಕುಂದೇನಿಲ್ಲ. ಪುಸ್ತಕ ಓದುವವರಿಲ್ಲ ಎಂದು ಹೇಳುತ್ತಿರುವಂತೆಯೇ ‘ಅಕ್ಷರ’ ಎನ್ನುವುದು ಡಿಜಿಟಲ್ ರೂಪದಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ. ಸ್ಲೇಟ್ ನಲ್ಲಿ ಮೊದಲ ಬಾರಿಗೆ ‘ಅ’ ಎಂದೋ ‘ಎ” ಎಂದೋ ಮೊದಲ ಅಕ್ಷರ ಬರೆದಾಗಿನ ಪುಳಕವನ್ನೇ ನಮ್ಮ ಕಂಪ್ಯೂಟರ್ ಕೂಡ ಸ್ಫುರಿಸುತ್ತಿರುವುದು ವಿಶೇಷ. ಓದುವ ಭಾಷೆ ಆಂಗ್ಲ ಭಾಷೆಯಲ್ಲಿರಬಹುದು, ಕಂಪ್ಯೂಟರ್ ನಲ್ಲಿರಬಹುದು, ಆದರೆ ‘ಓದುವ’ ಖುಶಿಯನ್ನು ಅನುಭವಿಸುವ ಮಕ್ಕಳು ಈಗಲೂ ಇದ್ದಾರೆ.

ಈ ನಿಟ್ಟಿನಲ್ಲಿ ಭಾರತವೊಂದು ಸಂದಿಗ್ಧಗಳ ದೇಶ. ಜಗತ್ ಪ್ರಸಿದ್ಧ ‘ಹ್ಯಾರಿ ಪಾಟರ್’ ನ ಹೆಸರೇ ಕೇಳದ ಹಳ್ಳಿ ಮಕ್ಕಳಿದ್ದಾರೆ ಎಂದರೆ ನೀವು ನಂಬಬೇಕು. (ಅವರಿಗೆ ಗೊತ್ತಿರುವ ಅನೇಕ ಕೌಶಲ್ಯಗಳು ಸಿಟಿಯ ಮಕ್ಕಳಿಗೆ ಗೊತ್ತಿಲ್ಲದಿರುವುದು ಬೇರೆ ವಿಷಯ). ಪುಸಕಗಳ ಜ್ಞಾನ ಮಾತ್ರವೇ ಶ್ರೇಷ್ಠವೇ ಎನ್ನುವುದೂ ಇಲ್ಲಿನ ವಿಚಾರ. ಹೆಚ್ಚು ಹೆಚ್ಚು ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ನಿಟ್ಟಿನಲ್ಲಿ ಒಂದಷ್ಟು ಓದುವ ಮಕ್ಕಳು ಈಗಲೂ ಇದ್ದಾರೆ. ಅವರು ಹೆಚ್ಚಾಗಿ ಎಡತಾಕುವುದು ಕಿಂಡಲ್ ನಂತಹ ಇ- ರೀಡರ್ ಗಳು, ಪ್ರೊಜೆಕ್ಟ್ ಗುಟನ್ ಬರ್ಗ್ ನಂತಹ ಫ಼್ರೀ ಇ- ಪುಸ್ತಕಗಳು. ( 56,000 ಕ್ಕೂ ಮಿಕ್ಕಿ ಜಗತ್ತಿನ ಶ್ರೇಷ್ಠ ಸಾಹಿತ್ಯ ಇದರಲ್ಲಿ ಲಭ್ಯ) , ಪುಸ್ತಕಗಳನ್ನು ರೆಕಮಂಡ್ ಮಾಡುವ ಗುಡ್ ರೀಡ್. ಕಾಮ್ ನಂತಹ ವೆಬ್ ಸೈಟ್ ಗಳು.. ಹೀಗೆ. ಡಿಜಿಟಲೀಕರಣಗೊಂಡ ಇ-ಓದಿಗೆ ಸಂಬಂಧಿಸಿ ಹೊಸದಾಗಿ ಶಬ್ದಗಳು ಉತ್ಪತ್ತಿಯಾಗಿರುವುದು ಕುತೂಹಲಕಾರಿ. ಉದಾಹರಣೆಗೆ ‘ಬುಕ್ ಟ್ಯೂಬ್;. ಬುಕ್ಸ್ಟಾಗ್ರಾಮ್.. ಹೀಗೆ. ಒಟ್ಟಿನಲ್ಲಿ ಪುಸಕಗಳು ಇರುವ ವರೆಗೆ ನಮಗೆ ಏಕಾಕಿತನವಿಲ್ಲ; ಯಾವುದೇ ರೂಪದಲ್ಲಾದರೂ ಪುಸ್ತಕಗಳು ಬಾಳಲಿ.

– ಜಯಶ್ರೀ ಬಿ. ಕದ್ರಿ

1 Response

  1. Shruthi Sharma says:

    ತುಂಬಾ ಇಷ್ಟವಾದ ಬರಹ.. 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: