ಆಚಾರ್ಯ ಪ್ರಫುಲ್ಲಚಂದ್ರ ರೇ – ವೇದಾಂತಿಯಂತಿರುವ ರಸಾಯನಶಾಸ್ತ್ರಜ್ಞ.

Share Button

ವಿಜ್ಞಾನ ಮತ್ತು ತಂತ್ರಜ್ಞಾನಗಳ ವಿಚಾರಗಳಲ್ಲಿ ಭಾರತದ ಪ್ರಾಚೀನ ವಿಜ್ಞಾನಿಗಳ ಕೊಡುಗೆ ಅಪಾರ. ಮುಖ್ಯವಾಗಿ ಆಯುರ್ವೇದ, ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರಗಳಲ್ಲಿ ನಮ್ಮ ವಿಜ್ಞಾನಿಗಳು ಅಚ್ಚಳಿಯದ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಅಲ್ಲದೇ, ಈಗಲೂ ಆಯುರ್ವೇದ ಕ್ಷೇತ್ರದಲ್ಲಿ ಭಾರತೀಯ ವೈದ್ಯಶಾಸ್ತ್ರ ನಿರಂತರವಾಗಿ ಮಾನವಕುಲಕ್ಕೆ ಸೇವೆ ನೀಡುತ್ತಲಿದೆ ಎನ್ನುವುದು ಗೊತ್ತಿರುವ ವಿಚಾರ. ಇಷ್ಟಾದರೂ, ಆಧುನಿಕ ವಿಜ್ಞಾನದಲ್ಲಿ ಭಾರತೀಯ ವಿಜ್ಞಾನಿಗಳ ‘ಹೊಸ ಪಥ-ದರ್ಶನದ ಸಂಶೋಧನೆಗಳು’ ಕಡಿಮೆಯಿರಲು ಕಾರಣವೇನಿರಬಹುದು? ನಮ್ಮ ದೇಶದ ಚರಿತ್ರೆಯನ್ನು ಗಮನಿಸಿದಾಗ ಹೊರಗಿನವರ ಆಳ್ವಿಕೆ ಮತ್ತು ಆಕ್ರಮಣಕ್ಕೆ ಒಳಗಾಗಿ ಹೀಗೆ ಆಗಿರಬಹುದೇ? ವಿಜ್ಞಾನದ ಮನಸ್ಸುಗಳು ದಬ್ಬಾಳಿಕೆಗೆ ಈಡಾಗಿರಬಹುದೇ? ಮೂಢ ನಂಬಿಕೆಗಳಿಂದ ಅಢಚಣಿಗಳು ಆಗಿರಬಹುದೇ? ಸುಮಾರು ಏಳನೇ – ಎಂಟನೇ ಶತಮಾನದಿಂದ ಹಿಡಿದು ಇಪ್ಪತ್ತನೇಯ ಶತಮಾನದ ಪ್ರಾರಂಭದವರೆಗೂ ನಮ್ಮ ‘ವಿಜ್ಞಾನಿಗಳು ಮತ್ತು ವೈಜ್ಞಾನಿಕ ಚಿಂತಕರು’ ಮರೆಯಾಗಿದ್ದರೇಕೆ? ಇಪ್ಪತ್ತನೇಯ ಶತಮಾನ ಹತ್ತಿರ ಆಗುತ್ತಿಂದತೆಯೇ ಈ ‘ಕವಚ’ದಿಂದ ಹೊರಬಂದ ಮೊದಲ ಭಾರತೀಯ ವಿಜ್ಞಾನಿಗಳಲ್ಲೊಬ್ಬರು, ಆಚಾರ್ಯ ಪ್ರಫುಲ್ಲಚಂದ್ರ ರೇ.

ಭಾರತದ ಆಧುನಿಕ ರಸಾಯನ ಶಾಸ್ತ್ರದ ಪಿತಾಮಹ ಮತ್ತು ನಮ್ಮ ದೇಶದಲ್ಲಿ ಆಯುರ್ವೇದವಲ್ಲದ ಮೊದಲ ಔಷಧೀಯ ಕಂಪೆನಿಯ ಜನಕನೆಂದು ಗುರುತಿಸಲ್ಪಡುವ ರಸಾಯನಶಾಸ್ತ್ರಜ್ಞನೆಂದರೆ ಪ್ರಫುಲ್ಲಚಂದ್ರ ರೇ.  ಹಾಗೆಂದು ಇಂಗ್ಲೆಂಡಿನ ರಾಯಲ್ ಸಂಸ್ಥೆಯೂ ರೇ ಅವರನ್ನು ಕಂಡಿದೆ. ಒಬ್ಬ ಸನ್ಯಾಸಿ ಅಥವಾ ವೇದಾಂತಿಯ ಲಕ್ಷಣಗಳನ್ನು ಹೊಂದಿದ್ದ ಪ್ರಫುಲ್ಲ ರೇ ಅವರು ಆಜನ್ಮ ಬ್ರಹ್ಮಚಾರಿಗಳು. ಸಂಸ್ಕೃತ, ಆಂಗ್ಲ, ಬಂಗ್ಲಾ, ಗ್ರೀಕ್ ಮತ್ತು ಲೇಟಿನ್ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿ, ಭಾರತೀಯ ಇತಿಹಾಸವನ್ನು ವೇದ ಕಾಲದಿಂದ ಇಪ್ಪತ್ತನೇಯ ಶತಮಾನದವರೆಗೂ ಅಧ್ಯಯನ ಮಾಡಿದವರು. ಅವರ ಇಂಗ್ಲಿಷ್ ಸಾಹಿತ್ಯ ಜ್ಞಾನ ಮತ್ತು ಆಸಕ್ತಿಯನ್ನು ಗಮನಿಸಿ, ಇಂಗ್ಲೆಂಡಿನ ವಿಜ್ಞಾನ ಚಿಂತಕ ಮತ್ತು ರಸಾಯನಶಾಸ್ತ್ರಜ್ಞ, ಪ್ರೊ. ಹೆನ್ರಿ ಇ ಆರ್ಮ್ ಸ್ಟ್ರಾಂಗ್ ಅನ್ನುತ್ತಾರೆ, “ಯಾವುದೇ ಇಂಗ್ಲಿಷ್ ಸಾಹಿತ್ಯ ವಿದ್ವಾಂಸರ ಪಾಂಡಿತ್ಯವನ್ನು ಮೀರಿಸುವ ಜ್ಞಾನವನ್ನು ಆಂಗ್ಲ ಸಾಹಿತ್ಯದಲ್ಲೇ ತೋರಲು ಪ್ರಫುಲ್ಲ ರೇ ಅವರು ಸಮರ್ಥರಿದ್ದಾರೆ”. ಸುಮಾರು 1035 ಪುಟಗಳ, ಎರಡು ಸಂಪುಟಗಳಲ್ಲಿ ಪ್ರಕಾಶಿತವಾದ, ‘ಬಂಗಾಳಿ ರಸಾಯನಶಾಸ್ತ್ರಜ್ಞನ ಜೀವನ ಮತ್ತು ಅನುಭವಗಳು’ ಎನ್ನುವ ಮಹಾನ್ ಆತ್ಮಕಥನ, ರೇ ಅವರ ಆತ್ಮ ಚರಿತ್ರೆಗಿಂತ ಹೆಚ್ಚಾಗಿ, ಬಂಗಾಳದಲ್ಲಿಯ ಆ ಕಾಲದ ಸಾಮಾಜಿಕ ಮತ್ತು ಬೌದ್ಧಿಕ ಚಳುವಳಿಗಳನ್ನು ಬಿಂಬಿಸುವ ಒಂದು ಗ್ರಂಥವೇ ಆಗಿತ್ತು. ಇದು ಹೆಚ್ಚಿನ ವಿಮರ್ಶಕರ ಅನಿಸಿಕೆಗಳು.

ಅಧ್ಯಯನವೇ ಉಸಿರು

ಇಂದಿನ ಬಾಂಗ್ಲಾದೇಶಕ್ಕೆ ಸೇರಿದ ಖುಲ್ನಾ ಎಂಬ ಜಿಲ್ಲೆಯಲ್ಲಿ ಹರಿಶ್ಚಂದ್ರ ಚೌಧುರಿ ಮತ್ತು ಭುವನ ಮೋಹನ ದೇವಿಯವರ ಪುತ್ರನಾಗಿ, ಪ್ರಫುಲ್ಲಚಂದ್ರರ ಜನನ 1861 ರ ಅಗಸ್ಟ್ 2 ರಂದು ಆಯಿತು. ಸ್ವಗ್ರಾಮದಲ್ಲೇ ಅಣ್ಣನೊಡನೆ ಶಾಲೆಗೆ ಹೋಗುತ್ತಾ ನಾಲ್ಕನೇ ತರಗತಿಯವರೆಗೆ ಓದಿದರು. ಆಗಲೇ, ಅವರ ಶಾಲಾ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ನಿಲ್ಲಿಸ ಬೇಕಾಗಿ ಬಂತು. ಒಂಬತ್ತರ ಎಳೆಯ ಹುಡುಗನಿಗೆ ಆದ ವಿಪರೀತ ಭೇದಿ ಕಾಯಿಲೆಯ ಪರಿಣಾಮವನ್ನು ಜೀವಮಾನವಿಡೀ ಅನುಭವಿಸ ಬೇಕಾಗಿ ಬಂತು. ಆದರೂ, ಅವರೆಂದೂ ಧೃತಿಗೆಡಲಿಲ್ಲ. ರೇ ಅವರು ಎರಡು ವರ್ಷಗಳ ಕಾಲ ಶಾಲೆಗೆ ಹೋಗಲಿಲ್ಲ. ಮುಂದೆ ಅವರ ಆತ್ಮಕತೆಯಲ್ಲಿ ಅವರೇ ಅನ್ನುವಂತೆ, ಇದು ಅವರಿಗೆ ‘ವರವಾದ ಶಾಪ’ವಂತೆ. ಈ ಎರಡು ವರ್ಷಗಳಲ್ಲಿ ಯಾವ ವಿದ್ಯಾಭ್ಯಾಸ ಶಾಲೆಗಳಲ್ಲಿ ದೊರಕುವುದಿಲ್ಲವೋ, ಅದನ್ನೆಲ್ಲಾ ಅವರು ಸ್ವಂತ ಓದಿನಿಂದ ಮತ್ತು ಮನೆಯವರ ಬೆಂಬಲದಿಂದ ಅಭ್ಯಾಸಿಸಿದರು. ತನ್ನ ಹತ್ತನೇ ಪ್ರಾಯದಲ್ಲಿ ಗ್ರೀಕ್ ಮತ್ತು ಲೇಟಿನ್ ಭಾಷೆ ಕೂಡಾ ಕಲಿತರು. ಒಮ್ಮೆ ಆರೋಗ್ಯದಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡ ಮೇಲೆ ಕೊಲ್ಕತ್ತೆಯ ಆಲ್ಬರ್ಟ್ ಶಾಲೆಗೆ ದಾಖಲಾದರು. ಮುಂದೆ ಎನ್ಟ್ರಾನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಈಶ್ವರ ಚಂದ್ರ ವಿದ್ಯಾಸಾಗರ ಸ್ಥಾಪಿತ ಕಾಲೇಜಿನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಗಳನ್ನು ಓದಿದರು. ತಾನು ಕಲಿಯುತ್ತಿದ್ದ ಕಾಲೇಜಿನಲ್ಲಿ ಸರಿಯಾದ ಪ್ರಯೋಗಶಾಲೆಗಳು ಇಲ್ಲವಾದುದರಿಂದ, ಪ್ರೆಸಿಡೆನ್ಸಿ ಕಾಲೇಜಿನಲ್ಲಿ ‘ಹೊರಗಿನ ವಿದ್ಯಾರ್ಥಿ’ಯಾಗಿ ಸೇರಿದರು. ಅಲ್ಲಿ ಅಲೆಗ್ಸಾಂಡರ್ ಪೆಡ್ಲರ್ ಅವರ ಉಪನ್ಯಾಸಗಳಿಂದ ಆಕರ್ಷಿತರಾಗಿ, ರಸಾಯನಶಾಸ್ತ್ರ ಅವರ ಪ್ರೀತಿಯ ವಿಷಯವಾಯಿತು. ಜೀವನಪರ್ಯಂತ ಪ್ರೊ.ಪೆಡ್ಲರ್ ಅವರಿಗೆ ರೇ ಋಣಿಯಾಗಿದ್ದರು.

ಇಂಗ್ಲೆಂಡಿಗೆ

ಕೊಲ್ಕತ್ತೆಯಲ್ಲಿ ಪದವಿ ವಿದ್ಯಾಭ್ಯಾಸ ಪೂರೈಸುವ ಮೊದಲೇ, ಪ್ರಫುಲ್ಲರು ಇಂಗ್ಲೆಂಡಿನ ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆಯ್ಕೆಯಾದರು. ಇಂಗ್ಲೆಂಡಿನಲ್ಲಿ ಇದ್ದಷ್ಟು ಕಾಲವೂ ತನ್ನ ಪೂರ್ಣ ಸಮಯವನ್ನು ಜ್ಞಾನಾಭಿವೃದ್ಧಿಗಾಗಿಯೇ ವಿನಿಯೋಗಿಸಿದವರು, ಪ್ರಫುಲ್ಲರು.  ಬಿ.ಎಸ್ಸಿ. ಮುಗಿಸಿ, ಸ್ನಾತಕೋತ್ತರ ಮತ್ತು ಡಿ.ಎಸ್ಸಿ. ಪದವಿಯನ್ನೂ ವಿಶೇಷ ಪ್ರಬಂಧಗಳಿಗಾಗಿ ಪಡೆದುಕೊಂಡರು. ಸ್ವಂತ ನೆಲೆಯಿಂದ ಇತಿಹಾಸ ಮತ್ತು ಇಂಗ್ಲಿಷ್ ಸಾಹಿತ್ಯವನ್ನೂ ಸಾಕಷ್ಟು ಅಲ್ಲಿಯೇ ಓದಿದರು. ಈ ವಿಷಯಗಳಲ್ಲಿನ ಅವರ ಆಸಕ್ತಿ ಅಲ್ಲಿಯ ಆಂಗ್ಲ ಸಾಹಿತಿಗಳಿಗೇ ಅಚ್ಚರಿ ಮೂಡಿಸುವಂತಿತ್ತು. ಸಂಸ್ಕೃತ, ಆಂಗ್ಲ, ಗ್ರೀಕ್ ಮತ್ತು ಲೇಟಿನ್ ಸಾಹಿತ್ಯದ ಮೇಲೆ ಅವರಿಗಿದ್ದ ಪ್ರೌಢಿಮೆ ಮುಂದೆ ಗ್ರಂಥಗಳನ್ನು ರಚಿಸಲು ಅವರಿಗೆ ಪ್ರೇರಣೆ ಆಯಿತೆನ್ನುವುದರಲ್ಲಿ ಸಂದೇಹವಿಲ್ಲ.

ಸ್ವದೇಶಕ್ಕೆ

1888 ರಲ್ಲಿ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಸ್ವದೇಶಕ್ಕೆ ಮರಳಿದರು. ಇಂಗ್ಲೆಂಡಿನಲ್ಲಿ ತನಗೆ ದೊರಕಿದ ಮೆಚ್ಚುಗೆಯ ಪತ್ರಗಳು, ಬಹುಮಾನಗಳು, ಶಿಫಾರಸ್ಸುಗಳು ಭಾರತದಲ್ಲಿ ಉಪಯೋಗವಾಗಬಹುದೆಂದು ರೇ ಅವರು ಅಂದುಕೊಂಡಿದ್ದರು. ಆದರೆ, ಅದು ಹುಸಿಯಾಯಿತು. ಕೊಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಎಷ್ಟೇ ಅರ್ಹತೆಯಿದ್ದರೂ, ಬ್ರಿಟಿಷರ ಕಾಲದಲ್ಲಿ ಇವೆಲ್ಲಾ ಏನೂ ನಡೆಯಲಿಲ್ಲ. ದೊಡ್ಡ ಹುದ್ದೆಗಳೆಲ್ಲಾ ಆಂಗ್ಲ ಪ್ರಾಧ್ಯಾಪಕರುಗಳ ಕೈವಶವಿತ್ತು. ರೇ ಅವರು ಸಾಕಷ್ಟು ವಿರೋಧವನ್ನು ಮೌಕಿಕವಾಗಿಯೂ ಮತ್ತು ಲಿಖಿತವಾಗಿಯೂ ವ್ಯಕ್ತಪಡಿಸಿದ್ದರು. ಆದರೆ, ಉನ್ನತ ಅಧಿಕಾರಿಗಳ ಕಿವಿ ಕಿವುಡೇ ಇತ್ತು. ಆದರೇನಂತೆ, ಕಾಲೇಜಿನಲ್ಲಿ ರೇ ಅವರ ಉಪನ್ಯಾಸಗಳನ್ನು ಕೇಳಲು ಎಲ್ಲೆಡೆ ಉತ್ಸಾಹ ಮತ್ತು ಆಸಕ್ತಿ ಹರಡಿತ್ತು. ರಸಾಯನಶಾಸ್ತ್ರದ ಪ್ರವಚನಗಳೆಲ್ಲಾ ರಸಭರಿತವಾಗಿರುತ್ತಿತ್ತು. ಹಾಸ್ಯದ ಲೇಪವಿರುವ ಮೇಧಾವೀ ಉಪನ್ಯಾಸಗಳು! ಕವಿ ರವೀಂದ್ರರ ಕವನಗಳು, ಪ್ರಾಚೀನ ರಸಾಯನಶಾಸ್ತ್ರಜ್ಞ ನಾಗಾರ್ಜುನರು ಬರೆದ ‘ರಸ ರತ್ನಾಕರ’ ಗ್ರಂಥದ ಶ್ಲೋಕಗಳು ಮಾತಿನುದ್ದಕ್ಕೂ ಕೇಳುಗರನ್ನು ಮಂತ್ರ ಮುಗ್ದರನ್ನಾಗಿಸುತ್ತಿತ್ತು.

ಚಿತ್ರ : “ಹಿಂದೂ ರಸಾಯನಶಾಸ್ತ್ರದ ಚರಿತ್ರೆ: ಪ್ರಾಚೀನ ಕಾಲದಿಂದ 16 ನೇ ಶತಮಾನದ ಮಧ್ಯ ಭಾಗದವರೆಗೆ”, 1907 ರಲ್ಲಿ ಲಂಡನಿನಲ್ಲಿ ಪುನರ್ಮುದ್ರಿತ

ರಸಾಯನಶಾಸ್ತ್ರಜ್ಞ ಆದುದು ಆಕಸ್ಮಿಕವೇ

ಪ್ರಫುಲ್ಲಚಂದ್ರ ರೇ ಭಾರತದಲ್ಲಿ ರಸಾಯನಶಾಸ್ತ್ರದ ಕ್ರಮಬದ್ಧ ಅಧ್ಯಯನ ಮತ್ತು ಭಾರತದಲ್ಲಿ ರಾಸಾಯನಿಕ ಕೈಗಾರಿಕೆಗಳ ಸ್ಥಾಪಕರು. ಆದರೆ, ಆಂತರಿಕವಾಗಿ ಸಾಹಿತಿಗಳಾಗಿಯೇ ಇದ್ದವರು. ಅವರೇ ಒಪ್ಪಿಕೊಳ್ಳುವಂತೆ, “ನಾನು ರಸಾಯನಶಾಸ್ತ್ರಜ್ಞ ಆದುದು ಒಂದು ಆಕಸ್ಮಿಕವಷ್ಟೇ”. ಈ ವಿಚಾರ ಅವರ ಆತ್ಮಕಥನದಲ್ಲಿ ಬರುತ್ತದೆ. ಭಾರತದ ಏಳಿಗೆ ವೈಜ್ಞಾನಿಕ ಮನೋಧರ್ಮದಿಂದಲೇ ಆಗಬೇಕಷ್ಟೇ ಎಂಬುದನ್ನು ಇಂದಿಗೆ ನೂರು ವರ್ಷಗಳ ಮೊದಲೇ ಪ್ರತಿಪಾಸಿದರು. ಹೀಗೆ ಚಿಂತನೆ ಮಾಡುತ್ತಿದ್ದ ಪ್ರಫುಲ್ಲ ಚಂದ್ರರು ವಿಜ್ಞಾನವನ್ನು ಬಿಡದೆ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಲಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡವರು.

ಪ್ರಫುಲ್ಲಚಂದ್ರ ರೇ ಅವರ ಸಾಧನೆಗಳಿಗೆ ಪ್ರತೀಕವಾದ ಇನ್ನೊಂದು ಪಾಂಡಿತ್ಯಪೂರ್ಣ ಗ್ರಂಥ, 1902 ರಲ್ಲಿ ಪ್ರಕಟಿತ, “ಹಿಂದೂ ರಸಾಯನಶಾಸ್ತ್ರದ ಚರಿತ್ರೆ: ಪ್ರಾಚೀನ ಕಾಲದಿಂದ 16 ನೇ ಶತಮಾನದ ಮಧ್ಯ ಭಾಗದವರೆಗೆ”. ಈ ಗ್ರಂಥದ ಮುಂದುವರಿದ ಎರಡನೇ ಸಂಪುಟ 1909 ಪ್ರಕಾಶಿತವಾಯಿತು. ಈ ಗ್ರಂಥಗಳಲ್ಲಿ ಭಾರತೀಯ ರಸಾಯನಶಾಸ್ತ್ರದ ಸಮಗ್ರ ಅಧ್ಯಯನಗಳನ್ನು ಮಾಡಲಾಗಿವೆ. ಪ್ರಾಚೀನ ಮೂಲವಾದ ಸಂಸ್ಕೃತದಲ್ಲಿಯ ಬರಹಗಳನ್ನು ಇಂಗ್ಲಿಷ್ ಭಾಷೆಗೆ ರೂಪಾಂತರಿಸಲಾಗಿದ್ದು, ಅಧ್ಯಯನಶೀಲರಿಗೆ ರಸಾಯನಶಾಸ್ತ್ರದ ಪರಿಚಯವಾಗುತ್ತದೆ. ಗ್ರಂಥಕಾರರು ಪ್ರಾಚೀನ ಕಾಲದ ಗ್ರೀಕ್ ದೇಶದ ಜ್ಞಾನವು ಭಾರತೀಯ ಗ್ರಂಥಗಳಿಂದಲೂ ಹೇಗೆ ಪ್ರಭಾವಿತವಾಗಿದೆ ಎಂಬಲ್ಲಿಂದ ಪ್ರಾರಂಭಿಸಿ, ಅಥರ್ವವೇದದ ಕೆಲವು ಯಂತ್ರ-ತಂತ್ರಗಳ ಉಲ್ಲೇಖವನ್ನೂ ಮಾಡಿರುತ್ತಾರೆ. ಎಂಟನೇ ಶತಮಾನದ ವಾಗ್ಬಟ ಅವರ ರಸಶಾಸ್ತ್ರ ಅಧ್ಯಯನ, ಅನಂತರ ಸುಶ್ರುತ ಮತ್ತು ಚರಕರ ವೈದ್ಯರಸಾಯನ ಶಾಸ್ತ್ರದ ಜ್ಞಾನ, ಪ್ರಾಚೀನ ಕಾಲದ ಭಾರತೀಯ ಲೋಹಶಾಸ್ತ್ರಗಳು, ಅದಿರಿನಿಂದ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ ಇತ್ಯಾದಿ ಲೋಹಗಳ ಪ್ರತ್ಯೇಕಿಸುವಿಕೆ, ಈ ಲೋಹಗಳ ಸಂಯುಕ್ತಗಳ ತಯಾರಿ, ಅವುಗಳ ಉಪಯೋಗ, ಸುಡುಮದ್ದುಗಳು, ಆಮ್ಲಗಳು, ವಿಷಕಾರಿ ರಾಸಾಯನಿಕಗಳು ಅಲ್ಲದೇ ಇನ್ನೂ ಹತ್ತು ಹಲವು ರಸಾಯನಶಾಸ್ತ್ರ ಸಂಬಂಧಪಟ್ಟ ವಿಚಾರಗಳನ್ನು ಈ ಗ್ರಂಥದಲ್ಲಿ ದಾಖಲಿಸಿದ್ದಾರೆ. ಲೋಹ-ಅಲೋಹಗಳನ್ನು ಮತ್ತು ಔಷಧಗಳನ್ನು ತಯಾರು ಮಾಡಲು ಬೇಕಾಗುವ ಉಪಕರಣಗಳ ಪರಿಚಯವೂ ಈ ಗ್ರಂಥದಲ್ಲಿ ಉಲ್ಲೇಖವಾಗಿದೆ. ಒಟ್ಟಿನಲ್ಲಿ, ಪ್ರಾಚೀನ ಭಾರತೀಯ ರಸಾಯನಶಾಸ್ತ್ರ ಎಷ್ಟು ಕ್ರಮಬದ್ಧ ಮತ್ತು ಸಮಗ್ರವಾಗಿತ್ತು ಎನ್ನುವುದಕ್ಕೆ ಪ್ರಫುಲ್ಲಚಂದ್ರ ರೇ ಅವರ ಈ ಗ್ರಂಥಗಳು ನೇರ ಸಾಕ್ಷಿಯಾಗಿದೆ. ರೇ ಅವರು ರಸಾಯನಶಾಸ್ತ್ರಜ್ಞ ಆದುದು ಆಕಸ್ಮಿಕವಲ್ಲ ಅನಿಸುತ್ತದೆ.


ಚಿತ್ರ :
 ಭಾರತೀಯ ಅಂಚೆ ಇಲಾಖೆಯವರು 1961 ರಂದು ಆಚಾರ್ಯರ ಜನ್ಮ ಶತಮಾನೋತ್ಸವದಂದು ಬಿಡುಗಡೆ ಮಾಡಿದ ಸ್ಟಾಂಪ್ & ಕವರ್

ಸ್ವದೇಶೀ ತತ್ವ

ಬ್ರಿಟಿಷರ ದಬ್ಬಾಳಿಕೆಗೆ ಒಳಗಾದ ಭಾರತದ ಜನರಿಗೆ ಪ್ರಫುಲ್ಲಚಂದ್ರ ರೇ ಹೇಳುತ್ತಿದ್ದುದು ಇಷ್ಟೇ : ಎರಡು ಸೂತ್ರಗಳು. ಒಂದು ಭಾರತದ ಸ್ವಾತಂತ್ರ್ಯ. ಇನ್ನೊಂದು, ಕೈಗಾರಿಕಾ ಯೋಜನೆಗಳಿಂದ ಭಾರತದ ಅಭಿವೃದ್ಧಿ. ‘ಸ್ವದೇಶೀ ಕಂಪನಿಗಳನ್ನು ಸ್ಥಾಪಿಸಿ, ಇಂಗ್ಲೆಂಡಿನಿಂದ ಬರುವ ಬ್ರಿಟಿಷರ ಉತ್ಪನ್ನಗಳ ಉಪಯೋಗವನ್ನು ನಿಲ್ಲಿಸಿ, ಔಷಧ ಮತ್ತು ರಾಸಾಯನಿಕಗಳನ್ನು ನಮ್ಮ ದೇಶದಲ್ಲೇ ತಯಾರಿಸೋಣ. ಇದುವೇ ನಮ್ಮ ದೇಶದ ಉನ್ನತಿಗೆ ಹಾದಿ’ ಎಂದು ಹೇಳುವುದರಲ್ಲಿ ರೇ ಅವರಿಗೆ ಆಯಾಸವೇ ಆಗುತ್ತಿರಲಿಲ್ಲ. ಬರಿಯ ಮಾತು ಮಾತ್ರವಲ್ಲ. ಮುಂದೆ, 1901 ರಲ್ಲಿ  “ಬೆಂಗಾಲ್ ಕೆಮಿಕಲ್ಸ್ ಮತ್ತು ಫಾರ್ಮಸ್ಯುಟಿಕಲ್ಸ್” ಎನ್ನುವ ಒಂದು ಕಂಪನಿಯನ್ನು ತನ್ನಲ್ಲಿದ್ದ ಬಂಡವಾಳ ಮತ್ತು ಇತರ ಸಮಾನ ಚಿಂತಕರ ಷೇರು ಸಹಾಯದಿಂದ ಪ್ರಾರಂಭಿಸಿಯೇ ಬಿಟ್ಟರು. ಇದು ಭಾರತದ ಮೊದಲ ರಾಸಾಯನಿಕ ಮತ್ತು ಔಷಧೀಯ ಕಂಪನಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ದಿನಬಳಕೆಯ ವಸ್ತುಗಳಾದ ಸಾಬೂನುಗಳು, ಪ್ರಸಾದನಗಳು, ನಾಫ್ಥಲೀನಂತಹ ರಾಸಾಯನಿಕಗಳು ಅಲ್ಲದೇ ಔಷಧಗಳೂ ಕಂಪನಿಯಲ್ಲಿ ಉತ್ಪಾದನೆ ಆಗುತ್ತಿತ್ತು.

1888 ರಿಂದ 1916 ರ ವರೆಗೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ಪ್ರಫುಲ್ಲಚಂದ್ರ ರೇ ಅಲ್ಲಿಂದ ಹೊರಬಂದರು. ಈ ಮಧ್ಯೆ ಪ್ರಸಿದ್ಧ ವಿಜ್ಞಾನಿ ಸರ್ ಜೆ.ಸಿ.ಬೋಸ್ ಅವರೊಡನೆಯೂ ಒಂದು ವರ್ಷಕಾಲ ಕಾರ್ಯನಿರತರಿದ್ದರು. 1924 ರಲ್ಲಿ “ಇಂಡಿಯನ್ ಸ್ಕೂಲ್ ಆಫ್ ಕೆಮಿಸ್ಟ್ರಿ” ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿದರು. 1921 ರಲ್ಲಿ, ಅಂದರೆ ಅರುವತ್ತರ ಪ್ರಾಯದಲ್ಲಿ ತನ್ನ ಸಂಬಳವನ್ನೆಲ್ಲಾ ಕಲ್ಕತ್ತಾ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ಪ್ರಯುಕ್ತ ಉಪಯೋಗಕ್ಕೆಂದು ನೀಡಿದರು. ವಿಜ್ಞಾನವನ್ನು ನಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡಬೇಕೆನ್ನುವವರಲ್ಲಿ ರೇ ಒಬ್ಬರು. ಅಂತೆಯೇ, ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ಪುಸ್ತಕಗಳನ್ನು ಬಾಂಗ್ಲಾ ಭಾಷೆಯಲ್ಲಿ ಬರೆದಿರುತ್ತಾರೆ.

1917 ರಲ್ಲಿ ಬ್ರಿಟಿಷ್ ಸರಕಾರ ಪ್ರಫುಲ್ಲಚಂದ್ರರಿಗೆ ನೈಟ್ ಹುಡ್ ಪ್ರಶಸ್ತಿ ನೀಡಿ, ‘ಸರ್’ ಉಪಾದಿಯಿಂದ ಸನ್ಮಾನಿಸಿದರೂ, ಅವರು ತಮ್ಮ ಹೆಸರಿನ ಹಿಂದೆ ‘ಸರ್ ಪ್ರಫುಲ್ಲಚಂದ್ರ ರೇ’ ಅನ್ನುವ ಬದಲು, ‘ಆಚಾರ್ಯ ಪ್ರಫುಲ್ಲಚಂದ್ರ ರೇ’ ಎಂದು ಕರೆಯಿಸಿಕೊಳ್ಳುವುದರಲ್ಲಿ ಕೃತಾರ್ಥತೆಯನ್ನು ಕಂಡವರು. ಆಚಾರ್ಯಯರ ಪಿತ ಹರಿಶ್ಚಂದ್ರ ಚೌಧುರಿಯವರು ‘ಬ್ರಹ್ಮ ಸಮಾಜದಲ್ಲಿ’ ತಮ್ಮನ್ನು ತೊಡಗಿಸಿಕೊಂಡವರು. ಆಚಾರ್ಯರೂ ಅಷ್ಟೇ, ಬ್ರಹ್ಮ ಸಮಾಜಕ್ಕೆ ತಮ್ಮ ಕೊಡುಗೆಗಳನ್ನು ನೀಡುತ್ತಾ ಬಂದವರು. ಪ್ರತಿ ಭಾನುವಾರ ಸಮಾಜದ ಕೇಶಬ್ ಚಂದ್ರ ಸೇನ್ ಅವರ ಪ್ರವಚನಗಳನ್ನು ತಪ್ಪಿಸುತ್ತಿರಲಿಲ್ಲ.

1923 ರಲ್ಲಿ ಬಂಗಾಳದಲ್ಲಿ ವಿನಾಶಕಾರಿ ಪ್ರವಾಹ ಬಂದಿತ್ತು. ಆಚಾರ್ಯರು ತಮ್ಮ ವಿದ್ಯಾಲಯದಿಂದ ಹೊರಬಂದು, ಬ್ರಹ್ಮಸಮಾಜವರ ಒಡಗೂಡಿ ಪ್ರವಾಹಪೀಡಿತ ಜನರಿಗೆ ಮನಸಾ ಸೇವೆಸಲ್ಲಿಸಿದರು. ಮಾತ್ರವಲ್ಲದೆ, ಬಂಗಾಳಾದ್ಯಂತ ಸಂಚರಿಸಿ, ಸುಮಾರು ಎರಡುವರೆ ಮಿಲಿಯ ರೂಪಾಯಿಗಳ(ಆಗಿನ ಕಾಲದ) ಧನ ಸಂಗ್ರಹಣೆ ಮಾಡಿ, ಜನರ ಪುನರ್ವಸತಿಗೆ ವಿನಿಯೋಗಿಸಿದರು.

ಇಂಗ್ಲೆಂಡಿನಿಂದ ಹಿಂದುರಿಗಿದ ಮೇಲೆ, ಆಚಾರ್ಯರ ವೇಷ ಭೂಷಣಗಳಲ್ಲೂ ಬದಲಾವಣೆಯಾಯಿತು. ಖಾದಿ ಮಾತ್ರ ಈಗ ಅವರ ಉಡುಪು. ತನ್ನ ಎಲ್ಲಾ ಕೆಲಸಗಳನ್ನು ಎಂದೂ ಅವರು ಇತರರಿಗೆ ಮಾಡಲು ಬಿಡುತ್ತಿರಲಿಲ್ಲ. ಕಲ್ಕತ್ತೆಯ ಅವರ ಕೋಣೆಯ ನೆಲದಿಂದ ಹಿಡಿದು, ಅವರ ಬಟ್ಟೆ ಬರೆ ಮತ್ತು ಪಾದರಕ್ಷೆಗಳನ್ನು ಅವರೇ ಸ್ವಚ್ಚಗೊಳಿಸುತ್ತಿದ್ದರು. 1901 ರಲ್ಲಿ ಗೋಪಾಲಕೃಷ್ಣ ಗೋಖಲೆಯವರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಗೋಖಲೆಯವರ ಮನೆಯಲ್ಲಿಯೇ ಆಚಾರ್ಯರು, ಮೊದಲಬಾರಿಗೆ ಗಾಂಧೀಜಿಯವರನ್ನು ದಕ್ಷಿಣ ಆಫ್ರೀಕಾದಿಂದ ಬಂದ ಹೊಸದರಲ್ಲಿ ಭೇಟಿ ಆಗಿದ್ದರು. ಆಚಾರ್ಯರಿಂದ ಪ್ರಭಾವಿತರಾಗಿ ವಿಜ್ಞಾನದಲ್ಲಿ ಹೆಸರು ಮಾಡಿದವರಲ್ಲಿ ಮೇಘನಾಥ ಶಾಹ, ಸತ್ಯೇಂದ್ರನಾಥ್ ಬೋಸ್ ಮತ್ತು ಶಾಂತಿ ಸ್ವರೂಪ ಭಟ್ನಾಗರ್ ಪ್ರಮುಖರು.

ತಾವು 25 ವರ್ಷಗಳ ಕಾಲ ವಾಸಿಸುತ್ತಿದ್ದ ಕಲ್ಕತ್ತೆಯ ತಮ್ಮ ಒಂದು-ಕೋಣೆಯ ಮನೆಯಲ್ಲಿ 1944 ರ ಜೂನ್ 16 ರಂದು ಭಾರತದ ಈ ವಿಜ್ಞಾನದ ಮಾಣಿಕ್ಯ(84) ಇಹಲೋಕದಿಂದ ಮರೆಯಾದರೂ, ಅದರ ಪ್ರಕಾಶವಿನ್ನೂ ಹೊಳೆಯುತ್ತಿದೆ. ಹಿಂದೂ ಸಂಸ್ಕೃತಿಯ ಪ್ರತೀಕವಾದ ಆಚಾರ್ಯ ಪ್ರಫುಲ್ಲಚಂದ್ರ ರೇ ಅವರು ಕೊನೆಯ ದಿನಗಳಲ್ಲಿ ಆಡಿದ ಮಾತುಗಳು ಸ್ವಾಭಿಮಾನದ ನುಡಿ ಮುತ್ತುಗಳೇ ಸರಿ, “ಇನ್ನೊಂದು ಜನ್ಮದಲ್ಲೂ ನಾನು ಭಾರತದಲ್ಲಿಯೇ ಹುಟ್ಟುವೆ, ಇಲ್ಲಿ ನಾನು ಮಾಡಬೇಕಾದ ಕೆಲಸಗಳು ಇನ್ನೂ ಬಾಕಿ ಇವೆ”. ಆಗಿನ್ನೂ ಭಾರತಕ್ಕೆ ಸ್ವಾತಂತ್ರ್ಯ ದೊರಕಿರಲಿಲ್ಲ.!

-ಡಾ.ಬಡೆಕ್ಕಿಲ ಶ್ರೀಧರ ಭಟ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: