
ಸೂರ್ಯ ಭೂಮಿಯ ಇನ್ನೊಂದು ಭಾಗ ತನ್ನೆಡೆಗೆ ತಿರುಗುತ್ತಾ ಇರುವುದನ್ನು ತೆಪ್ಪಗೆ ನೋಡುತ್ತಿದ್ದಾನೆ. ಭೂಮಿಯಲ್ಲಿ ಸೂರ್ಯನೇ ಮೇಲೇಳುತ್ತಿದ್ದಾನೆಂಬ ಭ್ರಮೆಯಲ್ಲಿನ ಸಂಭಾಷಣೆಗಳು ನಡೆಯುತ್ತಾ ಇವೆ. ಸೂರ್ಯ ಎಂದಿನಂತೆ ನನ್ನೆಡೆಗೆ ನೋಡಿ ನಕ್ಕ!
ಇಂದೇಕೋ ನನ್ನ ಹೆಸರಿನಲ್ಲಿ ನಡೆವ ಆ ದೇಗುಲದಲ್ಲಿನ ಆಗುಹೋಗುಗಳನ್ನು ನೋಡಬೇಕೆನಿಸಿತು, ನೋಡುತ್ತಾ ನಿಂತೆ. ವನದೇವತೆ ಕೊಡಮಾಡಿದ ಶ್ರೀಗಂಧದ ಕೊರಡನ್ನು ಭೂಮಿದೇವಿಯ ಒಂದು ಪುಟ್ಟ ಮಗುವಂತಿದ್ದ ಕಲ್ಲೊಂದರ ಮೇಲೆ ಒತ್ತಿ ಒರೆಸಿ ತೇದಿದ್ದಾಯಿತು. ನದೀದೇವಿಯ ನೀರನ್ನು ತಂದು ಶಿಲೆಯ ಮೂರ್ತಿಯ ಮೇಲೆ ಎರೆದು ಅಭಿಷೇಕ ನಡೆಸಿದ್ದಾಯಿತು. ರೇಷಿಮೆ ವಸ್ತ್ರವನ್ನು ಸುತ್ತಿ ಅಲಂಕಾರವೆನಿಸಿದ್ದಾಯಿತು. ಆ ವಸ್ತ್ರದ ತಯಾರಿಯಲ್ಲಿ ವಿಲಿವಿಲಿ ಒದ್ದಾಡಿ ಜೀವ ಕಳೆದುಕೊಂಡ ರೇಶಿಮೆಯ ಹುಳುಗಳ ನೆನೆಸಿ ಹಿಂದೆ ಬಹಳಷ್ಟು ಸಲ ಆದಂತೆ ನನ್ನ ಕಣ್ಣಂಚು ಒದ್ದೆಯಾಯಿತು. ಆಗಷ್ಟೇ ತಲುಪಿದ ಹೂಗಳ ರಾಶಿಯನ್ನು ಮುಂದಿಟ್ಟಿದ್ದಾಯಿತು. ಇಂದು ಹೂಗಳು ತಲುಪಿದ್ದು ತಡವಾಯಿತೆಂದು ಮನದೊಳಗೇ ವಾಚಾಮಗೋಚರವಾಗಿ ಬಯ್ಯುತ್ತಾ ಆ ಅರ್ಚಕ ಮೂರ್ತಿಯ ಮುಂದೆ ನನಗಿಷ್ಟವೆಂದು ಇವರೆಲ್ಲಾ ಹೇಳುವ ಆ ಹೂಗಳನ್ನು ತಂದಿಟ್ಟ.
ನಿಜ ಹೇಳಬೇಕೆಂದರೆ ನನಗೆ ಆ ಹೂವು ಮಾತ್ರವಲ್ಲ, ಎಲ್ಲಾ ಹೂಗಳೂ, ಸಸ್ಯಗಳೂ ಇಷ್ಟವೇ! ಆದರೆ ಅವು ಅವುಗಳ ತಾಯಿಯ ಮಡಿಲಲ್ಲಿದ್ದರೆ ಇಷ್ಟವಾಗಿತ್ತದೆ. ಗಿಡದಿಂದ ಕಿತ್ತರೆ ಸಂಕಟವಾಗುತ್ತದೆ. ರೇಷಿಮೆ ಹುಳುಗಳ ಯಾತನೆಯ ದೃಶ್ಯ ಯಾಕೋ ಬೇಡಬೇಡವೆಂದರೂ ಮತ್ತೆ ಕಣ್ಣಮುಂದೆ ಬಂತು. ಇವೆಲ್ಲಾ ಮೊದಲೇ ನೋಡಿದ ವಿಷಯಗಳೇ ಆದರೂ ಇಂದು ಏಕೋ ನನ್ನ ಮನದ ಎಂದಿನ ತಟಸ್ಥತೆಯನ್ನು ಮೀರಿ ಚಿಂತಿಸುತ್ತಿದ್ದೇನೆ. ಬಲು ಅಪರೂಪಕ್ಕೆ ಹೀಗಾಗುತ್ತೇನೆ.
ಅಷ್ಟರಲ್ಲಿ ಯಾರೋ ಒಬ್ಬಾತ ಒಂದು ಬುಟ್ಟಿ ಹೂವು, ತೆಂಗಿನಕಾಯಿ, ಹಣ್ಣುಗಳನ್ನು ತಂದ. ಈತನೇ ಅಲ್ಲವೇ!! ದಾರಿಯಲ್ಲಿ ಬರುತ್ತಾ ಇವನ್ನೆಲ್ಲಾ ತುಂಬಿಸಿದ್ದ ಆ ಪ್ಲಾಸ್ಟಿಕ್ ಲಕೋಟೆಯನ್ನು ತನ್ನ ವಾಹನದ ಕಿಟಕಿಯಿಂದ ಮುಲಾಜಿಲ್ಲದೆ ಹೊರಗೆಸೆದಿದ್ದು! “ಪ್ರಕೃತಿಯಿಲ್ಲದೆ ನೀನೂ ಇಲ್ಲ, ನೀನಿಲ್ಲದೆ ನಾನೂ ಇಲ್ಲ ಕ್ರಿಮಿಯೇ! ಅರ್ಥ ಮಾಡಿಕೋ!” – ಎಂದು ಕೂಗಿ ಹೇಳಬೇಕೆನಿಸಿತು. ಆತ ಒಳ ಹೊಕ್ಕ, ಅದೆಷ್ಟೋ ದುಡ್ಡನ್ನು ಹುಂಡಿಯಲ್ಲೂ ತಟ್ಟೆಯಲ್ಲೂ ಹಾಕಿದ. ನಾನು ಇವನು ಕೇಳುವುದನ್ನು ಕೊಡುತ್ತೇನೆಂದು ಅಂದುಕೊಂಡಿರುವನಲ್ಲಾ, ಅದೂ ಆ ಕಾಗದದ ಮೇಲೆ ಮುದ್ರಿಸಿರುವ ಬೆಲೆಗೆ! ನನ್ನ ಪ್ರಪಂಚದಲ್ಲಿ ನಿಮ್ಮ ದುಡ್ಡಿಗೆ ಬೆಲೆಯಿಲ್ಲ ಎಂದು ಇವರಿಗೆ ತಿಳಿಹೇಳುವವರಾರು? ನಾನು ಅದನ್ನು ಮುಟ್ಟೂವುದೂ ಇಲ್ಲ, ಮೂಸುವುದೂ ಇಲ್ಲ! ನಗುಬಂತು. ಸರಿ, ಈಗ ಮೂರ್ತಿಯ ಮುಂದೆ ನಿಂತು ಕಣ್ಣಲ್ಲಿ ಕಣ್ಣಿಟ್ಟು ಕೈಮುಗಿದ. ಅದೇನು ಇವನ ಕೋರಿಕೆಯೆನ್ನುವುದನ್ನು ನೋಡೋಣ! ಅರೆರೆ!! ಇವನ ಮನಸ್ಸಿನಲ್ಲಿ ಯಾಕೋ ಭಯವೇ ಓಡುತ್ತಿದೆಯಲ್ಲಾ, ಭಕ್ತಿ ಎಂದು ಇವರೆಲ್ಲಾ ಹೆಸರಿಟ್ಟ ಆ ಭಾವದ ಸುಳಿವೂ ಇಲ್ಲ. ಈವನು ಅದನ್ನೇ ಭಕ್ತಿ ಎಂದುಕೊಂಡಿದ್ದಾನೆಯೇ?! ಈತ ಮಾಡಿದ ತಪ್ಪಿಗೆ ನಾನು ಶಿಕ್ಷಿಸುವೆನೆಂಬ ಭಯವೇ? ಅಲ್ಲ, ನಿಮ್ಮನ್ನೆಲ್ಲಾ ಶಿಕ್ಷಿಸುವ ಕೆಲಸ ದೇವರುಗಳು ಕೈಗೆತ್ತಿಕೊಂಡಲ್ಲಿ ನೀವು ದೇವತೆಗಳನ್ನು ಸೃಷ್ಟಿಸುವಾಗ ಕೊಟ್ಟ ಕೋಟಿ ಕೋಟಿ ಸಂಖ್ಯೆಗಳೂ, ಅವತಾರಗಳೂ, ಎಳ್ಳಷ್ಟೂ ಸಾಕಾಗುವುದಿಲ್ಲ! ನಾನು ಆ ಕೆಲಸವನ್ನು ಯಾವತ್ತೋ ಕೈಬಿಟ್ಟು ನಿಮ್ಮ ನಿಮ್ಮದೇ ಆದ “ಕರ್ಮ” ಕ್ಕೆ ಕೆಲಸ ಒಪ್ಪಿಸಿದ್ದಾಯಿತು. ಇದನ್ನು ನಿಮ್ಮೊಳಗಿನ ಕೆಲ ಮಹಾನುಭಾವರು ಅರ್ಥೈಸಿಕೊಂಡು ನಿಮ್ಮೆಲ್ಲರ ಬುದ್ಧಿಮತ್ತೆಗೆ ಅರ್ಥವಾಗುವ ಮಟ್ಟದಲ್ಲಿನ ಕಥೆಗಳನ್ನು ಸೃಷ್ಟಿಸಿದ್ದಾಯಿತು. ಒಂದಷ್ಟು ದುಷ್ಟರನ್ನೂ ರಾಕ್ಷಸರನ್ನೂ ಕಥೆಯಲ್ಲಿ ಸೃಷ್ಟಿಸಿ ನಾನು ಹಲವಾರು ರೂಪ ಅವತಾರಗಳಲ್ಲಿ ಬಂದು ಇವರನ್ನೆಲ್ಲಾ ಕೊಂದಂತೆ ಕಥೆಗಳನ್ನು ಪ್ರಚುರಪಡಿಸಿದ್ದೂ ಆಯಿತು. ಇವನ್ನೆಲ್ಲಾ ಇನ್ನೂ ಅರ್ಥಮಾಡಿಕೊಳ್ಳದ ನಿಮ್ಮನ್ನು ಏನೆನ್ನಬೇಕು? “ನಾನು ಕಥೆಯಲ್ಲಿ ದುಷ್ಟರನ್ನು ಬಗೆಬಗೆಯಾಗಿ ಕೊಂದಂತೆ ನಿನ್ನ ತಪ್ಪಿಗೆ ನಿನಗೂ ಕಾಲಕ್ಕೆ ತಕ್ಕನಾಗಿ ಅದೇನೋ ಕೋಟಲೆಗಳನ್ನು ಕೊಡುವೆನೆಂಬ ಭಯದಲ್ಲಿ ಇಷ್ಟು ದೂರದ ದೇಗುಲಕ್ಕೆ ಹರಕೆ ಹೊತ್ತು ಬಂದಿದ್ದೀಯಲ್ಲಾ! ಹೋಗು ನಿನ್ನ ಸಹಾಯ ಬೇಕಾದವರಿಗೆ ಹೋಗಿ ಸಹಾಯ ಮಾಡು! ಅಷ್ಟಾದರೂ ಆಗಲಿ ನಿನ್ನ ಕೈಯ್ಯಲ್ಲಿ!” – ಎಂದು ಚೀರಬೇಕೆನಿಸಿತು.
ಮುಂದೆ ಇಂತಹುದೇ ಒಂದಷ್ಟು ಜನರು ಬರುತ್ತಿದ್ದಾರೆ. ಅಲ್ಲೊಂದು ಸಾಲುನಿಲ್ಲುವ ವ್ಯವಸ್ಥೆ ಆಯಿತು. ಸಾಲು ತಪ್ಪಿಸಿ ನುಗ್ಗಿ ಮೂರ್ತಿಯ ಮುಂದೆ ಬಂದು ನಿಂತವರೂ ಇದ್ದಾರೆ. ಇವನ್ನೆಲ್ಲಾ ನೋಡಿ ಅಸಹಾಯಕ ಭಾವದಲ್ಲಿ ಒಮ್ಮೆ ಸೂರ್ಯನತ್ತ ನೋಡಿದೆ. ನಿಜ ಹೇಳಬೇಕೆಂದರೆ ಇವನು ಪ್ರಕೃತಿಗಿಂತ ಎಷ್ಟೋ ಅದೃಷ್ಟಶಾಲಿ, ಮನುಷ್ಯರಿಂದ ದೂರದಲ್ಲಿದ್ದುಕೊಂಡೇ ಆರಾಮವಾಗಿದ್ದಾನೆ. ಪ್ರಕೃತಿ ಕೂಡಾ ಇವನಂತೆ ಪ್ರತ್ಯಕ್ಷ ದೇವರಾಗಿದ್ದರೂ ಆಕೆಯ ಮೇಲೆ ನಡೆವ ಅಪಚಾರಗಳು ಅಷ್ಟಿಷ್ಟಲ್ಲ. ನನ್ನ ಹೆಸರಿನಲ್ಲೂ ಆಕೆಯ ಮೇಲೆ ಅಪಚಾರಗಳು ನಡೆಯುತ್ತವೆ. ಅಸಹಾಯಕ ನಾನು!
ಪ್ರಕೃತಿ ಯಾಕೋ ಅಲ್ಲಿಂದಲೇ ನೋವಿನಲ್ಲೂ ನಕ್ಕಂತಾಯಿತು. ಆಕೆ ಸಹನಾಮಯಿ ಎನಿಸುತ್ತಾಳೆ, ಆದರೂ ನೋವು ತಡೆಯಲಾರದಾದಾಗ ಒಮ್ಮೊಮ್ಮೆ ಅಲ್ಲಾಡಿದ್ದೂ ಉಂಟು. ಅಸಹಾಯಕವಾಗಿ ಸಮತೋಲನ ಕಳೆದುಕೊಂಡಿದ್ದೂ ಉಂಟು. ಕಡೆಯದಾಗಿ ಅನುಭವಿಸುವವರು ಯಾರು ತಪ್ಪು ಮಾಡಿದ್ದಾರೋ ಅವರೇ ಅಲ್ಲವೇ! ಎಂದುಕೊಂಡು ಒಮ್ಮೆ ಸಮಾಧಾನಪಟ್ಟುಕೊಂಡು ಮತ್ತೆ ಕಣ್ಣುಮುಚ್ಚಿ ತಟಸ್ಥವಾದೆ. ಸೂರ್ಯ ಏನೋ ಹೇಳ ಹೊರಟು ಸುಮ್ಮನಾದಂತೆನಿಸಿತು. ಇನ್ನೊಂದಷ್ಟು ಕಾಲ ಭೂಮಿಯತ್ತ ಕಣ್ಣು ಹಾಯಿಸದೆ ಕಳೆವ ಮನಸ್ಸಿನಿಂದ ಸ್ಥಬ್ದವಾದೆ.
– ಶ್ರುತಿ ಶರ್ಮಾ, ಬೆಂಗಳೂರು.
ಬಲು ಸೊಗಸು..ತುಸು ನಿಗೂಢ ಎನಿಸಿದ ಬರಹವಿದು…ಚೆನ್ನಾಗಿದೆ..
ತುಂಬಾ ಚೆನ್ನಾಗಿದೆ….
ದೇವನ..ಅಂತರಾತ್ಮದ …ಸ್ವಗತ..ಕಥೆ ..ಚೆನ್ನಾಗಿದೆ!
ನಿಮ್ಮ ಪ್ರಕೃತಿಯ ಕುರಿತ ಕಳಕಳಿ ಲೇಖನದಲ್ಲಿ ವ್ಯಕ್ತವಾಗುತ್ತದೆ. ಒಂದು ಕತೆಯಂತೆ ಓದಿಸಿಕೊಂಡು ಹೋಯಿತು. ಅಭಿನಂದನೆಗಳು ಮೇಡಂ.