ಗೌರೀದುಃಖ
ಹೆಣ್ಣಿನ ಮನಸ್ಸಿನಲ್ಲಿ ಮಾತ್ರವೇ ಮೂಡಬಲ್ಲ ಅಸಂಖ್ಯಾತ ಭಾವನೆಗಳಿಗೆ ಕವಿತೆಯ ಸ್ಪರ್ಶ ನೀಡಿದ ಸುಂದರ ಹೂ ಕವನಗಳ ಗುಚ್ಛ
ವಿದ್ಯಾರಶ್ಮಿ ಪೆಲತ್ತಡ್ಕರವರ ಗೌರೀದುಃಖ ಕವನಸಂಕಲನ. ಅದೆಷ್ಟೋ ವರ್ಷಗಳಿಂದ ತಾವು ಕೆಲಸ ಮಾಡುವ ಪತ್ರಿಕೆಗಳಲ್ಲಿ
ಅಚ್ಚುಕಟ್ಟಾಗಿ, ಅರ್ಥವತ್ತಾಗಿ ಬರೆಯುತ್ತಿದ್ದರು, ಕವಿತೆಗಳ ಮೂಲಕ ನಮ್ಮಲ್ಲಿ ಆರದ ಬೆರಗು ಮೂಡಿಸಿದ್ದಾರೆ. ಈ ಬೆರಗು ಅಂತಿಂಥ
ಬೆರಗಲ್ಲ. ನಮ್ಮ ಹೃದಯದಲ್ಲು ಸಂಚಲನ ,ನವಚೇತನ ಮೂಡಿಸಿದ ತಾದ್ಯಾತ್ಮ ಭಾವ .ತನ್ನಾತ್ಮದ ಕನಸುಗಳನ್ನು, ಕನವರಿಕೆಗಳನ್ನೇ
ಸೂಕ್ಷ್ಮವಾಗಿ ಅವಲೋಕಿಸಿ ಸೃಜನಶೀಲತೆಯಿಂದ ಸೃಷ್ಟಿಸಿದ ಅರ್ಥಪೂರ್ಣ ಕವಿತೆಗಳು. ಹೆಣ್ಣಿನ ಸುಕೋಮಲ ಮನಸ್ಸು ಮಾತ್ರವೆ
ಅದೆಷ್ಟು ತಾಕಲಾಟಗಳನ್ನು ಸಂವೇದಿಸುತ್ತದೆ ಎಂಬುದನ್ನು ಮಾರ್ದನಿಸುತ್ತದೆ ಇಲ್ಲಿನ ಸಾಲುಗಳು.
“ಅಡುಗೆ ಮನೆಯ ತುಂಬಾ
ಕಾಯಿಸು, ಬೇಯಿಸು, ತಿಕ್ಕು ತೊಳೆಯಲ್ಲಿ
ನಖಶಿಖಾಂತ ಮುಳುಗಿರುವಾಗಲೂ,
ಎದುರು ಮನೆಯಲ್ಲಿ ಇವಳ ಗಾಡಿ ಸದ್ದಾಗಿ ಹೊರಟಾಗ
ಕಣ್ಣರಳಿಸಿ ಕೈಯಾಡಿಸುತ್ತಾಳೆ
ಅವಳ ಕನಸು ಇವಳ ಹೆಗಲೇರುತ್ತದೆ.”
ಹೆಣ್ಣು ಸ್ವಾವಲಂಬಿಯಾಗಿರಬೇಕೆಂಬ ವಿಚಾರವು ಪ್ರತಿ ಹೆಣ್ಣಿನ ಲೋಕಜ್ಞಾನದಲ್ಲಿ ಇರಲೇಬೇಕು. ಆ ದಿಶೆಯಲ್ಲಿ ಅವಳು
ಹೆಜ್ಜೆಯಿರಿಸಬೇಕು ಎಂಬ ಮಾರ್ಮಿಕವಾದ ಈ ಕವಿತೆಯ ಸಾಲುಗಳು ನಮ್ಮನ್ನು ಅಂದರೆ ಹೆಂಗುರುಳನ್ನು ಆಳವಾಗಿ ತಟ್ಟದೆ
ಇರುವುದಿಲ್ಲ. ಸ್ವಾವಲಂಬಿಯಾಗಿರಬೇಕೆಂದರೆ ಜಾಸ್ತಿ ಓದಬೇಕು ಎಂದು ಅರ್ಥೈಸುವ ಇದೇ ಕವಿತೆಯಲ್ಲಿರುವ
ಸಾಲು, ಶತಶತಮಾನಗಳಿಂದಲೂ ಹೆಣ್ಣಿನ ಕುರಿತು ಬಂದಿರುವ ಹಪಾಹಪಿಯನ್ನು ಬಿಂಬಿಸುತ್ತದೆ. ಓದಿನ ಕುರಿತು ಇರುವ
ಕಟ್ಟುಪಾಡುಗಳನ್ನು ಮೀರಿ ನಿಲ್ಲುವ ಬದುಕು ಬಂದಾಗಿದೆ ಎಂದು ಖುಷಿಯಿಂದ ತಲ್ಲಣಿಸುವ ಮನಸ್ಸು ಇಲ್ಲಿನ ಕವಯತ್ರಿಯದು.
ಜೀವನದ ವೈಶಿಷ್ಟ್ಯ ವನ್ನೇ ಕಾವ್ಯಸೃಷ್ಠಿಯಲ್ಲಿ ಹಿಡಿದಿಟ್ಟ ಪರಿ ಇಲ್ಲಿನ ಕವಿತೆಗಳಲ್ಲಿ ಅನನ್ಯತೆಯಿಂದ ಕೂಡಿದೆ. ಒಂದು
ಪ್ರಶಾಂತ ಮನಸ್ಸು ಭಾವನೆಗಳ ಮಹಾಪೂರವನ್ನು ಭರಪೂರವಾಗಿ ಹರಿಸಿಬಿಡುತದೆ. ಇವರ ಚಿಂತನೆಯಲ್ಲಿ ವರ್ತಮಾನದ ಬದುಕಿನ
ಮಿಡಿತಗಳು ಸಾವಕಾಶವಾಗಿ ಮಿಳಿತಗೊಂಡು, ಕವಿತೆಗಳಲ್ಲಿ ಹೊಸ ಹೊಳಪಿದೆ. ಕಾಲದ ನಿಯಮಕ್ಕೆ ತಕ್ಕದಾಗಿ ಹೊಂದಿಕೊಂಡು ಬಾಳುವ
ಪರಿಯೇ ಸಂತುಷ್ಟ ಜೀವನ ಎಂಬ ಸೂಕ್ಷ್ಮಾತಿಸೂಕ್ಷ್ಮ ಸಂಗತಿ ಕವಿತೆಗಳಲ್ಲಿ ಹಾಸುಹೊಕ್ಕಾಗಿದೆ.
ಅತಿಯಾದ ಕಲ್ಪನೆಗಳಿಗೆ ಆಸ್ಪದ ಕೊಡದೆ ಮನಸ್ಸಿನ ಮಾತುಗಳೇ ಅಕ್ಷರಗಳಾಗಿ ಜೀವಪಡಕೊಂಡಿದೆ ಇಲ್ಲಿ.ಹಾಗಾಗಿ ಕವಿತೆಗಳು ಸರಳವೆಂದೆನಿಸಿದರೂ, ಅದರ ಗಹನತೆ ತೀರಾ ಆಳದಲ್ಲಿದೆ. ಬದುಕು ಮೊದಲು ಅದಕ್ಕಿಂತ ಮಿಗಿಲು ಯಾವುದೂ ಇಲ್ಲ ಎಂಬ ಧೋರಣೆ ನಮ್ಮನ್ನು ಆರ್ದ್ರಗೊಳಿಸುತ್ತದೆ. ಕವಿತೆಗಳಾದ ತೊರೆದು ಜೀವಿಸಬಹುದೇ, ನೀ ಉತ್ತರಿಸು, ಅಪ್ಪ, ಒಲವರಳೋ ಕಾಲ, ನಮ್ಮ ನಡುವೆ, ಮಿಲನ ಇತ್ಯಾದಿ ಕವಿತೆಗಳಲ್ಲಿ ಇದು ಕಂಡು ಬರುತ್ತದೆ. ಮಹಿಳೆಯು ವೈವಾಹಿಕ ಚೌಕಟ್ಟು ಮೀರಿ ಗುರುತರ ಗುರಿಯನ್ನು ಹೊಂದಿದ್ದರೂ, ನಮ್ಮ ಸಾಂಸಾರಿಕ ಪರಿಧಿಯನ್ನು ದಾಟದೆ ಗುರಿ ಸಾಧಿಸಿದವರು ವಿರಳ. ಇಲ್ಲಿಯು ನಿಭಾಯಿಸಿ ಅಲ್ಲಿಯು ಸಾಧಿಸಿದ ಹೆಗ್ಗಳಿಕೆ ಹೆಣ್ಣಿಗಲ್ಲದೆ ಇನ್ಯಾರಿಗೆ
ಸಲ್ಲಬೇಕು?
‘ಗೌರೀದುಃಖ ಶಿವನಿಗು ಬೇಡವಂತೆ’ ಎಂದು ಉಸುರುತ್ತಾ ಸ್ತ್ರೀ ಪರ ನಿಲುವು ಜಾಗೃತಗೊಳಿಸಿ ಪರಾಮರ್ಶಿಸಿದ ಈ
ಕವಿತೆಯು ನೀಡುವ ಅನುಭೂತಿ ತುಂಬಾ ವಿಶೇಷವಾದದ್ದಾಗಿದೆ.
ಇದರಲ್ಲಿ
“ಸಮಯವಿದೆಯಂತೆ ಗೋಪಿಲೋಲನಿಗೆ
ಗೌರೀದುಃಖ ಆಲಿಸಲು
ಶಿವನೇ ಎಚ್ಚರೆಚ್ಚರ”
ಎಂಬ ಸಾಲುಗಳು ಮಾರ್ಮಿಕವಾಗಿ ಮೂಡಿಬಂದಿದೆ. ಈ ಕವನ ಹೊಸ ರೂಪಕದೊಂದಿಗೆ ಕವಯತ್ರಿಯ ಸೃಜನಶೀಲತೆಯನ್ನು ಎತ್ತಿ
ಹಿಡಿಯುತ್ತದೆ. ಮೂಲಸತ್ವವನ್ನು ಹಾಗೆ ಉಳಿಸಿಕೊಂಡು ಒಂದು ವಿಷಯದ ಮೇಲೆ ಧ್ಯಾನಿಸುವುದು ಕಾವ್ಯ ಧರ್ಮ. ಅದು ಇಲ್ಲಿ
ಸಿದ್ದಿಸಿದೆ. ಹೆಣ್ಣಿನಂತರಂಗದ ಆಕಾಂಕ್ಷೆ ,ನೋವು, ನಲಿವು, ಆಸೆಗಳ ಹೊಸ ಹೊಸ ಆಯಾಮಗಳನ್ನು ತೆರೆದಿಟ್ಟು ನಮ್ಮನ್ನು ಹೊಸ
ಹೊಳಹುಗಳತ್ತ ಸೆಳೆಯುತ್ತದೆ. ಹೆಣ್ಣಿಗಿರುವ ಕಟ್ಟುಪಾಡುಗಳನ್ನು ಮೀರಿ ನಿಲ್ಲುವಂತಹ ಶಕ್ತಿಯನ್ನು ಬೆಳೆಸುವ ಆಶಯ ಹೊತ್ತ ಇಲ್ಲಿನ
ಕವಿತೆಗಳು ನಮಗೆಲ್ಲರಿಗೂ ಹೊಂಗಿರಣ.
ಧಾವಂತದ ಬದುಕಿನ ಸದ್ಯದ ಜೀವನದಲ್ಲಿ ಎಗ್ಗಿಲ್ಲದೆ ನುಸುಳಿದ ಎಲ್ಲಾ ಆಧುನಿಕತೆಗಳನ್ನು ಬಳಸಿಕೊಂಡು ನಾವೆಲ್ಲಾ
ಜೀವನ ಸಾಗಿಸಿದರೂ, ಹೆಣ್ಣಿನ ಬದುಕಿಗೆ ನ್ಯಾಯವಾಗಿ ಸಲ್ಲಬೇಕಾದ ಗೌರವ ಮತ್ತು ಅವಕಾಶಗಳು ತೀರಾ ಕಡಿಮೆ ಎಂಬುದನ್ನು
ಸೂಚ್ಯವಾಗಿ ತೆರೆದಿಡುತ್ತಾರೆ.
‘ಮೀಟಿಂಗಿನಲ್ಲಿ’ ಎನ್ನುವ ಕವಿತೆಯಲ್ಲಿ “ಇವಳಿಗೆ ನಿತ್ಯದ ಚಿಂತೆ/ ಮಗನಿಗೆ ಇವತ್ತೇನೋ ಹೋಂವರ್ಕೋ“. ಮನೆಗೆ ಬಂದರು ಮಕ್ಕಳಿಗೆ ಊಟ, ಹೋಂ ವರ್ಕ್ ಮಾಡಿಸಿಯೆ ತನಗೆಂದು ಸಮಯ ಒದಗಿಸಿಕೊಳ್ಳುವ ಹೆಣ್ಣು ಸಹನಾಮೂರ್ತಿ. ತನ್ನ ಮಕ್ಕಳಿಗೆ ಮಾಡಬೇಕಾದದನ್ನು ಮಾಡಲು ಈಕೆ ಯಾರಿಗೂ ಕಾಯುವುದಿಲ್ಲ. ಇಲ್ಲಿನ ಬಹುತೇಕ ಕವಿತೆಗಳು ಒಂದೊಂದು ತೆರನಾದ ವಿಶಿಷ್ಟ ಸ್ತ್ರೀ ಲೋಕವನ್ನು ತೆರೆದಿಡುತ್ತದೆ.
“ಅಡುಗೆ ಮಾಡಿ ದಣಿಯುವ,
ಕೀಲಿ ಮಣೆ ಕುಟ್ಟುವ ಬೆರಳುಗಳಿಗೆ,
ಉಂಗುರದ ಉಡುಗೊರೆ.“
ಪ್ರಸ್ತುತ ದಿನಮಾನಸದ ಜೀವನ ಭಾರಿ ಬದಲಾವಣೆಗಳನ್ನು ಬಯಸುತ್ತಿದೆ ಮತ್ತು ಬದಲಾವಣೆಗೆ ಒಳಗಾಗುತ್ತಿದೆ. ಒಂದು ಕಡೆ
ಪಾಶ್ಚಾತ್ಯೀಕರಣದಿಂದ ,ನಗರೀಕರಣದಿಂದಾಗಿ ಬದುಕು ನಾಗಾಲೋಟದಿಂದಿಂದಿದೆ..ಇದರೊಂದಿಗೆ ಬದಲಾದ ಜನರ ಮನಸ್ಥಿತಿಯಲ್ಲಿ
ಪಾಪಗಳ ಪಟ್ಟಿಯು ಬೆಳೆಯುತ್ತಿದೆ.
“ಶೋಕಿಸಲು ನಮಗು ಕಾರಣಗಳುಂಟು
ಮನಸ್ಸಿಲ್ಲ ಇವರೇ
ಆಡಿದ ನುಡಿ ನಡೆಗೆಲ್ಲ
ಪಶ್ಚಾತಾಪ ಕಾಡಿದರೆ
ಹುಟ್ಟುತ್ತದೆ ಸರಣಿ ರಾಮಾಯಣ …”
ಅಂದರೆ ನಮಗೆಲ್ಲ ಯಾವ ತಪ್ಪುಗಳಿಗು ಕ್ಷಮೆ ಕೋರುವ ಭಾವ ಬಾರದೆ ಇರುವಾಗ, ಅಂದಿನವರು ತಿಳಿಯದೆ ಕೊಂದ ಕ್ರೌಂಚದಿಂದಾಗಿ
ಅಪರಂಜಿ ರಾಮಾಯಣ ಹುಟ್ಟಿದೆ. ಅದಕ್ಕೆ ಹೋಲಿಸಿದರೆ ನಮ್ಮ ಬದುಕು ಅದೆಷ್ಟು ಕ್ಷುಲ್ಲಕ ಎಂಬುದಾಗಿ ಹೇಳಿ ಅಚ್ಚರಿಗೊಳಿಸುತ್ತಾರೆ.
ಸತ್ಯ, ನ್ಯಾಯ, ಧರ್ಮ ನಮ್ಮಂತರಂಗದಲ್ಲಿದ್ದರೆ ದೇವರು ಹೇಗೂ ಯಾವ ರೂಪದಲ್ಲಾದರು ಬರುತ್ತಾನೆ.ಗಿಜಿಗಿಡುವ ರಸ್ತೆಯಲ್ಲಿ
ಗಾಡಿ ಗುಂಡಿಗೆ ಬಿದ್ದರು ತಿರುಗಿ ನೋಡದೆ ಹೋಗುವ ಜನರ ಮಧ್ಯೆ ಒಬ್ಬ ಸಜ್ಜನನನ್ನಾದರು ದೇವರು ಕಳಿಸಿಬಿಡುತ್ತಾನೆ ಎಂಬ ಮುಗ್ಧ
ನಂಬಿಕೆ ನಮ್ಮ ಮುಗ್ಧ ಕವಯತ್ರಿಗೆ.. ಹೀಗೆ ಕೇವಲ ವ್ಯಕ್ತಿನಿಷ್ಠ ಕವಿತೆಗಳಲ್ಲದೆ ವಸ್ತು ನಿಷ್ಠ ಕವಿತೆಗಳು ಇಲ್ಲಿದೆ. ‘ಕಂಟ್ರೋಲ್ ಝೆಡ್’ ಕವಿತೆ ಇದಕ್ಕೆ ಉತ್ತಮ ಉದಾಹರಣೆ.
ಕೌಟುಂಬಿಕ ಪ್ರೀತಿ ಎತ್ತ ಸಾಗಿದೆ ಎಂದು ಹಲುಬುವ ಈ ಹೊತ್ತಲ್ಲಿ ಮನಸ್ಸು ಮುದಗೊಳ್ಳುವ ಕೃತಿಯೊಂದು ಹೊರಬಂದಿದೆ.
ಅಪ್ಪನ ಕವಿತೆಯಂತು ತೀರ ಆಪ್ಯಾಯಮಾನವಾಗಿದೆ. ಅಪ್ಪ ಪ್ರೀತಿಯ ಸಂಪತ್ತು ಎಂಬುದನ್ನು ಎಷ್ಟು ಚೆಂದವಾಗಿ ಹೇಳಿದ್ದಾರೆ ಇಲ್ಲಿ. ‘
ನೀ ತಿದ್ದಿಸಿದ ಅಕ್ಷರಗಳು ಈಗಲೂ ಉಳಿದಿವೆ ನನ್ನೊಳಗೆ ಅಂಕಿತವಾಗಿ’. ಗಂಡ, ಮಗುವಿನೊಂದಿಗಿನ ಅಕ್ಕರೆಯ ಭಾಂಧವ್ಯ, ಪಕ್ಕದ
ಮನೆಯವರೊಂದಿಗಿನ ಗೆಳೆತನ, ಅಮ್ಮನ ಮಡಿಲು, ಕನಸುಗಳು ನನಸಾದ ಅವಳ ಭಾವ ಎಲ್ಲವೂ ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತದೆ
ಜೊತೆಗೆ ಆರ್ದ್ರಗೊಳಿಸುತ್ತದೆ.
ಇಲ್ಲಿನ ಕವಿತೆಗಳ ಒಡಲಲ್ಲಿ ನಡೆಯುವ ಸಂಭಾಷಣೆಗಳು ಬಲು ಆಪ್ತವೆನಿಸುತ್ತದೆ. ಒಲವು, ವಿರಹಗಳೆಲ್ಲವು ಹರಳುಗಟ್ಟಿದಂತೆ ಭಾಸವಾಗುತ್ತದೆ. ಕವಯತ್ರಿಯ ಪ್ರೀತಿಸುವ ವಸ್ತುಗಳೆಲ್ಲಾ ಸಂಬಂಧದ ಪ್ರತೀಕಗಳಾಗಿವೆ.ಇಲ್ಲಿನ ವಸ್ತುಗಳ ಉಸಿರು ಹೊರಹೊಮ್ಮಿ ನಿರಾಳವಾಗಿದೆ ಕವಿತೆಯ ಮನಸ್ಸು. ಕವಿತೆಗಳ ಅಂತರ್ಯವನ್ನು ಅತಿಯಾಗಿ ಶೋಧಿಸುವ ಕೆಲಸ ಮಾಡದೆ ಓದಿ ಖುಷಿಪಟ್ಟು ಅದರ ಅನುಭೂತಿಯನ್ನು ಪಡೆಯುವುದೇ ವಿಶೇಷವಾದದ್ದಾಗಿದೆ. ಇಲ್ಲಿರುವ ಕವಿತೆಯ ಕನವರಿಕೆಗಳು ಎಲ್ಲರದ್ದು ಹೌದು. ‘ಖಾಲಿ ಹಣೆ ಕಂಡರೇಕೆ ಅಂಜುವೆ, ನನ್ನೊಳಗೆ ನೀ ಇಲ್ಲವಾದ ಕ್ಷಣ ಭಯಪಡು’ ಎಂದು ಅನೂಹ್ಯವಾಗಿ ಹೇಳುವ ಪರಿಯಲ್ಲಿ ಗಂಡಿಗಿಂತಲು ಹೆಚ್ಚು ಪ್ರಬುದ್ಧಳಾಗಿದ್ದಾಳೆ ಹೆಣ್ಣು. ಈ ಪ್ರಬುದ್ಧತೆ ಪ್ರತಿ ಸ್ತ್ರೀ ಯಲ್ಲು ಸದಾ ಜಾಗೃತವಾಗಿರಲಿ ಎಂದು ಆಶಿಸೋಣ. ಜೊತೆಗೆ ವಿದ್ಯಾರಶ್ಮಿಯವರ ಕವಿತೆ ಸ್ಫುರಿಸುವ ಶಕ್ತಿ ಇನ್ನೂ ಹೆಚ್ಚಾಗಲಿ ಎಂದು ಪ್ರೀತಿಯಿಂದ ಹಾರೈಸೋಣ.
– ಸಂಗೀತ ರವಿರಾಜ್
ಅದ್ಭುತವಾಗಿದೆ. ಮನಸ್ಸಿಗೆ ಹಿಡಿಸುವ ಕವಿತೆಗಳು.