ನೀರ ನೀರೆಯರು
ಎಲ್ಲಿ ಮರೆಯಾಗುತಿಹಿರಿ ಓ ನನ್ನ ನೀರ ನೀರೆಯರೇ?
ಅದೆಷ್ಟು ಬೇಗ ಹೇಳದೇ ಮಾಸಲಾಗಿಸಿಹಿರಿ ಇಳೆಯಮ್ಮನ ಹಸಿರು ಸೀರೆಯನೇ.!!
ಓ ನೀರ ನೀರೆಯರೇ ನಾನೂ ಸವಿದಿದ್ದೆ ನಿಮ್ಮ ತರತರದ ಉಡುಪ ಚಂದವನು.
ಆಗಸಕೆ ತುಂಬ ಕರಿ ಬಿಳಿ ಕಪ್ಪು ಗುಡು ಗುಡುಗೋ ಮೋಡ ,ನೀರಾವಿ ಆಂದವನು.
ಸಾಗರದ ತುಂಬ ಮಂಜುಗಡ್ಡೆ ಘನವಾಗಿ,ಉಪ್ಪು ನೀರಾಗಿ ಮೆರೆವ ಸೊಬಗನ್ನು.
ಮತ್ತೆ ಭೂತಾಯ ಮಡಿಲೇರಿ ನೀರಾಗಿ,ತೊರೆಯಾಗಿ ಹಿಮಮಣಿಯಾಗಿ ನಲಿದಪ್ಪೋ ಮೆರುಗನ್ನು.
ಪರಿಸರವ ನಗಿಸಿದ್ದ ಪ್ರಾಣಿ ಪಕ್ಷಿ ಗಿಳಿವಿಂಡುಗಳಿಗೆಲ್ಲ ನೀರ ಖೀರುಣಿಸಿ ಅಮ್ಮನಾಗಿ ಸಂತೈಸಿದ್ದನ್ನು.
ಹರಿವತೊರೆ ನೀರ ಝರಿಯಾಗಿ ಮನುಜ ಮತಕೆಲ್ಲ ಖುಷಿಯನುಣಿಸಿದ್ದನ್ನು.
ಹೌದು ನೀ ತ್ಯಾಗಮಯಿ,ಮಮತಾಮಯಿ
ಪ್ರೇಮಮಯಿ ಕರುಣಾಮಯಿ,
ಸ್ವಾರ್ಥ ಮನುಜನ ದುರುಳ ಚಿಂತನೆ
ಮೆರೆಯಿತಿಲ್ಲಿ ನಿನ್ನನಾಗಿಸಿ ದುಃಖಮಯಿ.
ಕಾಡು ಕಡಿದು ನಾಡ ಕಟ್ಟುವ ಅತಿರೇಖದ
ಸಂಸ್ಕೃತಿಯ ಬಿಂಬವು.
ಅರಿಯೊ ಮನುಜ ಗಾಳಿ ನೀರು ಬೆಳಕದಷ್ಟೇ ಎಲ್ಲವುಳಿಸೊ ಮೂಲ ಸ್ತಂಭವು.
ನಿನ್ನ ದುಃಖದ ಪೂರ್ಣ ಫಲವದು ಜೀವರಾಶಿಯ ನಿತ್ಯ ಬದುಕಿಗೆ ಕಂಟಕ.
ನೀರೇ ಇಲ್ಲದಿರೆ ,ಧನಕನಕವೇನಿದ್ದರೂ
ತಪ್ಪದಿರದು ಹಾಹಾಕಾರ ಸಂಕಟ.
ಈಗ ಜಲವೆಲ್ಲಿದೆ ಜಲವೆಲ್ಲಿದೆ ಭುವಿಯೆಲ್ಲ ಒಣಗಿದೆ.
ಅಂದು ವೈಭವದಿ ನಳನಳಿಸಿದ ಹಸಿರಸಿರಿಯೆಲ್ಲಾ ಬತ್ತಲಾಗುತ ನಲುಗಿದೆ.
ಆವನಿಯೊಡಲ ತುತ್ತದಿಂದು (ಮೋಡ) ಅಂಬರದ ತುಂಬೆಲ್ಲ ಚದುರಿ ಅವಿತಿದೆ.
ಇನ್ನಾದರೂ ಆಗಲೆಲ್ಲೂ ನೀರನುಳಿಸೊ
ಹಸಿರನುಳಿಸೊ ಕ್ರಾಂತಿಯು.
ಮಿತವ್ಯಯದ ಧೃಡ ಚಿಂತನೆ, ಮಳೆ ಕೊಯ್ಲ ಚಾಲನೆಯ ಕ್ರಾಂತಿಯು.
ಬನ್ನಿ ಮತ್ತೊಮ್ಮೆ ಉಡಿಸೋಣ ಧರೆಯೊಡಲಿಗೆ ಹಸಿರು ಸಿರಿ ಸೆರಗನ್ನು
ಕಟ್ಟಿ ಒಪ್ಪವಾಗಿಸುವ ಆ ಸೆರಗಂಚಿಗೆ ಪ್ರಜ್ವಲಿಸುವ ರವಿಕಿರಣಗಳ ಕುಚ್ಛನ್ನು.
ವಿಶ್ವ ಜಲದಿನಕ್ಕೆ ಅರ್ಪಣೆ
-ಲತಾ(ವಿಶಾಲಿ) ವಿಶ್ವನಾಥ್
ಜಲದ ಕೊರತೆ ಬಗ್ಗೆ ಎಚ್ಚರಿಕೆ ತುಂಬಾ ಅಗತ್ಯ…!!! ಕವಿತೆ ಚೆನ್ನಾಗಿದೆ..