ಧಾರೆ
ಧಾರೆಯದು ಧಾರೆ,ಅಪ್ಪ ಅಮ್ಮರ ಒಲವೆರೆವ ಧಾರೆ.
ಸುಮಹೂರ್ತದಲಿ ಸುದಿನದಿ ಸಂತಸದಿ ನಡೆವ ಧಾರೆ.
ಸಂಪ್ರದಾಯದ ಚಪ್ಪರದ ನೆರಳೊಳಗೆ ಎರೆವ ಧಾರೆ.
ಮನ ಮನಗಳೊಂದಾಗೆ ಸಪ್ತಪದಿಯೊಳೊಂದಾಗೊ ಧಾರೆ.
ಕಂಪು ಸೂಸುವ ಮಲ್ಲೆ ಮಾಲೆ,ನವನವೀನ ಶೃಂಗಾರದಲವಳು ಮಿನುಗುತಾರೆ.
ಕೈಯಲ್ಲಿ ಮಾಂಗಲ್ಯ ಮನದೊಳಗೆ ಪುಳಕ ತನ್ನವಳ ನಾಚಿಕೆಗೆ ವರನವನು ಸೂರೆ.
ರಂಗೇರಿದ ಸಂಭ್ರಮದಲಿ,ಬಂಧುಮಿತ್ರರುಪಸ್ಥಿತಿಯ ಹಾರೈಕೆಗೆ ಚಿರವಾದ ಬಂಧ.
ವಿಧ ವಿಧದ ಭಕ್ಷ್ಯ ಭೋಜನಗಳ ಸತ್ಕಾರ ಅತಿಥಿಗಳೌತಣದ ಸೊಬಗದೆಷ್ಟು ಚಂದ.
ಅಕ್ಷತೆಯ ಹೂಮಳೆ,ಹರಿದ್ರಾಕುಂಕುಮದ ಓಕುಳಿ ಎಲ್ಲ ಸುಖಿಸುತ ಎಲ್ಲಿಹುದಲ್ಲಿ ಸಂತಸಕೆ ಮೇರೆ.
ಒಟ್ಟಿನಲಿ ನೀ ಸೂರ್ಯ ಅವಳು ಚಂದ್ರಿಕಾ ಬಾಳಿರಿಬ್ಬರೂ ಬೆಳಕ ಚೆಲ್ಲುತ ಅನವರತ ಎಂದೆನುವ ಧಾರೆ.
ಸಂಜೆ ನೇಸರ ಪಶ್ಚಿಮದಿ ವಿರಮಿಸೆ ,ಮನೆಯ ಕುವರಿಗೆ ಬೀಳ್ಕೊಡುವ ನಲಿವು ನೋವಿನ ಆನಂದ ಬಾಷ್ಪ ಧಾರೆ.
ಇತ್ತ ವಧು ವರನ ಮನೆ ಹೊಸ್ತಿಲಲಿ ವಧುಪ್ರವೇಶಕೆ ಸ್ವಾಗತವ ಕೋರುತಿಹ ನೀಲಿಗಗನದ ತುಂಬ ಚಂದ್ರ ತಾರೆ.
.
– ಲತಾ(ವಿಶಾಲಿ)ವಿಶ್ವನಾಥ್
ಸೊಗಸಾಗಿದೆ, ಧಾರೆಯ ವಿವಿಧತೆಗಳನ್ನು ವಿವರಿಸಲಾಗಿದೆ.