ಬೇಸಿಗೆಯಲ್ಲಿ ಶಾರೀರಿಕ ನಿರ್ಜಲೀಯತೆ (ಡಿಹೈಡ್ರೇಷನ್)
ಬೇಸಿಗೆ ಶುರುವಾದೊಡನೆ ಎಲ್ಲರಿಗೂ ತಿರುಗಾಟದ ಸಂಭ್ರಮ. ಆದರೆ ಸಮಸ್ಯೆ, ಸೆಕೆ..ಬಾಯಾರಿಕೆ…ಸುಸ್ತು..!! ಇದಕ್ಕೆ ಕಾರಣ ಅತಿಯಾದ ತಾಪಮಾನ ಹಾಗೂ ಬೇಸಿಗೆಯಲ್ಲಿ ಹಗಲು ದೀರ್ಘವಾಗಿರುವುದು. ಇದರಿಂದಾಗಿ ದೇಹವು ಉಷ್ಣತೆಯನ್ನು ಕಡಿಮೆಗೊಳಿಸುವುದಕ್ಕೋಸ್ಕರ ಅತಿಯಾಗಿ ಬೆವರುತ್ತದೆ. ದೇಹದ 60-65 % ಭಾಗವು ನೀರಿನಿಂದ ಕೂಡಿದೆ.ಹಾಗಾಗಿ ಶರೀರದಿಂದ ಎಷ್ಟು ಪ್ರಮಾಣದ ನೀರು ಹೊರ ಹೋಗುತ್ತದೋ ಅಷ್ಟೇ ಪ್ರಮಾಣದ ಮರು ಪೂರೈಕೆ ಅತ್ಯಗತ್ಯ. ಇಲ್ಲವಾದಲ್ಲಿ ಶಾರೀರಿಕ ನಿರ್ಜಲೀಯತೆ(ಡಿಹೈಡ್ರೇಷನ್)ಯು ಕಾಣಿಸಿಕೊಳ್ಳುತ್ತದೆ.
ಲಕ್ಷಣಗಳು:- ನಿರ್ಜಲೀಯತೆಯನ್ನು ನಿರ್ಧರಿಸಲು ಮೂತ್ರದ ಬಣ್ಣ ಹಗೂ ಪ್ರಮಾಣವನ್ನು ಮಾಪನವನ್ನಾಗಿ ತೆಗೆದುಕೊಳ್ಳಬಹುದು. ಮೂತ್ರದ ಪ್ರಮಾಣವು ಕಡಿಮೆಯಾಗಿದ್ದು ಅತ್ಯಂತ ಹಳದಿ ಬಣ್ಣದಿಂದ ಕೂಡಿದ್ದಾಗಿದ್ದರೆ ಅದು ನಿರ್ಜಲೀಯತೆಯನ್ನು ಸೂಚಿಸುತ್ತದೆ.ಇದಲ್ಲದೆ ಅತಿಯಾದ ಬಾಯಾರಿಕೆ, ಸುಸ್ತು,ನಿದ್ದೆ ತೂಗುವುದು,ಜಡತ್ವ, ತಲೆನೋವು, ಮಾಂಸ ಖಂಡಗಳಲ್ಲಿ ನೋವು, ರಕ್ತದೊತ್ತಡದಲ್ಲಿ ಕುಸಿತ,ಜ್ವರ, ಮಾನಸಿಕ ಒತ್ತಡ ಮೊದಲಾದವುಗಳೂ ನಿರ್ಜಲೀಯತೆಯಿಂದ ಉಂಟಾಗಬಹುದು.
ಹೇಗೆ ನಿವಾರಿಸುವುದು?
ಇದಕ್ಕೆ ಪ್ರಮುಖ ಪರಿಹಾರ ಎಂದರೆ ಶರೀರದ ಉಷ್ಣಾಂಶವನ್ನು ಕಡಿಮೆಗೊಳಿಸುವಂತಹ ಆಹಾರ ದ್ರವ್ಯಗಳ ಸೇವನೆ ಹಾಗೂ ವಿಹಾರ/ಕ್ರಮಗಳ ಪಾಲನೆ.
- ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನಷ್ಟು ಕುದಿಸಿ ತಣಿಸಿದ ನೀರನ್ನು ಕುಡಿಯುವುದು. ನೀರನ್ನು ಕುದಿಸುವಾಗ ದಾಹಶಾಮಕ ದ್ರವ್ಯಗಳಾದ ಏಲಕ್ಕಿ, ಜೀರಿಗೆ, ನನ್ನಾರಿ ಬೇರು, ಲಾವಂಚ ಬೇರು, ಖದಿರ/ಕಾಚು, ಸಪ್ಪಂಗ ಚಕ್ಕೆ(ಇದು ನೀರಿಗೆ ಆಕರ್ಷಕ ಬಣ್ಣವನ್ನು ಕೊಡುತ್ತದೆ)-ಇವುಗಳನ್ನು ಸೇರಿಸಬಹುದು.
- ಎಳನೀರು-ಇದು ನೈಸರ್ಗಿಕವಾಗಿ ದೊರೆಯುವಂತಹ ಉತ್ತಮ ಪಾನೀಯವಾಗಿದೆ. ಇದರಲ್ಲಿ ನೀರಿನಂಶದ ಜೊತೆಗೆ ಇಲೆಕ್ಟ್ರೊಲೈಟ್, ಖನಿಜಗಳು, ಕಾರ್ಬೋಹೈಡ್ರೇಟ್ ಹಾಗೂ ವಿಟಾಮಿನ್‌ಗಳು ಹೇರಳ ಪ್ರಮಾಣದಲ್ಲಿ ದೊರೆಯುತ್ತವೆ.
- ಷರಬತ್ತು(ಕೋಕಂ, ಲಿಂಬೆ,ನನ್ನಾರಿ,ಕರಬೂಜ,ಕಿತ್ತಳೆ,ಕಲ್ಲಂಗಡಿ)ಗಳನ್ನು ಹಾಗೂ ಮಜ್ಜಿಗೆ ನೀರನ್ನು ಕುಡಿಯುವುದು.
- ಅಧಿಕ ನೀರಿನಿಂದ ಕೂಡಿದಂತಹ ಹಣ್ಣುಗಳನ್ನು ಸೇವಿಸುವುದು.
- ಊಟದಲ್ಲಿ ಸಲಾಡ್,ತಂಬುಳಿಗಳನ್ನು ಬಳಸುವುದು.
- ಬೇಸಿಗೆಯಲ್ಲಿ ಜೀರ್ಣಶಕ್ತಿ ಕಡಿಮೆ ಇರುವುದರಿಂದ ಲಘು ಆಹಾರವನ್ನು ಸೇವಿಸಬೇಕು.
ದಿನದಲ್ಲಿ ಅತ್ಯಂತ ತೀಕ್ಷ್ಣವಾದ ಬಿಸಿಲು ಇರುವ ಸಮಯದಲ್ಲಿ(ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ) ಹೊರಗೆ ಹೋಗುವುದನ್ನು ಆದಷ್ಟು ತಪ್ಪಿಸಬೇಕು. - ತಿಳಿ ಬಣ್ಣದ, ಸಡಿಲವಾದ ಹತ್ತಿಯ ಉಡುಪನ್ನು ಧರಿಸಬೇಕು.(ಇದು ಸೂರ್ಯನ ಕಿರಣಗಳನ್ನು ಪ್ರತಿಫಲಿಸುತ್ತದೆ ಹಾಗೂ ದೇಹವನ್ನು ತಂಪಾಗಿರಿಸುತ್ತದೆ.)
ವರ್ಜ್ಯ:- ಕಾಫ಼ಿ,ಅಲ್ಕೋಹಾಲ್,ಎಣ್ಣೆಯಲ್ಲಿ ಕರಿದಂತಹ ಆಹಾರ,ಖಾರ ಮಸಾಲೆಯುಕ್ತ ಆಹಾರಗಳನ್ನು ವರ್ಜಿಸಬೇಕು. ಇವೆಲ್ಲವೂ ದೇಹಕ್ಕೆ ರೂಕ್ಷತೆಯನ್ನು ಕೊಡುತ್ತವೆ.
ಈ ಎಲ್ಲಾ ಕ್ರಮಗಳನ್ನು ಪಾಲಿಸಿಕೊಂಡರೆ ನಿರ್ಜಲೀಯತೆಯಿಂದ ಶರೀರವನ್ನು ರಕ್ಷಿಸಿಕೊಳ್ಳಬಹುದು ಹಾಗೂ ಬೇಸಿಗೆಯ ಸಮಯವನ್ನು ಆರೋಗ್ಯಪೂರ್ಣವಾಗಿ ಕಳೆಯಬಹುದು.,
– ಡಾ.ಹರ್ಷಿತಾ ಎಂ.ಎಸ್ , ಉಡುಪಿ
ಮಾಹಿತಿಪೂರ್ಣ 🙂
Useful info
ಧನ್ಯವಾದಗಳು