ಯುಗಾದಿ
ಋತುಗಳುರುಳಿ ಮನಗಳರಳಿಸಿ ನವಚೈತನ್ಯದಿ ತೊನೆದಾಡುತ
ಬಂತದಗೊ ಎಂದಿನಂತೆ ಉಗಾದಿ.
ಮಾಮರಗಳ ತೋಪ ತುಂಬ ಹೂಗಳರಳಿ ,
ಚಿಗುರೆಲೆಗಳ ಚೊಗರು ರಸವ ಸವಿಯುತಿವೆ ಕೋಗಿಲೆಗಳು ಸ್ವಾದದಿ.
ವರ್ಷ ಕೂಡ ಹರುಷ ತುಂಬಿ ,
ಬಿಸಿಲ ಬೆಗೆಯ ಮರೆಸಲಲ್ಲಿ ಧಾರೆಯಾಗಿ ಭುವಿಗಿಳಿಯೆ,
ನಲುಗಿ ಹೋದ ಗಿಡಮರಗಳೂ ತಲೆದೂಗಿ ನಗಲಲ್ಲಿ ಹೊಸತನದ ಉದಯವು.
ಹಳತು ನೋವು, ಕೆಟ್ಟ ಮುನಿಸು,ಕುಹಕ ಬುದ್ದಿ ಇಂದಿಲ್ಲಿಗೆ ಅಳಿಯಲಿ.
ಆದಿ ಅಂತ್ಯದರಿವಿರದ ಬದುಕಿನಲ್ಲಿ
ಸವಿನೆನಪಿನ ಸುಸ್ವರಗಳೆ ಉಲಿಯಲಿ.
ಹೊಂಗೆ ಮರವದು ಚಿಗುರಿ ನಗುತಿರೆ
ಭೃಂಗ ಸಂಕುಲ ಪುಳಕವಾಗುತ ಹಾಡಿತು.
ನವಸಂವತ್ಸರದ ಅಲೆಗಳಲ್ಲಿ ಮೀಯುತಲ್ಲಿ
ಅನುಭವದ ಆಳವದು ವ್ಯಕ್ತಿತ್ವವನೆ ತೀಡಿತು.
.
ಭೂರಮೆಯ ಸೂರ ತುಂಬ ಎಲ್ಲೆಲ್ಲೂ ಹೊಸಚಿಗುರು,
ಮೊಗ್ಗರಳಿದ ಹೂವ ಘಮಾಘಮ.
ಹೃದಯದಂಗಳದ ತುಂಬ ಕನಸುಗಳ ಸಖ್ಯದಲಿ ಭಾವನೆಗಳ ಸಮಾಗಮ.
ಹೊಸವರ್ಷದ ಆದಿಯದು ತರಲೆಲ್ಲಾ ಹರ್ಷೊಲ್ಲಾಸದ ಸಂಭ್ರಮ.
ಶ್ರಧ್ಧೆಯೊಂದೆ ಸ್ಪೂರ್ತಿಯಾಗೆ ,ಜಯದ ಹಾದಿ ಕ್ರಮಿಸುತಲ್ಲಿ ,ಅಗಲಲ್ಲಿ ನೋವು ನಲಿವ ಸಂಗಮ.
ಸಿಹಿತನದ ಮೌಲ್ಯವನರಿಸಲಲ್ಲಿ ,ತುಸು ಕಹಿಯ ಸ್ಪರ್ಶ ದಿಟವಿಹುದು ಬಾಳಿಗೆ.
ಅದಕೆಂದೇ ಮಾಡುವರು ಉಗಾದಿ ,
ಆಚರಣೆಗೆ ಬೇವಕಹಿ ಬೇಳೆ ಹೋಳಿಗೆ
– ಲತಾ(ವಿಶಾಲಿ)ವಿಶ್ವನಾಥ್