ಯುಗಾದಿಯ ವಿಶೇಷತೆಗಳು
ಯುಗಾದಿ ಎಂದರೆ ಸೃಷ್ಟಿಯ ಆರಂಭ,ಯುಗಾರಂಭ. ಇಲ್ಲಿ ಹೊಸ ವರ್ಷಾರಂಭ ಎಂಬುದೇ ಅರ್‍ಥೈಕೆ. ನಮ್ಮ ಧಾರ್ಮಿಕ ಪದ್ಧತಿ(ಪಂಚಾಂಗ) ಪ್ರಕಾರ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿ ಎಂಬೆರಡು ಆಚರಣೆಗಳು.ವಸಂತ ಋತುವಿನಲ್ಲಿ ಬರುವ ಈ ಹಬ್ಬಗಳಿಗೆ ಮದುಮಗಳಿನ ಮೆರುಗು!. ಚಿಗುರೆಲೆ ಫಲಪುಷ್ಪ ಬಿಡುವ ಕಾಲ!!. ಕೋಗಿಲೆ ಗಾನ!!!. ಇವುಗಳೆಲ್ಲ ಕಾಲ ವಿಶೇಷತೆಗಳು. ‘ಯುಗ-ಯುಗಾದಿ ಕಳೆದರೂ ಯುಗಾದಿ ಮತ್ತೆ ಬರುತಿದೆ| ಹೊಸ ವರುಷಕೆ ಹೊಸತು-ಹೊಸತು ತರುತಿದೆ’ ಇದು ರಸಋಷಿ ದ.ರಾ.ಬೇಂದ್ರೆಯವರು ರಚಿಸಿದ ಹಾಡಿನ ಮೊದಲ ಸಾಲು.
ಚಾಂದ್ರಮಾನ ಯುಗಾದಿಃ– ಚಂದ್ರನ ಬೆಳಕಿಗೆ ಹಾಗೂ ಚಲನೆಗೆ ಸೂರ್ಯನೇ ಆಧಾರವೆಂಬುದನ್ನರಿತ ನಮ್ಮ ಪೂರ್ವಜರು ಲೆಕ್ಕಾಚಾರ ಹಾಕಿ ಚಾಂದ್ರಮಾನ ಯುಗಾದಿಯ ದಿನವನ್ನು ಕಂಡುಕೊಂಡು ಹೊಸವರ್ಷ ಆರಂಭಿಸಿದರು.ಆ ದಿನವೇ ನವ ವರ್ಷಾರಂಭ.ಶಾಲಿವಾಹನ ಶಕೆ ಆರಂಭ. ಹಾಗೆಯೇ ಹೊಸ ಪಂಚಾಂಗ ಪ್ರಾರಂಭ. ಇದು ಚೈತ್ರಮಾಸದ ಶುಕ್ಲ ಪಕ್ಷದ ಪಾಡ್ಯದ ದಿನ. |ಚೈತ್ರಮಾಸಿ ಜಗದ್ಬ್ರಹ್ಮಾ ಸಸರ್ಜ ಪ್ರಥಮೇ ಹನಿ| ಶುಕ್ಲಪಕ್ಷೇ ಸಮಗ್ರಂತು ತದಾ ಸೂರ್ಯೋದಯೇ ಸತಿ|| ಇದು ಸಂಸ್ಕೃತ ಶ್ಲೋಕ. ಚೈತ್ರಮಾಸದ ಪ್ರಾರಂಭದ ಸೂರ್ಯೋದಯದ ವೇಳೆ; ಚತುರ್ಮುಖ ಬ್ರಹ್ಮನು ಸಂಪೂರ್ಣ ಜಗತ್ತಿನ ಸೃಷ್ಟಿ ಮಾಡಿದನು ಎಂಬುದಾಗಿ ಪೂರ್ವಜರ, ಪುರಾಣಕಾರರ ಹೇಳಿಕೆ.
ಆಚರಣೆಃ- ಅಂದು ಮಂಗಳ ಸ್ನಾನ, ಹೊಸವಸ್ತ್ರಧಾರಣೆ, ಮನೆಮುಂದೆ ತಳಿರು-ತೋರಣ,ರಂಗೋಲಿ ವೈವಿಧ್ಯ, ಪಂಚಾಂಗ ಶ್ರವಣ, ಸಿಹಿ ಅಡುಗೆ ಮಾತ್ರವಲ್ಲ ಬೇವು-ಬೆಲ್ಲ ಸೇವನೆ ಹಾಗೂ ಹಂಚುವಿಕೆ. ಕಷ್ಟ-ಸುಖಗಳೆರಡನ್ನೂ ಒಂದೇ ಸಮನಾಗಿ ಸ್ವೀಕರಿಸಬೇಕು, ಹಂಚಿಕೊಳ್ಳಬೇಕು ಎಂದರೆ; ನೆರೆಹೊರೆಯವರ,ಬಂಧುಗಳ ಕಷ್ಟ-ಸುಖಕ್ಕೆ ನಾವು ಸ್ಪಂಧಿಸಬೇಕು ಎನ್ನುವ ತತ್ವವೇ ಬೇವು-ಬೆಲ್ಲ ಸೇವನೆಯ,ಹಂಚುವ ಉದ್ದೇಶ.
ಇವಿಷ್ಟು ಪ್ರತಿವರ್ಷದ ಆಚರಣೆಯಾದರೆ; ಇದಕ್ಕೂ ಹೊರತಾಗಿ ಆ ಮನೆಯಲ್ಲಿ ಆ ವರ್ಷ ಮಗಳ ಮದುವೆ ಮಾಡಿದರೆ ನವ ದಂಪತಿಗಳನ್ನು ಕರೆಸಿ ಸನ್ಮಾನ ಮಾಡಿ,ಉಡುಗೊರೆ ಕೊಡುವ ಸಂಪ್ರದಾಯವಿದೆ.
ಸೌರಮಾನ ಯುಗಾದಿಃ–ಭೂಮಿಯಲ್ಲಿ ಆಗುವ ಕಾಲ ಪರಿವರ್ತನೆಗೆ ಸೂರ್ಯನೇ ಕಾರಣವೆಂದು;ಸೂರ್ಯ ಮೇಷರಾಶಿಗೆ ಬರುವ ದಿನವನ್ನು ಲೆಕ್ಕಹಾಕಿ ಸೌರಮಾನ ತಿಂಗಳು ಆರಂಭವಾಯಿತು.ಇದನ್ನು ಹೆಚ್ಚಾಗಿ ಕೇರಳೀಯರು ವಿಷು ಸಂಕ್ರಮಣವೆಂದು ಆಚರಿಸುವರು. ಈ ಹೊಸವರ್ಷವಕ್ಕೆ ವಿಷುಕಣಿದಿನ ಎಂಬುದಾಗಿ ಕರೆದು, ಎಲ್ಲಾ ಸುವಸ್ತುಗಳನ್ನೂ ಬಂಗಾರ ಆಭರಣಗಳನ್ನೂ ದೇವರಕೋಣೆಯಲ್ಲಿಟ್ಟು ಮನೆಮಹಿಳೆ ದೀಪ ಬೆಳಗಿ ಶಂಖ ಊದಿ, ಮತ್ತೆ ಮಕ್ಕಳನ್ನೆಬ್ಬಿಸಿ ಪ್ರಾತಃಕ್ಕಾಲ ಅವರಿಗೆ ಪ್ರಥಮತಃ ಕಣಿದರ್ಶನ ಮಾಡಿಸುವರು. ಮತ್ತೆ ಹಿರಿಯರ ಆಶೀರ್ವಾದ ಪಡೆದು, ಕಿರಿಯರಿಗೆ ಆಶೀರ್ವಾದ ನೀಡುವುದರ ಮೂಲಕ ಆದಿನ ಪ್ರಾರಂಭಗೊಳ್ಳುವುದು.ಉದ್ಯೋಗಿಗಳೂ ಆ ದಿನದಂದು ತಮ್ಮ ತಮ್ಮ ಮೂಲಮನೆಗೆ ತೆರಳಿ ಹಿರಿಯರಾಶೀರ್ವಾದ ಪಡೆದು ಸಿಹಿಯೂಟ ಉಂಡು ಮರಳುವ ಪದ್ಧತಿಯಿದೆ.
ಗದ್ದೆ ಬೇಸಾಯದವರು ವಿಷುಕಣಿದಿನ ಎತ್ತುಗಳ ಸಹಿತ ನೊಗ-ನೇಗಿಲು ಹಿಡಿದು ಗದ್ದೆ ಹೂಡದೆ ಇರಲಾರರು. ಮುಂದೆ ಯಾವಾಗಬೇಕಾದರೂ ಮುಂಗಾರು ಮಳೆ ಬರು ಸಾಧ್ಯತೆ ಇದೆಯಾದ್ದರಿಂದಲೂ ಇದೊಳ್ಳೆಯ ಮುಹೂರ್ತವಾದ್ದರಿಂದಲೂ ಗದ್ದೆಗೆ ನೇಗಿಲು ಊರಲು ಪ್ರಾರಂಭಿಸುತ್ತಾರೆ.
ಆಚರಣೆಯ ಮಹತ್ವಃ-ಯುಗಾದಿ ದಿನ ಪಂಚಾಂಗ ಶ್ರವಣ ಮಾಡುವುದರಿಂದ ವರ್ಷಪೂರ್ತಿ ಸಿಗುವ ಒಟ್ಟುಫಲ ಅಲ್ಲದೆ ಅವರವರ ರಾಶಿಭವಿಷ್ಯವನ್ನೂ ತಿಳಿಯಬಹುದು. ಹಬ್ಬ-ಹರಿದಿನಗಳನ್ನು ಆಚರಿಸದಿದ್ದರೆ ಜೀವನಕ್ಕೆ ಅರ್ಥ ಇಲ್ಲ.( ಹರಿದಿನ ಅಂದ್ರೆ ಏಕಾದಶಿ ದಿನ).ತಲೆ ತಲಾಂತರದಿಂದಲೇ ಆಚರಿಸಿಕೊಂಡು ಬರುವ ಸಂದರ್ಭದಲ್ಲಿ ಪರಸ್ಪರ ಎಲ್ಲರೂ ಕೂಡುವಿಕೆಯಲ್ಲಿ ಕಷ್ಟ-ಸುಖಗಳ,ಕ್ಷೇಮಸಮಾಚಾರಗಳ ವಿನಿಮಯ ಮಾಡಿಕೊಂಡರೆ ಆಧ್ಯಾತ್ಮಿಕಭಾವ, ದೈವೀಕೃಪೆ ಇವುಗಳೆಲ್ಲ ಮೇಳೈಸಿಗೊಂಡು ಮನಶ್ಶಾಂತಿ ಸಿಗುವುದರಲ್ಲಿ ಸಂದೇಹವಿಲ್ಲ. ನಮ್ಮ ಸಂಸ್ಕೃತಿ ಸಂಪ್ರದಾಯವೇ ನಮ್ಮ ತಾಯಿಬೇರು. ಈ ತಾಯಿಬೇರು ಕಡಿದರೆ ನಮ್ಮ ನೆಲೆ ತಪ್ಪುವುದೂ ನಿಶ್ಚಿತ.
ಕೊನೆಯದಾಗಿ ಈ ವಿಲಂಬನಾಮ ಸಂವತ್ಸರವು ಎಲ್ಲರಿಗೂ ವಿಶೇಷ ಅವಕಾಶ,ಆಯುರಾರೋಗ್ಯ, ಸುಖಸಂಪತ್ತು ದೊರೆತು ರಾಮರಾಜ್ಯವಾಗಲಿ ಎಂದು ಹಾರೈಸೋಣ. |ಸರ್ವೇಜನಾ ಸುಖಿನೋಭವಂತು|
-ವಿಜಯಾಸುಬ್ರಹ್ಮಣ್ಯ, ಕುಂಬಳೆ.
ವಿಜಯಾ ಸುಬ್ರಮಣ್ಯ ಕುಂಬ್ಳೆ ಯವರು ಚಾಂದ್ರಮಾನ ಯುಗಾದಿಯ ಮತ್ತು ಸೌರಮಾನ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಲೇಖನ ಪ್ರಕಟಿಸಿದ್ದಾರೆ,ಒಂದೆಡೆ ಹೇಳಿದರು,ಅನುಕೂಲವಾಗಿದೆ
ಧನ್ಯವಾದಗಳು ಶಂಕರನಾರಾಯಣ ಭಟ್ಟರಿಗೆ
ಸೌರಮಾನ ಯುಗಾದಿಯ ಬಗ್ಗೆ ಆ ಸಮಯಕ್ಕೆ ಬರೆಯುವವಳಿದ್ದೇನೆ.