ರಂಗಪ್ರವೇಶದಲ್ಲಿ ರಂಗೇರಿಸಿದ ವೃಂದಾ ಪೂಜಾರಿ
ನೃತ್ಯವೆಂಬುದು ಶಾಸ್ತ್ರೀಯ ಕಲೆಗಳಲ್ಲಿ ಒಂದಾದರೂ ಅದೊಂದು ಆತ್ಮಾನುಭವಕ್ಕೆ ಭಾವದ ರೂಪು ಕೊಟ್ಟು ಅಭಿವ್ಯಕ್ತ ಪಡಿಸುವ ಅನುಭೂತಿ ಎಂದರು ತಪ್ಪಲ್ಲ.
ಈ ಭಾವದ ಸ್ಪಂದನವು ಗುರುಗಳಿಂದ ಶಿಷ್ಯರಿಗೆ ತಮ್ಮ ಮಾರ್ಗದರ್ಶನದಲ್ಲಿ ನೀಡುವ ವಿದ್ಯೆಯ ಭಾವುಕತೆ ಆನಂದತೆಗಳ ಪರಾಕಾಷ್ಠೆ ;ವಿಶಿಷ್ಟ ಅನುಭವ… ಮಾಡಿದ ನೃತ್ಯ ತಾಪಸಿಗಳಿಗೂ ನೋಡುವ ಮಾನಸಿಗಳಿಗೂ . ಇದಕ್ಕೊಂದು ಅನುರೂಪವಾಗಿ ಅನುಭವ ದೊರಕಿದ್ದು ಇತ್ತೀಚಿಗೆ ಅಬುಧಾಬಿಯ ಇಂಡಿಯನ್ ಸೋಶಿಯಲ್ ಸೆಂಟರ್ ನಲ್ಲಿ ನಡೆದ “ವೃಂದಾ ಪೂಜಾರಿ” ಯವರ ರಂಗಪ್ರವೇಶ ಕಾರ್ಯಕ್ರಮ.
ನಾಟ್ಯರ್ಪಣ ನೃತ್ಯಸಂಸ್ಥೆಯ ಗುರುಗಳಾದ ಗೀತಾ ಅಶೋಕನ್ ಅವರ ಶಿಷ್ಯೆಯರಾದ ವೃಂದಾ ಸೇರಿ ಇತರ 7 ಮಂದಿ ಗುರುವಂದನಾ ಕಾರ್ಯಕ್ರಮದ ನಂತರ ಗೆಜ್ಜೆಗಳನ್ನು ಸ್ವೀಕರಿಸಿ ಗಣಪತಿಸ್ತುತಿಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಗಣೇಶನನ್ನು ಸ್ತುತಿಸಿ ರಂಗಕ್ಕೆ ಪದಕಮಲವಿಟ್ಟು ವಿಘ್ನವಿನಾಶಕನನ್ನು ಭಜಿಸಿ ನೆರೆದವರಿಗೆ ರಸದೌತಣ ನೀಡಿದರು. ನಂತರ ನಡೆದ “ಅಲರಿಪು” ನಲ್ಲಿ ಕಲಾತ್ಮಕ ಶೈಲಿಯಲ್ಲಿ ಅಚ್ಚುಕಟ್ಟಾಗಿ ವೃಂದಾಳು ರಂಗದಲ್ಲಿ ಮಿಂಚಿದಳು. ರಾಗಮಾಲಿಕ ರಾಗದಲ್ಲಿ ಮಿಶ್ರ ಛಾಪು ತಾಳದಲ್ಲಿ ನಡೆದ “ಶಬ್ದಮ್” 20 ನಿಮಿಷಗಳ ಕಾಲ ಎಲ್ಲರು ನಿಬ್ಬೆರಗಾಗುವಂತೆ ಜಂಟಿಯಾಗಿ ಮನೋಜ್ಞವಾಗಿ ನಡೆಸಿಕೊಟ್ಟಳು.
ಕೊನೆಯಲ್ಲಿ ನಡೆದ ಕಾನಾಡ ರಾಗದಲ್ಲಿ ಆದಿತಾಳದಲ್ಲಿ ಮೂಡಿಬಂದ ತಿಲ್ಲಾನ ನೃತ್ಯದಲ್ಲಿ ಹಾಕಿದ ಹೆಜ್ಜೆ ,ಕೈಯ ಮಟ್ಟುಗಳು, ಹಾವ ಭಾವ, ಶಾರೀರ ಭಾಷೆ , ಆಂಗಿಕ ಅಭಿನಯಗಳು ಭರತನಾಟ್ಯದಲ್ಲಿ ಮುಂದೆ ಉತ್ತಮ ಭವಿಷ್ಯವಿದೆ ಎಂಬುದನ್ನು ತೋರಿಸುತ್ತಿತ್ತು. ಇತರ 7 ಮಂದಿ ಸಹ ನೃತ್ಯಗಾತಿಯರೊಂದಿಗೆ ನಡೆದ ರಂಗಪ್ರವೇಶ ಸಕಲಾಭಾವ, ಅದ್ಬುತ ದೃಶ್ಯಾನುಭಾವ, ಭಾವರಾಗಗಳ ಸಂಗಮ ಸಂಜೆಯಾಗಿದ್ದು ಪ್ರೇಕ್ಷಕರು ನೆನಪಿನಲ್ಲಿಡುವ ಕಾರ್ಯಕ್ರಮವಾಗಿತ್ತು. ಈಕೆಗೆ ನೃತ್ಯದ ಮೇಲಿರುವ ಗೌರವ, ಅಪಾರ ಪ್ರೀತಿ,ಶ್ರದ್ಧೆ, ಅಭ್ಯಾಸತೆಗಳೆಲ್ಲವೂ ರಂಗದ ಮೇಲೆ ಅಭಿವ್ಯಕ್ತವಾಗಿತ್ತು.
ವೃಂದ ಪೂಜಾರಿ ಅಬುಧಾಬಿಯ ಭಾರತೀಯ ವಿದ್ಯಾಭವನದ ಐದನೆಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ . ಯುನೈಟೆಡ್ ಅರಬ್ ಎಮಿರೆಟ್ಸ್ ನ ಅಬುಧಾಬಿಯಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ಮೂಲತಃ ಉಡುಪಿಯವರಾದ ಉಮೇಶ್ ಪೂಜಾರಿ ಹಾಗು ಆಶಿತಾ ಪೂಜಾರಿಯವರ ಮಗಳು. ಸತತ 6 ವರುಷಗಳಿಂದ ಖ್ಯಾತ ಕೂಚುಪುಡಿ, ಮೋಹಿನಿಯಾಟ್ಟಂ ಹಾಗು ಭರತನಾಟ್ಯ ನೃತ್ಯಗುರುಗಳಾದ ಗೀತಾ ಅಶೋಕನ್ ಅವರಲ್ಲಿ ಅಭ್ಯಸಿಸುತ್ತಿದ್ದಾಳೆ. ಕಳೆದ ಹಲವು ವರುಷಗಳಿಂದ ಯು.ಎ.ಇಯ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ಕೊಟ್ಟು ಭೇಷ್ ಎನಿಸಿಕೊಂಡಿದ್ದಾಳೆ. ಜಾನಪದ ಹಾಗು ಫ್ಯೂಶನ್ ನೃತ್ಯ ಪ್ರಾಕಾರಗಳನ್ನು ಅಷ್ಟೇ ಆಸ್ಥೆಯಿಂದ ಕಲಿಯುವ ಈಕೆ ಇದರಲ್ಲೂ ಹಲವು ಕಡೆ ಕಾರ್ಯಕ್ರಮಗಳನ್ನು ಕೊಟ್ಟು ಸೈ ಎನಿಸಿದ್ದಾಳೆ.
ಭಗವದ್ಗೀತೆಯನ್ನು ತುಂಬಾ ಇಷ್ಟ ಪಡುವ ಈಕೆ ಬಾಲ ಗೋಕುಲಂ ಸಂಸ್ಥೆ ನಡೆಸಲ್ಪಡುವ ಬಾಲಭಾರತಿ ತರಗತಿಯನ್ನು ತಪ್ಪದೆ ಹಾಜರಾಗಿ 16 ಹಾಗು 17 ನೆಯ ಅಧ್ಯಾಯವನ್ನು ಉತ್ಕೃಷ್ಟ ಹಾಗು ಶುದ್ಧ ಉಚ್ಚಾರಣೆಯಲ್ಲಿ ಕಂಠಪಾಠ ಮಾಡಿದ್ದಾಳೆ. ಈ ಸಂಸ್ಥೆ ನಡೆಸಲ್ಪಡುವ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗಾಗಿಸಿದ್ದಾಳೆ. ಚಿನ್ಮಯ ಮಿಷನ್ ನಡೆಸುವ ಭಗವದ್ಗೀತಾ ಪಠನ ಸ್ಪರ್ಧೆಯಲ್ಲಿ ಬಹುಮಾನವನ್ನು ಪಡೆದಿರುತ್ತಾಳೆ. ಇಡೀ ಭಗವದ್ಗೀತೆಯನ್ನು ನೀರಿನಂತೆ ಕರಗತ ಮಾಡಿಕೊಳ್ಳುವ ಅಭಿಲಾಷೆ ಈಕೆಯದು. ತನ್ನ ತಮ್ಮನನ್ನು ಅತ್ಯಂತ ಇಷ್ಟ ಪಡುವ ಇವಳು ತಮ್ಮನಿಗೂ ಭಗವದ್ಗೀತೆ ಕಲಿಸುವ ಹೊಣೆ ಹೊತ್ತಿದ್ದಾಳೆ.
ವಿದ್ಯಾಭ್ಯಾಸದಲ್ಲೂ ಮುಂದೆ ಇರುವ ಈಕೆ ಆಟೋಟ ಸ್ಪರ್ಧೆಗಳಲ್ಲೂ ಅಂತರ್ಶಾಲಾ ಮಟ್ಟದಲ್ಲಿ ಮಿನುಗಿದವಳು. ಕರ್ನಾಟಕ ಸಂಗೀತವನ್ನು ಮೈಸೂರಿನ ರತ್ನ ಚಂದ್ರಶೇಖರ್ ಅವರ ಬಳಿ ಅಭ್ಯಸಿಸುತ್ತಿರುವ ಈಕೆಗೆ ಚಿತ್ರಕಲೆ, ಸ್ಕೇಟಿಂಗ್,ಪಿಯಾನೋ ನುಡಿಸುವುದು, ಈಜುವಿಕೆಯಲ್ಲೂ ಎಲ್ಲಿಲ್ಲದ ಆಸಕ್ತಿ. ಅಮ್ಮ ಆಶಿತಾರಿಗೆ ಮಗಳ ಬಗ್ಗೆ ನೂರುಮಾತು “ನಾನಂತು ಡ್ಯಾನ್ಸ್ ಕಲಿತಿಲ್ಲ.ನನ್ನ ಮಗಳ ನೃತ್ಯದಲ್ಲಿ ನನ್ನನ್ನು ನಾನು ಕಾಣುತ್ತೇನೆ. ” ಇಂತಹ ಸಮರ್ಪಣಾ ಭಾವದ ಅಮ್ಮ೦ದಿರು ದೊರಕಿದರೆ ಎಂಥ ಮಕ್ಕಳು ಉತ್ತಮ ಕಲಾವಿದರಾಗಿ ರೂಪುಗೊಳ್ಳುವುದರಲ್ಲಿ ಎರಡು ಮಾತಿಲ್ಲ.
ಜೀವನದಲ್ಲಿ ಮುಂದೆ ಉತ್ತಮ ಗಾಯಕಿ ಹಾಗು ನೃತ್ಯ ಕಲಾವಿದೆಯಾಗಬೇನೆಂಬ ಮಹದಾಸೆ ನನ್ನದು ಎಂದು ನಗುತ್ತ ಹೇಳುತ್ತಾಳೆ ವೃಂದ. ಇವಳ ಈ ಆಸೆಗಳು ನೆರವೇರಲಿ, ಭವಿಷ್ಯದ ಉತ್ತಮ ಕಲಾವಿದೆಯಾಗಿ ಹೊರಹೊಮ್ಮಲಿ ಎಂದು ನಮ್ಮ ನಿಮ್ಮೆಲ್ಲರ ಹಾರೈಕೆ ಆಶೀರ್ವಾದಗಳು 10ರ ಹರೆಯದ ಈಕೆಯ ಮೇಲಿರಲಿ.
ಬರಹ: ರಜನಿ ಭಟ್, ಅಬುಧಾಬಿ
ಕುಮಾರಿ ವೃಂದಾಳ ಪ್ರತಿಭೆಗೆ ಅಭಿನಂದನೆಗಳು. ಆಕೆಗೆ ಇನ್ನಷ್ಟು, ಮತ್ತಷ್ಟು ಯಶಸ್ಸು ಸಿಗಲಿ.
ಥ್ಯಾಂಕ್ಸ್ Hemaji