ರುಚಿಯೂ ಆರೋಗ್ಯವೂ : ಬೋರೆಹಣ್ಣು
ಚಳಿಗಾಲ ಕೊನೆಯಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಗೋಲಿ ಗಾತ್ರದ ಕಂದು ಬಣ್ಣದ ಎಲಚಿ ಹಣ್ಣುಗಳು ಕಾಣಸಿಗುತ್ತವೆ. ಬಯಲುಸೀಮೆಯಲ್ಲಿ ಸಂಕ್ರಾಂತಿ ಹಬ್ಬದ ದಿನ ಎಳ್ಳು-ಬೆಲ್ಲ, ಕಬ್ಬಿನ ಜತೆಗೆ ಎಲಚಿ ಹಣ್ಣನ್ನೂ ತಟ್ಟೆಯಲ್ಲಿರಿಸಿ ವಿನಿಮಯ ಮಾಡುವ ಸಂಪ್ರದಾಯ. ಇದೇ ವರ್ಗಕ್ಕೆ ಸೇರಿದ ತುಸು ದೊಡ್ಡದಾದ ಅಂಡಾಕಾರದ ‘ಬೋರೆಹಣ್ಣು’ ಅಥವಾ ಜುಜುಬೆ ಫ್ರುಟ್ ಕೂಡ ಜನವರಿ-ಫೆಬ್ರವರಿ ತಿಂಗಳಲ್ಲಿ ಸಿಗುತ್ತದೆ. ಬೋರೆಹಣ್ಣಿನ ಸಸ್ಯಶಾಸ್ತ್ರೀಯ ಹೆಸರು Ziziphus Jujube. ಚೈನೀಸ್ ಡೇಟ್ಸ್, ರೆಡ್ ಡೇಟ್ಸ್ ಇತ್ಯಾದಿ ಹೆಸರುಗಳೂ ಇವೆ. ಭಾರತದಲ್ಲಿ ಬೋರೆಹಣ್ಣು, ಬಾರೆಕಾಯಿ, ಬೇರ್ ಫ್ರುಟ್ , ಜುಜುಬೆ ಫ್ರುಟ್ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತದೆ.
ಬರಪೀಡಿತ ಪ್ರದೇಶದಲ್ಲಿಯೂ, ಒಣಭೂಮಿಯಲ್ಲಿಯೂ, ಗುಡ್ಡಗಾಡುಗಳಲ್ಲಿಯೂ ಹೆಚ್ಚಿನ ಆರೈಕೆಯಿಲ್ಲದೆ ಫಸಲು ಕೊಡುವ ಸಾಮರ್ಥ್ಯ ಬೋರೆಹಣ್ಣಿಗಿದೆ.ರಾಮಾಯಣದಲ್ಲಿ ಶಬರಿಯು ರಾಮನಿಗೆ ಬೋರೆಹಣ್ಣುಗಳನ್ನು ಕೊಟ್ಟಳೆಂಬ ನಂಬಿಕೆ. ಬಹಳ ಹಿಂದಿನ ಕಾಲದಿಂದಲೂ ಬೋರೆಹಣ್ಣು ಬೆಳೆಯಲಾಗುತ್ತಿತ್ತು ಎಂಬುದಕ್ಕೆ ಇದೇ ಪುರಾವೆಯಾಗುತ್ತದೆ. ನೀರಿನಂಶ, ನಾರಿನಂಶ, ಶರ್ಕರಪಿಷ್ಟ, ಪ್ರೊಟೀನ್, ವಿಟಮಿನ್ ಸಿ, ಎ ಮತ್ತು ಬಿ ಕಾಂಪ್ಲೆಕ್ಸ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಮೆಗ್ನೇಶಿಯಂ ಇತ್ಯಾದಿ ಪೋಷಕಾಂಶಗಳಗೊಂಡ ಬೋರೆಹಣ್ಣು ಆರೋಗ್ಯಕ್ಕೆ ಬಹಳ ಉತ್ತಮವಾದುದು. ಇದರ ವಿಶಿಷ್ಟ ಗುಣಗಳಿಂದಾಗಿ ಬೋರೆಹಣ್ಣನ್ನು ‘ಬಡವರ ಸೇಬು’ ಎಂದೂ ಕರೆಯುತ್ತಾರೆ.
ಕರ್ನಾಟಕದಲ್ಲಿ, ಕಡಿಮೆ ಮಳೆ ಬೀಳುವ ಜಿಲ್ಲೆಗಳಾದ ವಿಜಾಪುರ, ರಾಯಚೂರು , ಬೀದರ್, ಗುಲ್ಬರ್ಗಾ ಇತ್ಯಾದಿ ಜಿಲ್ಲೆಗಳಲ್ಲಿ ಬೋರೆಹಣ್ಣನ್ನು ವಾಣಿಜ್ಯ ಬೆಳೆಯಾಗಿ ಬೆಳೆಸುತ್ತಾರೆ. ಮಳೆಗಾಲದಲ್ಲಿ ನಾಟಿ ಮಾಡಿದ ಸಸಿಗಳು ಎರಡು ವರ್ಷದಿಂದಲೇ ಫಲ ಕೊಡಲಾರಂಭಿಸುತ್ತವೆ. ಸೊಂಪಾಗಿ ಬೆಳೆದ ಮರವು 40 ಅಡಿ ಎತ್ತರದ ವರೆಗೂ ಬೆಳೆದು ಹಾಗೂ ಹಲವಾರು ವರ್ಷ ಫಸಲು ಕೊಡಬಲ್ಲುದು. ಒಂದು ಮರದಲ್ಲಿ 150 ಕಿಲೋ ವರೆಗೆ ಹಣ್ಣುಗಳನ್ನು ಪಡೆಯಬಹುದು
ಕಂದು ಬಣ್ಣದ ಬೋರೆಹಣ್ಣಿನಲ್ಲಿ ಬಿಳಿಯಾದ ತಿರುಳು ಮತ್ತು ಮತ್ತು ಗಟ್ಟಿಯಾಗಿ ತಿನ್ನಲಾಗದ ಒಂದು ದೊಡ್ಡ ಬೀಜವಿರುತ್ತದೆ. ನಸು ಸಿಹಿ, ತುಸು ಹುಳಿ ರುಚಿ ಇರುವ ತಿರುಳು ತಿನ್ನಲು ಚೆನ್ನಾಗಿರುತ್ತದೆ. ಹಸಿರು ಬಣ್ಣದ ಬಲಿತ ಕಾಯಿಗಳನ್ನು ಕಿತ್ತು ವಾರದ ವರೆಗೂ ಇಟ್ಟುಕೊಂಡು ತಿನ್ನಬಹುದು. ಕಂದು ಬಣ್ಣದ ಹಣ್ಣುಗಳಾದಾಗ ಸಿಹಿ ರುಚಿ ಹೆಚ್ಚು. ಇನ್ನೂ ಕೆಲವು ದಿನಗಳಾದಾಗ ಒಣಗಿ ಖರ್ಜೂರದಂತಾಗುತ್ತದೆ .
ಸೇಬಿನಂತೆಯೇ ಬೋರೆಹಣ್ಣನ್ನು ಬಳಸಿ ಜ್ಯೂಸ್ , ಜ್ಯಾಮ್, ಮಿಲ್ಕ್ ಶೇಕ್, ಪುಡ್ಡಿಂಗ್, ಕೇಕ್, ಕ್ಯಾಂಡಿ ತಯಾರಿಸಬಹುದು. ನಮ್ಮ ಸಾಂಪ್ರದಾಯಿಕ ಅಡುಗೆಗಳಾದ ಕೋಸಂಬರಿ, ಗೊಜ್ಜು, ಹಲ್ವಾ ಇತ್ಯಾದಿ ಅಡುಗೆಗಳಿಗೂ ಬೋರೆಹಣ್ಣು ರುಚಿಯೆನಿಸುತ್ತದೆ. ಎಳೆಯ ಕಾಯಿಗಳಿಂದ ಉಪ್ಪಿನಕಾಯಿಯನ್ನೂ ತಯಾರಿಸಬಹುದು. ಚೀನಾ ದೇಶದಲ್ಲಿ 4000 ವರ್ಷಕ್ಕೂ ಮೊದಲೇ ಜುಜುಬೆ ಹಣ್ಣನ್ನು ಉಪಯೋಗಿಸುತ್ತಿದ್ದರಂತೆ. ಹಸಿಯಾಗಿ, ಒಣಹಣ್ಣಿನಂತೆ ಬಗೆಬಗೆ ಅಡುಗೆಗಳಲ್ಲಿ ಹಾಗೂ ಚಹಾದ ರೂಪದಲ್ಲಿ ಜುಜುಬೆ ಹಣ್ಣನ್ನು ಸೇವಿಸುವ ಪದ್ಧತಿ ಚೀನಾದಲ್ಲಿದೆ.
ಬೋರೆಹಣ್ಣಿನ ನಿಯಮಿತ ಸೇವನೆಯಿಂದಾಗಿ ಶರೀರದಲ್ಲಿರುವ ಕೆಟ್ಟ ಕೊಲೆಸ್ಟೆರಾಲ್ ಮಟ್ಟವು ಕಡಿಮೆಯಾಗಿ ರಕ್ತಪರಿಚಲನೆ ಉತ್ತಮವಾಗುವುದು, ಮೂಳೆಗಳ ಆರೋಗ್ಯ ಹೆಚ್ಚುವುದು. ಇದರಲ್ಲಿರುವ ಅಂಶಗಳು ಆರಂಭಿಕ ಹಂತದಲ್ಲಿರುವ ಕಾನ್ಸರ್ ಕಾರಕ ಕಣಗಳನ್ನು ಪ್ರತಿರೋಧಿಸುವ ಗುಣಗಳನ್ನು ಹೊಂದಿವೆ. ಸಕ್ಕರೆಯ ಅಂಶವನ್ನು ಹೊಂದಿರುವುದರಿಂದ ಹಣ್ಣನ್ನು ತಿಂದಾಗ ಶಕ್ತಿ ಹಾಗೂ ಪ್ರಸನ್ನತೆ ಲಭಿಸುವುದರ ಜೊತೆಗೆ ನಾರಿನಂಶದಿಂದಾಗಿ ಕರುಳಿನ ಆರೋಗ್ಯವೂ ಉತ್ತಮಗೊಳ್ಳುವುದು. ಬೋರೆಹಣ್ಣಿನಲ್ಲಿ ಹೇರಳವಾಗಿರುವ ವಿಟಮಿನ್ ಸಿ ಯು ಚರ್ಮ ಮತ್ತು ಕೂದಲಿಗೆ ಹೊಳಪನ್ನು ಕೊಡುತ್ತದೆ
ಬಹಳಷ್ಟು ಉತ್ತಮ ಗುಣಗಳಿದ್ದರೂ, ಬೋರೆಹಣ್ಣಿನ ವಿಶಿಷ್ಟ ಸುವಾಸನೆಯು ಹಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಹಿಡಿಸದು. ಹಾಗಾಗಿ, ನಮ್ಮ ರಾಜ್ಯದ ಹಣ್ಣಿನ ಮಾರುಕಟ್ಟೆಯಲ್ಲಿ ಬೋರೆಹಣ್ಣಿಗೆ ಪ್ರಾಧಾನ್ಯತೆ ಇದ್ದಂತಿಲ್ಲ ಹಾಗೂ ಅದರ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಲಭ್ಯತೆ ಹಾಗೂ ಮಾಹಿತಿ ತೀರಾ ಕಡಿಮೆ .
– ಹೇಮಮಾಲಾ.ಬಿ
ನಮ್ಮೂರಿನ ಬೊಗರಿ ಹಣ್ಣು…ಮರದಲ್ಲಿ ಮುಳ್ಳು ಇರುತ್ತದೇಂತ ನೆನಪು,4 ನೇ ತರಗತಿಯಲ್ಲಿರುವಾಗ ನಮ್ಮ ನಾರಾಯಣ ಮಂಗಲ ಶಾಲೆಯಲ್ಲಿ 2 ಮರ ಇತ್ತು ,ಕಾದಾಡಿ ಹೆಕ್ಕಿದ್ದೂ ಉಂಟು ..ಭಾರಿ ಇಷ್ಟ!ಮತ್ತೆ ಯಾವಾಗನೋ ಕುಂಬಳೆಯಲ್ಲಿ ಅಂಗಡಿಯಲ್ಲಿ ಮಾರಲು ಸುರು ಮಾಡಿದರು.. ಕೊಳ್ತಾ ಇದ್ದೆವು..
ರಿಯಲ್ ಟೇಸ್ಟಿ ಹಣ್ಣು
ಒಳ್ಳೆಯ ಮಾಹಿತಿ ಕೊಟ್ಟದ್ದಕ್ಕೆ ಧನ್ಯವಾದಗಳು
ಧನ್ಯವಾದಗಳು