ಗಜ಼ಲ್
ಮಳೆಯಂತೆ ಬೀಳುವ ಕನಸುಗಳ ಅರ್ಥವೇನು ಹೇಳು
ಬಣ್ಣ ತಳೆದು ನಗುವ ಮುಗಿಲುಗಳ ಅರ್ಥವೇನು ಹೇಳು
ಬನದುದ್ದ ಕುಪ್ಪಳಿಸಿ ಕೀಚೆಂದಿದೆ ಹೆಸರಿಲ್ಲದ ಹಕ್ಕಿ
ನೆನಪುಗಳಾಚೆಗೆ ನೆಗೆವ ರೆಕ್ಕೆಗಳ ಅರ್ಥವೇನು ಹೇಳು
ಬೇಸಗೆಯಲ್ಲೂ ಕಾಮನ ಬಿಲ್ಲೆ! ತುಂಬಿ ಬಂತು ಮನಸು
ಮಾತಿಗೆ ದಕ್ಕದ ನೂರು ಸ್ನೇಹಗಳ ಅರ್ಥವೇನು ಹೇಳು
ಕಾರ್ಯ-ಕಾರಣ ತಿರುಗಣಿಯಲ್ಲಿ ಸಿಲುಕಿದೆಯೇ ಜೀವ
ಸುಳಿಗಳ ಹಾಯಿಸಿ ಪೊರೆವ ಸೆಳಕುಗಳ ಅರ್ಥವೇನು ಹೇಳು
ಕೇಳುವ ‘ವಿಶು’ ಇರವ ಬೆಳಗುವ ಒಲುಮೆಗಾವ ಹಂಗು
ಎದೆಯ ತಣಿಸುವ ಸಂಜೆರಾಗಗಳ ಅರ್ಥವೇನು ಹೇಳು
* ಗೋವಿಂದ ಹೆಗಡೆ