ಅಲೆಕ್ಸಾಂಡರ್ ಗ್ರಹಾಂ ಬೆಲ್ – ಜಗತ್ತಿನ ಕಿವಿಗೆ ಫೋನ್ ನೀಡಿದವರು..

Share Button

ಡಾ. ಬಡೆಕ್ಕಿಲ ಶ್ರೀಧರ ಭಟ್


“ಮಿಸ್ಟರ್ ವಾಟ್ಸನ್, ಇಲ್ಲಿಗೆ ಬನ್ನಿ, ನಿಮ್ಮನ್ನೊಮ್ಮೆ ನೋಡಬೇಕಿದೆ!”.
ಜಗತ್ತಿನ ಮೊತ್ತಮೊದಲಿನ ದೂರವಾಣಿ ಕರೆಯಲ್ಲಿನ ಮೊದಲ ಸಂದೇಶ. ಗ್ರಹಾಂ ಬೆಲ್  ಪಕ್ಕದ ಕೋಣೆಯಲ್ಲಿದ್ದ ತನ್ನ ಆತ್ಮೀಯ ಸಹಯೋಗಿ ಥೋಮಸ್ ವಾಟ್ಸನ್ ನೊಡನೆ ಮಾತನಾಡಿದ ಈ ಪ್ರಸಿದ್ಧ ವಾಕ್ಯ ಚರಿತ್ರೆಯನ್ನು ಸೇರಿ ಅಚ್ಚಳಿಯದೇ ಉಳಿದಿದೆ. ವಾಟ್ಸನ್ ಮುಖದಲ್ಲಿ ಸಂತೃಪ್ತಿಯ ನಗೆ ಚಿಮ್ಮಿತು. ವಾಟ್ಸನ್ ಬಂದರು ಮತ್ತು ಬೆಲ್ ಅವರಿಗೆ ತಾನು ಸ್ಪಷ್ಟವಾಗಿ ಕೇಳಿಸಿದ್ದನ್ನು ತಿಳಿಸಿ ಖಾತರಿ ಪಡಿಸಿದರು. 1876 ರ ಮಾರ್ಚ್, 10 ರಂದು ಆಡಿದ ಈ ಮಾತಿನ ಅನಂತರ ಜಗತ್ತಿನಾದ್ಯಂತ ಅವೆಷ್ಟೋ ಫೋನ್ ಗಳು ಈವರೆಗೆ ರಿಂಗುಣಿಸಿರಬಹುದು. ಮುಂದೆ 1922 ರ ಅಗಸ್ಟ್, 2 ರಂದು ಗ್ರಹಾಂ ಬೆಲ್ ನಿಧನಗೊಂಡು ಅಂತ್ಯಕ್ರಿಯೆಗಳಾದಮೇಲೆ ಅಮೇರಿಕಾ ಮತ್ತು ಕೆನೆಡಾದ ಎಲ್ಲಾ ಟೆಲೆಫೋನುಗಳು ಬೆಲ್ ಅವರ ಗೌರವಾರ್ಥ ಕೆಲವು ಮಿನಿಟುಗಳ ಕಾಲ ಮೌನವಾಗಿತ್ತು. ನೀವೇ ಯೋಚಿಸಿ, ಜಗತ್ತಿನಾದ್ಯಂತ ಒಂದು ಮಿನಿಟು ಎಲ್ಲಾ ಫೋನುಗಳು ಸ್ತಬ್ದವಾದರೆ ಏನಾದೀತು? ಬೆಲ್ ಆವಿಷ್ಕರಿಸಿದ ದೂರವಾಣಿಯ ನಂತರ ಇದೇ ತತ್ವವನ್ನು ಆಧರಿಸಿ ಅವೆಷ್ಟೋ ಫೋನುಗಳು ಈಗ ಬಂದಿವೆ. ಜಗತ್ತಿನ ಮೂಲೆ, ಮೂಲೆಗಳಲ್ಲಿ ನಿರಂತರವಾಗಿ ರಿಂಗುಣಿಸುತ್ತಲೇ ಇವೆ. ಇಡೀ ಜಗತ್ತನ್ನೇ ತನ್ನ ಜಾಲಬಂಧಗಳಲ್ಲಿ ಹಿಡಿದಿಟ್ಟಿವೆ. ಹೇಗೆ ಮತ್ತು ಯಾಕೆ ಹಿಡಿದಿಟ್ಟಿವೆ ಎಂದು ವಿವರಿಸ ಹೊರಟರೆ ಈ ಲೇಖನದ ದಿಕ್ಕು ಬದಲಿಹೋದೀತು.

ನಿಜ ಹೇಳಬೇಕಿದ್ದರೆ, ಬೆಲ್ ಮುಖ್ಯವಾಗಿ ಸಂಶೋಧನೆ ಮಾಡಹೊರಟಿದ್ದು ದೂರವಾಣಿ ಉಪಕರಣವನ್ನು ಆಗಿರಲಿಲ್ಲ. ಆದರೆ ಮುಂದೆ ಅದನ್ನೇ ಮಾಡಿದರೆನ್ನುವುದು ಇನ್ನೊಂದು ವಿಚಾರ. ಬೆಲ್ ಅವರ ತಾಯಿ ಮತ್ತು ಹೆಂಡತಿ ಕಿವುಡರಾಗಿದ್ದರು. ಆಗ ಅವರ ಪ್ರಾಯ 23. ‘ಕಿವುಡ ಮತ್ತು ಮೂಗ’ರ ಸಂವಹನಕ್ಕೆ ಆಸರೆಯಾಗುವ ಒಂದು ಉಪಕರಣವನ್ನು ಕಂಡುಹಿಡಿಯಲೇ ಬೇಕು ಎನ್ನುವ ಹಂಬಲ ಅವರಿಗೆ ಉತ್ಕಟವಾಗಿತ್ತು. ಅದಕ್ಕಾಗಿಯೇ ಅವರೊಂದು ಸಂಶೋಧನಾಲಯವನ್ನು ಕಟ್ಟಿದ್ದರು. ಅದಕ್ಕೆ ಬೇಕಾಗುವ ಎಲ್ಲಾ ಆರ್ಥಿಕ ಸಹಾಯವನ್ನು ಅವರ ತಂದೆಯವರು ವಹಿಸಿದ್ದರು. ಇದು ಅವರ ಕುಟುಂಬದ ಆಕಾಂಕ್ಷೆ ಹಾಗೂ ಗುರಿಯಾಗಿತ್ತು. ಬೆಲ್ ಅವರ ಪಿತಾಮಹ, ತಂದೆ, ಇಬ್ಬರು ಸಹೋದರರು, ಇವರೆಲ್ಲರೂ ಅವರದೇ ಆದ, “ಮಾತು ಮತ್ತು ಶ್ರವಣ” ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕಂದಿನಿಂದಲೇ ಬೆಲ್ ಸಂಸಾರಕ್ಕೆ ದುರಂತಗಳ ಸರಮಾಲೆ ತಪ್ಪಿರಲಿಲ್ಲ. ಕ್ಷಯರೋಗ ಕುಟುಂಬದ ಪ್ರತಿಯೊಬ್ಬನ ಮೇಲೂ ಪ್ರಹಾರ ನೀಡಿತ್ತು. ತಾಯಿ ಮತ್ತು ಸಹೋದರರಿಬ್ಬರೂ ಈ ರೋಗಕ್ಕೆ ತುತ್ತಾದರೆ, ಯುವಕ ಗ್ರಹಾಮ್ ಬೆಲ್ ಪಾರಾಗಿದ್ದರು. ತಂದೆಯವರ ಆರೋಗ್ಯವೂ ಶಿಥಿಲವಾಗಿತ್ತು.

ಶೈಕ್ಷಣಿಕವಾಗಿ ಬೆಲ್ ಒಬ್ಬ ಸಾಧಾರಣ ವಿದ್ಯಾರ್ಥಿಯಾಗಿದ್ದರೂ, ವಿಜ್ಞಾನ ಮತ್ತು ಯಂತ್ರಗಳ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ತನ್ನ 12 ರ ಪ್ರಾಯದಲ್ಲಿ ಬೆಲ್ ಗೆಳೆಯನ ಮನೆಯಲ್ಲಿ ಆಡುತ್ತಿದ್ದಾಗ, ಅಲ್ಲಿ ಗೋದಿ ಸಿಪ್ಪೆಯನ್ನು ತೆಗೆಯುವ ಯಂತ್ರದ ಕೆಲಸ ತುಂಬಾ ತ್ರಾಸದಾಯಕ ಮತ್ತು ನಿಧಾನವಾಗಿ ಕಂಡುಬಂದ ಕಾರಣ, ಮನೆಗೆ ಬಂದು ತಾನೇ ಒಂದು ಹಿಟ್ಟಿನ ಗಿರಣಿಯನ್ನು (ಮಷೀನನ್ನು) ತಯಾರಿಸಿ ಗೆಳೆಯನಿಗೆ ನೀಡಿದರು. ಈ ಯಂತ್ರ ಗೆಳೆಯನ ಮನೆಯಲ್ಲಿ ಹಲವಾರು ವರ್ಷಗಳ ಕಾಲ ಉಪಯೋಗಕ್ಕೆ ಬಂದಿತ್ತು. ಮನೆಯಲ್ಲಿ ತನ್ನ ಸಹೋದರನೊಂದಿಗೆ ಒಂದು ಮಾತನಾಡುವ ಬೊಂಬೆಯನ್ನು ರಚಿಸಿದ್ದ, ಬಾಲಕ ಬೆಲ್. ತನ್ನ 19 ರ ಪ್ರಾಯದಲ್ಲಿ ಕಂಪನಗಳಿಂದ ಸ್ವರಗಳು ಉಂಟಾಗುತ್ತವೆ ಎನ್ನುವ ವಿಚಾರ ಅವರ ಯೋಚನಾ ಲಹರಿಗಳನ್ನು ಉದ್ದೀಪನಗೊಳಿಸಿತು. ನಮ್ಮ ಬಾಯಲ್ಲಿ ಗಂಟಲು, ತುಟಿ, ನಾಲಿಗೆ, ಶ್ವಾಸಗಳಿಂದ ಮತ್ತು ಧ್ವನಿತಂತುಗಳ ಕಂಪನದಿಂದ ಸ್ವರ ಉಂಟಾಗುವುದಾದರೆ, ಅಂತಹುದೇ ಸ್ವರಗಳನ್ನು ವಿದ್ಯುತ್ ಕಂಪನಗಳಿಂದ ಎಬ್ಬಿಸಬಹುದಲ್ಲವೇ? ಹಾಗೆಯೇ ಸ್ವರಗಳ ಕಂಪನದಿಂದ ವಿದ್ಯುತ್ ತರಂಗಗಳನ್ನೂ ಸೂಕ್ಷ್ಮವಾಗಿ ಬದಲಾಯಿಸಲೂ ಸಾಧ್ಯವಲ್ಲವೇ? ಬೆಲ್ ಅವರ ಈ ಎಲ್ಲಾ ಯೋಚನೆಗಳು ಮುಂದೆ ಒಂದು ಅದ್ಭುತ ಆವಿಷ್ಕಾರವಾಗಬಹುದು ಎಂದು ಆಗ ಯಾರೂ ಊಹಿಸಿರಲಾರರು.

ಚಿತ್ರ: 1892 ರಲ್ಲಿ ಗ್ರಹಾಂ ಬೆಲ್ ನ್ಯೂಯಾರ್ಕ್ ನಿಂದ ಚಿಕೇಗೊ ಫೋನ್ ಲೈನ್ ಸ್ಥಾಪಿಸುತ್ತಿರುವ ಸಂದರ್ಭ ಅಲ್ಲಿಯ ಗಣ್ಯರೊಂದಿಗೆ.

‘ವಾಕ್ ಮತ್ತು ಶ್ರವಣ’ದ ವಿಚಾರವಾಗಿ ಉಪನ್ಯಾಸ ನೀಡಲು ಮತ್ತು ಸಮ್ಮೇಳನದಲ್ಲಿ ಭಾಗವಹಿಸಲು ತಂದೆ ಬೆಲ್ ಉತ್ತರ ಅಮೇರಿಕಾದ  ಕೆನಡಾ ದೇಶದಲ್ಲಿ ತಂಗಿದ್ದಾಗ ಅವರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿತು. ಮಗ ಗ್ರಹಾಮ್ ಬೆಲ್ ಆರೋಗ್ಯವೂ ತುಂಬಾ ದುರ್ಬಲವಿರುವುದರಿಂದ, ಮುಂದಕ್ಕೆ ಅಪ್ಪ-ಮಗ ಇಬ್ಬರೂ ಕೆನಡಾ ದೇಶಕ್ಕೆ ಬಂದು ಉಳಕೊಂಡರು. ಕೆನಡಾದಲ್ಲಿ ಬೆಲ್ ವಿದ್ಯುತ್ ಮತ್ತು ಶಬ್ದ ತರಂಗಗಳ ಮೇಲೆ ಪ್ರಯೋಗ ಮತ್ತು ಅಧ್ಯಯನ ಮಾಡುತ್ತಿದ್ದ ದಿನಗಳಲ್ಲೇ, ಅವರ ತಂದೆಯವರಿಗೆ ಅಮೇರಿಕಾದ (U.S.), “ಬೋಸ್ಟನ್ ಸ್ಕೂಲ್ ಫಾರ್ ಡೆಫ್ ಮ್ಯೂಟ್”ನಲ್ಲಿ ಅಧ್ಯಾಪಕರಾಗಲು ಆಮಂತ್ರಣ ಬಂತು. ಆದರೆ, ತಂದೆಯವರ ಬದಲು ಮಗ ತರಬೇತುಗಾರನಾಗಿ ಸಂಸ್ಥೆಯನ್ನು ಸೇರಿಕೊಂಡರು. ಮುಂದೆ ತಮ್ಮ 25 ರ ಹರಯದಲ್ಲಿ ಬೆಲ್ ‘ಬೋಸ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಓರೇಟರಿ’ಯಲ್ಲಿ ಅಧ್ಯಾಪಕರಾದರು. ಅಲ್ಲಿ ಅವರು ಅಧ್ಯಾಪಕರಾಗಿದ್ದ ಅವಧಿಯಲ್ಲಿ ಅಮೇರಿಕದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ, ಲೇಖಕಿ ಹೆಲೆನ್ ಕೆಲ್ಲರ್ ಕೂಡಾ ಅವರಿಂದ ಬೆಂಬಲ ಮತ್ತು ಸಹಾಯ ಪಡೆದ ಓರ್ವ ವಿದ್ಯಾರ್ಥಿನಿ.

ಬೆಲ್ ಟೆಲೆಫೋನನ್ನು ಆವಿಷ್ಕರಿಸಿದ್ದು ಒಂದು ಆಕಸ್ಮಿಕವೇ? ಮೂಗರಿಗೆ ವಾಕ್ ಮತ್ತು ಶ್ರವಣದ ರೀತಿಗಳು; ಮತ್ತು ಅವರ ಹೊಸಬಗೆಯ ಸಂವಹನ ಸಾಮರ್ಥ್ಯಗಳ ಅಧ್ಯಯನ ಬೆಲ್ ಅವರ ಜೀವಾಳವೇ ಆಗಿತ್ತು. ತಾಯಿ ಕಿವುಡಿಯಾಗಿದ್ದರು, ತಂದೆ ಮೂಗರ ಅಧ್ಯಾಪಕರಾಗಿದ್ದರು. ತನ್ನ ಜೀವನದ ಮುಖ್ಯ ಉದ್ದೇಶವೇ ಮಾತು ಬಾರದವರಿಗೆ ಉಪಯೋಗ ಸಾಧ್ಯವಾಗುವ ಉಪಕರಣ ತಯಾರುಮಾಡುವ ಕೈಂಕರ್ಯ ಆಗಿತ್ತು. ಬೆಲ್ ಮಾಡುತ್ತಿದ್ದಂತಹ ಅಧ್ಯಯನಗಳನ್ನೇ ಜರ್ಮನಿಯಲ್ಲಿ ಹರ್ಮನ್ ಹೆಲ್ಮ್ ಹೋಲ್ಟ್ಜ್ ಸ್ವತಂತ್ರವಾಗಿ ಮಾಡುತ್ತಿದ್ದರೆ, ತನಗೆ ಗೊತ್ತಿಲ್ಲದ ಜರ್ಮನ್ ಭಾಷೆಯನ್ನು ಅಲ್ಪ ಸ್ವಲ್ಪ ಕಲಿತು, ಬೆಲ್ ಅವರು ಹೆಲ್ಮ್ ಹೋಲ್ಟ್ಜ್ ಸಂಶೋಧನೆಯನ್ನು ತಪ್ಪಾಗಿ ಓದಿದರು. ಅಥವಾ ಹಾಗೆ ಅರ್ಥಮಾಡಿಕೊಂಡರು. ಈಗಾಗಲೇ ಕಂಡುಹಿಡಿಯಲ್ಪಟ್ಟಿದ್ದ ಟೆಲೆಗ್ರಾಫ್ ತಂತಿಗಳ ಮೇಲಿನ ಪ್ರವಹಿಸುವ ಸಾಮರ್ಥ್ಯ, ‘ಒಂದು ತಂತಿ-ಒಂದು ತರಂಗ’, ತತ್ವವನ್ನು ಮೀರಿ ಹಲವು ದ್ವನಿ ತರಂಗಗಳನ್ನು ಒಂದೇ ತಂತಿನ ಮೇಲೆ ಕಳುಹಿಸಲು ಸಾಧ್ಯವೇ? 1874 ರಲ್ಲಿ ಬೆಲ್ ಮತ್ತು ಅವರ ಸಹಯೋಗಿ  ಥೋಮಸ್ ವಾಟ್ಸನ್ ವಿದ್ಯುತ್ ಉಪಕರಣದ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಒಂದೇ ತಂತಿನಲ್ಲಿ, ಒಂದು ವಿಶಿಷ್ಟ ಸ್ಥಿತಿಯಲ್ಲಿ ಹಲವಾರು ಶಬ್ದಗಳು ಬರುವುದನ್ನು ಗಮನಿಸಿದರು. ತಕ್ಷಣವೇ ತಮ್ಮ ಪ್ರಯೋಗಾಲಯಕ್ಕೆ ತೆರಳಿ ಕಾರ್ಯೋನ್ಮುಖರಾದರು. ಹೌದು, ಎಲೆಕ್ಟ್ರಿಕಲ್ ಇಂಜಿನಿಯರ್ ವಾಟ್ಸನ್ ಸಹಾಯದಿಂದ ಮೊದಲ ಟೆಲೆಫೋನ್ ತಂತು ತಯಾರಾಯಿತು.

ಗ್ರಹಾಂಬೆಲ್ ತಯಾರಿಸಿದ ಪ್ರಥಮ ಫೋನ್

ವಿದ್ಯುತ್ ಮುಖಾಂತರ ಶಬ್ದದ ತರಂಗಗಳನ್ನು ಪ್ರವಹಿಸಬಹುದು! 1876 ರಲ್ಲಿ ಜಗತ್ತಿನ ಮೊತ್ತಮೊದಲ ದೂರವಾಣಿ ಉಪಕರಣ ತಯಾರಾಯಿತು. 1877 ರಲ್ಲಿ ‘ಬೆಲ್ ಟೆಲೆಫೋನ್ ಕಂಪನಿ’ ಸ್ಥಾಪಿಸಲ್ಪಟ್ಟಿತು. 1886 ರಲ್ಲಿ ಅಮೆರಿಕಾದ ಒಂದೂವರೆ ಲಕ್ಷ ಜನ ಟೆಲೆಫೋನ್ ಹೊಂದಿದವರಿದ್ದರು.

ಬೆಲ್ ಅವರು ಟೆಲೆಫೋನ್ ತಯಾರುಮಾಡಿದ ಕೆಲವೇ ದಿವಸಗಳ ಮೊದಲು ಎಲಿಷಾ ಗ್ರೇ ಎನ್ನುವ ಇನ್ನೊಬ್ಬ ವಿಜ್ಞಾನಿಯೂ ಸ್ವಲ್ಪ ವ್ಯತ್ಯಾಸವಿರುವ ಇನ್ನೊಂದು ಮಾದರಿಯ ದೂರವಾಣಿಯನ್ನು ಆವಿಷ್ಕರಿಸಿದ್ದರು. ಇಬ್ಬರೂ ತಮ್ಮ ಸಂಶೋಧನೆಗಳಿಗಾಗಿ ಪೇಟೆಂಟ್(ಹಕ್ಕು ಪತ್ರ)ಗಳಿಗೆ ಅರ್ಜಿ ಸಲ್ಲಿಸಿದ್ದರು. ಸಮಿತಿಯವರು ಕೊನೆಗೂ ಬೆಲ್ ಅವರಿಗೆ ಪೇಟೆಂಟ್ ನೀಡಿತು. ತನ್ನ 29 ನೇ ಹುಟ್ಟುಹಬ್ಬದಂದು ದೊರಕಿದ ಈ ಹಕ್ಕುಪತ್ರ ಒಂದು ವಿಶೇಷ ಉಡುಗೊರೆಯೆಂದೇ ಹೇಳಬಹುದು. ವಿಚಿತ್ರವೆಂದರೆ, ಮುಂದೆ 18 ವರ್ಷಗಳವರೆಗೆ ಪೇಟೆಂಟ್ ಬಗ್ಗೆಯೇ 587 ಕೋರ್ಟ್ ಕೇಸುಗಳನ್ನು ಎದುರಿಸಬೇಕಾಗಿ ಬಂದರೂ, ಬೆಲ್ ಅವರೇ ಗೆದ್ದಿದ್ದರು.

ತಾನು ‘ಬೆಲ್ ಟೆಲೆಫೋನ್ ಕಂಪನಿ’ ಸ್ಥಾಪಿಸಿದ ಕೆಲವೇ ದಿನಗಳ ನಂತರ, ತನ್ನ ವಿದ್ಯಾರ್ಥಿನಿಯಾಗಿದ್ದ ಮತ್ತು ತಮ್ಮ ಸಂಶೋಧನೆಗಳಿಗೆಲ್ಲಾ  ಆರ್ಥಿಕ ನೆರವು ನೀಡಿದ್ದ ದೊಡ್ಡ ವಾಣಿಜ್ಯೋದ್ಯಮಿ ಗಾರ್ಡಿನರ್ ಹಬ್ಬರ್ಡ್ ಅವರ ಮಗಳು, ಮೇಬಲ್ ಹಬ್ಬರ್ಡ್, ಅವರನ್ನು ಬೆಲ್ ಮದುವೆಯಾದರು. ತದನಂತರ ಬೆಲ್ ಅವೆಷ್ಟೋ ಆವಿಷ್ಕಾರಗಳನ್ನು ಮಾಡಿ ಜಗತ್ತಿನ ಅದ್ಭುತ ವಿಜ್ಞಾನಿ ಎನಿಸಿಕೊಂಡರು. ಅವರ ವ್ಯಕ್ತಿತ್ವ ಎಷ್ಟು ಬ್ರಹದಾಕಾರವಾಗಿತ್ತೆಂದರೆ, ಅವರು ವಾಸವಾಗಿದ್ದ ಮೂರೂ ದೇಶಗಳಾದ ಇಂಗ್ಲೆಂಡ್, ಕೆನಡಾ ಮತ್ತು ಅಮೇರಿಕಾ ಸಂಯುಕ್ತ ರಾಷ್ಟ್ರ ( U.S.) ಬೆಲ್ ಅವರನ್ನು ತಮ್ಮ ದೇಶದ “ಮಗ”ನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿವೆ. “ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ”ಯ ಎರಡನೇ ಅಧ್ಯಕ್ಷರಾಗಿ ಬೆಲ್ ಒಂದು ಅವಧಿಯ ಸೇವೆಯಲ್ಲಿದ್ದರು.

ಬೆಲ್ ಅವರದು ನಿರಂತರ ಚಿಂತಿಸುವ ಮೇಧಾವಿ ಮನಸ್ಸು. ಟೆಲೆಫೋನ್ ಅವರನ್ನು ಅತ್ಯಂತ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿತಾದರೂ, ಅವರು ಎಂದೂ ತೃಪ್ತಿಗೊಂಡವರಲ್ಲ. ನಿರಂತರ ಅಧ್ಯಯನ, ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ತೊಡಗಿಕೊಂಡವರು. ಅವರ ಪ್ರಕಾರ ತನ್ನ ಕನಸಿನ ಕೂಸು ‘ಫೋಟೋ ಫೋನ್’ (ಆಪ್ಟಿಕಲ್). ಬೆಳಕಿನ ಕಿರಣಗಳಿಂದ ಕಳುಹಿಸಬಹುದಾದ ಶಬ್ದದ ತರಂಗಗಳು. ತುಂಬಾ ಪ್ರಯತ್ನಿಸಿದರೂ, ಬೆಲ್ 200 ಮೀಟರ್ ವರೆಗೆ ಮಾತ್ರ ಅಂತಹ ಸಾಧನದಿಂದ ಸಂವಹನ ಮಾಡಲು ಸಫಲರಾದರು. ಈಗಂತೂ ಜಗತ್ತಿನಾದ್ಯಂತ ಈ ವಿದ್ಯಮಾನ ಎಲ್ಲರಿಗೂ ತಿಳಿದಿದೆ.  ‘ವಿಡಿಯೋ ಚ್ಯಾಟಿಂಗ್’ ನಮ್ಮ ಅಂಗೈಯಲ್ಲೇ ಸ್ಮಾರ್ಟ್ ಫೋನಿನಲ್ಲಿ ಮಾಡುತ್ತಿಲ್ಲವೇ?

ಬೆಲ್ ಅವರ ಗೌರವಾರ್ಥ ಶಬ್ದಗಳ ತೀವ್ರತೆಯ ಮಾಪನವನ್ನು ಚಿಕ್ಕದೊಂದು ಅಳತೆ, ಅಂದರೆ ‘ಡೆಸಿಬೆಲ್’ (decibel, dB)ನಲ್ಲಿ ಮಾಡಲಾಗುತ್ತಿದೆ. ವಿಶೇಷವೆಂದರೆ, ಬೆಲ್ ಎಂದಿಗೂ ತಮ್ಮ ಅಧ್ಯಯನದ ಕೋಣೆಯಲ್ಲಿ ತಾವೇ ಆವಿಷ್ಕರಿಸಿದ ‘ಟೆಲಿಫೋನ್’ನ್ನು ಅಢಚಣಿ ಎಂದು ಇರಿಸಿಕೊಳ್ಳುತ್ತಿರಲಿಲ್ಲ!

ತನ್ನ 75 ರ ಪ್ರಾಯದಲ್ಲಿ, ಬೆಲ್ ತಮ್ಮ ಪತ್ನಿ, ಇಬ್ಬರು ಮಗಳಂದಿರು ಮತ್ತು ಅಪಾರ ಅಭಿಮಾನಿಗಳನ್ನು ತೊರೆದು ದೂರವಾಣಿಯ ಸಂಕೇತಗಳು ಯಾ ಸಿಗ್ನಲ್ ಸಿಗದ ಲೋಕಕ್ಕೆ ತೆರಳಿದರು.

Hello…!”   

ಒಂದು ಸ್ವಾರಸ್ಯಕರವಾದ ಸುಳ್ಳು ಕತೆ ಅಂತರ್ಜಾಲ ಮತ್ತು ಇತರ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಿವೆ. ಮತ್ತು ಜನರು ಅದನ್ನು ‘ನಿಜ’ವೆಂದು ನಂಬಿರುತ್ತಾರೆ! ಒಂದು ಫೋನ್ ಕರೆ ಬಂದಾಗ “ಹಲೋ..”ಎಂಬ ಶುಭಾಶಯಗಳೊಂದಿಗೆ ಪ್ರಾರಂಭ ಮಾಡುವ ಪದ ದೂರವಾಣಿಯನ್ನು ಆವಿಷ್ಕರಿಸಿದ ಗ್ರಹಾಮ್ ಬೆಲ್ ಪತ್ನಿ ಯಾ ಪ್ರೇಮಿಕೆಯ ಹೆಸರಲ್ಲವೇ? ನಿಜವೆಂದರೆ ಅವರ ಪತ್ನಿಯ ಹೆಸರು “ಮೇಬೆಲ್ ಗಾರ್ಡಿನರ್ ಹಬ್ಬರ್ಡ್”. ಬೆಲ್ ಅವರಿಗೆ ಯಾವುದೇ ಪ್ರೇಮಿಕೆ ಇದ್ದ ಮಾಹಿತಿಗಳೇ ಇಲ್ಲ. ಬೆಲ್ ಮಾತ್ರ ಆಗಾಗ ಫೋನ್ ನಲ್ಲಿ “ಅಹೋಯ್..,ಅಹೋಯ್..!” ಎನ್ನುವ ಪದ ಬಳಕೆ ಮಾಡುತ್ತಿದ್ದರು. ಆದರೆ, ಥಾಮಸ್ ಎಡಿಸನ್ ಫೋನ್ ನಲ್ಲಿ ಮಾತನಾಡುವ ಪ್ರಾರಂಭದಲ್ಲಿ “ಹಲೋ” ಪದದ ಬಳಕೆಯನ್ನು ಮಾಡುತ್ತಿದ್ದರು.  “ಹಲೋ” ಪದದ ಬಳಕೆ ಶುಭಾಶಯಗಳನ್ನು ಹಂಚಿಕೊಳ್ಳಲು ಸುಮಾರು 1826 ನೇ ಇಸವಿಯಲ್ಲಿ, ಅಂದರೆ ಬೆಲ್ ಜನನವಾಗುವ 20 ವರ್ಷಗಳ ಮೊದಲೇ, ಪ್ರಾರಂಭವಾಗಿತ್ತು.

ಡಾ. ಬಡೆಕ್ಕಿಲ ಶ್ರೀಧರ ಭಟ್ , ಪುತ್ತೂರು.

3 Responses

  1. Hema says:

    ಮಾಹಿತಿಪೂರ್ಣವಾದ ಬರಹ. ವಿಜ್ಞಾನಿಗಳ ಪ್ರತಿಭೆ, ಪರಿಶ್ರಮ ಮತ್ತು ಸತತ ಪ್ರಯತ್ನಗಳಿಂದಾಗಿ ಈಗ ನಾವು ಅನುಭವಿಸುವ ಹಲವಾರು ಸೌಲಭ್ಯಗಳು ಅವಿಷ್ಕಾರಗೊಂಡಿವೆ. ಅವರಿಗೆ ಮನೋಜ್ಞವಾಗಿ ನುಡಿನಮನ ಸಲ್ಲಿಸುವುದು ಶ್ಲಾಘನೀಯ.

  2. Shruthi Sharma says:

    ತುಂಬಾ ಅಪರೂಪದ ಮಾಹಿತಿ, ಅದ್ಭುತ ನಿರೂಪಣೆ 🙂

  3. ಡಾ. ಬಡೆಕ್ಕಿಲ ಶ್ರೀಧರ ಭಟ್. says:

    ಹೇಮಾ ಮತ್ತು ಶ್ರುತಿ, ಅಲ್ಲದೆ ಓದಿ ಮೆಚ್ಚುಗೆ ಸೂಚಿಸಿದ ಉಳಿದೆಲ್ಲಾ ವಾಚಕರಿಗೂ ಧನ್ಯವಾದಗಳು. ಲೇಖನ ಚೆನ್ನಾಗಿ ಬರಲು ಅಥವಾ ಬರಹ ಇನ್ನಷ್ಟು ಮಾಹಿತಿಪೂರ್ಣವಾಗಲು ಸಲಹೆಗಳು ಸ್ವಾಗತವೇ.
    ವಿಜ್ಞಾನದ ಲೇಖನಗಳು ಆಧಾರ ಸಹಿತವೂ, ನಂಬಲರ್ಹವೂ ಇರಬೇಕಲ್ಲ.!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: