ದೂರದ ಮಲೆಯ ಮೇಲೆ ‘ಜೈ ಮಾತಾದಿ’-ಭಾಗ 1
ಕೆಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಸಂದರ್ಭ ತಾನಾಗಿ ಬರುವುದಿಲ್ಲ, ಆ ಸ್ಥಳದಲ್ಲಿ ಆರಾಧಿಸಲ್ಪಡುವ ದೈವೀಶಕ್ತಿ ಕರೆದರೆ ಮಾತ್ರ ನಮಗೆ ದರ್ಶನದ ಅವಕಾಶ ಸಿಗುತ್ತದೆ ಎಂಬ ಪ್ರತೀತಿಯಿದೆ. ಇದೇ ರೀತಿ, ಭಾರತದ ಉತ್ತರ ತುದಿಯಲ್ಲಿರುವ ಜಮ್ಮು-ಕಾಶ್ಮೀರ ರಾಜ್ಯದ ‘ಕಟ್ರಾ’ ಪ್ರದೇಶದ ತ್ರಿಕೂಟ ಬೆಟ್ಟದಲ್ಲಿ ನೆಲೆಸಿರುವ ವೈಷ್ಣೋದೇವಿಯು ತನ್ನ ಬಳಿಗೆ ಕರೆಸಿಕೊಂಡರೆ ಮಾತ್ರ ಸಾಧ್ಯ ನಮಗೆ ಅಲ್ಲಿಗೆ ಹೋಗಲು ಅವಕಾಶವಾಗುತ್ತದೆ ಎಂಬ ನಂಬಿಕೆ ಇದೆ.
ನಮ್ಮ ಎದುರು ಮನೆಯ ನಿವಾಸಿಗಳಾದ ಶ್ರೀ ರಮೇಶ್ ಹಾಗೂ ಶ್ರೀಮತಿ ಪ್ರಸನ್ನ ದಂಪತಿಗಳು ಸಮಾನಾಸಕ್ತ ತಂಡದೊಂದಿಗೆ ಇದುವರೆಗೆ ನಾಲ್ಕು ಬಾರಿ ವೈಷ್ಣೋದೇವಿಯ ದರ್ಶನ ಮಾಡಿದ್ದರು. 2017 ಅಕ್ಟೋಬರ್ ತಿಂಗಳಲ್ಲಿ, ಮಂಗಳೂರಿನಿಂದ, ಸಮಾನಾಸಕ್ತ ತಂಡವು ಶ್ರೀ ಮಾರ್ತೇಶ್ ಪ್ರಭು ಅವರ ನೇತೃತ್ವದಲ್ಲಿ ಪ್ರವಾಸ ಕೈಗೊಳುತ್ತಾರೆಂದೂ , ಇವರಲ್ಲಿ ಹೆಚ್ಚಿನವರು ಬ್ಯಾಂಕ್ ಉದ್ಯೋಗಿಗಳೆಂದೂ, ತಾವು ಈ ಬಾರಿಯೂ ಹೋಗುತ್ತೇವೆಂದೂ, ಪ್ರವಾಸವನ್ನು ಸರಳವಾಗಿ, ಜವಾಬ್ದಾರಿಯುತವಾಗಿ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆಂದೂ, ಆಸಕ್ತಿಯಿದ್ದರೆ ಒಟ್ಟಿಗೆ ಹೋಗೋಣ ಎಂದರು. ನಮಗೂ ಅವರ ಜೊತೆ ಹೋಗೋಣ ಎನಿಸಿತು ಅರ್ಥಾತ್ ವೈಷ್ಣೋದೇವಿ ನಮ್ಮನ್ನು ಕರೆದಳು !
ಆಸ್ತಿಕರ ಪಾಲಿಗೆ ವೈಷ್ಣೋದೇವಿಯ ದರ್ಶನ ಪಡೆಯುವುದೆಂದರೆ ಸಂಭ್ರಮದ ಕ್ಷಣ. ಭಕ್ತಿಯ ಅನುಭೂತಿ. ಕಟ್ರಾದಲ್ಲಿರುವ ‘ತ್ರಿಕೂಟ ಪರ್ವತ’ವು ಪ್ರವಾಸಿಗಳಿಗೆ ಆಕರ್ಷಕ ಹಾಗೂ ಚಾರಣಾಸಕ್ತರಿಗೆ ಸಂತಸ ಕೊಡುವ ಜಾಗ. ವೈಷ್ಣೋದೇವಿ ದೇವಸ್ಥಾನವು ತ್ರಿಕೂಟ ಪರ್ವತದಲ್ಲಿ, ಸಮುದ್ರ ಮಟ್ಟದಿಂದ 5200 ಅಡಿಗಳಷ್ಟು ಎತ್ತರದಲ್ಲಿದೆ. ದೇವಸ್ಥಾನವನ್ನು ತಲುಪುವುದಕ್ಕಾಗಿ ಭಕ್ತಾದಿಗಳು ಕಟ್ರಾ ಪಟ್ಟಣದಲ್ಲಿರುವ ಮಂದಿರದ ಮುಖ್ಯದ್ವಾರದಿ೦ದ ಸುಮಾರು 14 ಕಿ.ಮೀ. ಗಳಷ್ಟು ದೂರದವರೆಗಿನ ಚಾರಣವನ್ನು ಕೈಗೊಳ್ಳಬೇಕಾಗುತ್ತದೆ. ಏರುಮುಖವಾಗಿ ಬೆಟ್ಟ ಹತ್ತಲು ಕಷ್ಟವಾಗುವವರಿಗೆ ನಿಗದಿತ ಹಣ ಕೊಟ್ಟರೆ ಕುದುರೆ ಹಾಗೂ ಡೋಲಿಗಳು ಸಿಗುತ್ತವೆ. ಸುಮಾರು ಮಧ್ಯದಾರಿಯಲ್ಲಿ ‘ಅರ್ಧಕುವರಿ’ಯ ಮಂದಿರ ಸಿಗುತ್ತದೆ. ಅಲ್ಲಿಂದ ಹಿರಿಯ ನಾಗರಿಕರಿಗಾಗಿ, ರಾತ್ರಿ ಹತ್ತು ಗಂಟೆಯ ವರೆಗೆ ಮಾತ್ರ ,ಬ್ಯಾಟರಿಚಾಲಿತ ರಿಕ್ಷಾದ ಸೌಲಭ್ಯವೂ ಇದೆ.
ಬೆಟ್ಟವನ್ನು ತಲಪಲು ಕಟ್ರಾದಿಂದ ‘ಸಂಜಿಚಾಟ್’ ಎಂಬಲ್ಲಿ ವರೆಗೆ ಹೆಲಿಕಾಪ್ಟರ್ ವ್ಯವಸ್ಥೆ ಇದೆ. ಆದರೆ ಮುಂಗಡವಾಗಿ ಕಾಯ್ದಿರಿಸಿದರೆ ಮಾತ್ರ ಟಿಕೆಟ್ ಲಭ್ಯವಾಗುತ್ತದೆ. ಅಲ್ಲಿಂದ ಮಂದಿರಕ್ಕೆ ಸುಮಾರು 2.5 ಕಿ.ಮೀ ನಡೆಯಬೇಕಾಗುತ್ತದೆ.
ಹಿಮಾಲಯ ಮಂಜು ಮುಸುಕಿದ ಬೆಟ್ಟದಲ್ಲಿರುವ ವೈಷ್ಣೋದೇವಿಯ ದರ್ಶನಕ್ಕೆ ಹೋಗಬಹುದಾದರೂ, ವರ್ಷದ ಎಲ್ಲಾ ಸಮಯದಲ್ಲಿಯೂ ಮಳೆಗಾಲದಲ್ಲಿ ಮಳೆ ಹಾಗೂ ಭೂ ಕುಸಿತ ಮತ್ತಿ ಚಳಿಗಾಲದಲ್ಲಿ ಹಿಮಪಾತವಾಗುವುದರಿಂದ ಅಕ್ಟೋಬರ್- ನವಂಬರ್ ಮತ್ತು ಮಾರ್ಚ್ – ಜೂನ್ ವರೆಗಿನ ಸಮಯ ಹೆಚ್ಚು ಸೂಕ್ತ.
ಚಾರಣದ ಕೊನೆಯ ಭಾಗದಲ್ಲಿ, ಸಿಗುವ ಗುಹಾದೇವಸ್ಥಾನದಲ್ಲಿ, ನೈಸರ್ಗಿಕವಾಗಿ ಉದ್ಭವಿಸಿರುವ ಬಂಡೆಯಲ್ಲಿ ಮೂರು “ಪಿ೦ಡಿ”ಗಳ ಆಕಾರದಲ್ಲಿರುವ ವೈಷ್ಣೋದೇವಿಯ ದರ್ಶನ ಪಡೆಯುವುದು ಭಕ್ತರ ಪಾಲಿಗೆ ಧನ್ಯತೆಯ ಕ್ಷಣ. ಈ ಮೂರು ಪಿಂಡಿಗಳು ಮಹಾಕಾಳಿ, ಮಹಾಸರಸ್ವತಿ ಮತ್ತು ಮಹಾಲಕ್ಷ್ಮಿಯರ ಸಂಕೇತ.
……………ಮುಂದುವರಿಯುವುದು
– ಹೇಮಮಾಲಾ.ಬಿ, ಮೈಸೂರು
(ಚಿತ್ರಕೃಪೆ: ಅಂತರ್ಜಾಲ)
ಅಬ್ಬ! ಪ್ರಕೃತಿಯ ಸೌಂದರ್ಯವೇ! ನಮ್ಮ ಹಿರಿಯರು ಸುಮ್ಮನೇ ಬೆಟ್ಟಗುಡ್ಡಗಳ ತುದಿಯಲ್ಲಿ ದೇಗುಲಗಳನ್ನು ಕಟ್ಟಿಲ್ಲ, ಪ್ರಕೃತಿಯ ಮಡಿಲಲ್ಲಿ ಆಧ್ಯಾತ್ಮಿಕ ಭಾವ, ಆ ವಿಶ್ವಶಕ್ತಿಯ ಆರಾಧನೆಯ ಭಾವ ಬೆಟ್ಟದಷ್ಟು ಚೈತನ್ಯ ತುಂಬಬಲ್ಲದು ಎನಿಸುತ್ತಿದೆ… ಪ್ರವಾಸಾಸಕ್ತರಿಗೆ ನೀವು ಕೊಟ್ಟ ಉಪಯುಕ್ತ ವಿವರಗಳೊಂದಿಗೆ ಅದೊಂದು (ತ್ರಿಕೂಟಪರ್ವತ ಅಲ್ಲವೇ?) ಚಿತ್ರ ಸಾಕು ಗಾಡಿಕಟ್ಟಲು! ಸಂಬಂಧಪಟ್ಟವರು ಮನಸ್ಸು ಮಾಡಿದರೆ ಪ್ರವಾಸೋದ್ಯಮದ ಕೇಂದ್ರಬಿಂದುವಾಗಬಹುದೇನೋ ಈ ವೈಷ್ಣೋದೇವಿ ಕ್ಷೇತ್ರ, ಈಗ ಕಟ್ರಾವರೆಗೆ ರೈಲುಸಂಚಾರ ಇದೆಯಲ್ಲವೇ?
ಧನ್ಯವಾದಗಳು. 🙂 ವೈಷ್ಣೋದೇವಿ ಕ್ಷೇತ್ರವು ಜಮ್ಮು ಕಾಶ್ಮೀರದಲ್ಲಿರುವ ಪ್ರಮುಖ ಯಾತ್ರಾಸ್ಥಳವಾಗಿದೆ.
ನಿಮ್ಮ ವೈಷ್ಣೋದೇವಿ ಯಾತ್ರಾ ಕಥನದ ಮೊದಲ ಭಾಗವೇ ಸಾಕಷ್ಟು ಆಸಕ್ತಿಕರವೂ ರೋಮಾಂಚಕವೂ ಆದ ಅನುಭವವನ್ನು ಓದುಗರಿಗೆ ನೀಡುತ್ತದೆ. ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ.
ಧನ್ಯವಾದಗಳು 🙂
ಪ್ರವಾಸ ಮಾಡಲು ಅನುಕೂಲವಿಲ್ಲದವರಿಗೆ ಈಲೇಖನವನ್ನೋದಿದರೆ ಕಣ್ಣಾರೆ ಕಂಡ ಹಾಗೆ ಆಗುತ್ತದೆ.
ಧನ್ಯವಾದಗಳು 🙂
ವೈಷ್ಣೋದೇವಿ ಪ್ರವಾಸ ಲೇಖನ ಓದಿದ ಮೇಲೆ, 35 ವರ್ಷಗಳ ಹಿಂದೆ ಅದೇ ಬೆಟ್ಟ ಹತ್ತುತ್ತಾ “ಜೈ ಮಾತಾದಿ” ಹೇಳಿದ ನೆನಪು ಬಂತು.