ಒಂದು ಹಾವಿನ ಕಥೆ..
ಹಾವೆಂದರೆ ಯಾರಿಗಾದರೂ ಹೆದರಿಕೆ. ನಾಗರಹಾವೆಂದರೆ ಒಂದು ಪಾಲು ಹೆಚ್ಚೇ.
ಕಾಳಿಂಗ ಸರ್ಪ ಅಷ್ಟಾಗಿ ಕಾಣ ಸಿಗದು ಜನನಿಬಿಡ ವಲಯಗಳಲ್ಲಿ.
ಅದೊಂದು ಬೇಸಿಗೆ. ಮಕ್ಕಳಿಗೆ ರಜೆ ಬಾ ಊರಿಗೆ ಎಂದರು ಅಜ್ಜಿ. ಸರಿಯೆಂದು ಹೋಗಿದ್ದೆವು. ಮಕ್ಕಳ ಆಟ. ಹುಲ್ಲಿನ ಬಣವೆಯಲ್ಲಿ ಆಡುವ ಹುಚ್ಚು ನಮಗೆ. ನಮಗೆಲ್ಲಿ ಸಿಗಬೇಕು ಅದೆಲ್ಲಾ ಪೇಟೆಯಲ್ಲಿ. ಮನೆಯ ಹಿತ್ತಲೇ ಕಣ. ಕಣದಲ್ಲಿ 2-3 ಬಣವೆಗಳು ಇರುತ್ತಿದ್ದವು. ಮನೆ ಮತ್ತು ಬಣವೆಯ ನಡುವೆ 200 ಅಡಿ ಖಾಲಿ ಜಾಗ. ಹುಲ್ಲಿನ ಸೋಂಕು ನವೆ ಆಡಬೇಡಿ ಹುಲ್ಲಿನಲ್ಲಿ ಅಂದರೆ ಕೇಳುವವರಾರು.
ಆಡಿದ್ದೆ ಆಟ,ಅಡಗಿದ್ದೇ ಅಡಗಿದ್ದು ,ಹುಲ್ಲು ಹೊದ್ದು. ಆಟದ ಮಧ್ಯ ನೀರಡಿಕೆಯಾಗಿ ಮನೆಗೆ ಬಂದೆ. ಹುಲ್ಲಲ್ಲಿ ಆಡುತ್ತಿದ್ದರು ಇನ್ನಿಬ್ಬರು. ನೀರು ಕುಡಿದಾಯಿತು .ಇಬ್ಬರು ಆಳುಗಳು ತಾಳಿ ಹಾವು ಹರಿದಂತಿದೆ ಎಂದರು.
ಮನೆಯಲ್ಲಿದ್ದವರೆಲ್ಲಾ ಹಿತ್ತಲಿಗೆ ಓಡಿ ಬಂದರು. ಹುಲ್ಲಲ್ಲಿ ಆಡುತ್ತಿದ್ದವರಿಗೆ ಹೆದರಿಕೆ ಈ ಬದಿಗೆ ಬರಲು. ದೊಡ್ಡವರು ಒಬ್ಬರು ಹೋಗಿ ಕರೆತಂದರು.
ಒಬ್ಬ ಆಳು ಹಾವು ಹೊಡೆಯುವುದರಲ್ಲಿ ನಿಪುಣ.ಅವರೂ ಅಲ್ಲೇ ಇದ್ದರು. ಬೇಸಿಗೆಯ ಬಿಸಿಲಿಗೆ ಹರಿದು ಬಂದಿತ್ತು. ಸರಿ ಹಾವು ಹಿಡಿಯ ಬೇಕು ಅಂತ ಮುಂದಾದರು. ಬಾಲ ಹಿಡಿಯುವುದು ಹೊರಗೆ ತರಲು ಬುಸ್ಸ್ ಹೀಗೆ 2 ಸಲವಾಗಿರಬೇಕು. ಒಮ್ಮೆ ಜೋರಾಗಿ ಬತ್ತದ ಮೇಲೆ ಉರುಳಿಸುವ ಗುಂಡಿನ ಕೆಳಗಿಂದ ಹಿಡಿದು ಎಳೆದು ಹೊರಗೆ ಹಾಕಿದರು.
ಬಯಲಿಗೆ ತಂದ ಮೇಲೆ ಹೊಡೆಯುವುದು ಸುಲಭ ಅವರಿಗೆ. ನಮಗೂ ಕುತೂಹಲ ಅಮ್ಮನ ಕೈಬಿಟ್ಟು ಹತ್ತು ಅಡಿ ಮುಂದೆ ಬಂದೆ. ಬಾಲ ಹಿಡಿದು ತಿರುಗಿಸಿದರು. 2 ಸುತ್ತು ತಿರುಗಿಸಿ ರಪ್ಪನೆ ನೆಲಕ್ಕೆ ಹೊಡಿದರು.
ನಾನು ಬೊಬ್ಬೆ.’ಅಯ್ಯೋ ವಿಷ ನನ್ನ ಮೇಲೆ ಬಿದ್ದಿದೆ’. ಮೇಲೆ ಕಾಕಾ ಅನ್ನುವ ಶಬ್ದ ಕೇಳುತ್ತಿತ್ತು. ದೊಡ್ಡವರೆಲ್ಲಾ ನನ್ನ ಬಳಿ ಬಂದರು. ಪಾಪ ಹಾವು ಹೊಡೆದ ಆಳಿನ ಗಮನ ಕೂಡ ನನ್ನೆಡೆಗೆ, ಆದರೂ ಎಚ್ಚರದಿಂದಿದ್ದರು ಅವರು.
ಅಜ್ಜಿ ನನ್ನ ಮೊದಲು ಪರೀಕ್ಷಿಸಿ ‘ಕತ್ತೆ ಕಾಗೆ ಕಕ್ಕ, ಸುಮ್ಮನಾಗು ಬೊಬ್ಬೆ ಹೊಡೀಬೇಡ’ .’ಅಯ್ಯೋ ಇಲ್ಲ ನೋಡವ್ವ’ ‘ಇಲ್ಲ ಸುಮ್ಮನಾಗು, ತೊಟ್ಟಿಯ ಹತ್ತಿರ ಬಾ ತೊಳೆಯುವಾ’. ಸಮಾಧಾನ ಮಾಡಿದರು.
ಇದ್ದವರೆಲ್ಲ ಬಿದ್ದು ಬಿದ್ದು ನಕ್ಕಿದ್ದೇ.ಆಳಿಗೂ ಪಾಪ ಒಂದು ಕ್ಷಣ ಹೆದರಿಕೆಯಾಗಿತ್ತು.ಯಾವತ್ತೂ ಹೀಗಾಗಿರಲಿಲ್ಲ ಅಂತ ಅವರು. ಆಬೇಸಿಗೆ ಈ ಕಥೆಯಿಂದಲೇ ನಕ್ಕು ನಕ್ಕು ಮುಗಿದಿತ್ತು.
.
-ಉಷಾ ಚಂದ್ರು
ಬಾಲ್ಯದ ನೆನಪುಗಳು ಅಮೂಲ್ಯ. ಇಂದಿನ ಪೋರರಿಗೆ ಪರಿಚಯ ಮಾಡಿಸಬೇಕಾದ ವಿಷಯಗಳನ್ನು ಸರಳವಾಗಿ ಹೇಳುವ ಕಥೆ. ಓದುತ್ತಾ ನನ್ನ ಬಾಲ್ಯದ ದಿನಗಳು ನೆನಪಾದವು. ಪುಟಾಣಿಗಳಿಗೂ ತುಂಬ ಇಷ್ಟವಾಗಬಹುದು.