ಚಿಕನ್ ಕಸೂತಿ ಕಲೆ
ಇಂಗ್ಲಿಷ್ ನಲ್ಲಿ ಚಿಕನ್ ಎಂದಾಕ್ಷಣ ನೆನಪಾಗುವುದು ಕೋಳಿ. ಆದರೆ ಇದು ಹಿಂದಿ ಭಾಷೆಯ ಚಿಕನ್ ! ಜವುಳಿ ಅಂಗಡಿಗಳಲ್ಲಿ ಅಥವಾ ವಸ್ತು ಪ್ರದರ್ಶನದಂತಹ ಮೇಳಗಳಲ್ಲಿ ಬಣ್ಣಬಣ್ಣದ ಬಟ್ಟೆಯ ಮೇಲೆ ಬಿಳಿ ಬಣ್ಣದ ನೂಲಿನಿಂದ ಕಲಾತ್ಮಕವಾಗಿ ಕಸೂತಿ ಮೂಡಿಸಿದ ಜುಬ್ಬಾ, ಕುರ್ತಾ, ಸೀರೆ, ಸಲ್ವಾರ್ ಕಮೀಜ್ , ಶಾಲು ಇತ್ಯಾದಿಗಳನ್ನು ನೋಡಿರುತ್ತೇವೆ ಹಾಗೂ ಕೊಂಡಿರುತ್ತೇವೆ. ಆ ಬಟ್ಟೆ ನೋಡಿದ ತಕ್ಷಣ ‘ಇದು ಉತ್ತರಭಾರತದ ವಿನ್ಯಾಸ’ ಎಂಬ ಛಾಪನ್ನು ಮೂಡಿಸುವ ಸುಪ್ರಸಿದ್ಧ ಕಸೂತಿ ಕಲೆಯ ಹೆಸರು ‘ಲಖ್ನೋ ಚಿಕನ್ ಎಂಬ್ರಾಯ್ಡರಿ’ ! (Lucknow Chikan Embroidary).
ಲಖ್ನೋ ಪಟ್ಟಣದ ಕಲಾಕಾರರು ಹತ್ತಿ ಮತ್ತು ರೇಷ್ಮೆ ಬಟ್ಟೆಗಳ ಮೇಲೆ, ಚಿತ್ತಾರ ರಚಿಸುವ ಚಿಕನ್ ಎಂಬ್ರಾಯ್ಡರಿ ಕಲೆಯು, ಮೂರು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಚಿಕನ್ ಕಸೂತಿ ಕಲೆಯು, ಈಗ ಇರಾನ್ ಎಂದು ಕರೆಯಲ್ಪಡುವ, ಪರ್ಷಿಯಾ ದೇಶದಿಂದ ಬಂದ ಕಲೆಯೆಂದು ನಂಬಲಾಗಿದೆ. ಮೊಗಲ ವಂಶದ ದೊರೆಯಾದ ಜಹಾಂಗೀರ್ ನ ಪತ್ನಿ, ನೂರ್ಜಹಾನ್ ಳ ಪ್ರಯತ್ನದಿಂದ ಈ ಕಲೆ ಭಾರತ ತಲುಪಿರಬಹುದೆಂದು ಅಭಿಪ್ರಾಯವೂ ಇದೆ.
ಚಿಕನ್ ಕಸೂತಿಯನ್ನು ಬಟ್ಟೆಯ ಮೇಲೆ ಸೂಜಿಯ ಮೂಲಕ ಮೂಡಿಸಲು ಅನುಕೂಲವಾಗಲೆಂದು ಪ್ರಿಂಟ್ ಗಳಿಲ್ಲದ ಹಗುರವಾದ ಹತ್ತಿ, ಮಸ್ಲಿನ್ , ಜಾರ್ಜೆಟ್ , ಶಿಫಾನ್ ಕ್ರೇಪ್ಕೆ, ಸಿಲ್ಕ್ ಇತ್ಯಾದಿ ತುಸು ತೆಳ್ಳಗಿನ ಬಟ್ಟೆಯನ್ನು ಆಯ್ದು ಕೊಳ್ಳುತ್ತಾರೆ. ಬಿಳಿದಾರದ ಕಸೂತಿ ಮೂಡಿಸುವುದು ಲಕ್ನೋ ಚಿಕನ್ ಕಲೆಯ ವೈಶಿಷ್ಯ. ಈ ರೀತಿಯ ವರ್ಣ ಸಂಯೋಜನೆಯು ಕಸೂತಿಯ ಅಂದವನ್ನು ಹೆಚ್ಚಿಸುತ್ತದೆ. ಆಕರ್ಷಕ ವಿನ್ಯಾಸಗಳನ್ನು ಬಟ್ಟೆಯ ಮೇಲೆ ಗುರುತು ಹಾಕುವುದು ಮೊದಲ ಹಂತ. ವಿನ್ಯಾಸದ ಮೇಲೆ ಕಸೂತಿ ಹೊಲಿದು, ಬೇಕಾಗಿರುವ ಉಡುಪುಗಳನ್ನು ಮಾರಾಟಕ್ಕಾಗಿ ಸಿದ್ಧಗೊಳಿಸುವುದು ಎರಡನೆಯ ಹಂತ.
‘ಚಿಕನ್’ ಕಸೂತಿಯಲ್ಲಿ ಸೊಗಸಾದ 30 ಕ್ಕೂ ಹೆಚ್ಚು ಮಾದರಿಯ ಕಸೂತಿ ಹೊಲಿಗೆಗಳಿವೆ. ವೈವಿಧ್ಯಮಯವಾದ ಹೂ ಬಳ್ಳಿಗಳು, ಪ್ರಾಣಿ-ಪಕ್ಷಿಗಳು, ಚಿತ್ರಗಳು, ವೃತ್ತಗಳು ಇತ್ಯಾದಿ ವಿನ್ಯಾಸಗಳನ್ನು ಕೈ ಹೊಲಿಗೆಯ ಮೂಲಕ ಬಟ್ಟೆ ಮೇಲೆ ಚಕಚಕನೇ ಮೂಡಿಸುವ ಕಲಾಕಾರರ ನೈಪುಣ್ಯ ಅಭಿನಂದನಾರ್ಹ. ಮೂಲತ: ಬಿಳಿನೂಲಿನಿಂದ ಹೊಲಿಯುವ ಸುಂದರ ಕಲೆಯಾಗಿದ್ದ ಚಿಕನ್ ಕಸೂತಿಯು, ಆಧುನಿಕ ಜನರ ಫ್ಯಾಷನ್ ಹಾಗೂ ಆಸಕ್ತಿಗೆ ತಕ್ಕಂತೆ ಬಣ್ಣಬಣ್ಣದ ಮಣಿಗಳು, ಗುಂಡಿಗಳು ಇತ್ಯಾದಿಗಳನ್ನು ಸೇರಿಸಿಕೊಂಡು ಇನ್ನಷ್ಟು ಆಕರ್ಷಕವಾಗಿ ರೂಪುಗೊಳ್ಳುತ್ತಿದೆ.
.
– ಹೇಮಮಾಲಾ.ಬಿ
ಕಂಡರೂ ಕಾಣದಷ್ಟು ತೆಳು ಮಸ್ಲಿನ್ ಬಟ್ಟೆ, ಅದರ ಮೇಲೆ ಮಾಡಿದ ವಿವಿಧ ರೇಖಾವಿನ್ಯಾಸಗಳು (outlines), ಅದರೊಂದಿಗೆ ಹಿಂಭಾಗದಿಂದ ತೋರುವ ನೂಲಿನೆಳೆಯ ನೆರಳಿನ (shadow) ಸೌಂದರ್ಯ… ಆ ಮೋಹಕ ಚಿಕನ್ ಕಾರಿಯಷ್ಟೇ ಸೊಗಸಾಗಿದೆ ಅದರ ಈ ವರ್ಣನೆ. ವಸ್ತ್ರಮೇಳಗಳ ಮೂಲಕ ವಿಶ್ವದಾದ್ಯಂತ ತಲುಪುತ್ತಿರುವ ಸಾಂಪ್ರದಾಯಿಕ ಕಸೂತಿಕಲೆಗಳು ಫ್ಯಾಶನ್ ಕ್ಷೇತ್ರದ ಹೆಮ್ಮೆ. ಲೇಖನ ಓದಿ ಖುಷಿಯಾಯಿತು.
ನೀವು ಸುರಹೊನ್ನೆಯ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸುವ ಪರಿ ಬಲು ಸೊಗಸು, ಪುಟ್ಟ ಲೇಖನದಂತಿರುತ್ತದೆ. ಪ್ರೋತ್ಸಾಹದಾಯಕವಾದ ಪ್ರತಿಕ್ರಿಯೆ ಕೊಡುವುದು ಒಂದು ಕಲೆ, ಒಳ್ಳೆ ಮನಸ್ಸಿನ ಪ್ರತೀಕ. ಧನ್ಯವಾದಗಳು ಸಿಂಧು ದೇವಿ ಅವರೇ 🙂