ದುಬೈ:ರಂಗಪ್ರವೇಶದಲ್ಲಿ ರಂಜಿಸಿದ ಸಂಜನಾ
ಸಂಯುಕ್ತ ಅರಬ್ ಸಂಸ್ಥಾನದ ( ಯು.ಎ ,ಇ ) ದೇಶದ ದುಬೈ ನಗರದ ಭಾರತೀಯ ರಾಯಭಾರ ಕಛೇರಿಯ ಸಭಾಂಗಣದಲ್ಲಿ ಶನಿವಾರ , ದಿನಾಂಕ 25 ನವಂಬರ್ 2017 ರಂದು ಕನ್ನಡದ ಕುವರಿ ಸಂಜನಾ ನೂಜಿಬೈಲ್ ಭರತನಾಟ್ಯ ರಂಗಪ್ರವೇಶ ನೆರವೇರಿತು.
ದುಬೈನ ‘ಹಾರ್ಮನಿ ನೃತ್ಯ ಸಂಸ್ಥೆ‘ ಆಯೋಜಿಸಿದ್ದ ಈ ಸಮಾರಂಭದಲ್ಲಿ ಕು.ಸಂಜನಾ ಸಹಿತ ಒಟ್ಟು 8 ನೃತ್ಯ ವಿದ್ಯಾರ್ಥಿಗಳ ರಂಗಪ್ರವೇಶವಾಯಿತು. ನೃತ್ಯ ಕಲಾವಿದೆ ಶ್ರೀಮತಿ ರೂಪಾ ಕಿರಣ್ ಕುಮಾರ್ ಅವರ ಶಿಷ್ಯೆಯಾಗಿರುವ ಸಂಜನಾ ಈ ಕಾರ್ಯಕ್ರಮದಲ್ಲಿ ತನ್ನ ಅಚ್ಚುಕಟ್ಟಾದ ನೃತ್ಯಪ್ರದರ್ಶನದಿಂದ ನೆರೆದ ಸಭಿಕರೆಲ್ಲರ ಪ್ರಶಂಸೆಗೊಳಗಾದಳು. ನೃತ್ಯ ಕಲೆಯ ಬಗ್ಗೆ ಸಂಜನಾಳಿಗಿರುವ ಆಸಕ್ತಿ ,ಶ್ರದ್ಧೆ ಹಾಗು ಅವಿರತ ಅಭ್ಯಾಸದ ಫಲ ಈ ಪ್ರದರ್ಶನದ ಉದ್ದಕೂ ಕಂಡು ಬಂತು.
ಸಮಾರಂಭದ ಮುಖ್ಯ ಅತಿಥಿ ಮೂಡಬಿದರೆಯ ಆಳ್ವಾಸ್ ಕಾಲೇಜಿನ ಲಲಿತಕಲಾ ವಿಭಾಗದ ಸಹಪ್ರಾಧ್ಯಾಪಕರಾದ ಶ್ರೀಮತಿ ಮೇರಿ ಬಿನಿ ಮತ್ತು ನೃತ್ಯ ಗುರು ಶ್ರೀಮತಿ ರೂಪಾ ಕಿರಣ್ ಕುಮಾರ್ ದೀಪ ಬೆಳಗುವುದರ ಮೂಲಕ ಸಭಾಕಾರ್ಯಕ್ರಮ ಆರಂಭವಾಯಿತು.
ಸಾಂಪ್ರದಾಯಿಕ ಪುಷ್ಪಾಂಜಲಿಯಿಂದ ಆರಂಭವಾದ ಸಂಜನಾಳ ನೃತ್ಯ ಸುಮಾರು ಮೂರು ಘಂಟೆಗಳ ಕಾಲ ನಿರರ್ಗಳವಾಗಿ ಜರುಗಿತು. ನುರಿತ ಕಲಾವಿದೆಯಂತೆ ಅಲಾರಿಪು,ಜತಿಸ್ವರ ,ಶಬ್ದ ,ವರ್ಣ ,ಕೀರ್ತನೆ,ದೇವರನಾಮ ಹೀಗೆ ಒಂದಾದ ಮೇಲೊಂದು ನೃತ್ಯವನ್ನು ತನ್ನ ಹಾವ ಭಾವದ ಅಭಿನಯದೊಂದಿಗೆ ಸಂಜನಾ ನೆರೆದಿದ್ದ ಕಲಾರಸಿಕರ ಮೆಚ್ಚುಗೆಗೆ ಪಾತ್ರಳಾದಳು.
ಜಂಟಿಯಾಗಿ ಅಭಿನಯಿಸಲ್ಪಟ್ಟ ‘ಮಹಿಷಾಸುರ ಮರ್ಧಿನಿ‘ಯ ‘ದೇವಿ‘ಯಾಗಿ ಸಂಜನಾ ಸಂಪೂರ್ಣರಂಗಸ್ಥಳವನ್ನು ಬಳಸಿಕೊಂಡು ಚುರುಕಾಗಿ ಹೆಜ್ಜೆಹಾಕುತ್ತಾ ನೀಡಿದ ಪ್ರದರ್ಶನ ಅತ್ಯಧ್ಭುತವಾಗಿ ಮೂಡಿಬಂತು.
ವಸ್ತ್ರ ಬದಲಾವಣೆಯ ನಂತರ ಶ್ರೀ ಕನಕದಾಸರಿಂದ ರಚಿಸಲ್ಪಟ್ಟ ‘ಬಾಗಿಲನು ತೆರೆದು’ ಕೃತಿಗೆ ಸಂಜನಾ ಭಾವನಾತ್ಮಕವಾಗಿ ಅಭಿನಯಿಸಿದಳು. ಉಡುಪಿ ಶ್ರೀಕೃಷ್ಣ ದೇವರ ದರ್ಶನಕ್ಕೆ ಅನುಮತಿ ನಿರಾಕರಿಸಿದ ಸಂಧರ್ಭದಲ್ಲಿ ಕನಕದಾಸರು ತೋರಿದ ದೈನ್ಯತೆಯ ಅಭಿನಯದ ಮನೋಜ್ಞ. ಇದರ ವಿಶೇಷತೆಯೆಂದರೆ ಈ ನೃತಕ್ಕೆ ತನ್ನ ಸುಮಧುರ ಕಂಠದಿಂದ ಪ್ರದರ್ಶನಕ್ಕೆ ಮೆರುಗು ತಂದುಕೊಟ್ಟವರು ಸ್ವತಃ ಸಂಜನಾಳ ತಾಯಿ ಶ್ರೀಮತಿ ಸ್ಮಿತಾ ನೂಜಿಬೈಲ್. ಇವರು ಪುತ್ತೂರಿನ ವಿದ್ವಾನ್ ಕಾಂಚನ ಈಶ್ವರ ಭಟ್ ಇವರ ಶಿಷ್ಯೆ ಹಾಗು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಡೆಕ್ಕಿಲ ಶ್ರೀಧರ ಭಟ್ ಮತ್ತು ಸಾವಿತ್ರಿ ದಂಪತಿಗಳ ಸುಪುತ್ರಿ .
ಈ ಕಾರ್ಯಕ್ರಮಕ್ಕೆ ಸುಶ್ರಾವ್ಯ ಕಂಠವನ್ನು ನೀಡಿದವರು ಶ್ರೀ ಸಜೀವ್ ಬಾಲಕೃಷನ್ ಮತ್ತು ಶ್ರೀಮತಿ ಸ್ಮಿತಾ ನೂಜಿಬೈಲ್. ಪಕ್ಕವಾದ್ಯದಲ್ಲಿ ಶ್ರೀ ಶಂಕರನಾರಾಯಣನ್ ಕೃಷ್ಣನ್ (ಮೃದಂಗ) , ಶ್ರೀ ಶ್ಯಾಮ್ ಶಶಿ (ವಾಯೊಲಿನ್) ಮತ್ತು ಶ್ರೀ.ನವೀನ್ ಶ್ರೀಧರನ್ (ಕೊಳಲು) ಸಹಕರಿಸಿದರು.
ಹದಿನಾಲ್ಕನೇ ವಯಸ್ಸಿನ ಮೃದು ಸ್ವಭಾವದ ಸಂಜನಾ ದುಬೈ ಸ್ಕಾಲರ್ ಪ್ರೈವೇಟ್ ಸ್ಕೂಲ್ ನ 9ನೇ ತರಗತಿಯ ವಿದ್ಯಾರ್ಥಿನಿ .ಕರ್ನಾಟಕ ಶಾಸ್ತ್ರೀಯ ಸಂಗೀತಾ ಗಾಯಕಿ ಶ್ರೀಮತಿ ಸ್ಮಿತಾ ನೂಜಿಬೈಲ್ ಹಾಗು ಸುಮಾರು ಕಳೆದ 20 ವರ್ಷಗಳಿಂದ ದುಬೈ ನಿವಾಸಿಯಾಗಿರುವ ಟೆಲಿಕಾಮ್ ಇಂಜಿನಿಯರ್ ಶ್ರೀ ಅಮರನಾಥ ನೂಜಿಬೈಲ್ ಇವರ ಸುಪುತ್ರಿ.
ಶಾಸ್ತ್ರೀಯ ಲಲಿತಕಲೆಯ ಪರಿಸರದಲ್ಲಿ ಜನಿಸಿದ ಸಂಜನಾ ತನ್ನ ಎಳೆಯ ವಯಸ್ಸಿನಿಂದಲೆ ಹಾಡಲು ಪ್ರಾರಂಭಿಸಿದಳು. ನಾಟ್ಯ ಕಲೆಯ ಕಡೆಗೆ ಹೆಚ್ಚಿನ ಅಭಿರುಚಿ ಬೆಳೆಸಿಕೊಂಡ ಸಂಜನಾಳಿಗೆ ‘ಹಾರ್ಮನಿ ನೃತ್ಯ ಸಂಸ್ಥೆ‘ಯ ಸಮರ್ಥ ನೃತ್ಯ ನಿರ್ದೇಶಕಿ ಹಾಗು ನೃತ್ಯ ಗುರುಗಳಾದ ಶ್ರೀಮತಿ ರೂಪಾ ಕಿರಣ್ ಕುಮಾರ್ ಅವರ ದಕ್ಷ ಮಾರ್ಗದರ್ಶನದ ಅವಕಾಶ ಪ್ರಾಪ್ತವಾಯಿತು. ಭರತನಾಟ್ಯವನ್ನು ತನ್ನ ಉಸಿರಿನಷ್ಟೇ ಪ್ರೀತಿಸುವ ಸಂಜನಾ ದಿನಂಪ್ರತಿ ತಪ್ಪದೆ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ. ಇದುವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಸಂಜನಾ ದುಬೈ ಗ್ಲೋಬಲ್ ವಿಲೇಜ್ ಮತ್ತು ಹಲವು ಸಾಂಸ್ಕೃತಿಕ ಹಾಗು ಧಾರ್ಮಿಕ ಸಮಾರಂಭದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾಳೆ.
ವಿದೇಶದಲ್ಲಿ ಬೆಳೆದು ಭಾರತೀಯ ಕಲೆಯನ್ನು ಕಲಿತು ಅದರಲ್ಲಿ ಪರಿಣಿತಿ ಗಳಿಸಿ ರಂಗಪ್ರವೇಶ ಮಾಡುವುದು ಚಿಕ್ಕ ಸಾಧನೆಯೇನೂ ಅಲ್ಲ. ಭಾರತೀಯ ಸಂಸ್ಕೃತಿಯನ್ನು ತಮ್ಮೊಂದಿಗೆ ವಿದೇಶಕ್ಕೆ ಕೊಂಡೊಯ್ದು ಅದನ್ನು ಉಳಿಸಿ ಬೆಳೆಸುವ ಅನಿವಾಸಿ ಭಾರತೀಯ ಪೋಷಕರ ಪ್ರಯತ್ನ ಸ್ತುತ್ಯಾರ್ಹ.
.
ವರದಿ : ಪದ್ಮನಾಭ ಪ್ರಸಾದ್ ನೆಕ್ಕರೆ, ದುಬೈ
Smitha Noojibail Amarnath Noojibail ಲೇಖಕರಂದಂತೆ ವಿದೇಶದಲ್ಲಿದ್ದುಕೊಂಡು ಮಾಡುವ ಭಾರತೀಯ ಕಲಾಪ್ರಕಾರಗಳಲ್ಲಿನ ಸಾಧನೆ ದೊಡ್ಡದು. ಕಲೆಗಳ ಮೇಲಿನ ನಿಮ್ಮ ಅಪಾರ ಒಲವು ಇಲ್ಲಿ ವ್ಯಕ್ತವಾಗುತ್ತದೆ. ಪುಟ್ಟ ಸಂಜನಾಳಿಗೆ ಶುಭವಾಗಲಿ 🙂
ದೂರದ ದುಬೈನಲ್ಲಿದ್ದರೂ ತಾಯ್ನೆಲದ ಕಲೆಯನ್ನು ಕಲಿತು ಪ್ರಸ್ತುತಪಡಿದ ಸಂಜನಾಳ ಪ್ರತಿಭೆಗೆ ಅಭಿನಂದನೆಗಳು. ಅವಳ ಭವಿಷ್ಯ ಉಜ್ವಲವಾಗಲಿ ಎಂದು ನಮ್ಮ ಹಾರೈಕೆ.
ಸಂಜನಾಳಿಗೆ ಶುಭವಾಗಲಿ..
ಬಾಲ ಪ್ರತಿಭೆ ಸಂಜನಾ ಕಲಾಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲಿ …..ಶುಭ ಹಾರೈಕೆಗಳು….
ಬೆಳೆಯುವ ಸಿರಿಯೊಂದಕ್ಕೆ ತಕ್ಕ ಪ್ರೋತ್ಸಾಹ, ಪೋಷಣೆ ಹಾಗೂ ವೇದಿಕೆ ಸಿಗುತ್ತಿರುವುದು ತುಂಬಾ ಸಂತೋಷ. ಸಂಜನಾಳ ಪ್ರತಿಭೆ ಇನ್ನಷ್ಟು ಬೆಳಗಲಿ. ಶುಭಾಶಯಗಳು, ಸಂಜನಾ 🙂