ಪುಸ್ತಕನೋಟ :ಅಂಜಲಿ ರಾಮಣ್ಣ ಅವರ ‘ಬೆಳಕಿನ ಸೆರಗು’

Share Button



ಕರ್ನಾಟಕ ಸಾಹಿತ್ಯ ಅಕಾಡೆಮಿಯವರ ಪ್ರಾಯೋಜಿತ ಪ್ರವಾಸ ಕಾರ್ಯಕ್ರಮದ ಮೂಲಕ ಆಯ್ಕೆಯಾಗಿ, ಅರುಣಾಚಲ ಪ್ರದೇಶ ಪ್ರವಾಸವನ್ನು ಕೈಗೊಂಡು, ತಮ್ಮ ಅನುಭವದ ಸಾರವನ್ನು ಅಚ್ಚುಕಟ್ಟಾಗಿ ಅಕ್ಷರರೂಪದಲ್ಲಿ ಕಟ್ಟಿಕೊಟ್ಟ ಅಂಜಲಿ ರಾಮಣ್ಣ ಅವರ ‘ಬೆಳಕಿನ ಸೆರಗು’ ಪುಸ್ತಕವು ಪ್ರವಾಸಾಕ್ತರಿಗೆ ಆಪ್ತವಾಗುವುದರಲ್ಲಿ ಸಂದೇಹವಿಲ್ಲ.

ಪ್ಯಾಕೇಜ್ ಟೂರ್ ಗಳಲ್ಲಿ ಅನುಕೂಲಕರವಾಗಿ ಪ್ರವಾಸ ಮಾಡಿ ಬರುವುದಕ್ಕೂ, ನಿಗದಿತ ಉದ್ದೇಶವಿಟ್ಟುಕೊಂಡು ಏಕಾಂಗಿಯಾಗಿ ಅಥವಾ ಕನಿಷ್ಟ ಸದಸ್ಯರೊಂದಿಗೆ ಕಂಡರಿಯದ, ಭಾಷೆ ಗೊತ್ತಿಲ್ಲದ ಊರಿನಲ್ಲಿ ಪ್ರಯಾಣ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ.

ತಮ್ಮ ಅರುಣಾಚಲ ಪ್ರದೇಶ ಪ್ರವಾಸದ ಸಂದರ್ಭದಲ್ಲಿ, ಲೇಖಕಿಯವರು ಭೇಟಿ ಮಾಡಿದ ಜನರು ಅದೆಷ್ಟು ವೈವಿಧ್ಯಮಯ ಹಿನ್ನೆಲೆಯವರು ಅನಿಸಿ ಅಚ್ಚರಿಯಾಗುತ್ತದೆ. ರಾಜ್ಯದ ವಯಸ್ಕ ಮುಖ್ಯಮಂತ್ರಿಯ ಕೊನೆಯ ಪುಟ್ಟ ತಂಗಿ, ಹಾಸ್ಟೆಲ್ ವಾರ್ಡನ್ , ಲಾಯರ್ ಗಳು , ಪೋಲೀಸ್ ಅಧಿಕಾರಿಗಳು, ಬೌದ್ಧ ಸನ್ಯಾಸಿಗಳು, ಬುಡಕಟ್ಟು ಮಹಿಳೆಯರು, ದೇವಾಲಯದ ಅರ್ಚಕರು, ಸೈನಿಕರು, ಇಂಗ್ಲಿಷ್ / ಹಿಂದಿ ಭಾಷೆ ಗೊತ್ತಿದ್ದವರು/ಗೊತ್ತಿಲ್ಲದವರು, ಅಲ್ಲಿ ವಾಸವಾಗಿರುವ ಕರ್ನಾಟಕದವರು ……ಹೀಗೆ ಮುಂದುವರಿಯುತ್ತದೆ. ಪ್ರತಿಯೊಬ್ಬರ ವಿಚಾರಗಳೂ ವಿಭಿನ್ನ ಹಾಗೂ ವಿಶಿಷ್ಟ.

ಲೇಖಕಿಯರಿಗೆ ಎದುರಾದ ಕೆಲವು ಸನ್ನಿವೇಶಗಳನ್ನು ಅವರು ನಿಭಾಯಿಸಿದ ರೀತಿಯು ಅವರ ಸಮಯಸ್ಪೂರ್ತಿ, ಕುಶಲತೆ ಮತ್ತು ಧೈರ್ಯವನ್ನು ಸೂಚಿಸುತ್ತವೆ. ಸೈನ್ಯದ ನಿಷೇಧಿತ ಜಾಗದಲ್ಲಿ ಆಕಸ್ಮಿಕವಾಗಿ ಸಿಲುಕಿಕೊಂಡಾಗಿನ ತಳಮಳ, ಬುಡಕಟ್ಟು ಜನರ ಬಸ್ತಿಯಲ್ಲಿ ಸ್ಥಳೀಯರು ತೋರಿದ ಆರಂಭಿಕ ತಿರಸ್ಕಾರ ಮತ್ತು ಅಪನಂಬಿಕೆ, ಪುಟ್ಟ ಮಗುವಿಗೆ ತಿಂಡಿ ತಿನಿಸು ಕೊಟ್ಟು ಅವರೆಲ್ಲರ ಪ್ರೀತಿ ಗಳಿಸಿದ ಚಾಕಚಕ್ಯತೆ, ಅನಿರೀಕ್ಷಿತವಾಗಿ ಯಾವುದೋ ಕಾಡುಪ್ರದೇಶದಲ್ಲಿ ರಾತ್ರಿ ಉಳಿಯಬೇಕಾದ ಅನಿವಾರ್ಯತೆ ಇತ್ಯಾದಿ ಅನುಭವಗಳನ್ನು ಓದುವಾಗ, ನಾವೇ ಆ ಸನ್ನಿವೇಶದಲ್ಲಿರುವಂತೆ ಆತಂಕವಾಗುತ್ತದೆ.

ಭೌಗೋಳಿಕವಾಗಿ ಹಿಮಾಲಯದ ತಪ್ಪಲಿನಲ್ಲಿ ಈಶಾನ್ಯ ಭಾರತದ ತುದಿಯಲ್ಲಿರುವ ಅರುಣಾಚಲ ಪ್ರದೇಶ ರಾಜ್ಯವು ಬಹಳಷ್ಟು ದಕ್ಷಿಣ ಭಾರತದವರಿಗೆ ಅಪರಿಚಿತವಾಗಿಯೇ ಉಳಿದಿದೆ. ಅರುಣಾಚಲ ಪ್ರದೇಶದ ಪ್ರಕೃತಿ ಸೌಂದರ್ಯ, ಜನಜೀವನ, ಸಂಪ್ರದಾಯಗಳು, ಹವಾಮಾನ, ಭೌಗೋಳಿಕ ವೈಶಿಷ್ಟ್ಯಗಳು, ಬೌದ್ಧಧರ್ಮದ ಆಚರಣೆಗಳು, ಹೊರಜಗತ್ತಿಗೆ ತೆರೆದುಕೊಳ್ಳಲು ಇಷ್ಟಪಡದ ಬುಡಕಟ್ಟು ಸಮುದಾಯಗಳು, ವಿದ್ಯಾಭ್ಯಾಸ ಪದ್ಧತಿ …..ಹೀಗೆ ಜೀವನದ ಹಲವು ಮಗ್ಗುಲುಗಳನ್ನು ಗಮನಿಸಿ ಅಂಜಲಿ ರಾಮಣ್ಣ ಅವರು ಬರೆದ ‘ಬೆಳಕಿನ ಸೆರಗು’ ಪುಸ್ತಕವು ಪ್ರವಾಸಾಕ್ತರಿಗೆ ಕೈಪಿಡಿಯಂತೆಯೂ, ಸಮಾಜಶಾಸ್ತ್ರದ ಅಧ್ಯಯನ ಮಾಡಬಯಸುವವರಿಗೆ ಆಕರ ಗ್ರಂಥವಾಗಿಯೂ ಸಹಕಾರಿಯಾಗಬಲ್ಲುದು.

-ಹೇಮಮಾಲಾ.ಬಿ

2 Responses

  1. ‘ಬೆಳಕಿನ ಸೆರಗು’ ಹೆಸರೇ ವಿಶಿಷ್ಟವಾಗಿದೆ. ಅಲ್ಪ ಸ್ವಲ್ಪ ಪತ್ರಿಕೆ ಓದುವ ಅಭ್ಯಾಸ ಇರುವವರಿಗೆಲ್ಲ ಅಂಜಲಿ ರಾಮಣ್ಣ ಅವರ ಬಗ್ಗೆ ಗೊತ್ತೇ ಇರುತ್ತದೆ. ಅವರ ಪ್ರವಾಸಕಥನದ ರೋಚಕ ಹೂರಣದ ಸುಳಿವು ಆಸಕ್ತರಿಗೆ ತಲುಪುವಂತೆ ವಿಮರ್ಶಿಸಿದ್ದೀರಿ, ಅಕ್ಕಾ. ಧನ್ಯವಾದಗಳು. ನಾನೊಬ್ಬ ಪುಸ್ತಕಪ್ರೇಮಿ ಎಂಬ ಫೇಸ್ ಬುಕ್ ಪುಟ ಇದೆ, ಹಂಚಲೇ?

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: