ನೀನಿಲ್ಲದೇ ನನಗೇನಿದೆ!

Share Button

            ಕನ್ನಡದ ಮಹಿಳಾ ಲೇಖಕಿಯರಲ್ಲಿ ಮುಂಚೂಣಿಯಲ್ಲಿರುವ ಶ್ರೀಮತಿ .ಛಾಯಾ ಭಗವತಿಯವರ ಪ್ರಬಂಧ ಸಂಕಲನ ‘ನೀನಿಲ್ಲದೇ ನನಗೇನಿದೆ ‘ ಕೃತಿ ಸೃಜನಶೀಲತೆಯ ಮಹಾಪೂರವನ್ನೇ ಹರಿಸಿದೆ. ಮೃದುವಾದ ಹಾಸ್ಯದಿಂದ ಪಡಿಮೂಡಿದ ಚಿಕ್ಕ ಚಿಕ್ಕ ಸಂಗತಿಗಳು ಇವರ ಅಭಿವ್ಯಕ್ತಿಯಲ್ಲಿ ಮಹತ್ತರವಾಗಿ ಮೂಡಿಬಂದಿದೆ. ಸನ್ನಿವೇಶಗಳನ್ನು ಬರವಣಿಗೆಗೆ ತಕ್ಕಂತೆ ಲಾಲಿತ್ಯಪೂರ್ಣವಾಗಿ ಪರಿವರ್ತಿಸುವ ಕುಶಲತೆ ಇವರ ಬರಹಗಳಲ್ಲಿ ಸಿದ್ದಿಸಿದೆ.ಆದುದರಿಂದ ಇಲ್ಲಿಯ ಬರಹಗಳು ವಿಶಿಷ್ಟವಾಗಿ ತೋರುತ್ತದೆ. ನಮ್ಮನ್ನೆಲ್ಲ ತಿಂಗಳುಗಳ ಕಾಲ ಕಂಗೆಡಿಸಿದ ಚಿಕೂನ್ ಗುನ್ಯಾ ಜ್ವರವನ್ನು ಅನುಭವಿಸಿದವರು ಅದನ್ನು ಮತ್ತೆ ಅಪ್ಪಿ ತಪ್ಪಿಯು ನೆನಪಿಸಲು,ಕನಸಲ್ಲು ಕಾಣದಿರಲು ಹವಣಿಸುತ್ತಾರೆ ಎಂಬುದು ದಿಟ! ಆದರೆ ಇಲ್ಲಿ ಲೇಖಕಿಯು, ಆ ಜ್ವರದಲ್ಲಿ ತಾನು ಸೇರಿದಂತೆ ಮನೆಮಂದಿಯೆಲ್ಲ ಅನುಭವಿಸಿದ ಆ ಕಷ್ಟಕರ ದಿನಗಳನ್ನು ಯಾವುದೇ ನಿರ್ಬಂಧಗಳನ್ನು ಹಾಕಿಕೊಳ್ಳದೆ ಹಾಸ್ಯದ ಲೇಪನದಲ್ಲಿ ನಮಗೆಲ್ಲಾ ಉಣಬಡಿಸಿ, ಓದುಗರನ್ನು ಒಂದು ಕ್ಷಣದ ಮಟ್ಟಿಗೆ ತಲ್ಲೀನವಾಗಿಸಿದ್ದಂತು ನಿಜ! ಕವಿ ಮನಸ್ಸು ಎಂದರೆ ಇದೇ ತಾನೇ?   ‘ಚಿಗುಎಂಕೀರೋಸುಂ ‘ ಎಂಬ ವಿಭಿನ್ನ ಹೆಸರಿನ ಈ ಪ್ರಬಂಧ ಅತ್ಯುತ್ತಮವಾಗಿದೆ. ನಿಸ್ಸಂಕೋಚವೇ ಇವರ ಬರಹದ ಶಕ್ತಿ ಎಂದರು ತಪ್ಪಾಗಲಾರದು. ಪ್ರೀತಿ, ನೋವು,ಹತಾಶೆ,ಆಹ್ಲಾದ ,ನಲಿವು ಎಲ್ಲವನ್ನೂ ಧನಾತ್ಮಕವಾಗಿ ನೋಡುವ ಇವರ ಚಿಂತನೆ ಪ್ರತಿ ಬರಹದಲ್ಲು ಎದ್ದು ಕಾಣುತ್ತದೆ. ನನಗೆ ತುಂಬಾ ಇಷ್ಟವಾದ ಮತ್ತು ಆಪ್ತವಾದ ‘ಬೇರಿಗಿಳಿದ ನೀರು ‘ಪ್ರಬಂಧ ಅನನ್ಯವಾಗಿದೆ. ಒಂದು ವಿಷಯವನ್ನು ಪ್ರಸ್ತುತ ಪಡಿಸುವಾಗ ಅದರ ಸುತ್ತಾ ತಮ್ಮ ಸ್ವಂತ ಅಭಿಪ್ರಾಯವನ್ನು ಹೆಣೆಯುತ್ತಾ  ಬರೆಯುವುದು ಇಲ್ಲಿನ ಪ್ರಬಂಧಗಳ ವಿಶೇಷಗುಣ. ವಿಷಯಕ್ಕೆ ಪೂರಕವಾಗಿ ಸೂಕ್ತ ವಿಚಾರಗಳನ್ನು ತುಂಬುತ್ತಾ ಪ್ರಬಂಧವನ್ನು ಇನ್ನೂ ಅಂದಗಾಣಿಸುತ್ತಾರೆ. ‘”ನೀವಂದುಕೊಂಡಷ್ಟು ಮುಗ್ದೆಯಲ್ಲ ಬಿಡರಿ ನಾನು ” ಅಂತ ತಮ್ಮನ್ನು ತಾವು ಕೆಣಕಿಕೊಂಡು ಬರಹವನ್ನು ಮುಂದುವರೆಸುವ ಪರಿ,ಇಂತಹ ಹಾಸ್ಯದ ರೀತಿಯನ್ನು ಓದುವ ನಮಗೆ ಮನಸ್ಸು ತೀರಾ ಪ್ರಫುಲ್ಲಗೊಳ್ಳುತ್ತದೆ.

           ಉತ್ತರ ಕರ್ನಾಟಕ ಶೈಲಿಯ ಹಳ್ಳಿ ಭಾಷೆ,ಅದರೊಂದಿಗೆ ತಾವು ಬೆಳೆದು ಬಂದ ವಾತಾವರಣ, ಅಪ್ಪ, ಅಮ್ಮ, ಹೀಗೆ ಎಲ್ಲವನ್ನೂ ಎಲ್ಲರನ್ನೂ ಬಾಚಿ ಬಾಚಿ ತಬ್ಬಿ ತನ್ನ ಬರವಣಿಗೆಯ ಬಗಲಿನ ತೆಕ್ಕೆಗೆ ಹಾಕಿಕೊಂಡಿರದ್ದಾರೆ.ಅವರೂರಿನ ಬೌಗೋಳಿಕ ಸನ್ನಿವೇಶಗಳನ್ನು ಜೊತೆಗೆ ಭಾಷೆಯನ್ನು ಲವಲವಿಕೆಯಿಂದ ಇಲ್ಲಿ ಬಳಸಿಕೊಂಡಿದ್ದಾರೆ. ತನ್ನೂರಿನ ಒಡನಾಟಗಳನ್ನೆಲ್ಲಾ ಮುಗಿಸಿ ಉದ್ಯೋಗ, ಸಂಸಾರದ ಜಂಜಾಟಗಳಿಗೆ ಬಂದ ಮೇಲೆ ಬೆಂಗಳೂರಿನಂತಹ ಮಹಾನಗರಕ್ಕೆ ಕಾಲಿಟ್ಟ ಸನ್ನಿವೇಶವನ್ನು ತಿಳಿಹೇಳಿದ್ದು ಮಾರ್ಮಿಕವಾಗಿದೆ.’ ನಾನು ಮನೆಯೊಳಗಿನ ಮನೆಯೇ ನನ್ನಳೊಗೋ ಪ್ರಬಂಧ ಮುಗಿಬಿದ್ದು ಓದುವಂತೆ ಮಾಡುತ್ತದೆ. ತನ್ನ ಗಂಡ ಮಕ್ಕಳು ಸೇರಿದಂತೆ ಬಾಡಿಗೆ ಮನೆ ಹುಡುಕುವ ಪರಿಪಾಟಲನ್ನು ನವಿರು ಹಾಸ್ಯದಲ್ಲಿ ಬಣ್ಣಿಸಿದ ಶೈಲಿ ಒಂದೇ ಗುಟುಕಿಗೆ ಓದಿ ಮುಗಿಸುತ್ತದೆ. ಯಾವುದೇ ವಿಚಾರವನ್ನಾಗಲೀ ಆ ಸಂದರ್ಭದ ನಿಯಮಗಳಿಗೆ ಹೊಂದುವಂತೆ ಬರೆಯುತ್ತಾರೆ!

          “ನಮ್ಮನ್ನು ನಮ್ರರನ್ನಾಗಿಸುವುದು, ನಡೆಯುವ. ದಾರಿ ನಂಬುಗೆಯ ನೆರಳಿನಲ್ಲಿ ಇರಬೇಕು ಅಂತ ಹೇಳುವುದು ನಮ್ಮ ಬದುಕಿನ ವಾಸ್ತವ ಚಿತ್ರಣಗಳೇ ಹೊರತು ಇದ್ಯಾವುದೂ ಅಲ್ಲ “ ಎಂದು ಹೇಳುವ ಲೇಖಕಿಯ ಅಂತರಂಗ ನಮ್ರತಾಭಾವದಿಂದ ಕೂಡಿದೆ. ನಮ್ಮ ಅಂತರಂಗದ ತುಡಿತತಳೇ ತಾನೇ ಅಕ್ಷರ ರೂಪದಲ್ಲಿ ಹೊರಹೊಮ್ಮುವುದು. ಅನಾಯಾಸವಾಗಿ ನಗು ಉಕ್ಕಿಸುವ ಶಾಲೆಯೆಂಬ ಮಾಯಾಲೋಕ,ಒಂದು ಹಾಡಿನ ಪ್ರಸಂಗ,ನಾಮಾಯಣ ಇತ್ಯಾದಿ ತುಂಬಾ ಆಪ್ಯಾಯಮಾನವಾಗಿದೆ. ಬರಹಗಾರರಿಗೆ ಕಾಳಜಿಯ ಗುಣದ ತುಡಿತ ಇರಲೇಬೇಕು ಎಂಬುದು ನನ್ನ ಅಭಿಮತ. ಸಮಾಜದ ಕುರಿತ ಕಾಳಜಿಯೊಂದಿಗೆ ಸರ್ವ ಜೀವಿಗಳ ಕುರಿತ ಅಗಾಧ ಕಾಳಜಿಯೇ ಬರಹಗಾರರ ಮೂಲಧಾತು. ಏಕೆಂದರೆ ನಮ್ಮ ತುಡಿತಗಳು ಕಾಳಜಿಯ ರೂಪದಲ್ಲಿ ಹೊರಹೊಮ್ಮಿಸಮಾಜದ ಅಥವ ವ್ಯಕ್ತಿಗಳ ಅನ್ಯಾಯ ಅವಗುಣಗಳನ್ನು ನಮ್ಮ ಬರಹಗಳು ಪ್ರತಿಭಟಿಸಬೇಕು.ಕನ್ನಡ ವಿಷಯ ಇರುವ  ಶಾಲೆಗೆ ಮಗುವನ್ನು ಕಳಿಸಬೇಕೆಂಬ ಅವರ ಕಾಳಜಿ ಮಗುವನ್ನು ಅಂತಹ ಶಾಲೆಗೆ ಕಳಿಸಿಯೇ ಮಾಡಿ ತೋರಿಸಿದ್ದಾರೆ. ಮನೆ ಬಾಡಿಗೆ ಹುಡುಕುವ ಕ್ಷಣ ಅಪಾರ ದುಡ್ಡು ಹೇಳುವವರನ್ನು ನಿರ್ಧಾಕ್ಷಿಣ್ಯವಾಗಿ ಒಪ್ಪದೆ  ಬರುತ್ತಿದ್ದರು. ನಾನು ಗುರುತಿಸಿದಂತೆ ಇವರ ಪ್ರಬಂಧಗಳಲ್ಲಿ ವೃದ್ಧರಿಗೆ ಅತೀವ ಗೌರವ ತೋರಿದನ್ನು ಉಲ್ಲೇಖಿಸಿದ್ದಾರೆ. ಇದು ಮನಸ್ಸಿಗೆ ತುಂಬಾ ಹಿತವಾದ ವಿಚಾರ.  ಅವರ ಅತ್ಯಂತ ಆಪ್ತ ಸಂಗಜ್ಜ ರ ಕುರಿತ ಸರ್ವ ವಿಚಾರಗಳನ್ನು ಬರಹದಲ್ಲಿ ಹಿಡಿದಿಟ್ಟಿದ್ದಾರೆ.” ಸಂಗಜ್ಜರನ್ನು ಬೆರಗುಗೊಳಿಸಿದ ಸಂಗತಿಗಳನ್ನು ಹುಡುಕುವುದೇ ಕಷ್ಟ. ಅನಿಸುವ ಹಾಗೆ ಒಂದೊಂದು ಪುಟಾಣಿ ವಿಚಾರವು ಅವರನ್ನು ವಿಸ್ಮಯಗೊಳಿಸುತ್ತಿತ್ತು.. ಯಾವುದೇ ಪತ್ರಕ್ಕೆಯ ಫೋಟೋ ಒಂದು ಪುಟ್ಟ ಲೇಖನ ಅವರ ಮಗುವಂಥ ಮನಸ್ಸಿನ ಅಚ್ಚರಿಗೆ ಕಾರಣವಾಗುತ್ತಿತ್ತು.”ಹೀಗೆ ಬರೆಯುವ ಲೇಖಕಿ ಸಂಗಜ್ಜರನ್ನು ತೀರಾ ಹತ್ತಿರದಿಂದ ಅರ್ಥ ಮಾಡಿಕೊಂಡಿದ್ದರು. ಅಜ್ಜಂದಿರ ಕುರಿತು ಬರೆದ ಇನ್ನೊಂದು ಪ್ರಬಂಧ “ಅಜ್ಜಂದಿರ ಅನನ್ಯ ಲೋಕ “ನಿಜವಾಗಿಯೂ ನಮ್ಮನ್ನು ಅನನ್ಯ ಲೋಕದತ್ತ ಅನಾಯಾಸವಾಗಿ ಎಳೆದುಬಿಡುತ್ತದೆ.ಈ ಕಥನ ತಮ್ಮ ಬಂಧುವರ್ಗದ ಅಜ್ಜಂದಿರ ಲೋಕದ ಅನಾವರಣವಾಗಿದೆ. ಆ ಮುಗ್ಧ ಹಿರಿಯರಿಂದ ತಾವು ಕಲಿತ ಸನ್ಮಾರ್ಗಗಳನ್ನು ಕಂಡೂ ಕಾಣದಂತೆ  ಚಿತ್ರಿಸಿದ್ದಾರೆ. ಬೇಂದ್ರೆ ಯವರು ‘ನನಗೆ ಅರಳು  ಮರಳು ಇಲ್ಲ, ನಾನು ಮರಳಿ ಅರಳುತ್ತಿದ್ದೇನೆ ‘ಎಂದು ಒಂದು ಸಂದರ್ಭದಲ್ಲಿ ಹೇಳಿದ್ದು ನನಗೆ ನೆನಪಾಗುತ್ತದೆ. ಹೀಗೆ ಇವರ ಪ್ರಬಂಧದಲ್ಲಿರುವ ವಯೋವೃದ್ಧರೆಲ್ಲಾ ಮರಳಿ ಅರಳುತ್ತಿದ್ದಾರೇನೋ ಎಂಬುದಾಗಿ ನಮಗೆ ಭಾಸವಾಗುತ್ತದೆ. ಹಿರಿಯ ಜೀವಗಳಿಗೆ ತಮ್ಮ ಬರಹಗಳಿಂದ ಅಂತಹ ಚೈತನ್ಯ ಸ್ವರೂಪವನ್ನು ಲೇಖಕಿ ನೀಡಿದ್ದಾರೆ. ಇವರ ಬರಹವೇ ಅವರನ್ನು ಮರಳಿ ಅರಳಿಸಿದೆ ಎಂದರು ಅತಿಶಯೋಕ್ತಿ ಅಲ್ಲ.

            ಬದುಕಿನ ಬೆರಗುಗಳನ್ನು, ಜೊತೆಗೆ ಜೀವನದ ಅನುಭವಗಳನ್ನು ಚಿಂತನೆಯ ಪ್ರಕ್ರಿಯೆಗೆ ಒಳಪಡಿಸಿ ತದನಂತರ ಜತನದಿಂದ ಅಕ್ಷರ ಲೋಕಕ್ಕೆ ಇವುಗಳನ್ನು ಅನಾವರಣಗೊಳಿಸಿದ್ದಾರೆ.ಇಂತಹ ತಾದ್ಯತ್ಮಕತೆಯೇ ಇವರ ಲೇಖನಿಯ ಮತ್ತು ಲೇಖನಗಳ ಶಕ್ತಿ. ಸಾಮಾಜಿಕತೆ ಮತ್ತು ವೈಯಕ್ತಿಕತೆಗಳನ್ನು ಸಮೀಕರಿಸಿ ಬರೆಯುವ ಗುಣದಲ್ಲಿ ಇವರು ಯಶಸ್ವಿಯಾಗಿದ್ದಾರೆ. ಪ್ರಬಂಧಗಳಿಗೆ ನೀಡಿದ ಪ್ರತಿ ಶೀರ್ಷಿಕೆಯು ಅಭೂತಪೂರ್ವವಾಗಿದೆ.ಪ್ರಬಂಧವನ್ನು ಓದುವ ಕಾತರದ ಮೊದಲೇ ಶೀರ್ಷಿಕೆಗಳೇ ನಮ್ಮನ್ನು ಆವರಿಸಿಕೊಳ್ಳುತ್ತದೆ.ತುಂಬಾ ಮುಕ್ತ ಪ್ರಜ್ಞೆ ಯಿಂದ ಬರೆಯುವ ಲೇಖಕಿ ಛಾಯಾರವರ ಹಾದಿ ಇನ್ನೂ ವಿಸ್ತಾರಗೊಳ್ಳಲಿ ಮತ್ತು ಸಾಹಿತ್ಯದಲ್ಲಿ ಗಟ್ಟಿ ಛಾಪು ನುಡಿಸಲು ಎಂಬುದು ನನ್ನಂತರಂಗದ ಹಾರೈಕೆ.

 

-ಸಂಗೀತ ರವಿರಾಜ್ . ಮಡಿಕೇರಿ                                    

2 Responses

  1. ಮಕ್ಕಳಿಗೆ ಪೆಪ್ಪರಮಿಂಟಿನ ಆಸೆ ತೋರಿಸಿದಂತೆ ಪುಸ್ತಕವನ್ನೊಮ್ಮೆ ಓದಲೇಬೇಕು ಎನ್ನುವ ಬಯಕೆ ಮೂಡಿಸಿದೆ ಈ ವಿಮರ್ಶೆ. ಒಳ್ಳೆಯ ಪುಸ್ತಕವೊಂದರ ಪರಿಚಯ ಮಾಡಿಕೊಟ್ಟಿರುವುದಕ್ಕೆ ಧನ್ಯವಾದಗಳು.

  2. Pl give address where this book will be purchased. Price also to be needed

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: