ವಲಸೆಯೆಂಬ ಹುಳಿ ಸಿಹಿ ಅನುಭವ
ಇತ್ತೀಚೆಗೆ ನನ್ನ ವೃತ್ತಿ ಜೀವನದಲ್ಲೊಂದು ತಿರುವು ಒದಗಿ ಬಂದು ನಾನೊಂದು ಅಪ್ಪಟ ಹಳ್ಳಿಗೆ ಶಿಫ಼್ಟ್ ಆದೆ. ತುಮಕೂರಿನ ಬಳಿಯ ಹೋಬಳಿ ಅದು. ಹಳ್ಳಿಯ ಜೀವನ ಹೊಸದೇನೂ ಅಲ್ಲವಾದರೂ ಈಗ್ಗೆ ಹೆಚ್ಚು ಕಡಿಮೆ ಇಪ್ಪತ್ತೈದು ವರ್ಷಗಳಿಂದ ಸಿಟಿಯಲ್ಲೇ ಬದುಕಿದ್ದ ಕಾರಣ ಅದೊಂದು ಕಲ್ಚರಲ್ ಶಾಕ್. ಹಳ್ಳಿಗರ ಮುಗ್ಧತೆ, ಬಡತನ , ಹಾಗೆಯೇ ಅಲ್ಲಿನ ಅನಾನುಕೂಲತೆಗಳು, ಮೂಢನಂಬಿಕೆಗಳು ಹೀಗೆ ಸಮಾನಾಂತರ ಪಾತಳಿಯ ಬದುಕನ್ನು ಅವಲೋಕಿಸುವ ಅವಕಾಶ. ಅದೇ ರೀತಿ ಹೊಸದೊಂದು ಊರಿನಲ್ಲಿ ಬೇರೆ ಬೇರೆ ಕಾರಣಕ್ಕೋಸ್ಕರ ನೆಲೆ ಊರುವ ‘ವಲಸೆ’ಯ ಪ್ರಕ್ರಿಯೆಯ ಬಗೆಯೂ ಒಂದು ಒಳ ನೋಟ ಸಿಕ್ಕಿತು.
ಒಂದು ಪೊರಕೆಯಿಂದ ಹಿಡಿದು ಟಿ ವಿ ಯ ವರೆಗೆ ನಾವು ನಗಣ್ಯ ಎಂದುಕೊಂಡ ವಸ್ತುಗಳೆಲ್ಲ ಎಷ್ಟು ಅನಿವಾರ್ಯವೂ ಅಗತ್ಯವೂ ಆಗಿದ್ದವೆಂದು ನಮಗೆ ಜ್ನಾನೋದಯವಾಗುವುದೇ ಬೇರೆ ಊರಿನಲ್ಲಿ ನೆಲೆಯಾಗುವ ಸಂದರ್ಭದಲ್ಲಿ. ಮಂಗಳೂರಿನಲ್ಲಿ ನಮ್ಮ ಬೀದಿಗಿಳಿದರೆ ಸಾಕು ಝೆರಾಕ್ಸ್ ಅಂಗಡಿಯಿಂದ ಹಿಡಿದು ದೇವಸ್ಥಾನ, ಆಸ್ಪತ್ರೆ, ಪಾರ್ಕ್ , ಮಾಲ್ ಎಂದೆಲ್ಲ ಕೈಗೆಟುಕುವಂತೆ ಅನುಕೂಲತೆಗಳಿದ್ದವು. ಇಲ್ಲಿ ನೋಡಿದರೆ ಎಲ್ಲೆಂದರಲ್ಲಿ ಜೋಳದ ಹೊಲಗಳು, ತೆಂಗಿನ ಕಾಯಿ ಸಿಪ್ಪೆ ರಾಶಿ ಹಾಕಿದ ಓಣಿಗಳು, ಟೀ ಕುಡಿಯಬೇಕಾದಲ್ಲಿ ಹತ್ತು ನಿಮಿಷ ದೂರದ ಧಾಬಾಕ್ಕೆ ಹೋಗಬೇಕಾದ ಪರಿಸ್ಥಿತಿ.
ದಿಢೀರನೆ ಈ ಊರಿಗೆ ಹೋಗಬೇಕಾದ ಕಾರಣ ಒಂದು ಸ್ಪೂನ್ ನಿಂದ ಹಿಡಿದು ಗ್ಯಾಸ್ ಸ್ಟವ್ ವರೆಗೆ ಎಲ್ಲವನ್ನು ಒಟ್ಟು ಮಾಡಿಕೊಳ್ಳಬೇಕಿತ್ತು. ಮಿನಿಮಂ ಅಗತ್ಯಗಳೊಂದಿಗೆಯೂ ಬದುಕಬಹುದು ಎಂದು ಅರಿವಾದದ್ದೇ ಆಗ. ಬಟ್ಟೆ ಒಣ ಹಾಕುವ ಹಗ್ಗದಿಂದ ಹಿಡಿದು ಹಾಲಿನ, ಪೇಪರ್ ಹಾಕುವ ವರೆಗೆ ನಮ್ಮ ಸಾಮಾಜಿಕ ಕೊಡಕೊಳ್ಳುವಿಕೆ ಎಷ್ಟು ಸಂಕೀರ್ಣವೂ, ಮಾನವೀಯತೆಯುಳ್ಳದ್ದೂ ಆಗಿದೆ ಅಲ್ಲವೇ?
ಮಂಗಳೂರಿನ ಜಡಿ ಮಳೆಗೆ ನೆನೆದು ಅಭ್ಯಾಸವಾದ ನನಗೆ ಕುಡಿಯುವ, ಅಡುಗೆಗೆ ಬೇಕಾದ ನೀರನ್ನೂ ದುಡ್ಡು ಕೊಟ್ಟು ಕೊಳ್ಳಬೇಕಾದ ವಿಷಯ ಹೊಸದು. ಅದೂ ಅಲ್ಲದೆ ಹೊಸ ಊರಿನಲ್ಲಿ ದಿನಸಿ ಅಂಗಡಿಯಿಂದ ಹಿಡಿದು ಸ್ಟೀಲ್ ಪಾತ್ರೆ ಅಂಗಡಿ, ಬಟ್ಟೆ ಅಂಗಡಿ ಎಂದೆಲ್ಲ ಸುತ್ತಾಡುವಾಗೆಲ್ಲ ನಮ್ಮ ಭಾಷೆಯನ್ನು ಕೇಳಿಯೇ “ಮಂಗ್ಳೂರಿನವರೇನ್ರಿ’ ಎಂದು ಕೇಳುವರು. ಹಳ್ಳಿಯವರ ಮುಗ್ಧತೆ ಅರಿವಿಗೆ ಬರುವುದೇ ಅವರ ಅಮಾಯಕ ಪ್ರಶ್ನೆಗಳಿಂದ. ನಾನು ಇಪ್ಪತ್ತು ವರ್ಷಗಳ ಹಿಂದೆ ಸ್ಕೂಲಿಗೆ ಮುಡಿಯುತ್ತಿದ್ದ ಗೊರಟೆ, ಮುತ್ತು ಮಲ್ಲಿಗೆ ಹೂವುಗಳನ್ನು ಈಗಲೂ ಮಾಲೆ ಕಟ್ಟಿ ಮುಡಿದುಕೊಂಡು , ದೊಡ್ಡ ಡೇಲಿಯಾ ಹೂ ಮುಡಿದುಕೊಂಡು ಕಾಲೇಜಿಗೆ ಬರುವ ತರುಣಿಯರು. ವಿರಳವಾಗಿರುವ ರಿಕ್ಷಾ, ಬಸ್ಸುಗಳ ನಡುವೆಯೇ ನಡು ರಸ್ತೆಯಲ್ಲಿನ ಎತ್ತಿನ ಗಾಡಿ. ಇವನ್ನೆಲ್ಲ ನೋಡುವಾಗ ಇಲ್ಲಿ ಕಾಲ ಸ್ತಬ್ಧವಾಗಿದೆಯೇನೋ ಅನಿಸುವುದು.
ವಾರಕ್ಕೊಮ್ಮೆ ಸಂತೆ, ಆಗೊಮ್ಮೆ ಈಗೊಮ್ಮೆ ಜಾತ್ರೆ, ಹಬ್ಬಹರಿದಿನ , ಪಿಕ್ನಿಕ್, ಫ಼ಂಕ್ಶನ್ ಎಂದೆಲ್ಲ ಹೇಗೋ ಊರಿನೊಂದಿಗೆ ನಾವು ರಾಜಿಯಾಗುತ್ತೇವೆನ್ನಿ. ಹಾಗಿದ್ದರೂ ದೂರದೂರಿನಲ್ಲಿ ಬಹು ದೊಡ್ದ ಸಮಸ್ಯೆ ಎಂದರೆ ಏಕಾಕಿತನ. ಫೋನ್, ಫ಼ೇಸ್ ಬುಕ್, ವಾಟ್ಸ್ ಆಪ್ ಯಾವುದರಿಂದಲೂ ತಣಿಯಲೊಲ್ಲದ, ತಮ್ಮವರೊಂದಿಗೆ, ಮನೆ ಮಂದಿಯೊಂದಿಗೆ ಇರಲು ಹಂಬಲಿಸುವ ಮನ. ಇವನ್ನೆಲ್ಲ ಮೀರಿ ಒಂದು ಊರನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನವೆಂದರೆ ಹೊಸದಾಗಿ ಹುಟ್ಟು ಪಡೆದಂತೆ. ನಮ್ಮ ಪೂವಾಗ್ರಹಗಳು, ಅನುಕೂಲ ಸಿದ್ಧಾಂತಗಳನ್ನು ಮರು ವಿಮರ್ಶಿಸಿಕೊಂಡಂತೆ. ಒಟ್ಟಿನ ಮೇಲೆ ವಲಸೆಯೆಂದರೆ ಸುಲಭವಲ್ಲ; ಕಡು ಕಷ್ಟವೂ ಅಲ್ಲ, ಅದೊಂದು ಹುಳಿ ಸಿಹಿಯ ಅನುಭವ.
– ಜಯಶ್ರೀ ಬಿ. ಕದ್ರಿ
ನೈಸ್ ಆರ್ಟಿಕಲ್…!
Thank you