ಕಹಿಯಾದರೂ ಹಾಗಲಕಾಯಿ ರುಚಿಯೇ
ವರ್ಷದ ಹೆಚ್ಚಿನ ಋತುಗಳಲ್ಲೂ ಬಿಳಿ ಅಥವಾ ಹಸಿರು ಬಣ್ಣದ ಹಾಗಲಕಾಯಿಗಳು ಲಭ್ಯವಿರುತ್ತವೆ. ಬೆಲೆಯೂ ದುಬಾರಿಯಲ್ಲ. ತನ್ನಲ್ಲಿರುವ ವಿವಿಧ ಪೋಷಕಾಂಶ ಮತ್ತು ಖನಿಜ ಲವಣಗಳಿಂದಾಗಿ ಹಾಗಲಕಾಯಿಯ ಸೇವನೆಯು ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಶರೀರದ ರೋಗ ನಿರೋಧಕ ಗುಣವನ್ನು ಹೆಚ್ಚಿಸುತ್ತದೆ. ಮಧುಮೇಹದಿಂದ ಬಳಲುವವರು ಹಾಗಲಕಾಯಿಯನ್ನು ಯಾವ ರೂಪದಲ್ಲಾದರೂ ಸೇವಿಸುವುದು ಉತ್ತಮ. ಉದರಕ್ಕೆ ಸಿಹಿಯಾದ ಹಾಗಲಕಾಯಿಯು ಅಧರಕ್ಕೆ ಕಹಿ. ಹಾಗಲಕಾಯಿಯ ವಿವಿಧ ಅಡುಗೆಗಳನ್ನು ತಯಾರಿಸುವಾಗ, ರುಚಿ ಹೆಚ್ಚಿಸಲೆಂದು ಮತ್ತು ಕಹಿಯನ್ನು ಮಾಸಲೆಂದು ಹೆಚ್ಚುವರಿ ಉಪ್ಪು, ಹುಣಸೆಹಣ್ಣಿನ ರಸ, ಬೆಲ್ಲ ಮತ್ತು ಮಸಾಲೆ ಹಾಕಬೇಕಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕಡಿಮೆ ಮಸಾಲೆ ಬಳಸಿ ತಯಾರಿಸಬಹುದಾದ, ಹಾಗಲಕಾಯಿಯ ಕೆಲವು ಅಡುಗೆ ವಿಧಾನಗಳು ಇಲ್ಲಿವೆ:
1.ಹಾಗಲಕಾಯಿಯ ಬಾಳಕ
ಬೇಕಾಗುವ ಸಾಮಗ್ರಿಗಳು :
8 ಹಾಗಲಕಾಯಿಗಳು , ಉಪ್ಪು -2 ಟೇಬಲ್ ಚಮಚ, ಖಾರಪುಡಿ – ಅರ್ಧ ಚಮಚ, ಕರಿಯಲು ಎಣ್ಣೆ
ತಯಾರಿಸುವ ವಿಧಾನ :
ಹಾಗಲಕಾಯಿಗಳನ್ನು ತೊಳೆದು ಬಿಲ್ಲೆಗಳಾಗಿ ಕತ್ತರಿಸಿ. ಹೆಚ್ಚಿದ ಬಿಲ್ಲೆಗಳನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ, 2 ಚಮಚ ಉಪ್ಪು, ಬೇಕಿದ್ದರೆ ಅರ್ಧ ಚಮಚ ಖಾರಪುಡಿ ಹಾಕಿ ಚೆನ್ನಾಗಿ ಬೆರೆಸಿ. ಅರ್ಧ ಗಂಟೆಯ ನಂತರ ಇನ್ನೊಮ್ಮೆ ಬಿಲ್ಲೆಗಳನ್ನು ಬೆರೆಸಿ, ಉಪ್ಪು-ಖಾರ ಹಿಡಿದಿದೆಯೇ ಎಂದು ಗಮನಿಸಿ. ಅಂಗಳದಲ್ಲೋ, ತಾರಸಿಯಲ್ಲೋ ಬಿಸಿಲು ಬೀಳುವ ಜಾಗದಲ್ಲಿ ಶುಭ್ರವಾದ ಬಟ್ಟೆ/ಪ್ಲಾಸ್ಟಿಕ್ ಹಾಸಿ ಅದರ ಮೇಲೆ ಬಿಲ್ಲೆಗಳನ್ನು ಹರವಿ ಒಣಗಿಸಿ. ಈ ರೀತಿ ಮೂರು ದಿನ ಬಿಸಿಲಿನಲ್ಲಿ ಒಣಗಿಸಿದರೆ ‘ಹಾಗಲಕಾಯಿ ಬಾಳಕ’ ಸಿದ್ಧ. ಬಾಳಕಗಳನ್ನು ಡಬ್ಬಿಯಲ್ಲಿ ಹಾಕಿಟ್ಟರೆ ಬೇಕೆನಿಸಿದಾಗ ಎಣ್ಣೆಯಲ್ಲಿ ಕರಿಯಬಹುದು.
ಗರಿಗರಿಯಾದ ಹಾಗಲಕಾಯಿಯ ಬಾಳಕವನ್ನು ಚಿಪ್ಸ್ ನಂತೆ ಹಾಗೆಯೇ ತಿನ್ನಬಹುದು. ಮೊಸರನ್ನದೊಂದಿಗೆ ನೆಂಚಿಕೊಳ್ಳಲೂ ರುಚಿಯಾಗುತ್ತದೆ. ಬೆಲ್ಲ ಹಾಕದೇ ಇರುವುದರಿಂದ ಮಧುಮೇಹ ಖಾಯಿಲೆ ಇರುವವರೂ ತಿನ್ನಬಹುದು.
2.ಹಾಗಲಕಾಯಿಯ ಮೊಸರುಗೊಜ್ಜು (ಹಸಿ)
ಬೇಕಾಗುವ ಸಾಮಗ್ರಿಗಳು :
ಹಾಗಲಕಾಯಿ -2 , ತುಪ್ಪ-2 ಚಮಚ, ತೆಂಗಿನಕಾಯಿ ತುರಿ – 1 ಕಪ್, ಜೀರಿಗೆ – 1 ಚಮಚ , ಸಾಸಿವೆ -1 ಚಮಚ, ಹಸಿರುಮೆಣಸಿನಕಾಯಿ- 4 ಮೊಸರು-2 ಕಪ್ ಉಪ್ಪು – ರುಚಿಗೆ ತಕ್ಕಷ್ಟು . ಒಗ್ಗರಣೆಗೆ : ಒಣಮೆಣಸಿನಕಾಯಿ -1, ಚಿಟಿಕೆ – ಉದ್ದಿನಬೇಳೆ, ಸಾಸಿವೆ, ಸ್ವಲ್ಪ ಎಣ್ಣೆ, ಕರಿಬೇವಿನ ಸೊಪ್ಪು
ತಯಾರಿಸುವ ವಿಧಾನ :
ಹಾಗಲಕಾಯಿಗಳನ್ನು ತೊಳೆದು ತಿರುಳನ್ನು ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಎಳೆಯ ಹಾಗಲಕಾಯಿಯಾದರೆ ತಿರುಳಿನ ಸಮೇತ ಹೆಚ್ಚಬಹುದು. ಹೆಚ್ಚಿದ ಹೋಳುಗಳನ್ನು ಬಾಣಲೆಗೆ ಹಾಕಿ, ಸ್ವಲ್ಪ ತುಪ್ಪ ಸೇರಿಸಿ, ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವಷ್ಟು ಹುರಿಯಿರಿ. ತೆಂಗಿನಕಾಯಿ ತುರಿ, ಜೀರಿಗೆ, ಸಾಸಿವೆ, ಹಸಿರುಮೆಣಸಿನಕಾಯಿಗಳನ್ನು ಮಿಕ್ಸಿಯಲ್ಲಿ ರುಬ್ಬಿ. ಹುರಿದ ಹಾಗಲಕಾಯಿಯ ಹೋಳುಗಳು, ಮಸಾಲೆ ಮತ್ತು ಮೊಸರನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಸಾಸಿವೆ ಕರಿಬೇವಿನ ಸೊಪ್ಪಿನ ಒಗ್ಗರಣೆ ಕೊಟ್ಟರೆ ಹಾಗಲಕಾಯಿಯ ಮೊಸರುಗೊಜ್ಜು (ಹಸಿ) ಸಿದ್ಧವಾಗುತ್ತದೆ. ಅನ್ನದೊಂದಿಗೆ ಉಣ್ಣಲು ರುಚಿಯಾಗಿರುತ್ತದೆ. ಇದನ್ನು ತಯಾರಿಸಿದ ಕೂಡಲೇ ಊಟ ಮಾಡಿದರೆ ಕಹಿ ಇರುವುದಿಲ್ಲ. ಹೋಳುಗಳು ಮೊಸರಿನಲ್ಲಿ ನೆನೆದ ಮೇಲೆ ತುಸು ಕಹಿ ರುಚಿ ಬರುವುದಾದರೂ ಉಣ್ಣಲು ರುಚಿಯಾಗಿರುತ್ತದೆ.
3.ಹಾಗಲಕಾಯಿಯ ಹುಣಸೆಗೊಜ್ಜು
ಬೇಕಾಗುವ ಸಾಮಗ್ರಿಗಳು :
ಹಾಗಲಕಾಯಿ-2 , ಹುಣಸೆಹಣ್ಣು – 1 ನಿಂಬೆಹಣ್ಣಿನಷ್ಟು, ಹಸಿರುಮೆಣಸಿನಕಾಯಿ – 2, ಸಾರಿನ ಪುಡಿ- 1 ಚಮಚ,
ಬೆಲ್ಲ – ಅರ್ಧ ಅಚ್ಚು , ಉಪ್ಪು- ರುಚಿಗೆ ತಕ್ಕಷ್ಟು. ಒಗ್ಗರಣೆಗೆ : ಒಣಮೆಣಸಿನಕಾಯಿ -1, ಚಿಟಿಕೆ – ಉದ್ದಿನಬೇಳೆ, ಸಾಸಿವೆ, ಸ್ವಲ್ಪ ಎಣ್ಣೆ, ಕರಿಬೇವಿನಸೊಪ್ಪು
ತಯಾರಿಸುವ ವಿಧಾನ :
ತೊಳೆದ ಹಾಗಲಕಾಯಿಗಳನ್ನು ಸಣ್ಣದಾಗಿ ಹೆಚ್ಚಿ. ಹಸಿರುಮೆಣಸಿನ ಕಾಯಿಗಳನ್ನು ಸೀಳಿ. ಹೆಚ್ಚಿದ ಹೋಳುಗಳನ್ನು ಪಾತ್ರೆಯಲ್ಲಿ ಹಾಕಿ, ಹುಣಸೆರಸ, ಸ್ವಲ್ಪ ನೀರು, ಉಪ್ಪು ಬೆಲ್ಲ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದ ಹೋಳುಗಳಿಗೆ ಸಾರಿನ ಪುಡಿಯನ್ನೂ ಸೇರಿಸಿ ಕುದಿಸಿ. ಈ ಮಿಶ್ರಣವು ತಿಳಿಸಾರಿಗಿಂತ ಸ್ವಲ್ಪ ಹೆಚ್ಚು ಮಂದವಿರಬೇಕು. ಇದಕ್ಕೆ ಸಾಸಿವೆ, ಕರಿಬೇವಿನ ಸೊಪ್ಪಿನ ಒಗ್ಗರಣೆ ಸೇರಿಸಿದಾಗ ಉಪ್ಪು,ಹುಳಿ,ಸಿಹಿ,ಖಾರ ಹಾಗೂ ಸ್ವಲ್ಪ ಕಹಿಯನ್ನೂ ಹೊಂದಿರುವ ಹಾಗಲಕಾಯಿಯ ಹುಣಸೆಗೊಜ್ಜು ತಯಾರಾಗುತ್ತದೆ. ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಈ ಗೊಜ್ಜನ್ನು ಬೆರೆಸಿ ಉಣ್ಣಲು ಬಲು ರುಚಿಯಾಗಿರುತ್ತದೆ.
4.ಹಾಗಲಕಾಯಿಯ ಮೆಣಸ್ಕಾಯಿ
ಬೇಕಾಗುವ ಸಾಮಗ್ರಿಗಳು :
ಹಾಗಲಕಾಯಿ-2 , ಹುಣಸೆಹಣ್ಣು – 1 ನಿಂಬೆಹಣ್ಣಿನಷ್ಟು, ಹಸಿರುಮೆಣಸಿನಕಾಯಿ- 2, ಬೆಲ್ಲ- ಅರ್ಧ ಅಚ್ಚು, ಉಪ್ಪು- ರುಚಿಗೆ ತಕ್ಕಷ್ಟು
ಮಸಾಲೆಗೆ : ಒಣಮೆಣಸಿನಕಾಯಿ – 4, ಕಡಲೇಬೇಳೆ- 1 ಚಮಚ, ಉದ್ದಿನಬೇಳೆ-1 ಚಮಚ, ಕಪ್ಪು/ ಬಿಳಿ ಎಳ್ಳು – 1 ಚಮಚ, ತೆಂಗಿನಕಾಯಿ ತುರಿ – ಅರ್ಧ ಕಪ್ ಒಗ್ಗರಣೆಗೆ : ಒಣಮೆಣಸಿನಕಾಯಿ -1, ಚಿಟಿಕೆ – ಉದ್ದಿನಬೇಳೆ, ಸಾಸಿವೆ, ಸ್ವಲ್ಪ ಎಣ್ಣೆ, ಕರಿಬೇವಿನಸೊಪ್ಪು
ತಯಾರಿಸುವ ವಿಧಾನ :
ತೊಳೆದ ಹಾಗಲಕಾಯಿಗಳನ್ನು ಸಣ್ಣದಾಗಿ ಹೆಚ್ಚಿ, ಹಸಿರುಮೆಣಸಿನ ಕಾಯಿಗಳನ್ನು ಸೀಳಿ, ಹೆಚ್ಚಿದ ಹೋಳುಗಳನ್ನು ಪಾತ್ರೆಯಲ್ಲಿ ಹಾಕಿ. ಹೋಳುಗಳು ಮುಳುಗುವಷ್ಟು ನೀರು ಸೇರಿಸಿ. ಹುಣಸೆರಸ, ಸ್ವಲ್ಪ ನೀರು, ಉಪ್ಪು ಬೆಲ್ಲ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಒಣಮೆಣಸಿನಕಾಯಿ, ಬೇಳೆಗಳು ಮತ್ತು ಎಳ್ಳನ್ನು ಪ್ರತ್ಯೇಕವಾಗಿ ಸಣ್ಣ ಉರಿಯಲ್ಲಿ ಹುರಿಯಿರಿ. ಹುರಿದ ಮಸಾಲೆಗೆ ತೆಂಗಿನಕಾಯಿ ತುರಿಯನ್ನು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಬೆಂದ ಹೋಳುಗಳಿಗೆ ರುಬ್ಬಿದ ಮಸಾಲೆ ಸೇರಿಸಿ, ಸಾಂಬಾರಿಗಿಂತ ಸ್ವಲ್ಪ ಹೆಚ್ಚು ಮಂದವಿರುವಂತೆ ಹದ ನೋಡಿಕೊಳ್ಳಿ. ಇದಕ್ಕೆ ಸಾಸಿವೆ, ಕರಿಬೇವಿನ ಸೊಪ್ಪಿನ ಒಗ್ಗರಣೆ ಸೇರಿಸಿದರೆ ಸಿಹಿ-ಕಹಿ-ಹುಳಿ-ಉಪ್ಪು-ಖಾರದ ಮಿಶ್ರ ರುಚಿಯ ‘ಹಾಗಲಕಾಯಿಯ ಮೆಣಸ್ಕಾಯಿ’ ಸಿದ್ದವಾಗುತ್ತದೆ. ಇದು ಅನ್ನದೊಂದಿಗೆ ಉಣ್ಣಲೂ, ಇಡ್ಲಿ, ದೋಸೆ, ಚಪಾತಿಗಳೊಂದಿಗೆಯೂ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
-ಹೇಮಮಾಲಾ.ಬಿ
(ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸೂಪರ್..
ತುಂಬಾ ಚನ್ನಾಗಿ ವಿವರಿಸಿದ್ದೀರ .ಅಭಿನಂದನೆಗಳು
ಓದಿದೆ.ಚೆನ್ನಾಗಿ ಬಂದಿದೆ.