ನವರಾತ್ರಿಯ ನವ ದಿನಗಳ ವಿಶೇಷತೆ
ಅಶ್ವೀಜ ಶುದ್ಧ ಪ್ರತಿಪದೆ ದಿನದಿಂದ ನವಮಿ ಪರ್ಯಂತ ನವರಾತ್ರಿ ದಿನಗಳ ಉಪಾಸನಾ ಉತ್ಸವ. ಒಂಭತ್ತು ದಿನಗಳಲ್ಲಿ ದುರ್ಗೆಯ ನವರೂಪವನ್ನು ಪೂಜಿಸಿ ದಶಮಿಯಂದು ಪುಸ್ತಕ ಪೂಜೆ ಮಾಡಿ ಉದ್ಯಾಪನಾ ಕಾರ್ಯ ಮಾಡುವುದು ನಮ್ಮ ಸಂಸ್ಕೃತಿ.ಆ ಒಂಬತ್ತು ದಿನಗಳವಿಶೇಷ ಹೇಗೆ?. ಪಾಡ್ಯದಂದು ಯೋಗನಿದ್ರಾದುರ್ಗಾ,ಬಿದಿಗೆಯಂದು ದೇವಜಾತಾದುರ್ಗಾ,ತದಿಗೆಯ ದಿನ ಮಹಿಷಮರ್ಧಿನಿ ದುರ್ಗಾ,ಚೌತಿಯಂದು ಶೈಲಜಾದುರ್ಗಾ, ಪಂಚಮಿ ದಿನ ಧೂಮ್ರಃದುರ್ಗಾ,ಷಷ್ಠಿಯಂದು ಚಂಡ-ಮುಂಡದುರ್ಗಾ,ಸಪ್ತಮಿಯಂದು ರಕ್ತಬೀಜದುರ್ಗಾ,ಅಷ್ಠಮಿದಿನದಂದು ನಿಶುಂಭಃದುರ್ಗಾ,ನವಮಿದಿನ ಶುಂಭಃದುರ್ಗಾ,ಹೀಗೆ ಅರ್ಚಿಸಿ ಪೂಜಿಸುವುದು ಬಹುದಾಯನೀಯ ನಿತ್ಯಾಹ್ನಿಕ ಪೂಜಾವಿಧಿಯಲ್ಲಿ ಹೇಳಲ್ಪಟ್ಟಿದೆ.
ಮಹಾಲಯ ಅಮವಾಸ್ಯೆ ಮಾರಣೆದಿನ ನವರಾತ್ರಿ ಆರಂಭದ ದಿನ.ಶರದೃತು ಆರಂಭವಾಗುವುದರಿಂದ ಶರನ್ನವರಾತ್ರಿಯೆಂದೂ ಲೋಕ ಪ್ರಸಿದ್ಧವಾಗಿದೆ.ಈ ನವರಾತ್ರಿ ದಿನಗಳಲ್ಲಿ ದೇವಿಯ ಶಾಂತ ಹಾಗೂ ಉಗ್ರ ರೂಪವನ್ನು ಸಂಕಲ್ಪಿಸಿ ಆರಾಧಿಸುವುದಾದರೂ ಸರಸ್ವತಿದೇವಿಯ ಉಪಾಸನೆ ಮುಖ್ಯ. ಎಲ್ಲಾ ಸಂಪತ್ತಿಗಿಂತಲೂ ವಿದ್ಯಾಸಂಪತ್ತು ವಿಶೇಷವಾದುದು.ಅದಕ್ಕಾಗಿಯೇ ’ವಿದ್ಯಾವಿಹೀನಃ ಪಶುಃ’ ಎಂದಿದ್ದಾರೆ ಪ್ರಾಜ್ಞರು.
ಲಕ್ಷ್ಮಿಗೆ ನೂರಾರು ಮುಖಗಳಾದರೆ; ಸರಸ್ವತಿಗೆ ನೇರವಾದ ಒಂದೇ ಮುಖ.ಲಕ್ಷ್ಮಿಯನ್ನು ಯಾವ ಮಾರ್ಗದಿಂದಲೂ ಗಳಿಸಬಹುದಾದರೆ ಸರಸ್ವತಿ ಸನ್ಮಾರ್ಗಕ್ಕೇ ಒಲಿಯುವವಳು. ಆಕೆ ಒಮ್ಮೆ ಒಲಿದಳೆಂದರೆ ಮತ್ತೆ ಕದಲುವ ಪ್ರಶ್ನೆಯೇ ಇಲ್ಲ.ಸರಸ್ವತಿ ದಾನ ಮಾಡಿದಷ್ಟೂ ವೃದ್ಧಿಯಾಗುವ ಗುಣದವಳಾದರೆ ಲಕ್ಷ್ಮಿ ಕೊಟ್ಟಷ್ಟೂ ಕರಗುವ ಸ್ವಭಾವದವಳು.ಅದಕ್ಕಾಗಿಯೇ ವಿದ್ಯಾಸಂಪತ್ತು ಧನಸಂಪತ್ತಿಗಿಂತ ಶ್ರೇಷ್ಟ ಎನ್ನುವೆವು.ಒಬ್ಬ ಹಣಕಾಸಿನಲ್ಲಿ ಎಷ್ಟೇ ದರಿದ್ರದವನಾದರೂ ವಿದ್ಯಾಸಂಪನ್ನನಾದರೆ ಆತನಿಗೆ ಸಮಾಜದಲ್ಲಿ ಗೌರವಾದರಗಳು ತಾನಾಗಿ ಬರುವುವು.ಪ್ರಯತ್ನಶೀಲ ಗುರಿಸಾಧಿಸುವ,ದೃಢಮನಸ್ಸಿನ ವಿದ್ಯಾರ್ಥಿಗೆ; ವಿದ್ಯಾಸರಸ್ವತಿ ಒಲಿಯದೆ ಇರಲಾರಳು.
ಗತಿ ಇದ್ದರೆ ಸಾಲದು ಮತಿ ಇರಬೇಕು.ಹೊಟ್ಟೆಗೆ ಹಿಟ್ಟಾದ ಮೇಲೆ ವಿದ್ಯಾಭ್ಯಾಸದತ್ತ ಗಮನ ಹರಿಸುತ್ತೇವೆ.ಸಾಹಿತ್ಯಸರಸ್ವತಿ ವಿಶಾಲವಾಗಿ ಕೊಂಬೆ,ರೆಂಬೆ,ಹೂಗಳಿಂದ ಅಲಂಕೃತಳಾಗಿದ್ದಾಳೆ.ವಿದ್ಯೆ,ವಿಚಾರ ವಿಮರ್ಶೆ,ತಿಳುವಳಿಕೆ,ಸದ್ಗುಣಗಳೆಲ್ಲ ಸರಸ್ವತಿ ಕೃಪೆಯಿಂದ ಲಭಿಸುವಂತಾದ್ದು. ನಮ್ಮ ಪಾಪ-ಪುಣ್ಯ ಕರ್ಮಕ್ಕನುಸಾರವಾಗಿ ಕೊಂಡು ನಡೆಸುವುದಕ್ಕೆ; ಕೈಯ ಬುಡದಲ್ಲಿ ಗೌರಿ,ಶಕ್ತಿಯಾಗಿ ನೆಲೆಸಿರುತ್ತಾಳೆ.ಶಕ್ತಿಯ ಅಷ್ಟರೂಪಗಳು ಇಂತಿವೆ. ಶ್ರೀದೇವಿ,ಭೂದೇವಿ, ಸರಸ್ವತಿ,ಪ್ರೀತಿ, ಕೀರ್ತಿ, ಶಾಂತಿ, ತುಷ್ಟಿ ಹಾಗೂ ಪುಷ್ಟಿ.
ಕರಾಗ್ರೇ ವಸತೇ ಲಕ್ಷ್ಮಿ| ಕರಮಧ್ಯೇ ಸರಸ್ವತಿ| ಕರಮೂಲೇ ಸ್ಥಿತೇಗೌರಿ| ಪ್ರಭಾತೇ ಕರದರ್ಶನಂ| ಪ್ರತಿಯೊಬ್ಬರೂ ಪ್ರಾತಃಕಾಲ ಎದ್ದೊಡನೆ ಮೇಲೆ ಕಾಣಿಸಿದ ಸ್ತೋತ್ರ ಪಠಿಸುತ್ತಾ ಅಂಗೈಗಳೆರಡನ್ನೂ ಪರಸ್ಪರ ತಿಕ್ಕಿಕೊಂಡು ಬಿಡಿಸಿ ನೋಡಿ; ಕಣ್ಣಿಗೊತ್ತಿಕೊಳ್ಳಬೇಕೆಂದು ನಮ್ಮ ಪೂರ್ವಜರಿಂದಲೇ ಬಂದ ಸಲಹೆ.ನಮ್ಮ ಉನ್ನತಿ-ಅವನತಿಗಳು ನಮ್ಮ ನಾಲಿಗೆ ಮತ್ತು ಕೈಯೊಳಗೆ ಅಡಗಿದೆ ಎಂಬುದೂ ವಿವೇಕಯುತವಾದ ಉಪದೇಶ.
ಕರ್ನಾಟಕದಲ್ಲಿ ನಾಡಹಬ್ಬವಾಗಿ ಆಚರಿಸಲ್ಪಡುವ ನವರಾತ್ರಿಗೆ;ದಸರಾ,ಮಹಾನವಮಿ, ಶರನ್ನವರಾತ್ರಿ ಮುಂತಾದ ಹೆಸರಿನಿಂದ ಕರೆಯಲ್ಪಡುವುದಾದರೂ ’ಮೈಸೂರುದಸರಾ’ ಎಂಬುದು ಜಗತ್ಪ್ರಸಿದ್ಧ.ತುಳುವಿನ ಆಡುಭಾಷೆಯಲ್ಲಿ ’ಮಾರ್ಣಮಿ’[ಮಹಾನವಮಿ] ಎಂದೂ ಕರೆಯುತ್ತಾರೆ.ಒಂಭತ್ತು ದಿನಗಳಲ್ಲೂ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸುವುದಾದರೂ ಅಷ್ಟಮಿಯಂದು ’ದುರ್ಗಾಷ್ಟಮಿ’ ಎಂಬ ವಿಶೇಷವಿದೆ.ನವಮಿಯಂದು ಆಯುಧ ಪೂಜೆಗೆ ಪ್ರಾಧಾನ್ಯತೆ. ವಿಜಯದಶಮಿಯಂದು ಪ್ರಮುಖವಾಗಿ ಅಕ್ಷರಾಭ್ಯಾಸಕ್ಕೆ ನಾಂದಿ; ಮಾತ್ರವಲ್ಲ ಎಲ್ಲಾ ಶುಭಕಾರ್ಯಗಳ ತೊಡಗುವಿಕೆಗೆ ಶುಭಪ್ರದವು.ಹಿಂದಿನ ರಾಜರುಗಳು ತಮ್ಮ ಯುದ್ಧಾಯುಧಗಳನ್ನು ನವಮಿಯಂದು ಪೂಜಿಸಿ; ವಿಜಯದಶಮಿಯಂದು ಯುದ್ಧಕ್ಕೆ ತೆರಳುತ್ತಿದ್ದರಂತೆ.ಅದರ ಪ್ರತೀಕವಾಗಿ ಇಂದಿಗೂ ಆಯುಧಪೂಜೆ ಉಳಿದುಕೊಂಡು ಬಂದಿದೆ.ಗ್ರಂಥಗಳನ್ನು, ತಾಳೆಓಲೆ,ಪುಸ್ತಕಗಳನ್ನು ಸಪ್ತಮಿ[ಮೂಲಾನಕ್ಷತ್ರದಂದು] ಯಂದು ಪೂಜೆಗಿಟ್ಟರೆ ಮೂರುರಾತ್ರಿ ಪೂಜೆಮಾಡಿ ವಿಜಯದಶಮಿಯಂದು ವಿಶೇಷ ಪೂಜಿಸಿ,ತೆಗೆದು ಓದಿ ತೆಗೆದಿಡುವ ಸಂಪ್ರದಾಯ.ಪೂಜೆಗಿಟ್ಟ ಮೂರುದಿನಗಳು ಅಧ್ಯಯನಕ್ಕೆ ನಿಷಿದ್ಧ ಎಂಬ ಸಂಪ್ರದಾಯವೂ ಇದೆ.
ಬ್ರಹ್ಮನರಾಣಿಯಾದ ವಿದ್ಯಾಶಾರದೆಯ ವಾಹನ ನವಿಲು.ಉಗ್ರರೂಪದಲ್ಲಿ ಅವಳು ಸಿಂಹವಾಹಿನಿ!.ಎರಡು ಕರಗಳಲ್ಲಿ ವೀಣೆಯನ್ನೂ ಇನ್ನೊಂದರಲ್ಲಿ ಓಲೆ[ಪುಸ್ತಕ]ಯನ್ನೂಮತ್ತೊಂದರಲ್ಲಿ ಜಪಮಾಲೆ ಪಿಡಿದು ಶ್ವೇತಪದ್ಮಾಸನದಲ್ಲಿ ಸರ್ವಾಲಂಕಾರ ಭೂಷಿತೆಯಾಗಿ ಪವಡಿಸಿದ ಶಾರದೆಯನ್ನು ನೋಡುವುದಕ್ಕೆ ನಮ್ಮೆರಡು ಕಣ್ಣುಗಳು ಸಾಲವು.| ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ| ವಿದ್ಯಾರಂಭ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ|| ಸರಸ್ವತಿಯು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ.
,
– ವಿಜಯಾ ಸುಬ್ರಹ್ಮಣ್ಯ,ಕುಂಬಳೆ
ಉತ್ತಮ ಮಾಹಿತಿ .
ನವರಾತ್ರಿಯ ಬಗ್ಗೆ ವಿಶೇಷ ಬರಹ ಚೆನ್ನಾಗಿದೆ..!! ನನ್ನ ಅಕ್ಷರಾಭ್ಯಾಸದ ಮೊದಲ ದಿನದ ನೆನಪನ್ನು ಮಾಡಿಕೊಟ್ಟಿತು…!!! ಧನ್ಯವಾದಗಳು
ಓದಿ ಮೆಚ್ಚಿಗೆ ಸೂಚಿಸಿದ ಎಲ್ಲರಿಗೂ ವಂದನೆಗಳು.
ನನ್ನ ಹಿಂದಿನ ಲೇಖನವನ್ನು ಸಂದರ್ಭೋಚಿತವಾಗಿ ಈಗ ಮತ್ತೊಮ್ಮೆ ಪ್ರಕಟಿಸಿದ; ಶ್ರೀಮತಿ ಹೇಮಮಾಲಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾ ಓದುಗ ಬಾಂಧವರೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.