ವೈಟ್ ಇಳಿಸುವುದು ತುಂಬಾ ಕಷ್ಟ ಕಣ್ರೀ!

Share Button

ತಿಂಗಳ ಹಿಂದೆ ತೂಕ ನೋಡಿಕೊಂಡಾಗ ಹೌಹಾರಿ ಬಿಟ್ಟೆ. ಐದು ವರ್ಷದ ಹಿಂದೆ 55 ಕೆಜಿ  ತೂಕವಿದ್ದ ನಾನು ಈಗ 10 ಕೆಜಿ ಜಾಸ್ತಿಯಾಗಿದ್ದೀನಿ. ತೂಕದ ಯಂತ್ರವೆ ಸರಿಯಾಗಿಲ್ಲ ಎಂದುಕೊಂಡು ಇನ್ನೊಂದು ಕಡೆ ಡಿಜಿಟಲ್ ಯಂತ್ರದಲ್ಲಿ ನೋಡ್ಕೊಂಡೆ. ಇನ್ನೂ 500 ಗ್ರಾಂ ಜಾಸ್ತಿ ತೋರಿಸಿತು. ಇನ್ನು ಸುಮ್ಮನಿದ್ರೆ ಕಷ್ಟವಾಗುತ್ತೆ ಅಂದುಕೊಂಡು ಡಯಟ್‌ಗೆ ಸಂಬಂಧ ಪಟ್ಟ ಎಲ್ಲಾ ವಿಷಯಗಳನ್ನು ಕಲೆ ಹಾಕಿದೆ. ಸಿನೆಮಾ ತಾರೆಯರು ಸ್ಲಿಮ್ ಆಗಿರುವ ಸೀಕ್ರೆಟ್ಸ್‌ಗಳನ್ನೆಲ್ಲ ಓದಿದೆ. ಪತ್ರಿಕೆ, ಮಾಗಸೀನ್, ಟಿವಿ ಶೊ, ಇಂಟರ್ನೆಟ್ ಎಲ್ಲಾ ಜಾಲಾಡಿದೆ. ಪ್ರೆಂಚ್ ಡಯಟ್, ಪ್ರಕೃತಿ ಚಿಕಿತ್ಸೆ, ನೀರಿನ ಚಿಕಿತ್ಸೆ, ಉಪವಾಸ, ಯೋಗ, ಜಿಮ್, ವಾಕಿಂಗ್, ವಿ ಎಲ್ ಸಿ ಸಿ, ಕಷಾಯ, ಲೇಹ, ನ್ಯೂಟ್ರಿ ಸ್ಲಿಮ್, ಮಾತ್ರೆಗಳು ಹೀಗೆ ತೂಕ ಇಳಿಸಲು ಕಡಿಮೆಯಿಲ್ಲವೆಂದರೂ ನೂರು ವಿಧಾನಗಳಿರುವುದನ್ನು ನೋಡಿ ಖುಷಿಯಾಗಿಬಿಟ್ಟೆ.

ಬೇಗ ತೂಕ ಇಳಿಸಲು ಸರಳವಾದ ವಿಧಾನವಾಗಿ ಕಾಣಿಸಿದ ಉಪವಾಸ (ದಿನಾ ರಾತ್ರಿ) ಮಾಡುವುದೆಂದು ತೀರ್ಮಾನಿಸಿದೆ. ಖಾಲಿ ಹೊಟ್ಟೆಲಿದ್ರೆ ಗ್ಯಾಸ್ಟ್ರಿಕ್ ಆಗುತ್ತೆ, ನಿದ್ರೆ ಬರಲ್ಲ ಅಂದುಕೊಂಡು ಹಣ್ಣು ತಿಂದು, ಹಾಲು ಕುಡಿದು ಮಲಗಿದೆ. ವಾರದ ನಂತರ ತೂಕ ನೋಡ್ಕೊಂಡ್ರೆ 500 ಗ್ರಾಂ ಕಡಿಮೆ ತೋರಿಸಿತು. ಖುಷಿಯಲ್ಲಿ ಲೆಕ್ಕ ಹಾಕಿದೆ. ತಿಂಗಳಿಗೆ 2 ಕೆಜಿ ಕಡಿಮೆ ಆದ್ರೆ, ಐದು ತಿಂಗಳಲ್ಲಿ ಮೊದಲಿನ ತರ ಬಳುಕುವ ಬಳ್ಳಿಯಾಗ್ತೀನಿ. ರಾತ್ರಿ ಉಪವಾಸ (ಉಪಹಾರ) ಮುಂದುವರಿಸಿದೆ. ಎರಡನೆ ವಾರದ ನಂತರ ತೂಕ ನೋಡ್ಕೊಂಡ್ರೆ ಮೊದಲಿಗಿಂತ 1 ಕೆಜಿ ಜಾಸ್ತಿ ತೋರಿಸಿತು. ಗಾಬರಿಯಾಗಿ ಯಾಕೆ ಅಂತ ಯೋಚಿಸಿದರೆ ಆ ವಾರದಲ್ಲಿ ಒಂದು ಪಾರ್ಟಿ ಮತ್ತು ಒಂದು ಫಂಕ್ಷನ್‌ನಲ್ಲಿ ಚೆನ್ನಾಗಿ ತಿಂದಿದ್ದೆ. ಕಷ್ಟಪಟ್ಟು ಉಪವಾಸ ಮಾಡಿದ್ದೆಲ್ಲ ವ್ಯರ್ಥವಾಗಿತ್ತು.

ಉಪವಾಸದ ಕಷ್ಟವೇ ಬೇಡ ಎಂದುಕೊಂಡು ಬೇರೆ ಮಾರ್ಗಗಳನ್ನು ಹುಡುಕಿದೆ. ದಿನಾ ಮಧ್ಯಾಹ್ನ ರಾಗಿ ಮುದ್ದೆ ತಿಂದೆ, ರಾತ್ರಿ ಚಪಾತಿ ತಿಂದೆ, ಸೌತೆಕಾಯಿ, ಕ್ಯಾರೆಟ್ ತಿಂದು, ಲೀಟರ್‌ಗಟ್ಟಳೆ ನೀರು ಕುಡಿದೆ.  ಯೋಗ ಮಾಡಿ ಸೊಂಟ ಉಳುಕಿಸಿಕೊಂಡೆ. ಏನೇ ಮಾಡಿದ್ರೂ ಫಲಿತಾಂಶ ಒಂದೆ, ತಿಂಗಳೆಲ್ಲ ಕಷ್ಟಪಟ್ಟು ಡಯಟ್ ಮಾಡಿ 1 ಕೆಜಿ ಇಳಿಸಿದ್ರೆ, ಒಂದು ವಾರದಲ್ಲೆ ಕಳೆದುಕೊಂಡ ತೂಕ ಮತ್ತೆ ಏರುತ್ತಿತ್ತು. ಒಂದೇ ಒಂದು ಪಾರ್ಟಿ ಅಥವಾ ಫಂಕ್ಷನ್ ನನ್ನ ಇಡೀ ತಿಂಗಳ ಪ್ರಯತ್ನವನ್ನೆಲ್ಲ ಹಾಳುಗೆಡುವುತ್ತಿತ್ತು. ತೂಕ ಇಳಿಸಲು ಒಬ್ಬೊಬ್ಬರು ಒಂದೊಂದು ರೀತಿಯ ಸಲಹೆ ಕೊಟ್ಟರು. ಯಾವುದನ್ನೂ ನೆಟ್ಟಗೆ ಒಂದು ವಾರ ಅನುಸರಿಸಲು ಆಗಲಿಲ್ಲ. ಈ ವೈಟ್ ಇಳಿಸುವುದು ತುಂಬಾ ಕಷ್ಟ ಕಣ್ರೀ…

ಅಂದ ಹಾಗೆ, ನನ್ನ ಹಾಗೆ ತೂಕ ಜಾಸ್ತಿ ಮಾಡಿಕೊಂಡು, ಇಳಿಸಲು ಸರ್ಕಸ್ ಮಾಡುತ್ತಿರುವವರು ಬಹಳ ಜನ ಇದ್ದಾರೆ. ಪ್ರಪಂಚದಲ್ಲಿ ಪ್ರತಿ ಆರು ಜನರಲ್ಲಿ ಒಬ್ಬರು ಸ್ಥೂಲಕಾಯ(obese) ಇರುವವರಂತೆ. ಇವರ  ತೂಕ ಇಳಿಸಲು ಪಣ ತೊಟ್ಟು ನಿಂತ ಡಯಟೀಶಿಯನ್‌ಗಳು, ಥೆರಪಿ, ಮಾತ್ರೆ ಕಂಪೆನಿಗಳ ಬಿಸಿನೆಸ್‌ನಿಂದ ದೇಶಕ್ಕೆ ದೊಡ್ಡ ಆದಾಯವಿದೆಯಂತೆ. ತೂಕ ಏರಿಸುವ ಜಂಕ್‌ಫುಡ್ ಕಂಪೆನಿಗಳಿಂದ ಇದರ ನೂರರಷ್ಟು ಆದಾಯವಿದೆ, ಬಿಡಿ. ಒಟ್ಟಿನಲ್ಲಿ ಎರಡೂ ಕಡೆಯಿಂದಲು ದೇಶಕ್ಕೆ ಆದಾಯವೊ, ಆದಾಯ!

ಆದರೆ, ಈ ಬೊಜ್ಜು, ಅದರಿಂದ ಬರುವ ಖಾಯಿಲೆ ಮತ್ತು ಡಯಟ್ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳದೆ ಲೈಫ್ ಎಂಜಾಯ್ ಮಾಡುವವರು ಬಹಳ ಜನ ಇದ್ದಾರೆ.

“ಜೀವನದಲ್ಲಿ ತಿನ್ನಲಿಕ್ಕೆಂತಲೆ ಇಷ್ಟೆಲ್ಲ ಕಷ್ಟ ಪಡ್ತೀರೋದು. ತಿನ್ನೋದನ್ನ ಯಾಕ್ರಿ ಬಿಡಬೇಕು” ಅಂತ ಪ್ರಶ್ನೆ ಮಾಡುವವರು ಹಲವು ಮಂದಿ. ಅವರ ವಾದ ಒಂದು ರೀತಿಯಲ್ಲಿ ಸರಿನೆ, ಬಿಡಿ.

“ಇವತ್ತೊಂದು ದಿವಸ ಚೆನ್ನಾಗಿ ತಿಂತೀನಿ, ನಾಳೆಯಿಂದ ಡಯಟ್ ಮಾಡ್ತೀನಿ” ಅಂತ ಬರಿ ಇವತ್ತಿನ ಬಗ್ಗೆ ಚಿಂತೆ ಮಾಡುವವರು ಕೆಲವು ಮಂದಿ.

“ಇನ್ನು ಎಷ್ಟು ದಿನ ಬದುಕಿರಬೇಕ್ರಿ” ಅಂತ ತಮ್ಮ ಬಾಯಿ ಚಪಲಕ್ಕೆ ಫಿಲಾಸಫಿ ಹೇಳುವವರು ವಯಸ್ಸಾದ ಕೆಲವರಾದರೆ, ತಮ್ಮ ಸ್ಥೂಲಕಾಯಕ್ಕೆ ‘ಹಾರ್ಮೊನ್ ಪ್ರಾಬ್ಲೆಂ’ ಅಂತ ಬಡಪಾಯಿ ಹಾರ್ಮೊನ್ ಮೇಲೆ ಆಪಾದನೆ ಮಾಡಿ ಹಾಯಾಗಿರುವವರು ಇನ್ನು ಕೆಲವರು.

“ಊಟದ ಮೇಲಿನ ಪ್ರೀತಿಗಿಂತ ಪ್ರಾಮಾಣಿಕವಾದ ಪ್ರೀತಿ ಬೇರೊಂದಿಲ್ಲ” ಅಂತ ಸುಪ್ರಸಿದ್ಧ ನಾಟಕಕಾರ ಜಾರ್ಜ ಬರ್ನಾಡ್ ಶಾನೇ ಹೇಳಿದ ಮೇಲೆ ನಮ್ಮಂತ ಹುಲುಮಾನವರು ತಿನ್ನುವುದನ್ನು ಪ್ರೀತಿಸದಿರಲು ಸಾಧ್ಯವೆ?

ಆದರೆ, ಒಂದು ಸಲ ಜಾಸ್ತಿಯಾದ ತೂಕ ಇಳಿಸುವುದು ಬಹಳ ಕಷ್ಟ ನೋಡಿ! ಯಾಕೆಂದರೆ, ದೇಹದ ಕೊಬ್ಬು ಸ್ವಲ್ಪ ಕರಗಿದ ತಕ್ಷಣ (ಕೆಲಸ/ವ್ಯಾಯಾಮದಿಂದ) ನಮಗೆ ಹಸಿವಾಗಿ, ತಿನ್ನಬೇಕೆಂಬ ಬಯಕೆ ತೀವ್ರವಾಗುತ್ತದೆ. ತಿನ್ನುವುದನ್ನು ಕಡಿಮೆ ಮಾಡಲು ಪ್ರಯತ್ನ ಪಟ್ಟಷ್ಟು ಆಹಾರದ ಸೆಳೆತ ಜಾಸ್ತಿಯಾಗುತ್ತದೆ. ರುಚಿ ರುಚಿಯಾದ ತಿಂಡಿಗಳು ಕಣ್ಣ ಮುಂದೆ ಕುಣಿಯುತ್ತವೆ. ಕಷ್ಟಪಟ್ಟು ಒಂದು ಹೊತ್ತು ಉಪವಾಸವಿದ್ದರೆ ಅದರ ಎರಡರಷ್ಟು ತಿನ್ನುವಂತೆ ದೇಹ ನಮ್ಮನ್ನು ಅಡಿಗೆ ಮನೆಗೆ ಎಳೆದೊಯ್ಯುತ್ತದೆ.

ಹಾಗಾಗಿ, ಆಹಾರ ಮತ್ತು ತಿನ್ನುವ ಅಭ್ಯಾಸದ ಬಗ್ಗೆ ಸ್ವಲ್ಪ ತಿಳಿದುಕೊಂಡರೆ ತೂಕವನ್ನು ನಿಯಂತ್ರಿಸಲು ಸಾಧ್ಯ ಎಂದು ನನ್ನ ಅನುಭವ.

  • ತೂಕ ಏರಿಸುವ ಆಹಾರದ ಕಡೆ ದಿವ್ಯ ನಿರ್ಲಕ್ಷ್ಯ ಬೆಳೆಸಿಕೊಳ್ಳಿ. ಸಕ್ಕರೆ/ಉಪ್ಪಿನ ಜೊತೆ ಕೊಬ್ಬು ಸೇರಿಸಿ ಮಾಡಿರುವ ಸ್ವೀಟ್, ಐಸ್‌ಕ್ರೀಂ, ಚಾಕಲೇಟ್, ಕೋಕ್, ಪೆಪ್ಸಿಯಂತಹ ಪಾನೀಯಗಳು, ಪಿಜ್ಜಾ, ಬರ್ಗರ್‌ನಂತಹ ಜಂಕ್ ಫುಡ್‌ಗಳು, ಕೇಕ್ ಮತ್ತು ಬೇಕರಿ ತಿಂಡಿಗಳು ಬೊಜ್ಜು ಬರಿಸುವ ಮಹಾಮಾರಿಗಳು. ಬ್ರೆಡ್, ಬಿಸ್ಕೆಟ್ಸ್, ಚಿಪ್ಸ್, ಕರಿದ ತಿಂಡಿಗಳು, ಮಸಾಲೆದೋಸೆ, ಮ್ಯಾಗಿ, ಪಾಸ್ತಾ, ಸಕ್ಕರೆ ಹಾಕಿರುವ ಜ್ಯೂಸ್‌ಗಳು ಸಾಕಷ್ಟು ತೂಕ ಏರಿಸುತ್ತವೆ.
  • ದೈಹಿಕ ಪರಿಶ್ರಮದ ಕೆಲಸ ಮಾಡುತ್ತಿಲ್ಲವಾದರೆ, ದಿನಕ್ಕೆ ಒಂದು ಗಂಟೆಯಷ್ಟಾದರೂ ವ್ಯಾಯಾಮ ಮಾಡಿ, ವ್ಯಾಯಾಮ ಮಾಡದಿದ್ದರೆ ಊಟವನ್ನೂ ಮಾಡಬೇಡಿ ಎನ್ನುತ್ತಾರೆ ಪ್ರಕೃತಿ ಚಿಕಿತ್ಸಾಕಾರರು.
  • ಶೀಘ್ರವಾಗಿ ತೂಕ ಇಳಿಸಿದರೆ ಆ ತೂಕ ಮತ್ತೆ ಏರುವ ಸಾಧ್ಯತೆಗಳೆ ಹೆಚ್ಚು. ಹಾಗಾಗಿ ಸದಾ ಏರುತ್ತಿರುವ ತೂಕದ ಬಗ್ಗೆ ಯೋಚಿಸಬೇಡಿ. ಅದರ ಬದಲು ತಿನ್ನುವ ಆಹಾರದ ಕಡೆ ಗಮನ ಕೊಡಿ.
  • ಹೋಟೆಲ್ ಮತ್ತು ಫಂಕ್ಷನ್‌ಗಳಲ್ಲಿ ಪೌಷ್ಟಿಕಾಂಶವುಳ್ಳ ತರಕಾರಿ, ಸೊಪ್ಪು, ಹಣ್ಣು ಚೆನ್ನಾಗಿ ತಿನ್ನಿ. ಇದು ಕೊಬ್ಬಿನ ತಿಂಡಿಯ ಕಡೆ ನಮ್ಮ ಸೆಳೆತವನ್ನು ಕಡಿಮೆ ಮಾಡುತ್ತದೆ.
  • ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ, ಮುನ್ನೂರ ಅರವತ್ತೈದು ದಿನ, ನಾವು ಬದುಕಿರುವವರೆಗೆ ತಿನ್ನುವುದರಿಂದ ತಿಂಗಳಲ್ಲಿ ಒಂದು ಹೊತ್ತು ಉಪವಾಸ ಮಾಡಿದರೆ ನಾವು ಕಳೆದುಕೊಳ್ಳುವಂತದ್ದೇನು ಇಲ್ಲ.
  • ಇವತ್ತೇನು ಅಡುಗೆ ಮಾಡಲಿ, ಯಾವ ತರದ ತಿಂಡಿ ಮಾಡಲಿ ಎಂದು ಸದಾ ಊಟ ತಿಂಡಿಯ ಬಗ್ಗೆ ಯೋಚಿಸಬೇಡಿ. ಸ್ನೇಹಿತರ ಜೊತೆ ಊಟ ತಿಂಡಿಯ ಬಗ್ಗೆ ಮಾತುಕತೆಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
  • ಊಟದ ವೇಳೆ ಹಸಿವಿಲ್ಲದಿದ್ದರೆ ಚಿಂತಿಸಬೇಡಿ, ಮಜ್ಜಿಗೆ ಕುಡಿದು ತಣ್ಣಗಿದ್ದುಬಿಡಿ.
  • ಮನೆಯ ಡಬ್ಬಿಗಳಲ್ಲಿ ತಿಂಗಳಿಗಾಗುವಷ್ಟು ತಿಂಡಿಗಳನ್ನು ತುಂಬಿಡಬೇಡಿ. ತಿನ್ನಬೇಕೆಂದು ತುಂಬಾ ಅನಿಸಿದಾಗ ಫ್ರೆಶ್ ಆಗಿ ಮಾಡಿಕೊಂಡು ತಿಂದರೆ ಆರೋಗ್ಯಕ್ಕೂ ಒಳ್ಳೆಯದು.
  • ಪ್ರಕೃತಿ ಚಿಕಿತ್ಸೆಯ ಪ್ರಕಾರ ದಿನಕ್ಕೆ ಎರಡು ಸಲ ತಿನ್ನುವುದು ಸರಿಯಾದ ಅಭ್ಯಾಸ. ಆದರೆ, ನಾವು ಈಗಾಗಲೆ ಮೂರು ಸಲ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿರುವುದರಿಂದ ಹಿತಮಿತವಾಗಿ ತಿನ್ನಬೇಕು ಮತ್ತು ಮಧ್ಯೆ ಮಧ್ಯೆ ತಿನ್ನುವ ಅಭ್ಯಾಸ ಬಿಡಬೇಕು.

ನೆನಪಿರಲಿದಿನಕ್ಕೆ ಒಂದು ಸಲ ತಿನ್ನುವವನು ಯೋಗಿ, ಎರಡು ಸಲ ತಿನ್ನುವವನು ಭೋಗಿ, ಮೂರು ಸಲ ತಿನ್ನುವವನು ರೋಗಿ, ನಾಲ್ಕು ಸಲ ತಿನ್ನುವವನನ್ನು ಎತ್ಕೊಂಡು ಹೋಗಿ (ಸ್ಮಶಾನಕ್ಕೆ).

ಪೂರ್ಣಿಮಾ. ಕೆ. ಮೈಸೂರು. 

22/03/2014

7 Responses

  1. jayashree says:

    So nice Purnima Madam. I guess you have echoed the sentiments of many a plump individuals. I like your light sense of humour and analytical perspective also.

  2. ಹೌದು. ತೂಕ ಇಳಿಸುವುದು ಸುಲಭದ ಮಾತಲ್ಲ

  3. your style of writing is beautiful, really i enjoyed reading this article

  4. Ghouse says:

    The whole article looks like my experience. I did all the efforts which you have mentioned in the beginning but all went in pool. OK, I will try your tips now. Let’s see does it work.

  5. Jagadish says:

    Very nice article. If one wants to reduce weight, self discipline is most important, in my opinion. We should ‘eat to live and not live to eat’, as the saying goes. As a practitioner of moderate eating, I can say that the benefits of healthy eating far outweigh the pleasures of splurging on food. So eat like a beggar and live like a king/queen. – Jagadish

  6. BH says:

    ತೂಕ ಇಳಿಸಲು ನಾನೂ ಸಾಕಷ್ಟು ವಿಧಗಳಲ್ಲಿ ಪ್ರಯತ್ನಿಸಿ ವಿಫಲಳಾಗಿದ್ದೇನೆ. ನಿಮ್ಮ ಬರಹ , ಲಘು ಹಾಸ್ಯ ಇಷ್ಟವಾಯಿತು.

  7. sonya says:

    ತೂಕವನ್ನು ಕಳೆದುಕೊಳ್ಳುವುದು ಉತ್ತಮ ಮಾರ್ಗವಾಗಿದೆ. ನಾನು ಅನುಸರಿಸಲು ಪ್ರಯತ್ನಿಸುತ್ತಿದ್ದೇನೆ. ಸಹಾಯಕವಾಗಿದೆಯೆ ಜ್ಞಾನಕ್ಕಾಗಿ ಧನ್ಯವಾದಗಳು.

Leave a Reply to BH Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: