ಪ್ರೀತಿಯ ತಂದೆಯ ನೆನಪುಗಳು

Share Button

Neelamma

ನೀಲಮ್ಮ ಕಲ್ಮರಡಪ್ಪ,

ನಮ್ಮ ತಂದೆ ನಿಧನರಾಗಿ ಈಗ್ಗೆ 5 ವರ್ಷಗಳಾದವು. ಅವರ ಜೀವನದ ಪುಟಗಳನ್ನು ತಿರುವಿಹಾಕಿದಾಗ ಅವರ ಜೀವನ ನಿಜಕ್ಕೂ ಆದರ್ಶಮಯವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಅವರು ನಮಗೆ ಜೀವನದಲ್ಲಿ ಕೊಟ್ಟ ಸಂಸ್ಕಾರಗಳು ನಮ್ಮ ಜೀವನವನ್ನು ರಸಭರಿತವಾಗಿ ಮಾಡಿವೆ.

ನಮ್ಮ ತಂದೆ ತುಂಬಾ ಬಡ ಕೃಷಿಕ ಕುಟುಂಬದಿಂದ ಬಂದವರು. ಅವರೇನು ದೊಡ್ಡ ರಾಜಕಾರಣಿಯಲ್ಲ. ಆದರೆ ಅವರು ಪ್ರಾಮಾಣಿಕವಾಗಿ ಕರ್ತವ್ಯನಿಷ್ಟೆಯಿಂದ ರೆವೆನ್ಯೂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸೇವೆಯ ಕೊನೆ ಎರಡು ವರ್ಷ ತಹಸೀಲ್ದಾರರಾಗಿ ಕಾರ್ಕಳದಲ್ಲಿ ನಿವೃತ್ತರಾದರು. ಅವರು ಕಾರ್ಕಳದಲ್ಲಿದ್ದಾಗ ‘ಉಳುವವನಿಗೆ ಭೂಮಿ’ ಎಂಬ ಕಾನೂನು ಜಾರಿಗೆ ಬಂದಿತ್ತು. ಈ  ಕಾನೂನಿನ ಚೌಕಟ್ಟಿನಲ್ಲಿ ತುಂಬಾ ಬಡ ಜನರಿಗೆ ಸಹಾಯ ಮಾಡಿದ್ದ ಕಾರಣ ಅಲ್ಲಿ ಜನ ಅವರನ್ನು ಬಹಳ ಪ್ರೀತಿ ಅಭಿಮಾನದಿಂದ ಬೀಳ್ಕೊಟ್ಟರು.

ಅವರ ಸೇವೆಯ ಹೆಚ್ಚಿನ ಕಾಲ ಚಿಕ್ಕಮಗಳೂರಿನಲ್ಲಿ ನಿರ್ವಹಿಸಿದ್ದು ರೆವೆನ್ಯೂ ಇಲಾಖೆಯಲ್ಲಿ. ಆ ಸಮಯದಲ್ಲಿ ದರ್ಖಾಸ್ಜಮೀನು  ಮಂಜೂರಾತಿಗೆ ಅವಕಾಶವಿದ್ದು ಕಾಫಿ ತೋಟಕ್ಕಾಗಿ ಜಮೀನು ಮಂಜೂರಾತಿ ಸಿಕ್ಕವರು ನಮ್ಮ ತಂದೆಗೆ ಧನ್ಯವಾದ ತಿಳಿಸಲು ಬಂದವರು. ನೀವು ಯಾಕೆ ಸ್ವಲ್ಪ ಜಮೀನಿಟ್ಟುಕೊಳ್ಳಬಾರದು ಎಂದು ಕೇಳಿದಾಗ ನಮ್ಮ ತಂದೆ ಅಷ್ಟು ಬಡತನ ಇದ್ದರೂ ಆಸೆಪಡದೆ ನಿರಾಕರಿಸುತ್ತಿದ್ದರು. ಅವರು ಯಾವುದಕ್ಕೂ ಆಸೆಪಡುತ್ತಿರಲಿಲ್ಲ. ಸರ್ಕಾರಿ ಕೆಲಸವನ್ನು ದೇವರ ಕೆಲಸ ಎಂದು ದುಡಿದವರು. ಈಗಿನ ಕಾಲದಲ್ಲಿ ಎಷ್ಟೆಲ್ಲಾ ಇದ್ದರೂ ಇನ್ನಷ್ಟು  ಬೇಕು  ಎಂದು ಸಂಗ್ರಹಿಸುವ ಜನರನ್ನು ನೋಡಿದಾಗ ನನಗೆ ನಮ್ಮ ತಂದೆಯವರ ಸರಳ ಜೀವನ ಆದರ್ಶವಾಗಿ ಕಾಣುತ್ತದೆ. ಬೇರೆಯವರು ನಮ್ಮ ತಂದೆಯನ್ನು ನೋಡಿ ಬುದ್ದಿ ಇಲ್ಲ ಎಂದು ಆಡಿಕೊಳ್ಳುತ್ತಿದ್ದರು.

ನಾವು ಚಿಕ್ಕವರಿದ್ದಾಗ ನಮ್ಮ ತಂದೆ ಅವರ ಬಾಲ್ಯದ ಬಗೆ ಅವರ ಕಷ್ಟಗಳ ಬಗ್ಗೆ ಹಂಚಿಕೊಳ್ಳುತ್ತಿದ್ದರು. ಅವರಿಗೆ ಉನ್ನತ ವಿಧ್ಯಾಭ್ಯಾಸ  ಮಾಡಬೇಕೆಂಬ ಆಸೆ ಇದ್ದರೂ ಮನೆಯ ಪರಿಸ್ಥಿತಿ ನೋಡಿ ಇವರೇ ಹಿರಿಮಗ ಆದ ಕಾರಣ ಕೆಲಸಕ್ಕೆ ಸೇರಬೇಕಾಯಿತು. ಅವರ ಶ್ರೀಮಂತ ಸ್ನೇಹಿತರೊಬ್ಬಾರು ಇವರನ್ನು ನಾನು ಓದಿಸುತ್ತೇನೆ. ನೀನು ಓದು ಎಂದು ಒತ್ತಾಯಿಸಿದರಂತೆ. ಅವರನ್ನು ತುಂಬಾ ಕೃತಜ್ನತೆ ಯಿಂದ ಸ್ಮರೀಸಿಕೊಳ್ಳುತ್ತಿದ್ದರು. ಅವರು FEES ಕಟ್ಟಲು ಪಟ್ಟ ಕಷ್ಟ ಎಲ್ಲವನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಅವರು ಕಾಲೇಜು ಶಿಕ್ಷಣ ಮಾಡದಿದ್ದರು ಅವರ ENGLISH ಜ್ಞಾನ ತುಂಬಾ ಚೆನ್ನಾಗಿತ್ತು. ಅವರಿಗೆ ಪುಸ್ತಕಗಳನ್ನು ಓದುವ ಹವ್ಯಾಸವೂ ಇತ್ತು.

Cows chasing tigerಅವರು ಚಿಕ್ಕವರಿರುವಾಗ ಬೇಸಿಗೆ ಸಮಯದಲ್ಲಿ ಹಸುಗಳನ್ನು ಹತ್ತಿರದಲ್ಲಿರುವ ಗುಡ್ಡಪ್ರದೇಶಕ್ಕೆ ಕರೆದೊಯ್ದು ಮೇಯಿಸಬೇಕಾಗಿತ್ತು. ಆಗ ನಡೆದ ಒಂದು ಘಟನೆ ತುಂಬಾ ರೋಮಾಂಚಕಾರಿಯಾದ ಅನುಭವವನ್ನು ನಮ್ಮೊಂದಿಗೆ ನೆನಪು ಮಾಡಿಕೊಂಡು ಹೇಳುತ್ತಿದ್ದರು. ಇವರು ಮತ್ತು ಇವರ ಜೊತೆಯವರೆಲ್ಲಾ ಹಸುಗಳನ್ನು ಮೇಯಿಸುತ್ತಿದ್ದಾಗ ಒಂದು ಹುಲಿ ಗಂಗೆ ಎಂಬ ಒಂದು ಹಸುವನ್ನು ಅಕ್ರಮಣ ಮಾಡಿದಾಗ ಉಳಿದೆಲ್ಲಾ ಹಸುಗಳು ಒಟ್ಟಾಗಿ ಹುಲಿಯನ್ನು ಅಟ್ಟಿಸಿಕೊಂಡು ಹೋಗಿ ಆ ಹಸುವನ್ನು ತಿನ್ನಲು ಬಿಡಲಿಲ್ಲವಂತೆ. ಆದರೆ ಹಸುವಿಗೆ ಹುಲಿಯ ಉಗುರುಗಳು ತುಂಬಾ ಗಾಯಗೊಂಡಿದ್ದ ಕಾರಣ ಅಸುನೀಗಿತಂತೆ. ಆದರೆ ಧೈರ್ಯವಾಗಿ ಹಸುಗಳು ಹುಲಿಯನ್ನು ಓಡಿಸಿದ ದೃಶ್ಯ  ನನಗೆ ತುಂಬಾ ಮೆಚ್ಚುಗೆಯಾಯಿತು. ನಮ್ಮ ತಂದೆಯವರಿಗಂತೂ ಹಸುಗಳು ಅಂದರೆ ಬಹಳ ಪ್ರೀತಿ. ಅದರಲ್ಲೂ ಇಂತಹ ಸಾಹಸ ಮಾಡಿದ ಹಸುಗಳ ಬಗ್ಗೆ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ಈ ಘಟನೆ ಸುಮಾರು 1925 ರ ಆಸುಪಾಸಿನಲ್ಲಿ ನಡೆದಿರಬಹುದು. ಆಕಾಲದಲ್ಲಿ ಇಂತಹ ಘಟನೆಗಳು ಎಷ್ಟೋ ನಡೆದಿರಬಹುದು. ಇಂತಹ ಅನುಭವ ನಮಗೆ ಸಿಗಲು ಸಾಧ್ಯವಿಲ್ಲ. ಈಗ ರಕ್ಷಿತಅರಣ್ಯದಲ್ಲೇ 4 ದಿವಸ ಹುಡುಕಿದರೂ ಒಂದು ಹುಲಿ ನೋಡಲು ಸಿಗುವುದು ಕಷ್ಟ . ಇನ್ನು ನಾಡ ಹಸು ಎಂದರೆ ನಮ್ಮ  ದೇಶದ ಹಸುಗಳ ತಳಿ (BREED)  . ನಾವು ಚಿಕ್ಕವರಿರುವಾಗ ನಾವು ನಾಡ ಹಸುವಿನ ಹಾಲು ಕುಡಿದಿದ್ದೇವೆ. ತುಂಬಾ ರುಚಿಯಾಗಿರುತ್ತಿತ್ತು. ಸಕ್ಕರೆಯೇ ಬೇಡ, ಸೀಮೆ ಹಸುಗಳ ರೀತಿ ಅಲ್ಲ ಅವು. ಕರುಗಳನ್ನು ತುಂಬಾ ಪ್ರೀತಿ ಮಾಡುತ್ತಿದ್ದವು. ಮನೆಯವರನ್ನು ಸಹ ಅಕ್ಕರೆಯ ಕಣ್ಣುಗಳಿಂದ ನೋಡುತ್ತಿದ್ದವು. ಮನೆಯವರು ಹಸುಗಳನ್ನು ಅಷ್ಟೇ ಪ್ರೀತಿಯಿಂದ ಸಾಕುತ್ತಿದ್ದರು. ಈಗಿನ ರೀತಿ ಮಾರಾಟದ ವಸ್ತುವಿನಂತೆ ಅಲ್ಲ.

ನನಗೂ ನನ್ನ ತಂದೆಗೂ ತುಂಬಾ ಭಾಂಧವ್ಯ. ನಮ್ಮ ತಂದೆ ಒಬ್ಬರದೇ ದುಡಿಮೆ .ಮಕ್ಕಳು 5 ಜನ. ಇಬ್ಬರು ತಂಗಿಯರು ಮತ್ತು ಇಬ್ಬರು ತಮ್ಮಂದಿರು ಜೊತೆಗೆ ನಮ್ಮ ಚಿಕ್ಕಪ್ಪನ ಮಗ ಸಹ ನಮ್ಮೊಂದಿಗೆ ಓದುತ್ತಿದ್ದ. ಮನೆಗೆ ಬಂದು ಹೋಗುವ ನೆಂಟರಿಷ್ಠರು ಬಂಧುಗಳು ಪೈಕಿ ಯಾರಿಗೆ ಅನಾರೋಗ್ಯವಾದರು ನಮ್ಮ ಮನೆಯಲ್ಲೇ ತಂಗುತ್ತಿದ್ದರು. ಹೀಗಾಗಿ ನಮ್ಮ ಮನೆ ಒಂದು ಛತ್ರದ ರೀತಿ ಇತ್ತು.

ನಾವಿದ್ದಿದ್ದು ಬಾಡಿಗೆ ಮನೆ.ಆಗ ಅಡುಗೆ ಮಾಡಲು ಗ್ಯಾಸ್ ಇಲ್ಲ. ಸೌದೆ ಒಲೆಯಲ್ಲಿ ಅಡಿಗೆ ಮಾಡಬೇಕಾಗಿತ್ತು. ನಮ್ಮ ತಾಯಿ ಹೇಗೆ ನಿಭಾಯಿಸುತ್ತಿದ್ದರು. ಆ ಮಹಾತಾಯಿಗೆ ನಮನಗಳು .ಬಾಡಿಗೆ ಮನೆ ಚಿಕ್ಕದಾದರೂ,. ಅದರಲ್ಲೆ ಸುಧಾರಿಸಿಕೊಂಡು ಬಂದವರಿಗೆ ಉಳಿಯಲು ವ್ಯವಸ್ಥೆ ಮಾಡಿ ಕೊಡುತ್ತಿದ್ದೆವು. ನಾವಿದ್ದ ಚಿಕ್ಕಮಗಳೂರಿನಲ್ಲಿ 65,70 ರ ದಶಕದಲ್ಲಿ ಯಾವಾಗಲು ಝಡಿಮಳೆ. ಒಮ್ಮೊಮ್ಮೆ ಹೊದೆಯುವ ಕಂಬಳಿ ಹಾಸಿಗೆ ಎಲ್ಲವನ್ನು ಹಂಚಿಕೊಂಡು ಮಲಗಬೇಕಾಗುತ್ತಿತ್ತು.

ದುಡಿಯುವ ಕೈಗಳು ಎರಡಾದರೆ ತಿನ್ನುವ ಕೈ ಹತ್ತು. ಊರಲ್ಲಿ ಬೆಳೆಯುವ ಧಾನ್ಯ ನಮಗೂ ಸಹ ಬರುತ್ತಿತ್ತು. ಜೊತೆಗೆ ನಮ್ಮ ತಂದೆಯ ಸಂಬಳ. ಆದರೆ ನಮ್ಮ ತಂದೆಯ ಮನಸ್ಸು ಧಾರಾಳ. ರಾತ್ರಿ ಹೊತ್ತಿಲ್ಲದ ಹೊತ್ತಿನಲ್ಲಿ ಬಂದರೂ ಅವರಿಗೆ ನಮ್ಮ ತಾಯಿ ಆಡಿಗೆ ಮಾಡಿ ಬಡಿಸಬೇಕಾಗಿತ್ತು. ಇಷ್ಟೆಲ್ಲಾ ಬಡತನ ಇದ್ದರೂ ನಮ್ಮ ಸ್ವಾತಂತ್ರಕ್ಕೆ ಕೊರತೆ ಇರಲಿಲ್ಲ. ನಮ್ಮ ತಂದೆ ತಾಯಿ ಹೆಣ್ಣುಮಕ್ಕಳು ಬೇರೆ, ಗಂಡು ಮಕ್ಕಳು ಬೇರೆ ಎಂಬ ರೀತಿ ಒಂದು ದಿನವೂ ಬೇಧ ಬಾವ ತೋರಲಿಲ್ಲ.

ನಾನು ಪ್ರೌಢಶಾಲೆಯ ವಿಧ್ಯಾಭ್ಯಾಸವನ್ನು MES ನಲ್ಲಿ ಮುಗಿಸಿದಾಗ ನನ್ನ ಸ್ನೇಹಿತೆಯರಿಬ್ಬರು ಇಂಗ್ಲಿಷ್ ಮೀಡಿಯಂ  ಫಸ್ಟ್ ಬ್ಯಾಚ್ ಆದ ಕಾರಣ ಅವರು ತೇರ್ಗಡೆಯಾಗಲಿಲ್ಲ. ಹಾಗಾಗಿ ನಾನು ಸ್ನೇಹಿತರೂ ಇಲ್ಲಿ ಮನೆಯಲ್ಲಿ ಕಷ್ಟ ಎಂಬ ಕಾರಣದಿಂದ ಕಾಲೇಜಿಗೆ ಹೋಗುವುದಿಲ್ಲವೆಂದು ತೀರ್ಮಾನಿಸಿದೆ. ಆದರೆ ನಮ್ಮ ತಂದೆ ಅವರ ಕೆಲಸದ ಒತ್ತಡದ ಮಧ್ಯೆ ಕಾಲೇಜಿನಿಂದ ಫಾರಂ ತಂದು ಹೆಣ್ಣುಮಕ್ಕಳು ಓದಿರಬೇಕು. ಮುಂದೆ ಏನಾದರೂ ಕಷ್ಟ ಬಂದರೆ ವಿದ್ಯೆ ಇದ್ದರೆ ಒಳ್ಳೆಯದು ಎಂದು ಬುದ್ದಿ ಹೇಳಿ ಸೇರಿಸಿದರು. ಅವರಿಂದ ಸಿಕ್ಕಿದ ಪದವಿಯಿಂದಲೇ ನಾನೂ ಒಬ್ಬ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ಹಾಗೂ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ದಿ ಹೊಂದಲು ಸಹಕಾರಿಯಾಯಿತು. ನಮ್ಮ ತಂದೆ ಮಾತ್ರವಲ್ಲ ನಮ್ಮ ತಾಯಿಯ ಪಾತ್ರವೂ ಅಪಾರ. ನಮ್ಮ ಊರಿನಲ್ಲಿ ಹೆಣ್ಣುಮಕ್ಕಳಿಗೆ ಕಾಲೇಜು ಶಿಕ್ಷಣ ಕೊಡಿಸಿದವರಲ್ಲಿ ನಮ್ಮ ತಾಯಿ ತಂದೆ ಮೊದಲಿಗರು.

ನಮ್ಮ ಮನೆಯ ಪರಿಸ್ಥಿತಿ ನೋಡಿ ನಾನು ಕೆಲಸಕ್ಕೆ ಸೇರಬೇಕು. ನಮ್ಮ ತಾಯಿ ತಂದೆಗೆ ಆರ್ಥಿಕವಾಗಿ ಬೆಂಬಲವಾಗಿ ನಿಲ್ಲಬೇಕು ಎಂಬ ಇಚ್ಛೆ  ಬಹಳವಾಗಿತ್ತು. ಪದವಿ ಮುಗಿದ ಕೂಡಲೇ ಒಂದೆರೆಡು ಕೆಲಸಗಳಿಗೆ ಅರ್ಜಿ ಹಾಕಿದ್ದೆ. ಅಷ್ಟರಲ್ಲಿ ನನ್ನ ಮದುವೆ ಪ್ರಸ್ತಾಪ ಬಂದು ಹುಡುಗನ ಕಡೆಯವರು ಒಪ್ಪಿಗೆ ನೀಡಿದಾಗ ನಮ್ಮ ತಂದೆ ನನ್ನ ಒಪ್ಪಿಗೆ ಕೇಳಿದರು. ನನಗೆ ಅಗಲೇ ಮದುವೆ ಆಗುವ ಇಚ್ಛೆ  ಇಲ್ಲದ ಕಾರಣ ಈಗಲೇ ಮದುವೆ ಬೇಡವೆಂದು ಹಠ ಹಿಡಿದೆ. ಅದರೆ ನಮ್ಮ ತಂದೆ ಹೇಳಿದ ಒಂದು ಮಾತು ನನ್ನ ನಿರ್ಧಾರ ಬದಲಿಸಿತ್ತು. ನಿನಗೆ ಒಪ್ಪಿಗೆ ಇಲ್ಲದಿದ್ದರೆ ಹೇಳು ನನಗೆ ಅವಮಾನ ಆದರೂ ಪರವಾಗಿಲ್ಲ ಎಂದರು. ಈ ಮಾತು ಹೇಳುವಾಗ ಅವರ ಕಣ್ಣು ತುಂಬಿ ಬಂತು. ಅವರ ಕಣ್ಣಲ್ಲಿ ನೀರು ನೋಡಿದ ಕೊಡಲೇ ನನ್ನ ನಿರ್ಧಾರ ಬದಲಾಯಿತು. ಈ ನಿರ್ಧಾರದಿಂದ ಒಳ್ಳೆಯದೇ ಆಯಿತ್ತು. ನನ್ನ ತಂದೆ ನನ್ನ ಭಾವನೆಗಳಿಗೆ ಸ್ಪಂದಿಸುವ ಒಳ್ಳೆಯ ಜೀವನ ಸಂಗಾತಿಯನ್ನೆ ಆರಿಸಿದ್ದರು.

ನಮ್ಮ ತಂದೆ ಮನಸ್ಸುಮಾಡಿದ್ದರೆ ಆ ಕಾಲದಲ್ಲಿ ಬೇಕಾದಷ್ಟು ಭೂಮಿಯ ಸ್ವತ್ತನ್ನು ಮಾಡಬಹುದಾಗಿತ್ತು. ಇರುವುದಕ್ಕೆ ಒಂದು ಸ್ವಂತ ಮನೆಯನ್ನು ಮಾಡಿಕೊಳ್ಳಲಿಲ್ಲ. ನಿವೃತ್ತಿಯಾದ ನಂತರ ಹಳ್ಳಿ ಮನೆಗೆ ಹೋಗಿ ನೆಲಸಿದರು. ಅವರು ದುಡ್ಡಿಗಾಗಲಿ ಆಸ್ತಿಗಾಗಲಿ ಆಸೆಪಟ್ಟವರಲ್ಲ.ಇರುವುದರಲ್ಲೇ ನೆಮ್ಮದಿಯಿಂದ ಜೀವಿಸಿದರು, ಬೇಕಾದ ಸೌಕರ್ಯಗಳನ್ನು ಮಾಡಿಕೊಳ್ಳಲಿಲ್ಲ ಎಂಬ ಪಶ್ಚಾತಾಪವೂ ಇರಲಿಲ್ಲ. ಎಲ್ಲಾ ಮಕ್ಕಳಿಗೂ ಒಳ್ಳೆ ವಿದ್ಯಾಬ್ಯಾಸ ಕೊಡಿಸಿದರು. ಅವರ ಪ್ರಕಾರ ಅದೇ ಆಸ್ತಿ. ಅವರ ಸರಳತೆ, ಸತ್ಯಪ್ರಿಯತೆ, ಕಷ್ಟಸಹಿಷ್ಣತೆ ಸಮಾಧಾನ ಪ್ರವೃತ್ತಿ ನನಗೆ ತುಂಬಾ ಮೆಚ್ಚುಗೆಯಾದ ವಿಚಾರಗಳು. ಅವರ ನೆನಪುಗಳು ಸದಾ ನನ್ನೊಂದಿಗಿರುತ್ತವೆ…

 

– ನೀಲಮ್ಮ ಕಲ್ಮರಡಪ್ಪ, ಮೈಸೂರು

 

15/03/2014

 

 

Follow

Get every new post on this blog delivered to your Inbox.

Join other followers: