ಆಚಾರ್ಯ ದೇವೋ ಭವ!
ಅಂಜಿಕೆಗಳಿರದೇ
ಅತ್ತರೂ ಬಿಡದೇ
ಅಮಿತೋತ್ಸಾಹದಿ
ಅನುದಿನ ಖುಷಿಯಲಿ
ಕಲಿಸುವ ಗುರುವಿಗೆ ನಮನ
ಅರಿವೆ ಇಲ್ಲದಾಗ
ಅಕ್ಷರರಥವೇರಿಸಿ
ಅರಿವು ಮೂಡಿಸಿ
ಅನ್ನದ ಹಾದಿಯನು
ತೋರಿದ ಗುರುವೇ ನಮನ
ಆರಕ್ಕೇರಿಸುತಲೇ
ಅಲ್ಲಿಂದಿಳಿಯದಿರು
ಅರಮನೆ ಕನಸಿನಲಿ
ಅಲುಗಾಡದೆ ನಡೆದು
ಗೆಲ್ಲೆಂದ ಗುರುವಿಗೆ ನಮನ
ಅಂಗಳದಲ್ಲೋಡಿಸಿ
ಅಂಕಣಗಳನ್ನಡಿಸಿ
ಅದೆಷ್ಟೆಷ್ಟೋ ಆಡಿಸಿ
ಅಂತಿಮ ಮೆಟ್ಟಲೇರಿಸಿ
ಕುಣಿದ ಗುರುವಿಗೆ ನಮನ
ಅಮ್ಮನ ಅಕ್ಕರೆ ನಡುವೆ
ಅಪ್ಪನ ಗುಮ್ಮನ ನಡೆ
ಅವರಿವರ ಅಚ್ಚರಿಯಲಿ
ಅಭ್ಯಾಸದಿ ಜಯವಿದೆ
ಎಂದ ಗುರುವಿಗೆ ನಮನ
ಅಶಿಸ್ತನು ತೊಡೆಯುತ
ಅಧ್ಯಯನ ಮಾಡೆನ್ನುತ
ಆಡಂಬರವಿಲ್ಲದೆನ್ನನು
ಅಣ್ಣನಂತಿದ್ದು ತೀಡುತ
ಕಲಿಸಿದ ಗುರುವಿಗೆ ನಮನ
ಅಂದಿನಂತಿಲ್ಲದಿದ್ದರೂ
ಅದೇ ಭಾವನೆಗಳಲಿ
ಆನುರಾಗ ತುಂಬುತ
ಆಚಾರ್ಯನ ಆಸ್ಥಾನದಿ
ಕುಳಿತಿಹ ಗುರುವಿಗೆ ನಮನ
-ಗಣೇಶಪ್ರಸಾದ ಪಾಂಡೇಲು
ತುಂಬಾ ಚೆನ್ನಾಗಿದೆ .. 🙂