ಪ್ರಕೃತಿ ಪೂಜೆ…
1
ನಸುನಗುವ ಪುಷ್ಪವದು ಮುದನೀಡೆ ಮನಕೆ
ನಲ್ಗಂಪು ಪಸರಿಸಿರೆ ಲತೆ ತಾನು ಬಳುಕೆ..!
ಪೂರ್ಣತೇಜನು ಉದಿಸೆ ಉಷೆಯ ಮನ ಮಿಡುಕೆ
ಪ್ರಕೃತಿದೇವಿಯ ಒಡಲು ತಾ ತುಂಬಿ ತುಳುಕೆ..!
2
ನಿಶೆಯ ನಲ್ದೋಳಿನಲಿ ನಿದ್ರಿಸಿದ ಉಷೆ ನೋಡು
ಸಾಗರದ ತಂಪೆಲರು ಬೀಸೆ ಮನ ಹಾಡು..!
ಉದಯಿಸಿದ ಭಾನುವದೊ ಕಣ್ಣು ತೆರೆಯುವ ನೋಡು
ಮುಂಜಾನೆ ರಾಗಕಿದೊ ಪಕ್ಷಿಗಳ ಹಾಡು..!
3
ನಸುನಾಚಿ ನಿಂತಿರುವ ಪನ್ನೀರು ಪುಷ್ಪವದು
ಪನ್ನೀರು ಹರಿಯುತಿರೆ ಸುಖದ ಬೆರಗು..!
ಮಂದಮಾರುತ ತೀಡಿ ತರುತಿರುವ ಗಂಧವದು
ಪಸರಿಸಿರೆ ಎಲ್ಲೆಡೆಯು ಜಗದ ಮೆರಗು..!
4
ಹಸಿರುಹುಲ್ಲಿನ ಬೆಟ್ಟ ದಟ್ಟನೆಯ ವನಸಿರಿಯು
ಕೇಳಿಬರುತಿರುವ ಆ ಕೋಗಿಲೆಯ ರಾಗ
ಕಣ್ತುಂಬಿ ವಸಂತನಾಗಮನದ ಈ ಪರಿಯು
ಭುವಿ ಬೆಳ್ಹೊದಿಕೆಯ ಸರಿಪ ಸೂರ್ಯರಾಗ..!
5
ಚೈತ್ರಮಾಸದಿ ವಸಂತಋತುರಾಜ ಬಂದಾನ
ಪ್ರಕೃತಿದೇವಿಯ ಮಡಿಲು ತುಂಬಿ ನಿಂದಾನ..!
ಫಲಪುಷ್ಪಗಳ ರಾಶಿ ಸುರಿದು ತಂದಾನ
ಸೂರ್ಯದೇವನ ಪಾದ ನಮಿಸಿ ನಿಂದಾನ..!
6
ಗಿಡಮರಗಳೆಲೆ ಉದುರಿ ಚೈತ್ರನಾಗಮನಕೆ ಕಾಯೆ
ಚಿಗುರೊಡೆದು ಹೂಬಿಟ್ಟು ಕಾಯಿಯಾಗುವ ಮಾಯೆ..!
ದಿನಮಣಿಯು ಉದಯಿಸಲು ನಿಶೆಯು ನಶೆಯಲಿ ಮೀಯೆ
ಜಗವೆಲ್ಲ ಎಚ್ಚರಿಪ ಸಂದೇಶ ಈಯೆ..!
7
ತಿಳಿಹಸಿರು ಹುಲ್ಲಿನಲಿ ಬಣ್ಣದೋಕುಳಿಯಾಟ
ವಿಧವಿಧದ ಚಿಟ್ಟೆಗಳ ಆಟದಾ ಕೂಟ
ದುಂಬಿಗಳ ಸ್ವರಮೇಳ ಕೋಗಿಲೆಯ ಸವಿರಾಗ
ಮನದ ಆನಂದಕದೆ ಉದಯರಾಗ..!
– ಶಂಕರಿ ಶರ್ಮ, ಪುತ್ತೂರು.