ನಮ್ಮ ಕಡಲೂರಿನವಳು
ಬೆಂದಕಾಳೂರಿನಲಿ
ಬೆಚ್ಚಗಿರಲಿಲ್ಲವಳು
ಬೇನೆಯ ಬದುಕಿನವಳು
ನಮ್ಮ ಕಡಲೂರಿನವಳು
ಬಿಸಿಲು ಎಂದೇನಲ್ಲ
ಬಿರುಮಾತಿನಲ್ಲವಳು
ಬಾಯಾರಿದ ಬೆಡಗಿ
ನಮ್ಮ ಕಡಲೂರಿನವಳು
ಬದುಕು ಕಟ್ಟಲೆಂದು
ಬಂದಿದ್ದಳಿಲ್ಲಿಗವಳು
ಬಾಣಲೆಬಿಸಿಗೆ ಬೆದರಿದಳು
ನಮ್ಮ ಕಡಲೂರಿನವಳು
ಬಾಗಿಲನು ತೆರೆಯುತ
ಬಾಗುತ ಮುಗಿವವಳು
ಭಾಗ್ಯವನರಸುವ ಹೆಣ್ಣು
ನಮ್ಮ ಕಡಲೂರಿನವಳು
ಬೇಗೆಗೆ ಬೆಚ್ಚೇಳುತ
ಬಸವಳಿದಳವಳು
ಭರವಸೆಗೆ ಸಾಕ್ಷಿ ಕಂಗಳು
ನಮ್ಮ ಕಡಲೂರಿನವಳು
ಬಯಕೆಗಳ ಬಸಿರಿನ
ಭಾರವನು ಹೊತ್ತವಳು
ಬೊಗಸೆಯೊಡ್ಡಿಹಳು
ನಮ್ಮ ಕಡಲೂರಿನವಳು
ಬಡತನಕ್ಕಂಜುತಲೇ
ಬಸ್ ಏರಿ ಬಿಟ್ಟವಳು
ಬೆನ್ನು ಹಾಕಲಾರಲವಳು
ನಮ್ಮ ಕಡಲೂರಿನವಳು
ಬಯಸುತ ಬಂದವಳು
ಬೇರನ್ನಿಲ್ಲೂರಿದವಳು
ಬಾಗದವಳು ಬೀಗದವಳು
ನಮ್ಮ ಕಡಲೂರಿನವಳು
.
– ಗಣೇಶಪ್ರಸಾದ ಪಾಂಡೇಲು
ಅರ್ಥಪೂರ್ಣ ಕವನ ..