ಮನುಷ್ಯನನ್ನು ಅವನ ಮಾತೃ ಭಾಷೆಯು ಹಿಡಿದುಕೊಂಡಿರುವಂತೆ ಬೇರೆ ಯಾವುದೂ ಹಿಡಿದುಕೊಂಡಿರುವುದಿಲ್ಲ. ತಾಯಿಯ ಸ್ತನ್ಯಪಾನದೊಂದಿಗೆ ಹರಿದುಬಂದ ಅದು ಅವನ ಉಸಿರಿನಲ್ಲಿ ಇರುವವರೆಗೂ ಉಳಿದುಕೊಂಡಿರುತ್ತದೆ ಇದು ಅಪರಿಚಿತರನ್ನು ಸಮೀಪ ತರುತ್ತದೆ. ಒಬ್ಬರನ್ನೊಬ್ಬರನ್ನು ಆಕರ್ಷಿಸುವಂತಹ ಚುಂಬಕ ಶಕ್ತಿ ಅದಕ್ಕಿದೆ.ಜೀವವು ದೇವರ ವರದಾನವಾದರೆ ಭಾಷೆಯು ತಾಯಿದೇವರ ವರದಾನ. ಮನುಷ್ಯ ಉಪಯೋಗಿಸುವ ಭಾಷೆ ಅವನನ್ನು ಉಳಿಸಲೂ ಬಲ್ಲುದು ಅಳಿಸಲೂ. ಆದರೆ ಹೊರಗಿಂದ ಬಂದು ಕನ್ನಡ ಕಲಿತು ಇಲ್ಲಿಯವರೇ ಆದ ಚಿರಂಜೀವಿ ಸಿಂಘ್ , ಟಿ ಪಿ ಇಸ್ಸಾರ್,ಅವರ ಸ್ಮರಿಸಬಹುದು.
.
ಕನ್ನಡ ಭಾಷೆಯ ಕಂಪು ತನ್ನ ನಾಡಿನಲ್ಲಿ ಅಲ್ಲದೇ ತನ್ನ ಜನರನ್ನೂ ಭಾರತದ ಅನೇಕ ಪ್ರದೇಶಗಳ ಜನರನ್ನೂ ಪ್ರಭಾವಿಸಿದೆ. ಭಾಷೆಯ ಕಂಪಿನ ಜತೆ ಕರ್ನಾಟಕವು ತನ್ನ ಜನರ ಸಂಸ್ಕ್ರುತಿಯ ಕಂಪನ್ನೂ ಬೀರಿದೆ. ಕನ್ನಡವು ಸಂಸ್ಕೃತ ಹಾಗೂ ತಮಿಳನ್ನು ಬಿಟ್ಟರೆ ಭಾರತದ ಭಾಷೆಗಳಲ್ಲಿಯೇ ಅತ್ಯಂತ ಪ್ರಾಚೀನವಾದುದು.ಅದು ಉತ್ತರದಲ್ಲಿ ಗೋದಾವರಿಯನ್ನು ದಾಟಿ ನರ್ಮದಾ ನದಿಯ ತಟಾಕದ ವರೆಗೂ ವ್ಯಾಪಿಸಿಕೊಂಡಿದ್ದಿತು. ಎನಿತು ಇನಿದು ಈ ಕನ್ನಡ ನುಡಿಯು ಮನವನು ತಣಿಸುವ ಮೋಹನ ಸುಧೆಯು ಎಂದು ಕವಿಭೂಷಣ ಡಾ ಬೆಟಗೇರಿ ಕೃಷ್ಣ ಶರ್ಮರ ಹಾಡಿನ ಈ ಭಾಷೆ ದೂರದ ಸಿಂಧಿ ಹಾಗು ಬಲೂಚಿ ಭಾಷೆಗಳ ಮೇಲೂ ಪ್ರಭಾವ ಬೀರಿತ್ತು.
.
ಮುಂಬಯಿ ಗವರ್ನರಿಗೆ ಕೊಟ್ಟಮೊದಲ ಮಾನಪತ್ರವು ಕನ್ನಡದಲ್ಲಿತ್ತು ಎಂಬುದು ಕನ್ನಡ ಭಾಷೆಯ ಹೆಮ್ಮೆಯ ಗರಿಯಲ್ಲವೇ?ಕನ್ನಡದ ಗಡಿರೇಖೆಗಳು ಕಾರವಾರದಿಂದ ಉತ್ತರಕ್ಕೆ 130 ಕಿ ಮೀ ಯವರೆಗೆ ಪಸರಿಸಿತ್ತು. ಮುಂಬಯಿಯ ಬೋರಿವಳ್ಳಿ ಕಂದವಳ್ಳಿ ದೊಂಬವಳ್ಳಿ ಕನ್ನಡದ್ದೇ.ಬನವಾಸಿಯನ್ನು ಆಳಿದಾತ ಕದಂಬರು ಕನ್ನಡದ ದೊರೆಗಳು. ಈಜಿಪ್ಟ ನಲ್ಲಿ ಎರಡನೆಯ ಶತಮಾನದಷ್ಟು ಹಿಂದೆ ಸಿಕ್ಕಿದ ಒಂದು ಗ್ರೀಕ್ ನಾಟಕದಲ್ಲಿ ಕನ್ನಡದ ಮಾತಿದೆ ” ಕೊಂಚ ಮಧು ಪಾತ್ರೆಗೆ ಹಾಕಿ” ಎಂಬ ಒಂದು ಮಾತು ಅಲ್ಲಿನ ಪಾತ್ರದ ಬಾಯಲ್ಲಿ ಬಂದಿದೆ.ಕನ್ನಡದ ಸಂಸ್ಕಾರಮನುಷ್ಯರೆಲ್ಲ ಸರಿ ಸಮಾನರೆಂಬುದು ಮೊಟ್ಟ ಮೊದಲಿನದ್ದು.ಅಶೋಕನ ಒಂದು ಶಾಸನದಲ್ಲಿ “ಸ್ವರ್ಗ ಎಂಬುದು ಶ್ರೇಷ್ಠ ಕುಲದವರು ಮಾತ್ರವಲ್ಲ ಕನಿಷ್ಠ ಕುಲದವರು ಸಂಪಾದಿಸಬಹುದು ನನ್ನ ರಾಜ್ಯದಲ್ಲಿಯ ಬ್ರಾಹ್ಮಣರಂತೆ ಉಳಿದವರು ಅದಕ್ಕೆ ಅರ್ಹರಾಗಿದ್ದಾರೆ” ಎಂದಿದೆ.
ಕನ್ನಡವಾಗಿಯೇ ಇರುವ ಆಂಧ್ರದ ಆದವಾನಿ, ರಾಯದುರ್ಗ, ಆಲೂರು, ಹರಿವಾಣ, ಹಾಲಹರವಿ, ಬದನೇ ಹಾಳು ಕಡಪಾ, ಗುಂತಕಲ್ಲು ಗುತ್ತಿ, ಅನಂತಪುರ, ಕಲ್ಯಾಣದುರ್ಗ ಮುಂತಾದ ಹೆಸರುಗಳು ತಮಿಳುನಾಡಿನ ಉದಕಮಂಡಲ ನೀಲಗಿರಿ, ಈರೋಡು ಗೋಪೀ ಚಟ್ಟಿ ಪಾಳ್ಯ. ಕನ್ನಡಕ್ಕಿಂತ ತಮಿಳು ಹಳೆಯದಾದರು ಕನ್ನಡ ಸಂಸ್ಕೃತಿಯ ಪ್ರಭಾವಗಳು ಭಾರತದ ತುಂಬೆಲ್ಲ ಪಸರಿಸಿದಂತೆ ಪಸರಿಸಿಲ್ಲ. ಮಹಾರಾಷ್ಟ್ರದ ಲೋಣಾವಾಲಾ( ಲೋಣವಳ್ಳಿ), ರತ್ನಗಿರಿ, ಸಿಂಧುದುರ್ಗ, ಪೊಯ್ನಾಡು, ಮಾರಾಟವಾಡದ ನಾಂದೇಡ- ನಂದಿವಾಡ.ಗಾಣಗಾಪುರ, ಕುರುಡೀವಾಡಿ ಮುಂತಾದ ಕನ್ನಡದ ಹೆಸರುಗಳು ಸೂಚಿಸುವುದು ಏನನ್ನು? ಕನ್ನಡದ ಹಟ್ಟಿ ಉತ್ತರ ಭಾರತದ ತುಂಬೆಲ್ಲಾ ಇದೆ. ಕಾಲ್ಯಾದಿಂದ ಶಿಮ್ಲಾಕ್ಕೆ ಹೋಗುವ ದಾರಿಯಲ್ಲಿ ಸೋಲನ್ ಪಟ್ಟಣ ದಾಟಿದರೆ ಕುಮಾರ ಹಟ್ಟಿ ಎಂಬ ಗ್ರಾಮ ಸಿಗುತ್ತದೆ..ಅದು ಬಿಡಿ ಪಾಕಿಸ್ತಾನದ ಪಂಜಾಬದಲ್ಲಿನ ಸಿಯಾಲಕೋಟ ಕನ್ನಡದ ಸಿಯಾಳಕೋಟ.
ಕನ್ನಡ ಜನರ ಸಹಿಷ್ಣುತೆ. ಚಂದ್ರಗುಪ್ತ ಮೌರ್ಯನ ಕಾಲದಿಂದಲೂ ನಡೆದು ಬಂದಿದೆ ರಕ್ಷಣೆ ಬೇಡಿ ಓಡಿ ಬಂದವರೆಲ್ಲರನ್ನೂ ಕರ್ನಾಟ್ಕವು ತನ್ನವರೆಂದು ತಬ್ಬಿಕೊಂಡಿದೆ. ಚಂದ್ರಗುಪ್ತ ಮೌರ್ಯನ ಕಾಲದಿಂದಲೂ ಇದು ನಡೆದು ಬಂದಿದೆ. ಕನ್ನಡ ಜನರ ಸಹಿಷ್ಣುತೆ ಹಾಗೂ ಪರೋಪಕಾರಗಳ ಶ್ರೀಮಂತ ನಿದರ್ಷನವಾಗಿ ಶ್ರವಣ ಬೆಳಗೊಳ ನಿಂತಿದೆ. ಶೈವರಾದ ಚೋಳ ದೊರೆಗಳ ಕಾಟಕ್ಕೆ ಬೇಸತ್ತು ಓಡಿ ಬಂದ ರಾಮಾನುಜರಿಗೆ ಹೊಯ್ಸಳ ದೊರೆಗಳು ಆಶ್ರಯ ನೀಡಿದರು. ಮರಾಠಾ ಸರ್ದಾರರು ದೋಚಿಕೊಂಡು ಹೋದ ಶೃಂಗೇರಿಯ ಶಂಕರಾಚಾರ್ಯರ ಮಠವನ್ನು ಟಿಪ್ಪು ಕಟ್ಟಿಸಿಕೊಟ್ಟ.
.
ಕರ್ನಾಟಕವು ಭಾರತದ ಶಿಲ್ಪ ರಚನೆಯ ತಾಯಿಯೆನಿಸಿದೆ. ಒಬ್ಬ ಫ್ರೆಂಚ್ ಲೇಖಕನು “ಗೋಲ್ಡನ್ ಏಜ್ ಆಫ್ ಇಂಡಿಯನ್ ಆರ್ಕಿಟೆಕ್ಚರ್” ಭಾರತೀಯ ಶಿಲ್ಪದ ಸುವರ್ಣ ಯುಗ ಎಂಬ ಪುಸ್ತಕವನ್ನು ಬರೆದಿದ್ದಾನೆ.ಅದರೊಳಗಿನ ಅರ್ಧಕ್ಕೆ ಮೇಲ್ಪಟ್ಟು ಚಿತ್ರಗಳು ಐಹೊಳೆ ಮತ್ತು ಪಟ್ಟದಕಲ್ಲುಗಳಿಗೆ ಸಂಬಂಧಿಸಿದವೇ. ಐಹೊಳೆಯಿಂದಲೇ ಮೊದಲು ಆರಂಭಗೊಂಡಿತು. ಮಹಾರಾಷ್ಟ್ರದ ಶಿಲ್ಪದ ಮೂಲವೆಲ್ಲಾ ಚಾಲುಕ್ಯರದು, ರಾಷ್ಟ್ರಕೂಟರದು ಹಾಗೂ ಹೊಯ್ಸಳರದ್ದು. ಎಲಿಫೆಂಟಾ ಗುಹೆಗಳು ಅಲ್ಲಿಯ ತ್ರಿಮೂರ್ತಿ ಅಜಂತಾ ಎಲ್ಲೋರಾಗಳ ಗುಹಾಂತರ್ಗತ ದೇವಾಲಯಗಳು ಕನ್ನಡ ಶಿಲ್ಪಿಗಳ ಕೆತ್ತನೆಯ ಕೆಲಸಗಳಾಗಿವೆ. ರಾಷ್ಟ್ರಕೂಟರು ಶಿಲ್ಪ ಹಾಗೂ ವಾಸ್ತುಶಿಲ್ಪ ಹಾಗೂ ಲಲಿತ ಕಲೆಗಳಿಗೆ ಹೆಸರಾಗಿದ್ದರು ಅವರು ಔರಂಗಾಬಾದ್ ಜಿಲ್ಲೆಯ ಎಲ್ಲೋರಾದಲ್ಲಿ ನಿರ್ಮಿಸಿದ್ದ ಏಕ ಶಿಲೆಯ ಕೈಲಾಸ ದೇವಾಲಯವು ಶಿಲ್ಪಕಲೆಯ ಸರ್ವ ಶ್ರೇಷ್ಠ ಮಾದರಿಯಾಗಿವೆ. ವಿನ್ಸೆಂಟ್ ಸ್ಮಿತ್ ನು ಜಗತ್ತಿನ ಇತಿಹಾಸದಲ್ಲಿ ಅದನ್ನು ಸರಿಗಟ್ಟುವ ಇನ್ನೊಂದು ರಚನೆ ಇಲ್ಲವೆಂದು ಹೇಳುತ್ತಾನೆ. ಅದರ ಕಲಾ ನೈಪುಣ್ಯ ಹಾಗೂ ಸಿಧ್ದಿಗಳು ಅಲ್ಲಿ ಉಪಯೋಗವಾದ ತಾಂತ್ರಿಕಥೆ ಹಾಗೂ ಪರಿಶ್ರಮಗಳನ್ನು ನೋಡಿದರೆ ಅದು ಅದ್ಭುತಗಳಲ್ಲದ್ಭುತವೆಂದು ಯಾರಾದರೂ ಹೇಳುತ್ತಾರೆ. ಕರ್ನಾಟಕದ ಶಿಲ್ಪಕಲೆ ಗೋವೆಯ ಕದಂಬರ ಕಾಲದಲ್ಲಿ ಕಾಂಬೋಡಿಯಾದವರೆಗೆ ಹಬ್ಬಿತ್ತು. ಚಂಪಾದಲ್ಲಿಯ ಪ್ರಣವೇಷ್ವರ ದೇವಾಲಯವು ಕನ್ನಡಶಿಲ್ಪಿಗಳ ಕಲಾವೈಭವಕ್ಕೆ ಮೂಕ ಸಾಕ್ಷಿಯಾಗಿದೆ.
.
ಕರ್ನಾಟಕದ ಸ್ತ್ರೀ ಪುರುಷರ ಶ್ರೇಷ್ಠ ಮಟ್ಟದ ಸಂಸ್ಕೃತಿಯು ದಕ್ಷಿಣದ ತಮಿಳು ನಾಡಿನಿಂದ ಹಿಡಿದು ಉತ್ತರದ ಕಾಶ್ಮೀರದ ವರೆಗೆ ಜನರನ್ನು ಆಕರ್ಷಿಸಿದ್ದಿತ್ತು. ಕಾಶ್ಮೀರದ ರಾಜ ಪುತ್ರನೊಬ್ಬನು ಕರ್ನಾಟಕದ ಚಾಲುಕ್ಯ ರಾಜ ಪುತ್ರಿ ಶಾಂತಲಾದೇವಿಯ ರೂಪ ಹಾಗೂ ಲಾವಣ್ಯ ಹಾಗೂ ಕಲಾಭಿಜ್ಞತೆಗೆ ಮಾರು ಹೋಗಿ ಅವಳಿಗೆ ಮರುಳಾಗಿದ್ದನೆಂಬ ಉಲ್ಲೇಖ ಕಾಶ್ಮೀರದ ರಾಜತರಂಗಿಣಿಯಲ್ಲಿ ಬರುತ್ತದೆ. ಕರ್ನಾಟಕದ ಶಿಕ್ಷಣವು ಅದರ ಎಲ್ಲ ಹಂತಗಳಲ್ಲಿಯೂ ಸಂಪೂರ್ಣ ಉಚಿತವಾಗಿತ್ತು. ವಿಧ್ಯಾರ್ಥಿಗಳಿಂದ ಏನನ್ನೂ ತೆಗೆದುಕೊಳ್ಳದೇ ಅವರಿಗೆ ಊಟ ವಸತಿ ಹಾಗೂ ವಸ್ತ್ರಗಳನ್ನೂ ಒದಗಿಸಿಕೊಡುವ ಪದ್ಧತಿಯಿತ್ತು.ಹೆಣ್ಣು ಮಕ್ಕಳಿಗೆ ಕೂಡಾ ತಂತಮ್ಮ ಮನೆಯಲ್ಲಿಯೇ ನೃತ್ಯ ಸಂಗೀತ ಹಾಗೂ ಇನ್ನಿತರ ಲಲಿತ ಕಲೆಗಳನ್ನು ವಿಶೇಷ ಶಿಕ್ಷಕರ ಮೂಲಕ ಕಲಿಸಿಕೊಡುತ್ತಿದ್ದರೆಂಬುದು ಅನೇಕ ಕವಿಕಾವ್ಯ ಕೃತಿಗಳಿಂದ ನಮಗೆ ತಿಳಿದಿದೆ.ಕಾಶ್ಮೀರದ ಕವಿ ಬಿಲ್ಲಣನು ಇಲ್ಲಿನ ಜನರ ಉಚ್ಚಮಟ್ಟದ ಸಂಸ್ಕೃತಿಯನ್ನು ಮೆಚ್ಚಿ ದೊರೆ ಆರನೆಯ ವಿಕ್ರಮಾದಿತ್ಯನ ಅಪರಿಮಿತ ಔದಾರ್ಯಕ್ಕೆ ಮಾರು ಹೋಗಿ ದೂರದ ಕಾಶ್ಮೀರದಿಂದ ಕರ್ನಾಟಕಕ್ಕೆ ಬಂದ ಕಥೆಯನ್ನು ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ.
.
ಶಕ ವರ್ಷದ ಪರಂಪರೆಯೂ ಕರ್ನಾಟಕದಿಂದಲೇ ಆರಂಭಗೊಂಡು ಭಾರತದ ತುಂಬೆಲ್ಲಾ ಹರಡಿತು. ವಿಕ್ರಮಾದಿತ್ಯ ಶಕೆ ಎಂಬುದು ಆರಂಭಗೊಳ್ಳುವುದಕ್ಕೆ ಶಕ ಪುರುಶನೆನ್ನುವುದಕ್ಕೆ ಅವನಲ್ಲಿ ಸರ್ವ ಅರ್ಹತೆಗಳಿದ್ದುವು. ಶಾಲಿವಾಹನ ಸಂವತ್ಸರ ಎನ್ನುವುದು ಕೂಡಾ ಪ್ರತಿಷ್ಠಾನದಲ್ಲಿ ಅಂದರೆ ಈಗಿನ ಪೈಠನದಲ್ಲಿ ಆಳುತ್ತಿದ್ದ ಶಾತವಾಹನ ದೊರೆಗಳಿಂದಲೇ ಬಂದಿದೆ. ಈ ಶಾತವಾಹನರೇ ಶಾಲಿವಾಹನರೆಂದು ಪ್ರಖ್ಯಾತರೆನಿಸಿದ್ದಾರೆ. ಅವರು ವಿದೇಶೀ ಮೂಲದ ಶಾಕ್ ರನ್ನು ಸೋಲಿಸಿದರು. ಅದೇ ಮುಂದೆ ಪರಿವರ್ತನಗೊಂದು ಶಾಲಿವಾಹನ ಶಕೆ ಎಂದಾಯ್ತು. ಪಂಡಿತರಿಗೂ ಖಗೋಲ ಶಾಸ್ತ್ರಜ್ಞರಿಗೂ ಶಾಲಿವಾಹನ ಶಕೆ ಎನ್ನುವುದೇ ಸಮ್ಮತವೆನ್ನಿಸಿದೆ.ಈ ಶಾತವಾಹನರು ಅಲ್ಲವೇ ಶಾಲಿವಾಹನರು ಮಾತೃ ಪ್ರಧಾನ ವ್ಯವಸ್ಥೆಯನ್ನು ಒಪ್ಪಿದ್ದರು, ತಂದೆಯಿದ್ದರೂ ತಾಯಿಯ ಹೆಸರನ್ನು ಹೇಳುತ್ತಿದ್ದರು. ಗೌತಮೀಪುತ್ರ ಶಾತಕರ್ಣಿ ಇದಕ್ಕೆ ಉದಾಹರಣೆ. ಪರಂಪರೆ ಹಾಗೂ ಸಾಂಪ್ರದಾಯದ ಮೇರೆಗೆ ಶಾಲಿವಾಹನ ಶಕೆಯ ಹೊಸ ವರ್ಷವು ಚಿತ್ರಮಾಸದ ಆರಂಭಕ್ಕೆ ಬರುತ್ತದೆ. ಅದನ್ನೇ ಯುಗಾದಿ ಎಂದೂ ಕರೆಯುತ್ತಾರೆ. ಯುಗದ ಆರಂಭ ಅಂಥ ಅರ್ಥ. ಈಗಿನ ಮಹಾರಾಷ್ಟ್ರ ಕರ್ನಾಟಕ ಹಾಗೂ ಆಂಧ್ರದಲ್ಲಿ ವೈಭವದಿಂದ ಆಚರಿಸುತ್ತಾರೆ. ಇದೂ ಶಾತವಾಹನರ ಪ್ರಭಾವದಿಂದಲೇ ನಡೆದುಕೊಂಡು ಬಂದಿದೆ.
ಮಹಾರಾಷ್ಟ್ರದ ಗುಡಿಪಾಡ್ವಾ ಕನ್ನಡದ ಗುಡಿ( ಧ್ವಜ) ಮೂಲತಃ ಕನ್ನಡದ್ದೇ ಆಗಿದೆ.ಪಾಡವಾ ಎಂಬುದು ಸಂಸ್ಕೃತದ ಪ್ರತಿಪದ ಮೊದಲನೆಯ ದಿನ. ಒಂಭತ್ತು ಹಾಗೂ ಹತ್ತನೆಯ ಶತಮಾನಗಳಲ್ಲಿ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಗಳ ಕೇಂದ್ರವಾಗಿತ್ತೆಂಬ ಉಲ್ಲೇಖವನ್ನು ಕುವಲಯಮಾಲಾ ಎಂಬ ಸಂಸ್ಕೃತ ಕಾವ್ಯದಲ್ಲಿ ಕಾಣುತ್ತೇವೆ. ಕರ್ನಾಟಕದ ಲಲನೆಯರ ಬಗೆಗೆ ಹೊರಗಿನ ನಿರೀಕ್ಷಕರಿಂದ ಬಂದಿರುವ ಮುಕ್ತ ಕಂಠದ ವರ್ಣನೆ ಕರ್ನಾಟಕದ ಸ್ತ್ರೀಯರ ನಿಷ್ಕಲಂಕ ಚಾರಿತ್ರ್ಯವನ್ನೂ ಅವರ ಸಾಂಸ್ಕೃತಿಕ ಘನತೆಯನ್ನೂ ತೋರಿಸಿಕೊಡುತ್ತದೆ.ಮೇವಾಡದ ದೊರೆ ಹಮ್ಮೀರನ ಪ್ರಶುಭ್ರವಾದ ಪ್ರತೀತಿಕರ್ನಾಟಕ ಸ್ತ್ರೀಯರ ಥಳಥಳನೆ ಹೊಳೆಯುವ ದಂತ ಪಂಕ್ತಿಗಳಿಗಿಂತಲೂ ಶುಭ್ರವಾಗಿತ್ತೆಂಬುದುದನ್ನು ಕವಿ ದಾಖಲು ಮಾಡಿದ್ದನೆ. ಒರಿಸ್ಸಾದ ಗಜಪತಿದೊರೆ ಪ್ರತಾಪರುದ್ರನು ತನ್ನ ಅಜ್ಜ ಕಪಿಲೇಂದ್ರ ಕಿರ್ತಿ ಕಲಂಕರಹಿತವಾಗಿತ್ತೆಂದು ಹೇಳಿ ಅದನ್ನು ಸುಗ್ಗಿಯ ಕಾಲದ ಚಂದ್ರನಿಗೂ ಕರ್ನಾಟಕ ಕನ್ಯೆಯರ ಆಕರ್ಷಕ ಮುಖಕಾಂತಿಗೂ ಹೋಲಿಸಿದ್ದಾನೆ.
.
ಕರ್ನಾಟಕೀ ಎಂಬ ಸಂಗೀತ ಕರ್ನಾಟಕದ್ದೇ. ಇಲ್ಲಿ ಉಗಮಗೊಂಡ ಸಂಗೀತವು ವಾತಾಪಿ( ಬಾದಾಮಿಯಿಂದ) ಆಂಧ್ರಕ್ಕೆ, ತಮಿಳುನಾಡಿಗೆ ಹೋಯ್ತು, ಅಷ್ಟೇ ಅಲ್ಲ ದೂರದ ಬಿಹಾರಕ್ಕೂ ಹೋಗಿ ಮಿಥಿಲಾ ಪಟ್ಟನದಲ್ಲಿ ನೆಲೆ ಗೊಂಡಿತು. ಬಂಗಾಲೀ ಸ್ತ್ರೀಯರು ಕರ್ನಾಟಕ ಕೇಶಾಲಂಕಾರ ಪದ್ಧತಿಗೆ ಮಾರುಹೋಗಿದ್ದರೆಂಬುದು ಅಲ್ಲಿನ ಸಂಶೋಧಕ ಜಯಸಿಂಹ ಎಂಬಾತನಿಂದ ತಿಳಿದು ಬಂತು.ಕರ್ನಾಟಕವು ಸರ್ವ ಧರ್ಮಗಳ ತೂಗು ತೊಟ್ಟಿಲು. ಬಸವೇಶ್ವರರ ವೀರಶೈವವು ಕಾಶ್ಮೀರ ಆಂಧ್ರ ಗುಜರಾತ್ ಮಾಳ್ವಾ ಹಾಗೂ ತಮಿಳುನಾಡಿನ ಜನರನ್ನು ಆಕರ್ಷಿಸಿತ್ತು. ಕಾಶ್ಮೀರದ ಮಹಾರಾಜನು ತನ್ನ ಅರಸೊತ್ತಿಗೆ ಅಲಂಕಾರಗಳನ್ನು ಬಿಟ್ಟು ಶ್ರೀ ಸಾಮಾನ್ಯತೆಗೆ ಒಲಿದು ಮೋಳಿಗೆಯ ಮಾರಯ್ಯನಾದ. ಮಧ್ವಾ ಚಾರ್ಯರ ಭಕ್ತಿ ಪಂಥವು ಆಂಧ್ರ ಒರಿಸ್ಸಾಗಳನ್ನು ಧಾಟಿ ಬಂಗಾಲಕ್ಕೆ ಹೋಯ್ತು. ಚೈತನ್ಯರ ಶಿಷ್ಯ ಜೀವ ಗೋಸ್ವಾಮಿಯ ಪೂರ್ವಿಕರು ಕರ್ನಾಟ್ಕದವರೇ. ಕರ್ನಾಟಕದ ಧಾರ್ಮಿಕ ಸಹಿಷ್ಣುತೆಯು ಬಿಹಾರದಿಂದ ಚಂದ್ರಗುಪ್ತನನ್ನು ತಮಿಳುನಾಡಿನಿಂದ ರಾಮಾನುಜಾಚಾರ್ಯರನ್ನು ಆಕರ್ಷಿಸಿತು. ಕರ್ನಾಟಕವು ಎಲ್ಲರಿಗೂ ಆಷ್ರಯ ಕೊಟ್ಟಿದೆಯಲ್ಲದೇ ಯಾರ ಆಶ್ರಯವನ್ನೂ ಕಸಿದುಕೊಂಡಿಲ್ಲ.
.
ಸಂಸ್ಕೃತಿಯು ಪರಿಮಳದಂತೆ, ಕಾಣಿಸುವುದಿಲ್ಲ. ಆದರೆ ತನ್ನ ಅಸ್ತಿತ್ವವನ್ನು ತೋರಿಸಿಕೊಡುತ್ತದೆ. ಅಂತೆಯೇ ನಮ್ಮ ಸವಿಗನ್ನಡ.
.
– ಬೆಳ್ಳಾಲ ಗೋಪಿನಾಥ ರಾವ್,