ವೃಕ್ಷವೆಂಬ ಮೋಹಕ ಕವನ
ಗೊತ್ತು ನನಗೆ
ಒಂದು ವೃಕ್ಷದಷ್ಟು ಮೋಹಕ ಕವನ
ನಾನು ಯಾವತ್ತೂ ಕಾಣಲಾರೆ.
ಹಸಿದು ಬಾಯ್ತೆರೆದಿದೆ
ವೃಕ್ಷ ಈಂಟಲೆಳಸುತ
ಭುವಿಯ ಸ್ತನ್ಯಾಮೃತಸೆಲೆ;
ದಿನವಿಡೀ ದೇವನತ್ತಲೆ ದಿಟ್ಟಿಸುವ
ವೃಕ್ಷ ಪ್ರಾರ್ಥಿಸಲು
ಎಲೆಭರಿತ ಕರಗಳನೆತ್ತಿ ಮುಗಿದಿದೆ;
ಬೇಸಿಗೆಯ ದಿನಗಳಲ್ಲು
ವೃಕ್ಷ ಸಿಂಗರಿಸಿಕೊಳ್ಳಬಲ್ಲದು
ಗೀಜಗ ಗೂಡುಗಳ ಗೊಂಡೆ ಕಟ್ಟಿ;
ಮಲಗಿಸಿ ಹಿಮಮಣಿಗಳ ವಕ್ಷದಲಿ
ವೃಕ್ಷ ಬದುಕುವುದಾಪ್ತತೆಯಲಿ
ಮಳೆಗಾಲದೊಂದಿಗೆ ತೋಯ್ದು;
ನನ್ನಂಥ ತಿಳಿಗೇಡಿಯಿಂದ
ರಚನೆಗೊಳ್ಳುವವು ಕವನಗಳಷ್ಟೆ,
ವೃಕ್ಷವನ್ನಾದರೋ ಭಗವಂತ ಮಾತ್ರ ಸೃಜಿಸಬಲ್ಲ.
(ಅಮೆರಿಕನ್ ಕವಿ ಜಾಯ್ಸ್ ಕಿಲ್ಮರನ ’ಟ್ರೀಸ್’ ಕವನದ ಭಾವಾನುವಾದ)
– ಕೇಶವ ಭಟ್ , ಕಾಕುಂಜೆ