ಪುಸ್ತಕನೋಟ – ‘ತೆರೆದಂತೆ ಹಾದಿ’
ಹೆಣ್ಣಿನ ಕ್ಷಮತೆ,ದಕ್ಷತೆ,,ಕಾರ್ಯವೈಖರಿ, ಸಾಮಾಜಿಕ ಮತ್ತು ಕೌಟುಂಬಿಕ ಸ್ವಾತಂತ್ರ್ಯದ ಒಳಹೊರಗು ಇವುಗಳನ್ನೆಲ್ಲಾ ಒಂದೇ ಪರಿಧಿಯೊಳಗೆ ಹಿಡಿದಿಟ್ಟ ವೈಚಾರಿಕ ಬರಹಗಳ ಗುಚ್ಛ “ತೆರೆದಂತೆ ಹಾದಿ “ಎಂಬ ವಿಶಿಷ್ಟವಾದ ಶೀರ್ಷಿಕೆಯ ಈ ಹೊತ್ತಿಗೆ. ಮೂಡಬಿದಿರೆ ಆಳ್ವಾಸ್ ಕಾಲೇಜ್ ನ ಇಂಗ್ಲೀಷ್ ಉಪನ್ಯಾಸಕಿ ಬಿ.ಜಯಶ್ರೀ ಕದ್ರಿ ಯವರ ತೆರೆದಂತೆ ಹಾದಿ ಪುಸ್ತಕ, ಮಹಿಳೆಯ ಅಂತರಂಗದ ಆಗುಹೋಗುಗಳ ಹೊಸ ಹೊಸ ಆಯಾಮಗಳನ್ನು ತೆರೆದಿಟ್ಟು ಮತ್ತೆ ಮತ್ತೆ ಚಿಂತನೆಗೆ ಹಚ್ಚುತ್ತದೆ.ಸ್ತ್ರೀ ಲೋಕದ ಒಳಜಗತ್ತಿನ ನೋಟವನ್ನು ಗ್ರಹಿಸುವಂತೆ ಮಾಡುತ್ತದೆ. ಸ್ತ್ರೀ ವಾದ, ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಮಾನತೆ,ಮಹಿಳಾ ಸಬಲೀಕರಣ ಹೀಗೆ ಅದೆಷ್ಟೋ ವರ್ಷಗಳಿಂದ ನಮ್ಮ ನಡುವಿನ ಸಮಾಜದಲ್ಲಿ ನಿರಂತರನಿರಂತರವಾಗಿ ಹರಿದು ಬರುತ್ತಿರುವ ಈ ಉದ್ಘೋಷಗಳಿಗೆ ಮುಕ್ತಿ ಕಾಣುವುದೆಂತು ಎಂಬುದಾಗಿ ನಿಟ್ಟುಸಿರು ನೀಡುತ್ತಿರುವ ಹೆಂಗಳೆಯರ ಉಸಿರಿಗೆ ಉಸಿರಾಗಿ ನಿಲ್ಲುವ ಛಾಪು ,ಶಕ್ತಿ ಇಲ್ಲಿನ ಲೇಖನಗಳಲ್ಲಿವೆ.ಜೊತೆಗೆ ಪ್ರತಿ ಸವಾಲುಗಳಿಗೆ ಸೆಟೆದು ನಿಲ್ಲುವ ಮನೋಭಾವ, ಸಲಹೆ ಸೂಚನೆಗಳನ್ನು ನೀಡುವಲ್ಲಿ ಸಫಲವಾಗಿರುವ ಇಲ್ಲಿನ ಬರಹಗಳು ಚೇತೋಹಾರಿಯಾಗಿ ನಮ್ಮ ಪಕ್ಕದಲ್ಲೇ ನಿಲ್ಲುತ್ತದೆ. ಕಾಲೇಜ್ ಗೆ ಹೋಗುವವರೆಗೆ ನೃತ್ಯ,ಸಂಗೀತ, ಕವಿತೆ ಹೀಗೆ ಒಂದಿಲ್ಲೊಂದರಲ್ಲಿ ಮುಂದತೃಱೃರಥಿದ್ದ ಹುಡುಗಿ ಮದುವೆಯಾಗಿ ಎಲ್ಲಿ ಮಾಯವಾದಳು ಎಂಬ ಇಲ್ಲಿನ ಲೇಖನದ ಒಂದು ಸಾಲು, ತಾನು ಮದುವೆಯಾದ ಮೇಲು ತನ್ನ ಹವ್ಯಾಸವನ್ನು ಮುಂದುವರೆಸಬೇಕು ಎಂಬ ಛಲ ಕಂಡೂ ಕಾಣದಂತೆ ಉದಯಿಸುವಂತೆ ಮಾಡುತ್ತದೆ ಇಲ್ಲಿನ ಬರಹ.
“ಹೆಣ್ಣಾಗಿ ಯಾರು ಹುಟ್ಟವುದಿಲ್ಲ ನಂತರ ರೂಪಿತವಾಗುತ್ತಾರಷ್ಟೆ ” ಸಿಮೊನ್ ನೋವಾ ಎಂಬುವರ ಮಾತನ್ನು ಭಾರತೀಯ ಪ್ರತಿಯೊಬ್ಬ ಪ್ರಜೆಯು ಅರ್ಥ ಮಾಡಿಕೊಳ್ಳಬೇಕು.ಅಂದರೆ ಇಲ್ಲಿ ಹೆಣ್ಣಾಗಿ ರೂಪಿಸುವುದು ಇತರರು ಎಂದಾಯಿತು. ಇದು ನಿಜ. ತಮ್ಮ ಸ್ವಂತ ನಡವಳಿಕೆಯಿಂದ ಹುಡುಗಿಯಾದವಳು ಬದುಕುತ್ತಿದ್ದರು, ಚಿಕ್ಕಂದಿನಿಂದಲೇ ಒಂದೊಂದೇ ಕಟ್ಟುಪಾಡುಗಳು ಅವಳನ್ನು ಬಿಗಿದುಕೊಳ್ಳಲು ಪ್ರಾರಂಭಿಸುತ್ತದೆ. ಬೆಳೆದಂತೆ ಅದು ಬಿಗಿಯಾಗುತ್ತ ಹೋಗುತ್ತದೆ. ನಂತರದ ಬದುಕಿನಲ್ಲಿ ಈ ಬಂಧನದಿಂದ ಆಕೆಗೆ ಬಿಡುಗಡೆ ಸಿಗುವುದೇ ಇಲ್ಲ. ಹೀಗೆ ಬಂಧನದಲ್ಲಿರುವವಳನ್ನು ಹಿಂಸಿಸಲು, ಮಾನಸಿಕವಾಗಿ ದೈಹಿಕವಾಗಿ ಶೋಷಿಸಲು ,ದೌರ್ಜನ್ಯ ನಡೆಸಲು ಅದೆಷ್ಟು ಸುಲಭವಲ್ಲವೇ? ನಮ್ಮ ಭಾರತೀಯ ಸ್ತ್ರೀ ಯರಿಗೆ ಆಗಿರುವುದು ಇದೇ ರೀತಿಯ ಬಂಧನ.ಇಂತಹ ಬಂಧನ ಕಟ್ಟುಪಾಡುಗಳನ್ನು ಮೀರಿ ನಿಲ್ಲುವ ಅಂತಶಕ್ತಿ ಬೆಳೆಸುವ ಧ್ಯೇಯವುಳ್ಳ ಇಲ್ಲಿನ ಬರಹಗಳು ನಮ್ಮ ಕಣ್ಣಲ್ಲು ಹೊಂಗಿರಣವನ್ನು ಹೊರಸೂಸುತ್ತದೆ. ಮಹಿಳಾ ಸಾಹಿತ್ಯ ಮೇರೆ ಮೀರಿ ಬೆಳೆಯಬೇಕು ಎಂಬ ಸದಾಶಯ ನಮ್ಮ ಒಳತೋಟಿಗೆ ಇನ್ನೂ ಪುಷ್ಠಿ ನೀಡುವಂತೆ ಮಾಡುತ್ತದೆ.
ಸಾಮಾಜಿಕ ಕಳಕಳಿ ಹೊತ್ತಿರುವ ಸಂಪೂರ್ಣ ವೈಚಾರಿಕ ಬರಹಗಳು ಇಲ್ಲಿದ್ದರು, ಲೇಖಕಿಯ ಒಲವು ಒಳಮನಸ್ಸಿನ ಭಾವನೆಗಳ ತುಮುಲಗಳ ಕಡೆಗೆ ಹೆಚ್ಚಾಗಿ ಒಯ್ದಂತೆ ನಮಗೆ ಭಾಸವಾಗುತ್ತದೆ.ಸ್ವಗತದಲ್ಲಿ ಕಂಡದ್ದನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸಿದ್ದಾರೆ. ಪ್ರೀತಿ ಹಾಗು ಜೀವನ ಬಂಧನ ಅಲ್ಲ. ಪ್ರತಿ ಜೀವಿಯು ಇದೊಂದು ಮಾನಸಿಕ ಸ್ಥಿತಿ ಎಂಬುದಾಗಿ ತೆರೆದಿಡುತ್ತಾರೆ. ವರದಕ್ಷಿಣೆ ಕೇಳುವುದಿಲ್ಲ ಸಂಬಳ ಕೇಳುತ್ತಾರೆ ಎಂಬ ಲೇಖನದಲ್ಲಿ ಉದ್ಯೋಗಸ್ಥ ಮಹಿಳೆಯ ಮಿಡಿತಗಳನ್ನು, ಆಕೆಯ ಚಾಕಚಕ್ಯತೆಯನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ.ಸುವರ್ಣ ಕ್ರಾಂತಿಯ ಪ್ರಭಾವದಿಂದ ಸಂಬಂಧ ಗಳು ಬೆಸೆಯುವುದರೊಂದಿಗೆ,ಬಂಧಗಳು ಬಿಗಿಗೊಳ್ಳುವ ವಿಚಾರವನ್ನು ಅನಾವರಣಗೊಳಿಸಿ ಸತ್ಯಾಸತ್ಯತೆಯನ್ನು ತಿಳಿಸುವಲ್ಲಿ ಸಫಲಗೊಂಡಿದ್ದಾರೆ. ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಸತ್ವಪೂರ್ಣ ಕೃತಿಗಳನ್ನು ರಚಿಸುವುದರೊಂದಿಗೆ ತಮ್ಮ ಮೌಲಿಕ ಬರಹಗಳಿಂದ ಮುನ್ನಡೆ ಸಾಧಿಸುತ್ತಿದ್ದಾರೆ.ಆದರು ಅವರಿಗೆ ಸಲ್ಲಬೇಕಾದ ಗೌರವ ಮತ್ತು ಅವಕಾಶಗಳು ತೀರಾ ಕಡಿಮೆ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತಾರೆ. ಇದರೊಂದಿಗೆ ಶಿಕ್ಷಣ,ಕ್ರೀಡೆ,ಇತರೆಲ್ಲಾ ಕಲೆಗಳನ್ನು ಅಭಿವ್ಯಕ್ತಿಗೊಳಿಸುತ್ತಿದ್ದರು ಸಿಗದ ಮಾನ್ಯತೆಯನ್ನು ಬಗ್ಗೆ ಖೇದವು ವಿಷಾದವು ಇದೆ.ಮಹಿಳಾ ಸುಧಾರಣೆಯ ಮೂಲಕ ಸಮಾಜ ಸುಧಾರಣೆಗೆ ದಾರಿ ತೋರುವ ಕಳಕಳಿಯ ನುಡಿಗಳು ಲೇಖನದುದ್ದಕ್ಕು ನಮಗೆ ಸಿಗುತ್ತದೆ. ಜೊತೆಗೆ ಮಹಿಳೆ ವೈಚಾರಿಕ ಮನೋಧರ್ಮವನ್ನು ಬೆಳೆಯಿಸಿಕೊಂಡು ಪ್ರಗತಿ ಸಾಧಿಸಬೇಕು ಎಂಬ ತಮ್ಮಂತರಂಗದ ನಿಲುವನ್ನು ಸ್ಪಷ್ಟ ಪಡಿಸುತ್ತಾರೆ. ಪ್ರತಿದಿನ ಏಕೆ ಜೀವನಪರ್ಯಂತ ಗೃಹಕೃತ್ಯದಲ್ಲಿ ಅವಿರತವಾಗಿ ದುಡಿದರು(ಉದ್ಯೋಗಸ್ಥ ಮಹಿಳೆಯರಿಗೆ ಎರಡು ಕಡೆ) ಸಿಗದ. ಸ್ಥಾನಮಾನದ ಕುರಿತು ಖೇ್ದ ವ್ಯಕ್ತಪಡಿಸುತ್ತಾರೆ. ಬದಲಾದ ಕಾಲದಲ್ಲಿನ ಮಹಿಳೆ ಆಕೆಯ ಉದ್ಯೋಗ ಪರ್ವದ ಕಿರಿಯ. ಸೂಕ್ಷ್ಮತೆಯ ಅರಿವು ನಮಗಾಗುತ್ತದೆ.ಸ್ತ್ರೀ ವರ್ಗದ ನೋವು ನಲಿವುಗಳು ಒಟ್ಟೊಟ್ಟಿಗೆ ತಲ್ಲಣಗಳು ನಮ್ಮ ಮನಸ್ಸಿನ ಭಾವ ತಂತುವನ್ನು ಮೀಟಿ ಮರೆಯಾದಂತೆ ಅನಿಸಿದರೂ ಮರೆಯಾಗುವುದಿಲ್ಲ ಇಲ್ಲಿ! ಮುಖ್ಯವಾಗಿ ಹೆಣ್ಣಿನ ಅಸ್ತಿತ್ವವನ್ನು ಅಲ್ಲಗಳೆಯದೆ ಬದುಕುವ ಲಕ್ಷಣವನ್ನು ಬೆಳೆಯಿಸಿಕೊಳ್ಳಬೇಕು ಎಂಬುದನ್ನು ‘ ಮಹಿಳಾ ಸಾಹಿತ್ಯದ ಇತಿಮಿತಿಗಳು’ ಎಂಬ ಲೇಖನದೊಳಗೆ ಕಂಡೂ ಕಾಣದಂತೆ ತಿಳಿಹೇಳಿದ್ದಾರೆ. ಏಕೆಂದರೆ ಹೆಣ್ಣಿನ ಬರಹದ ದಟ್ಟ ಸಾಂದ್ರತೆ ಕಂಡು ಬರುವುದು ವೈವಾಹಿಕ ಜೀವನದ ಅನುಭವ ಗಳಲ್ಲಿ ಹೆಚ್ಚು ಎಂಬುದಾಗಿ ಹೇಳುವ ಲೇಖಕಿ ಇಲ್ಲಿ ತಿಳಿಹೇಳುವ ವಿಚಾರ ಗಮನಾರ್ಹವಾಗಿದೆ.
‘ತೆರೆದಂತೆ ಹಾದಿ’ಯ ಐವತ್ತರಿಂದ ಲೇಖನಗಳನ್ನು ಓದುತ್ತಿದ್ದಾಗ ನನಗೆ ಈ ಪುಸ್ತಕದ ತೀರಾ ಹತ್ತಿರವಾದ ಇನ್ನೊಂದು ಪುಸ್ತಕವಿದೆ ಎಂದು ಬಲವಾಗಿ ಅನ್ನಿಸುತ್ತಿತ್ತು.ಅದು ಸುಧಾಮೂರ್ತಿಯವರ “ಮನದ ಮಾತು “ಪುಸ್ತಕದ ಲೇಖನಗಳು. ಈ ಪುಸ್ತಕಕ್ಕೆ ಅದು ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗದಿದ್ದರು ನನ್ನ ಮನಸ್ಸಿಗೆ ಈ ವಿಚಾರ ಬಂದಿದಂತು ನಿಜ.ಮನದ ಮಾತು ಪುಸ್ತಕದಲ್ಲಿ ‘ಎರಡು ಜಗತ್ತಿನ ಅಂತರ ‘ಎಂಬ ಬರಹವಿದೆ. ಅದರಲ್ಲಿ ಯಾವ ದೇಶದ ಮಹಿಳೆಯರು ಆರ್ಥಿಕವಾಗಿ ,ಸಾಮಾಜಿಕವಾಗಿ,ರಾಜಕೀಯವಾಗಿ ಹೆಚ್ಚು ಸ್ವತಂತ್ರರು ಎಂಬ ಪಟ್ಟಿಯನ್ನು ಸುಧಾಮೂರ್ತಿಯವರು ಸ್ತ್ರೀ ಯರ ಕುರಿತ ಸೆಮಿನಾರ್ ಒಂದರಲ್ಲಿ ನೋಡಿದರು. ಅವರು ಅಮೆರಿಕಾ ಅಥವ ಇಂಗ್ಲೆಂಡ್ ಪಟ್ಟಿಯ ಮೇಲ್ಭಾಗದಲ್ಲಿ ಇರಬಹುದು ಎಂಬುದಾಗಿ ಅಂದಾಜಿಸಿದರು..ಆದರೆ ಅದು ತಪ್ಪಾಗಿತ್ತು. ಆ ಪಟ್ಟಿಯ ಮೇಲ್ಭಾಗದಲ್ಲಿ ನಾರ್ವೆ, ಸ್ವೀಡನ್ ನಂತರ ಡೆನ್ಮಾರ್ಕ್ ದೇಶಗಳ ಹೆಸರು ಇತ್ತು. ನಂತರ ಉಳಿದ ಪಾಶ್ಚಿಮಾತ್ಯ ದೇಶಗಳು. ಅವರಿಗೆ ಅತ್ಯಂತ ದು:ಖ ಮತ್ತು ಅಚ್ಚರಿ ತಂದದ್ದು ಪಟ್ಟಿಯ ತಳಭಾಗದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಅದರ ಮೇಲೆ ಭಾರತ ಇದ್ದದ್ದು. ಇದನ್ನೆಲ್ಲ ಬರಹದಲ್ಲಿ ಬರೆದುಕೊಂಡ ಮೇಲೆ ನಾರ್ವೆ ಏಕೆ ಮುಂದಿದೆ, ಭಾರತ ಏಕೆ ಹೊಂದಿದೆ ಎಂಬುದಾಗಿ ಉದಾಹರಣೆ ಸಹಿತ ವಿವರಿಸಿದ್ದಾರೆ. ಅವರು ಮುಖತ ನಾರ್ವೆ ದೇಶಕ್ಕೆ ಹೋದಾಗ ಕಂಡ ಕ್ಷಣಗಳನ್ನು ಇಲ್ಲಿ ತಿಳಿಸಿದ್ದಾರೆ. ಮಹಿಳೆ ಮಾನಸಿಕವಾಗಿ ಸ್ವಾತಂತ್ರ್ಯ ಹೊಂದಬೇಕು ಎಂಬುದಾಗಿ ಸುಧಾಮೂರ್ತಿ ಹೇಳುತ್ತಾರೆ. ಇವರು ಸ್ವತಃ ಉಪನ್ಯಾಸಕಿಯು ಆಗಿರುವುದರಿಂದ ವಿದ್ಯಾರ್ಥಿನಿಯರ ಬವಣೆಗಳನ್ನು ಅರ್ಥೈಸಿಕೊಂಡು, ಕೇಳಿ ತಿಳಿದುಕೊಂಡು ತಮ್ಮ ಲೇಖನಗಳಲ್ಲಿ ಬರೆದಿದ್ದಾರೆ. ತೆರೆದಂತೆ ಹಾದಿಯ ಲೇಖನಗಳಲ್ಲಿಯು ಪ್ರಮುಖವಾಗಿ ತಮ್ಮ ವಿದ್ಯಾರ್ಥಿಗಳ ಮನೋಕ್ಲೇಷೆಯನ್ನು ಅರಿತು ಅದರ ಕುರಿತು ಬರೆದ ಬರಹಗಳು ಹೆಚ್ಚಾಗಿಯೇ ಇವೆ.ಹಾಗಾಗಿ ಇಲ್ಲಿರುವ ವಿಷಯಗಳು ಹೆಣ್ಣು ಮನಸ್ಸಿನ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಬತರೆದಂತವುಗಳು ನಮ್ಮಜೀವನಕ್ಕೆ ತುಂಬಾ ಹತ್ತಿರದಲ್ಲಿವೆ.ಆದರಿಂದ ನೈಜ್ಯ ಬರವಣಿಗೆ ಇಲ್ಲಿ ಸಿದ್ಧಿಸಿದೆ.
‘ತೆರೆದಂತೆ ಹಾದಿ’ಯ ಪ್ರತಿ ಲೇಖನಗಳ ಪ್ರಾರಂಭದಲ್ಲಿ ಒಂದು ಭಾವಗೀತೆಯ ಸಾಲು ಅಥವ ಶುಭನುಡಿಯ ತುಣುಕು ಮತ್ತೇನೋ ನೀತಿಮಾತು ಮಗದೊಂದು ಸಂದೇಶ ಹೀಗೆ ಎದ್ದು ಕಾಣುತ್ತದೆ. ಇಂತಹ ಪ್ರಾರಂಭಿಕ ರೋಚಕ ಸಾಲುಗಳು ಸಂಪ್ರೀತಿಯಿಂದ ಸಂಪೂರ್ಣ ಬರಹವನ್ನು ಓದಲು ನಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತದೆ ಅಂದರೆ ಅತಿಶಯೋಕ್ತಿ ಅಲ್ಲ. ಆಯಾ ಲೇಖನಕ್ಕೆ ಪೂರಕವಾಗಿ ಸಂದರ್ಭಕ್ಕೆ ತಕ್ಕಂತೆ ಇಂತಹ ಸಾಲೊಂದನ್ನು ಆಯ್ಕೆಮಾಡಿಕೊಳ್ಳುವುದು ತೀರಾ ಸುಲಭವಲ್ಲ. ಅದರಲ್ಲೂ ಪ್ರತಿ ಲೇಖನದಲ್ಲು ಇಂತಹ ಉಲ್ಲೇಖವನ್ನು ನಿಯಮ ಪಾಲಿಸಿದಂತೆ ಲೇಖಕಿಯು ಪಾಲಿಸಿದ ಪರಿ ಅಚ್ಚರಿ ತರುತ್ತದೆ. ಒಟ್ಟಾರೆ ಇದರಿಂದ ಲೇಖನಗಳಿಗೆ ಜೀವ ತುಂಬಿ ನಮ್ಮ ಓದುವ ಆಸೆ ನಿರೀಕ್ಷೆಗಳನ್ನು ಕಾಪಾಡಿಕೊಂಡು ಬಂದಿದ್ದಾರೆ.
‘ಒಗ್ಗರಣೆ ಸದ್ದಿನಲ್ಲಿ ಕರಗಿಹೋಗುವವರು’ ಎಂದು ಉಸುರುತ್ತಾ ಸ್ತ್ರೀ ವಾದದ ಕಕ್ಕುಲಾತಿಯ ಎಳೆ ಎಳೆಯನ್ನು ಬಿಡಿಸಿಟ್ಟು, ಲೇಖಕಿಯು ಪರಾಮರ್ಶಿಸಿದ ರೀತಿ ಅನೂಹ್ಯವಾಗಿದೆ.ಪ್ರತಿ ಲೇಖನವು ಅಧ್ಯಯನ ಶೀಲ ಬರಹದಂತೆ ಭಾಸವಾಗಿ ಪ್ರತಿ ಹೆಣ್ಣಿಗು ತನಗೆ ಬೇಕಾದ ‘ಟಿಪ್ಸ್ ‘ ನೀಡುತ್ತದೆ. ಲೇಖಕಿಯು ಓದಿಕೊಂಡಿರುವ ವಿಚಾರವು, ಅದನ್ನು ತಮ್ಮ ಬರಹದೊಂದಿಗೆ ಬೆಸೆದು ನೀಡಿದ ಉದಾಹರಣೆಗಳು ನಮ್ಮನ್ನು ಗಾಢವಾಗಿ ಸೆಳೆಯುತ್ತದೆ. ಖ್ಯಾತನಾಮ ಇಂಗ್ಲೀಷ್ ಬರಹಗಾರರಾದ. ವರ್ಡ್ಸ್‌ವರ್ಥ್, ಅರುಂಧತಿ ರಾಯ್, ಶಶಿ ದೇಶಪಾಂಡೆ, ಶೋಭ ಡೇ,ಅನಿತಾ ದೇಸಾಯಿ,ನಮಿತ ಗೋಗಲ್, ಕಿರಣ್ ದೇಸಾಯಿ ಹೀಗೆ ನೂರಕ್ಕಿಂತಲು ಹೆಚ್ಚು ಕೃತಿಗಳ, ಲೇಖಕರ ಉಲ್ಲೇಖಗಳು ಈ ಪುಸ್ತಕದಲ್ಲಿ ಸಿಗುತ್ತವೆ. ಸ್ವಾತಂತ್ರ್ಯ ಪೂರ್ವದ ಇಂಗ್ಲೀಷ್ ಕೃತಿಗಳು ಮತ್ತು ಲೇಖಕರ ಉದಾಹರಣೆಗಳು ಇವೆ. ಕನ್ನಡದ ಖ್ಯಾತ ಮಹಿಳೆಯರು ಲೇಖಕಿಯರ ಮತ್ತು ಇತರ ಮಹತ್ವದ ಕೃತಿಗಳ ಉಲ್ಲೇಖಗಳು ಸಾಕಷ್ಟು ಇವೆ.ಜೊತೆ ಜೊತೆಗೆ ವಿಶೇಷವಾದ ಚಲನಚಿತ್ರಗಳು ,ಸಾಹಿತ್ಯೇತರ ಕೃತಿಗಳನ್ನು ಸಾಕಷ್ಟು ಉದಾಹರಣೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನೋಡಿದಾಗ ಲೇಖಕಿಯು ಜಯಶ್ರೀ ಬಿ ಕದ್ರಿಯವರ ಇಂಗ್ಲೀಷ್ ಜ್ಞಾನ, ಲೋಕಜ್ಞಾನ,ಸಾಹಿತ್ಯಿಕ ತಿಳುವಳಿಕೆ ಎಲ್ಲವು ಮೇರುಮಟ್ಟದಲ್ಲಿ ನಿಲ್ಲುತ್ತದೆ. ಇಂತಹ ಅಪಾರವಾದ ಜ್ಞಾನ ವನ್ನು ಬಗಲಲ್ಲಿರಿಸಿಕೊಂಡು ರಚಿತವಾದ ಇವರ ಈ ಕೃತಿಯು ಉನ್ನತ ಸ್ಥಾನದಲ್ಲಿ ಇದ್ದು ನಮಗೆಲ್ಲರಿಗೂ ಸರ್ವ ರೀತಿಯಲ್ಲೂ ಆದರ್ಶ ಪುಸ್ತಕವಾಗಿದೆ.
ಜಯಶ್ರೀ ಬಿ. ಕದ್ರಿಯವರು ಪ್ರಸ್ತುತ ಕಾಲಮಾನದ ಅವುಗಳ ಜಾಯಮಾನದ ಸಂಗತಿಗಳನ್ನು ಆಧುನಿಕ ಜನಮಾನಸದಲ್ಲಿ ಅನುಸಂಧಾನಿಸುತ್ತಲೇ ತಮ್ಮ ಬರವಣಿಗೆಯನ್ನು ಮುಂದುವರೆಸಿದ್ದಾರೆ. ಅಂದಿನ ಯಲೆಮಾತಿನ ವೈರುಧ್ಯವನ್ನು ಇಂದು ತೆರೆದಿಟ್ಟು ವ್ಯತ್ಯಾಸಗಳನ್ನು ನವುರಾಗಿ ಮೇಳೈಸಿ,ನಮ್ಮನ್ನು ನಾವು ಸಮಾಜಕ್ಕೆ ಇಟ್ಟುಕೊಳ್ಳುವ ಪರಿಯನ್ನು ತಿಳಿಸಿದ ರೀತಿ ವಿಶೇಷವಾಗಿದೆ..ಕೃತಿಯ ಉದ್ದಕ್ಕು ನಾವು ಪ್ರತ್ಯೇಕವಾಗಿ ಗುರುತಿಸಬಹುದಾದ ಬರಹದ ಶೈಲಿ ಮಾದರಿಯಾಗಿ ಉಳಿದುಕೊಂಡದನ್ನು ನಾವು ಕಾಣಬಹುದು.ಸ್ತ್ರೀ ಊರಿಗೆ ಬದುಕಲು ಒಂದು ರೀತಿಯ ಹೋರಾಟ ಮನೋಭಾವವಿರಬೇಕು,ಆದರೆ ಹೋರಾಟವೇ ಬದುಕಲ್ಲ ಎಂಬ ನಿಲುವನ್ನು ವಿಸ್ತರಿಸಿ ನಮ್ಮೊಳಗು ಪಸರಿಸಿ ಒಂದು ವಿಚಾರವಂತ ಕೃತಿಯನ್ನು ಕನ್ನಡಿಗರಿಗೆ ನೀಡಿದ್ದಾರೆ. ಇವರ ಸಾಹಿತ್ಯ ಸೇವೆಗೆ ಜಯದ ನಿರೀಕ್ಷೆಯನ್ನು ಎಲ್ಲರಲ್ಲೂ ಮೂಡಿಸಿದಂತಹ ತಮ್ಮ ಚೊಚ್ವಲ ಕೃತಿ ‘ತೆರೆದಂತೆ ಹಾದಿ’ಯಿಂದ ಸ್ಪಷ್ಟ ಗುರಿಯ ದಾರಿಯತ್ತ ಸಾಗುತ್ತಿದೆ ಎಂಬುವುದರಲ್ಲಿ ಸಂಶಯವಿಲ್ಲ.
– ಸಂಗೀತ ರವಿರಾಜ್
ದನ್ಯವಾದಗಳು….
ಧನ್ಯವಾದ ಸಂಗೀತಾ. ಇಷ್ಟು ಧನಾತ್ಮಕವಾಗಿ ಪರಿಚಯಿಸಿದ್ದಕ್ಕೆ.