ಬೊಗಸೆಬಿಂಬ - ಲಹರಿ

ಚಹಾ ಕಪ್ಪಿನೊಳಗಿಂದ..

Share Button
ಶ್ರುತಿ ಶರ್ಮಾ, ಬೆಂಗಳೂರು

ಕಾಫಿ, ಟೀ ಪ್ರಿಯರು ಭಾರತದಲ್ಲಿ ಸಿಕ್ಕಾಪಟ್ಟೆ ಇದ್ದಾರಂತೆ. ಅದರಲ್ಲೂ ಟೀ ಪ್ರೇಮಿಗಳು ಕಾಫಿ ಪ್ರೇಮಿಗಳಿಗಿಂತ ಸಂಖ್ಯೆಯಲ್ಲಿ ಒಂದು ಕೈ ಮಿಗಿಲು.

ಸುಬ್ಬಕ್ಕನಿಗೆ ಅವಳ ಕೋಳಿ ಕೂಗದೆ ಬೆಳಗಾಗುತ್ತಿರಲಿಲ್ಲವೆಂಬಂತೆ ಅನೇಕರ ಹೊಟ್ಟೆಗೊಂದು ತೊಟ್ಟು ಚಹಾ ಬೀಳದೆ ಬೆಳಗ್ಗೆ ಸರಿಯಾಗಿ ಎಚ್ಚರವಾಗದು. ಹಾಲು, ತಕ್ಕಮಟ್ಟಿಗೆ ಒಳ್ಳೆಯ ಚಹಾ ಪುಡಿ, ಏಲಕ್ಕಿಯೋ ಶುಂಠಿಯೋ ಹಾಕಿ ಕುದಿಸಿ, ಸೋಸಿ ಹದವಾಗಿ ಕೆಂಪು ಬೆಲ್ಲದ ಗಟ್ಟಿ ಪಾಕ ಬೆರೆಸಿದ ಘಮಗುಟ್ಟುವ ಹಬೆಯಾಡುವ ಚಹಾವೆಂದರೆ ನನಗೂ ಒಂಥರಾ ಆಶೆ! ಬೆಳ್ಳಂಬೆಳಗ್ಗೆ ಚುಮುಚುಮು ಛಳಿಯಿದ್ದರೆ ಒಂದೆರಡು ಗುಟುಕು ಅಂತಹ ಚಹಾ ಸವಿವುದೇ ಗಮ್ಮತ್ತು.

ಮೊನ್ನೆ 2017 ಏಪ್ರಿಲ್ 26 ರಂದು ಕೋಲ್ಕತಾದ ಜನಪ್ರಿಯ “ಮಕೈಬರಿ” ಚಹಾ ಫ಼ಾಕ್ಟರಿಯ ಚಹಾಪುಡಿಯೊಂದು ಕೆಜಿ ಗೆ ರೂ. 19,363 ಕ್ಕೆ ಮಾರಾಟವಾಗಿ ದಾಖಲೆ ಸಾಧಿಸಿತು. ಡಾರ್ಜೀಲಿಂಗ್ ಟೀ ಯ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಚಹಾ ಇವರದು. ಅವರ ಉತ್ಪಾದನೆಯ ವಿಧವಿಧದ ಚಹಾಗಳೂ ಅದರ ಬಗೆಗಿನ ವಿವರ, ಬೆಲೆ ಇತ್ಯಾದಿ ಮಕೈಬರಿಯ ಜಾಲತಾಣದಲ್ಲಿ ಲಭ್ಯ.

ಚಹಾ ಪ್ರೇಮಿಗಳು ಎಲ್ಲಿ ಹೋದರೂ ಅಲ್ಲಿಯ ಚಹಾ ಸವಿಯದೆ ವಾಪಸ್ ಬರಲಾರರು! ತರಹೇವಾರಿ ಚಹಾಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತವೆ. ಮಸಾಲಾ ಟೀ, ಸುಲೈಮಾನಿ, ಕಟ್ಟಂಚಾಯ, ಹರ್ಬಲ್ ಟೀ, ಲೆಮನ್ ಟೀ, ಗ್ರೀನ್ ಟೀ, ಬ್ಲಾಕ್ ಟೀ, ವೈಟ್ ಟೀ ಇತ್ಯಾದಿ ಇತ್ಯಾದಿ ಹೆಸರುಗಳಲ್ಲಿ ವಿಧ ವಿಧವಾದ ರುಚಿಯ ಚಹಾ ಮಾರುಕಟ್ಟೆ ಹಾಗೂ ಜನ ಮನದಲ್ಲಿ ತುಂಬಿದ್ದರೂ ಮೂಲತಃ ಕೇವಲ ನಾಲ್ಕು ತರಹದ ಚಹಾ ಪುಡಿಗಳು ಮಾತ್ರ ಇವೆ!

1. ಗ್ರೀನ್ ಟೀ
ಹಸಿರು ಚಹಾ ಅಥವಾ ಗ್ರೀನ್ ಟೀ ಎಂದ ಕೂಡಲೇ ಸಾಧಾರಣವಾಗಿ ನೆನಪಾಗುವುದು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟವಾಗುವ ಗ್ರೀನ್ ಟೀ ಬ್ಯಾಗ್ ಗಳು. ಇಲ್ಲಿ ನಾ ಬರೆವ ಗ್ರೀನ್ ಟೀ ಖಂಡಿತವಾಗಿಯೂ ಅದಲ್ಲ. ಸ್ವಚ್ಚ, ಶುದ್ಧ, ಚಹಾಗಳಲ್ಲೇ ಅತ್ಯಂತ ಪೇಲವ ವರ್ಣದಿಂದ ಕೂಡಿರುವ ತೆಳು ಹಸಿರಿನಿಂದ ತೆಳು ಹಳದಿಯ ಬಣ್ಣಗಳ ವ್ಯಾಪ್ತಿಯಲ್ಲಿ ಬರುವ ಸತ್ವಯುತ ಚಹಾ. ಆಕ್ಸಿಡೇಷನ್ ಗೊಳಪಡಿಸದ ಉತ್ತಮ ಗುಣಮಟ್ಟದ ಗ್ರೀನ್ ಟೀ ರುಚಿಯಲ್ಲೂ ಆರೋಗ್ಯಕರ ಗುಣಗಳಲ್ಲೂ ಉನ್ನತ ಮಟ್ಟದ್ದಾಗಿರುತ್ತದೆ. ಒಳ್ಳೆಯ ಟೀ ಎಲೆಗಳನ್ನು ಕಿತ್ತ ಕೂಡಲೇ ಹಬೆಯಲ್ಲಿ ಬೇಯಿಸಿ ಅಥವಾ ಬೇಕ್ ಮಾಡಿ ಸೂರ್ಯನ ಬಿಸಿಲಲ್ಲಿ ಒಣಗಿಸಿ ಪುಡಿ ಮಾಡಿದಾಗ ಎಲೆಗಳು ತಾಜಾ ಹಸಿರು ಬಣ್ಣವನ್ನೇ ಹೊಂದಿರುತ್ತವೆ.

2. ಬ್ಲಾಕ್ ಟೀ
ಬ್ಲಾಕ್ ಟೀ ಗ್ರೀನ್ ಟೀ ಗಿಂತ ರುಚಿಯಲ್ಲೂ ಬಣ್ಣದಲ್ಲೂ ಕಡುವಾಗಿರುತ್ತವೆ. ಕಿತ್ತ ಎಲೆಗಳನ್ನು ಗಂಟಾನುಗಟ್ಟಲೆ ಹರವಿ ಹಾಕಿ ಒಣಗಿಸಿ ಪುಡಿ ಮಾಡುವುದು ಪದ್ಧತಿ. ಇದರೊಂದಿಗೆ ಎಲೆಗಳು ಚೆನ್ನಾಗಿ ಹುದುಗು ಬರಲಾರಂಭಿಸಿ, ತಾಮ್ರದ ಬಣ್ಣಕ್ಕೆ ಮಾರ್ಪಾಡಾಗುವುವು. ಎರಡು ಮೂರು ಘಂಟೆ ಹುದುಗು ಬರಲು ಬಿಟ್ಟು ಆ ನಂತರ ಎಲೆಗಳನ್ನು ಬೆಂಕಿಯಲ್ಲಿ ಸುಟ್ಟು ಅಥವ ಬಿಸಿ ಮಾಡಿ ಸಂಪೂರ್ಣ ತೇವಾಂಶವನ್ನು ಇಲ್ಲದಾಗಿಸುತ್ತಾರೆ. ಅಲ್ಲಿಗೆ ಹುದುಗು ಬರುವಿಕೆಯೂ ನಿಲ್ಲುತ್ತದೆ, ಬ್ಲಾಕ್ ಟೀ ಪುಡಿಯೂ ತಯಾರು.

        

3. ಊಲಾಂಗ್ ಟೀ
ಊಲಾಂಗ್ ಟೀ ಬ್ಲಾಕ್ ಟೀ ಹಾಗೂ ಗ್ರೀನ್ ಟೀಗಳ ಸ್ವಭಾವಗಳ ಮಿಶ್ರಣವಾಗಿರುವಂಥದ್ದೆನ್ನಬಹುದು. ಇದರ ತಯಾರಿಕೆಯಲ್ಲಿ ಬ್ಲಾಕ್ ಟೀಯಂತೆ ಘಂಟೆಗಟ್ಟಲೆ ಒಣಗಿಸುವುದೋ, ಬಿಸಿ ಮಾಡುವುದೋ ಮಾಡುವುದಿಲ್ಲ. ಆದರೆ ಹುದುಗು ಬರಿಸುವಿಕೆ ಇರುತ್ತದೆ. ಬ್ಲಾಕ್ ಟೀಗಿಂತ ಕಡಿಮೆ ಮಟ್ಟದಲ್ಲಿ ಹುದುಗು ಬರಿಸಲಾಗುತ್ತದೆ. ಜೊತೆಗೆ ಸ್ವಲ್ಪಮಟ್ಟಿಗೆ ಆಕ್ಸಿಡೈಸ್ ಮಾಡುತ್ತಾರೆ. ಆದ್ದರಿಂದ ಇದು ಬ್ಲಾಕ್ ಟೀ ಹಾಗೂ ಗ್ರೀನ್ ಟೀಗಳ ಗುಣಗಳೆರಡನ್ನೂ ಹೊಂದಿರುತ್ತದೆ.

4. ವೈಟ್ ಟೀ

ಬಿಳಿ ಚಹಾ/ವೈಟ್ ಟೀ ಉಳಿದವುಗಳಿಗೆ ಹೋಲಿಸಿದರೆ ಸ್ವಲ್ಪ ದುಬಾರಿ ಎನಿಸಬಹುದು. ಇದನ್ನು ತುಂಬಾ ಕಡಿಮೆ ಸಂಸ್ಕರಿಸಲಾಗುತ್ತದೆ. ಸಾಧಾರಣವಾಗಿ ನೆರಳಿನಲ್ಲಿ ಒಣಗಿಸಿ ಸ್ವಲ್ಪಮಟ್ಟಿಗೆ ಆಕ್ಸಿಡೈಸ್ ಮಾಡುತ್ತಾರೆ. ಉತ್ಕೃಷ್ಟ ಗುಣಮಟ್ಟದ ವೈಟ್ ಟೀಗೆ ಆಯ್ದುಕೊಳ್ಳುವ ಎಲೆಗಳೆಂದರೆ ಇನ್ನೂ ಬಿರಿಯದ ಚಹಾ ಚಿಗುರುಗಳು. ಆ ಚಿಗುರುಗಳಲ್ಲ ಮೇಲ್ಮೈಯಲ್ಲಿ ಸಣ್ಣ ಬಿಳಿಯ ರೇಷಿಮೆಯಂತಹ ಸೂಕ್ಷ್ಮ ರೋಮಗಳಿರುವಂತೆಯೇ ಕಿತ್ತು ತಯಾರಿಸುವ ಚಹಾವೇ ವೈಟ್ ಟೀ. ಚಹಾಗಳಲ್ಲಿಯೇ ಅತ್ಯಂತ ಕಡಿಮೆ ಕೆಫ಼ೀನ್ ಇರುವಂತಹ ಚಹಾ ಬಿಳಿಯ ಚಹಾ.

ಚೈನಾದಲ್ಲಿ ಉತ್ತಮ ಗುಣಮಟ್ಟದ ಚಹಾವನ್ನು ಉತ್ಪಾದಿಸಲು ಚಹಾ ಗಿಡದ ಚಿಗುರಿನ ಮೊದಲ ಮೂರು ಎಲೆಗಳನ್ನು ಮಾತ್ರ ಬಳಕೆ ಮಾಡಲಾಗುತ್ತದೆ. ಟೀ ಎಲೆಗಳನ್ನು ಸಂಸ್ಕರಿಸಲು ಯಂತ್ರವೂ ತಂತ್ರವೂ ಇಲ್ಲದ ಕಾಲದಲ್ಲಿ ಎಲೆಗಳನ್ನು ಮೊದಲು ಬಿದಿರಿನ ಜರಡಿಯೊಂದರಲ್ಲಿ ಆರಿಸಿ ನಂತರ ಬುಟ್ಟಿ(Kuo Basket)ಯಲ್ಲಿ ಒಲೆಯ ಮೇಲಿರಿಸಿ ಹಬೆಯಲ್ಲಿ ಬೇಯಿಸಿ ನಂತರ ಹರವಿ ಹಾಕಿ ಒಣಗಿಸುವುದು ಪದ್ಧತಿಯಾಗಿತ್ತಂತೆ. ಒಲೆಯ ಮೇಲಿರಿಸಿದ ಬುಟ್ಟಿಯೊಳಗಿನ ಎಲೆಗಳನ್ನು ಕೆಲಸಗಾರನೊಬ್ಬ ಬರಿಗೈಯಲ್ಲೇ ಮಗುಚುತ್ತಾ ಬೇಯಿಸುತ್ತಿದ್ದು, ಇನ್ನೊಬ್ಬ ಆತನ ಕೈಗೆ ಗಾಳಿ ಬೀಸಲು ನಿಲ್ಲುತ್ತಿದ್ದನಂತೆ. ಕೈಯಲ್ಲಿ ಮಗುಚುವುದರಿಂದ ಸರಿಯಾದ ಪ್ರಮಾಣದ ಉಷ್ಣತೆಯಲ್ಲಿ ಟೀ ಎಲೆಗಳು ಹದವಾಗಿ ಬೆಂದು ಅದ್ಭುತ ರುಚಿಯ ಟೀ ತಯಾರಾಗುವುದೇ ಕಾರಣ! ಬೆಂದ ಎಲೆಗಳನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸುವುದು ಅಥವಾ ಟೀ ಎಲೆಯ ಬುಟ್ಟಿಗಳನ್ನು ಇದ್ದಿಲಿನ ಮೇಲೆ ಸಾಲಾಗಿ ಇಟ್ಟು ಒಣಗಿಸುವುದು ಇನ್ನೊಂದು ವಿಧಾನ. ನಂತರದ ಹಂತದಲ್ಲಿ ಕಲ್ಲಿನ ಗುಂಡಗಿನ ಉಪಕರಣವೊಂದನ್ನು ಒಣಗಿದ ಎಲೆಗಳ ಮೇಲೆ ಉರುಳಿಸಿ ಅವನ್ನು ಪುಡಿ ಮಾಡಿದರೆ ಚಹಾಪುಡಿ ಸಿದ್ಧ. ಆದರೆ ಒಂದು ಬಾರಿಗೆ ಕೇವಲ ಐದು ಪೌಂಡ್, ಅಂದರೆ ಹೆಚ್ಚೂ ಕಡಿಮೆ ಎರಡೂ ಕಾಲು ಕಿಲೋಗ್ರಾಮ್ ಟೀ ಎಲೆಗಳನ್ನು ಮಾತ್ರ ಪುಡಿ ಮಾಡಲು ಸಾಧ್ಯವಾಗುತ್ತಿದ್ದ ಕಾಲವದು.

ಇದನ್ನೆಲ್ಲಾ ಕೇಳುವಾಗ ಮನುಷ್ಯ ಬಾಯಿರುಚಿಗೆ ಕೊಡುವ ಮಹತ್ವ, ಅದಕ್ಕಾಗಿ ನಡೆಸುವ ತಯಾರಿ, ಆವಿಷ್ಕಾರಗಳು ಅಪಾರ ಎನಿಸುವುದು ನಿಜ. ಆವಿಷ್ಕಾರದ ಭಾಗವಾಗಿ ಚಹಾದೆಲೆಗಳನ್ನು ಬೇಯಿಸಲು, ಬೇಕ್ ಮಾಡಲು ಸುಲಭ ವಿಧಾನಗಳ ಜೊತೆ ಎಲೆಗಳ ಮೇಲೆ ಕಲ್ಲನ್ನು ಉರುಳಿಸಿ ಪುಡಿ ಮಾಡುವ ಬದಲು ಗ್ರೈಂಡರ್ ಗಳು ಬಂದಿವೆ. ಟೀ ಅಭಿಮಾನಿಗಳು ಮಾತ್ರ ಹಾಗೆಯೇ ಉಳಿದುಕೊಂಡಿದ್ದಾರೆನ್ನುವುದು ಇವೆಲ್ಲದರ ಯಶಸ್ಸಿನ ಸಂಕೇತ! 🙂

-ಶ್ರುತಿ ಶರ್ಮಾ, ಬೆಂಗಳೂರು

9 Comments on “ಚಹಾ ಕಪ್ಪಿನೊಳಗಿಂದ..

  1. ಆಹಹಾ … ಚಹಾ. ವಿವರಣೆ ಓದಿಯೇ ಹಿತವಾದ ಚಹಾ ಕುಡಿದ ಹಾಗಾಯಿತು!

  2. ಚಹಗಳ ವಿಧ ವಿಧ ಮಾದರಿ ಯ ವಿಚಾರ ಚೆನ್ನಾಗಿದೆ. ಆದರೇ ಕಾಫಿ ಕಾಫಿನೇ.

  3. ಶ್ರುತಿ, ಚಹಾದ ಬಗ್ಗೆ ಲೇಖನ ತುಂಬಾ ಚೆನ್ನಾಗಿದೆ.
    ಬರವಣಿಗೆ ಶೈಲಿ ಚನ್ನಾಗಿದೆ.
    Keep it up

  4. ಮೊದಲು ಟೀ ಕುಡಿದು ಬರ್ತೇನೆ, ಆಮೇಲೆ ಕಾಮೆಂಟ್….

  5. ರುಚಿಯಾದ ವಿವಿಧ ಟೀಗಳ ಬಗ್ಗೆ ಸವಿವರಣೆ..ಚೆನ್ನಾಗಿದೆ.

Leave a Reply to Shruthi Cancel reply

 Click this button or press Ctrl+G to toggle between Kannada and English

Your email address will not be published. Required fields are marked *