ಮಾತೃ ಹೃದಯ   

Spread the love
Share Button

ನಾನಿನ್ನೂ ಆಗ ಎರಡನೇ ಪೀಯೂಸಿ ಓದುತ್ತಿದ್ದೆ. ತಕ್ಕಮಟ್ಟಿಗೆ ಸುಂದರವಾಗಿಯೂ ಇದ್ದೆನೆಂದು ಕನ್ನಡಿ ಹೇಳುತ್ತಿತ್ತು. ಒಬ್ಬ ಸುಂದರನಾದ ಯುವಕ ನನ್ನನ್ನು ಹಿಂಬಾಲಿಸುತ್ತಿದ್ದುದು ನನಗೆ ತಿಳಿದಿತ್ತು. ಆ ವಿಷಯ ನನಗೂ ಇಷ್ಟವಾಗಿದ್ದರೂ ಅದನ್ನು ತೋರಿಸಿಕೊಳ್ಳುವ ಎದೆಗಾರಿಕೆ ನನಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ನಾನು ಮೊದಲ ಹೆಜ್ಜೆ ಇಡಲು ತಯಾರಿರಲಿಲ್ಲ. ಜೊತೆಗೆ ನನ್ನ ಮೊದಲ ಆಧ್ಯತೆ ಪೀಯೂಸಿಯಲ್ಲಿ ತೇರ್ಗಡೆ ಆಗುವುದಾಗಿತ್ತು.

ಒಂದು ದಿನ ಕಾಲೇಜಿನಿಂದ ಮನೆಗೆ ಬಂದಾಗ ಆಶ್ಚರ್ಯವೊಂದು ಕಾದಿತ್ತು. ಮನೆಯ ಮುಂದೆ ಆ ಯುವಕ ನಿಂತಿದ್ದ: ತಲೆ ತಗ್ಗಿಸಿಕೊಂಡು ಮನೆಯ ಒಳಗೆ ಹೋದರೆ ಹಜಾರದಲ್ಲಿ ನಾಲ್ಕಾರು ಮಂದಿ ಕುಳಿತು ನನ್ನ ತಂದೆ ತಾಯಿ ಜೊತೆಗೆ ಮಾತನಾಡುತ್ತಿದ್ದರು. ನಾನು ಅವರನ್ನು  ಈ ಮೊದಲು ನೋಡಿದ ನೆನಪಿರಲಿಲ್ಲ. ಅಮ್ಮನನ್ನು ಸಂಜ್ಞೆ ಮಾಡಿ ಒಳಕರೆದು ವಿಚಾರಿಸಿದಾಗ, ಅವರು ನಮ್ಮ ದೂರದ ಸಂಬಂಧಿಗಳೆಂದೂ, ಹಲವಾರು ವರ್ಷಗಳು ಮುಂಬಯಿಯಲ್ಲಿ ಇದ್ದು, ಈಗ್ಗೆ ಕೆಲವು ತಿಂಗಳುಗಳಿಂದ ಇದೇ ಊರಿನಲ್ಲಿ ವಾಸವಾಗಿದ್ದಾರೆಂಬ ವಿಚಾರ ತಿಳಿದುಬಂತು. ಆ ಯುವಕನಿಗೆ ನಿನ್ನನ್ನು ಮದುವೆಯಾಗುವ ಆಸೆ ಇರುವುದರಿಂದ ತನ್ನ ತಂದೆತಾಯಿಗಳನ್ನು ಕರೆದುಕೊಂಡು ಬಂದಿರುವುದಾಗಿಯೂ ತಿಳಿಸಿದರು. ನನ್ನ ಪ್ರಥಮ ಆಧ್ಯತೆ ಓದು ಮುಗಿಸುವುದು ಎಂದು ತಿಳಿಸುವಂತೆ ಹೇಳಿದೆ. ತನ್ನನ್ನು ಹಿಂಬಾಲಿಸುತ್ತಿರುವ ಯುವಕ ಪರಿಚಿತ ಆಗಿದ್ದು, ಎಂದೂ ಕೆಟ್ಟದಾಗಿ ನಡೆದುಕೊಂಡವನಲ್ಲ ಎಂಬ ವಿಚಾರದಿಂದಾಗಿ ಹೆಮ್ಮೆ ಎನಿಸಿತ್ತು. ಅಮ್ಮನೂ ಬಂದವರ ಬಳಿ ಮದುವೆಗೆ ಕಾಲ ಇನ್ನೂ ಕೂಡಿಬದಿಲ್ಲ, ಅವಳ ಓದು ಮುಗಿಸಿದ ನಂತರ ಆಲೋಚಿಸಬಹುದು ಎಂದು ಹೇಳಿ ಕಳುಹಿಸಿದರು. ನನಗೂ ಆತನ ಬಗೆಗೆ ಕನಸು ಕಾಣುವುದು ತಪ್ಪೇನಿಲ್ಲ, ಆದರೆ ಆ ಕನಸು ನನ್ನ ಓದಿಗೆ ಅಡ್ಡಬರದಂತೆ ಎಚ್ಚರಿಕೆ ವಹಿಸಿದ್ದೆ.

ಪೀಯೂಸಿ ಮೊದಲ ದರ್ಜೆಯಲ್ಲಿ ತೇರ್ಗಡೆಯಾದನಂತರ ಪದವಿ ಮಾಡುವ ಆಸೆ ಇದ್ದರೂ ನನ್ನ ಆಸೆ ಈಡೇರಲಿಲ್ಲ, ಕಾರಣ ಆ ಸಂದರ್ಭದಲ್ಲಿ ನನ್ನ ತಂದೆ ತೀರಿಕೊಂಡರು. ಅಮ್ಮ ಸಹ ಅಪ್ಪ ತೀರಿಕೊಂಡ ವರ್ಷದಲ್ಲೇ ಕನ್ಯಾದಾನ ಮಾಡುವ ಇರಾದೆ ವ್ಯಕ್ತಪಡಿಸಿದರು. ಹೆಣ್ಣಿನ ಬದುಕು ಪರಿಪೂರ್ಣವಾಗುವುದು ಮದುವೆ ಆಗಿ ಸಂತಾನ ಪಡೆಯುವುದರಿಂದ ಎಂಬ ಹಿರಿಯರ ಮಾತಿನಂತೆ, ನಾನು ಮದುವೆಗೆ ನನ್ನ ಒಪ್ಪಿಗೆ ಸೂಚಿಸಿದೆ. ಗಂಡಿನ ಮನೆಯವರೂ ನಮ್ಮ ಆರ್ಥಿಕ ಪರಿಸ್ಥಿತಿ ತಿಳಿದು ಸರಳ ವಿವಾಹಕ್ಕೆ ಸಮ್ಮತಿ ಸೂಚಿಸಿದರು.
ವಿವಾಹ ನಡೆದು ಗಂಡನ ಮನೆ ಸೇರಿದೆ. ನಮ್ಮಮ್ಮ ಅಣ್ಣನ ಮನೆ ಸೇರಿದ್ದಳು. ನವ ವಿವಾಹಿತರಾಗಿದ್ದ ನಮಗೆ ಸ್ವರ್ಗಕ್ಕೆ ಮೂರೇಗೇಣು ಎಂಬಂತ್ತಿತ್ತು ನಮ್ಮ ಸಂಸಾರ. ಒಂದೆರಡು ವರ್ಷಗಳ ಕಾಲ ಸಂತಾನ ಬೇಡವೆಂದು ಮುಂಜಾಗ್ರತೆ ತೆಗೆದುಕೊಡಿದ್ದವು. ಆದರೆ ಸುತ್ತಮುತ್ತಲಿನ ಬಾಯಿಗಳು ಸುಮ್ಮನಿರಲಿಲ್ಲ. ಬಂಜೆಯೆಂದು ಜರಿಯತೊಡಗಿದ್ದರು.ನಮ್ಮ ಪೂರ್ವ ನಿರ್ಧಾರದಂತೆ ಎರಡು ವರ್ಷಗಳ ನಂತರ ನಾನು ಗರ್ಭ ಧರಿಸಿ, ಆಡಿಕೊಳ್ಳುತ್ತಿದ್ದ ಬಾಯಿಗಳ ಮುಚ್ಚಿಸಿದೆ.
.
ಈಗಿನ ಚರ್ಚೆ ಹುಟ್ಟುವ ಮಗು ಗಂಡೋ  ಹೆಣ್ಣೋ ಎಂಬುದಾಗಿತ್ತು. ಗಂಡನ ಮನೆಯವರು ಗಂಡು  ಬಯಸುತ್ತಿದ್ದುದು ಸುಸ್ಪಷ್ಟವಾಗಿತ್ತು. ಗಂಡಾದರೂ ಆಗಲಿ ಹೆಣ್ಣಾದರೂ ಆಗಲಿ, ಅದು ಇತರ ಸಾಮಾನ್ಯ ಮಕ್ಕಳಂತೆ ಯಾವುದೇ ಅಂಗಹೀನತೆ ಇಲ್ಲದ ಮಗುವಾಗಿರಲಿ ಎಂಬುದು ನಮ್ಮಿಬ್ಬರ ನಿಲುವಾಗಿತ್ತು. ಹೆರಿಗೆ ಆಗುವವರೆವಿಗೂ ನಮ್ಮ ಅತ್ತೆ ಪ್ರೀತಿಯಿಂದ ನೋಡಿಕೊಂಡರು. ನಾನು ಹಲವಾರು ಸಲ ಮಗುವಿನ ಬೆಳವಣಿಗೆ ಬಗೆಗೆ ಚೆಕಪ್ ಮಾಡಿಸಿದ್ದೆ. ಡಾಕ್ಟರ್ ಬೆಳವಣಿಗೆ ನಾರ್ಮಲ್ ಎಂದು ಹೇಳಿದ್ದರು. ಹೆರಿಗೆ ದಿನ ಅತ್ತೆ & ತಾಯಿಯೊಂದಿಗೆ ಆಸ್ಪತ್ರೆಗೆ ದಾಖಲಾದೆ. ನಾರ್ಮಲ್ ಡೆಲಿವರಿ ಆಗುವುದಿಲ್ಲ ಅನ್ನಿಸಿದಾಗ ಸಿಸೇರಿಯನ್ ಮಾಡಿ, ಮಗುವನ್ನು ತೆಗೆದರು. ಗಂಡು ಮಗುವೇನೋ ದಷ್ಟಪುಷ್ಟವಾಗಿತ್ತು. ಮನೆಯವರಿಗೆಲ್ಲಾ ಸಂಭ್ರಮವೋ ಸಂಭ್ರಮ. ಅಕ್ಕಪಕ್ಕದವರಿಗೆಲ್ಲಾ ಸಿಹಿ ಹಂಚಿದ್ದೂ ಆಯಿತು.  ಆದರೆ ಅದು ಇತರ ಮಕ್ಕಳಂತೆ ಚುರುಕಾಗಿಲ್ಲ ಎನ್ನಿಸತೊಡಗಿತು. ಎಲ್ಲ ಚಟುವಟಿಕೆಗಳೂ ನಿಧಾನವಾಗಿದ್ದವು. ಸುತ್ತಲಿನ ಶಬ್ದಗಳಿಗೆ ತಕ್ಷಣವೇ ಪ್ರತಿಕ್ರಿಯಿಸುತ್ತಿರಲಿಲ್ಲ; ಸರಿಯಾದ ಸಮಯಕ್ಕೆ ಹೊರಳಿಕೊಳ್ಳಲಿಲ್ಲ. ಕತ್ತನ್ನು ಒಂದೇ ಕಡೆಗೆ ವಾಲಿಸಿಕೊಂಡಿರುತ್ತಿತ್ತು. ನಿಲ್ಲಿಸಿದರೆ ನಿಲ್ಲಲು ಶಕ್ತಿಯಿರುತ್ತಿರಲಿಲ್ಲ. ಇದು “ಎಂಆರ್” ಮಗು ಆಗಿಬಿಡುತ್ತದೆಯೋ ಎಂಬ ಅಂಜಿಕೆ ಮನದಲ್ಲಿ ಮೂಢತೊಡಗಿತು.

.

ಸಾಂದರ್ಭಿಕ ಚಿತ್ರ, ಅಂತರ್ಜಾಲ ಕೃಪೆ

.
ಮಗುವನ್ನು ಡಾಕ್ಟರ್ ಬಳಿ ಒಯ್ದು ತೋರಿಸಿ, ಇದು ಏಕೆ ಹೀಗಾಯಿತು? ಎಂದು ಪ್ರಶ್ನಿಸಿದೆ. ಅವರು ಹತ್ತಿರದ ಸಂಬಂಧಗಳಲ್ಲಿ ಮದುವೆಯಾದರೆ ಇಂತಹ ಮಕ್ಕಳು ಹುಟ್ಟುವ ಸಾಧ್ಯತೆ ಇದೆ ಎಂದರು. ನಾನು ಕೇಳಿದಾಗಲೆಲ್ಲಾ ನಾರ್ಮಲ್ ಎನ್ನುತ್ತಿದ್ದವರು ನಾನಾ ಕಾರಣಗಳನ್ನು ನೀಡಲಾರಂಭಿಸಿದರು. ದವಾ ಇಲ್ಲದಾಗ ಉಳಿದಿರುವ ಏಕೈಕ ಮಾರ್ಗ ದುವಾ ಅನ್ನಿಸಿ ಕಂಡ ದೇವರಿಗೆ ಹರಕೆ ಕಟ್ಟಿಕೊಂಡೂ ಆಯಿತು. ಏನಾದರಾಗಲೀ ನನ್ನ ಮಗುವನ್ನು ಬೀದಿಗೆ ಎಸೆಯಲಾದೀತೇ? ಮೊದಮೊದಲು ಕಣ್ಣೀರು ಸುರಿಸಿದ ನಂತರ ಕಂಬನಿ ಬತ್ತಿ ಅಲ್ಲಿ ನಿರ್ಧಾರ ಮೂಡಿತು. ನನ್ನ ನಂತರ ನನ್ನ ಮಗ ಈ ಸಮಾಜದಲ್ಲಿ ತಲೆ ಎತ್ತಿ ನಡೆಯುವಂತಾಗಬೇಕು, ಅದಕ್ಕಾಗಿ ಸಕಲ ಪ್ರಯತ್ನ ಮಾಡಲು ಸಿದ್ಧಳಾದೆ. ಮೊದಲಿಗೆ ನನ್ನ ಮಗುವನ್ನು ಬುದ್ದಿಮಾಂದ್ಯ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಪ್ರಾರಂಭಿಸಿದೆ. ಶೇ.100 ರಷ್ಟಲ್ಲದಿದ್ದರೂ ಶೇ.50 ರಿಂದ 60 ರಷ್ಟು ಸುಧಾರಣೆ ಕಂಡರೆ ಸಾಕು ಎನ್ನಿಸಿತು. ಸ್ವಲ್ಪಸ್ವಲ್ಪ ಸುಧಾರಣೆ ಕಾಣತೊಡಗಿತು.

ಸುತ್ತಲೂ ಕಣ್ಣು ಹಾಯಿಸಿದಾಗ ಹಲವಾರು ಇಂತಹವೇ ಮಕ್ಕಳು ಇರುವುದು ತಿಳಿಯಿತು. ಒಂದು ಹೊಸ ಆಲೋಚನೆ ತಲೆಗೆ ಬಂತು. ನನ್ನ ಮಗನ ಚಿಕಿತ್ಸಾ ಸಮಯದಲ್ಲಿ ನಾನು ಪಡೆದುಕೊಂಡ ಅನುಭವದಿಂದ ನಾನ್ಯಾಕೆ ಇತರ ಮಕ್ಕಳಿಗೂ ಸೇರಿಸಿ ತರಬೇತಿ ಶಾಲೆಯನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡೆ. ಹಾಗೂ ಹೀಗೂ ಮಾಡಿ ಒಂದು ಮಾರುತಿ ವ್ಯಾನ್ ಹೊಂದಿಸಿಕೊಂಡೆ. ಒಂದು ಮನೆಯನ್ನು ಭೋಗ್ಯಕ್ಕೆ ಹಾಕಿಕೊಂಡೆ. ಮನೆಮನೆಗೆ ಹೋಗಿ ಅಂತಹ ಮಕ್ಕಳನ್ನು ತನ್ನ ಮಗನ ಜೊತೆಯಲ್ಲಿ ಕೂಡಿಸಿಕೊಂಡು (?) ಪೋಷಕರ ಸಹಕಾರದೊಡನೆ ಶಾಲೆ ಪ್ರಾರಂಭಿಸಿದೆ. ಕೂರಿಸಿಕೊಂಡು ಮುಂದೆ ಪ್ರಶ್ನಾರ್ತಕ ಚಿಂತೆ ಏಕೆ ಎಂದಿರಾ? ಆ ಮಕ್ಕಳನ್ನು ಒಂದು ಸ್ಥಳದಲ್ಲಿ ಕೂಡಿಸುವುದೇ ಆರು ತಿಂಗಳ ಸಾಹಸವಾಯಿತು. ಜೊತೆಗೆ ಒಬ್ಬೊಬ್ಬರದೂ ಒಂದೊಂದು ಲೆವೆಲ್ ಐಕ್ಯೂ! ಅವರಿಗೆ ಫಿಸಿಕಲ್ ಎಕ್ಸರ್ಸೈಜ್, ಯೋಗ, ಅಕ್ಷರ ಕಲಿಕೆ ಮುಂತಾದ ಚಟುವಟಿಕೆಗಳನ್ನು ಕಲಿಸತೊಡಗಿದೆ..

ನನ್ನ ಈ ಪರಿಶ್ರಮ ಕಂಡ ಕೆಲ ದಾನಿಗಳು ಮಧ್ಯಾಹ್ನದ ಊಟ ಒದಗಿಸಿದರೆ, ಮತ್ತೆ ಕೆಲವರು ಧನಸಹಾಯ ನೀಡತೊಡಗಿದರು. ಸಮಾಜದಲ್ಲಿ ಒಳ್ಳೆಯ ಪ್ರಾಮಾಣಿಕ ಕೆಲಸ ಮಾಡುವವರಿಗೆ ಸಹಾಯ ಹಸ್ತ ಚಾಚುವವರು ಇದ್ದೇ ಇರುತ್ತಾರೆ ಎನ್ನುವ ನಂಬಿಕೆ ಬಂದಿದೆ.
.
-ಆರ್.ಎ.ಕುಮಾರ್

.

2 Responses

  1. Shankari Sharma says:

    ಮನ ಮುಟ್ಟುವಂತಿದೆ ನಿಮ್ಮ ಕಥೆ…ಆದರೆ ಇದು ಕಥೆಯಲ್ಲ.. ನಿತ್ಯ ನಮ್ಮ ಮುಂದೆ ನಡೆಯುವಂತಹ ಜೀವನ ಕಥೆ. ಇಂಥಹ ಎಷ್ಟೋ ಮಂದಿ ಅಮ್ಮಂದಿರನ್ನು ಕಂಡು ಕಣ್ಣು ಹನಿಗೂಡಿದ್ದಿದೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: