ಪ್ರಕೃತಿ-ಪ್ರಭೇದ

ಕೊಡಲಾರೆ ಮುಳ್ಳು, ಕೊಟ್ಟೆ ಹಣ್ಣು..!’

Share Button

ಹಸಿ ಬಟಾಣಿ ಕಾಳಿನ ಗಾತ್ರದ, ತಿಳಿ ಗುಲಾಬಿ ಬಣ್ಣದ, ಎರಡು ಹಣ್ಣುಗಳನ್ನು ಒಮ್ಮೆಗೆ ಬಾಯಿಗೆ ಹಾಕಿ ಚಪ್ಪರಿಸಿ. ಆಹಾ.., ಸ್ವಾದಿಷ್ಟ.! ಆದರೆ ಹೆಚ್ಚು ರಸವಿಲ್ಲದ, ಶುಷ್ಕ ಹಣ್ಣು ಬಾಯೊಳಗೆ ಸಿಪ್ಪೆ ಸಹಿತ ಕರಗುವುದು ನಿಜ. ಕೆಂಪು ಕೇಪುಳ(ಕಿಸ್ಕಾರ) ಹಣ್ಣಿಗಿಂತ ಸ್ವಲ್ಪ ಹೆಚ್ಚು ಪಲ್ಪ್, ಕಡಿಮೆ ರಸ. ಮಕ್ಕಳಿಗಂತೂ ತುಂಬಾ ಪ್ರಿಯ.

“ಕೊಟ್ಟೆ ಮುಳ್ಳು” ಎಂಬ ಹೆಸರಿನ ಈ ಹಣ್ಣು, ದಕ್ಷಿಣ ಕನ್ನಡ ಜಿಲ್ಲೆಯ ಗುಡ್ಡ ಕಾಡುಗಳಲ್ಲಿ ಲಭ್ಯ. ಈಗ ಅಪರೂಪವೆನಿಸಿದ ಹಣ್ಣು ಮುತ್ತಿನಂತೆ ಆಕರ್ಷಕ. ಹೆಸರೇ ತಿಳಿಸುವಂತೆ ಗಿಡದ ಮೈತುಂಬಾ ಮುಳ್ಳುಗಳು. ಪೊದೆ ರೂಪದ ಗಿಡ, ಮರ ಬೆಳೆದಂತೆ ಉದ್ದಕೆ ಸಪೂರ ಎತ್ತರಕೆ ಹೋಗಿ ಬಾಗುವುದು. ಮರಗಳು ತೋಟದ ಬದಿಯ ಧರೆ ಮತ್ತು ಇಳಿಜಾರುಗಳಲ್ಲಿಯೂ ಸ್ವಾಭಾವಿಕವಾಗಿ ಬೆಳೆಯುತ್ತವೆ. ನೀರನ್ನು ಬೇಡುವುದಿಲ್ಲ. ಸಾಮಾನ್ಯವಾಗಿ ಬೇಸಗೆಯ ದಿನಗಳಲ್ಲಿ ಮಾರ್ಚ್ ನಿಂದ ಮೇ ತಿಂಗಳವರೆಗೆ ಗಿಡ ತುಂಬಾ ಕಾಣಸಿಗುವುದು. ಹಣ್ಣು ಕೀಳುವಾಗ ಮುಳ್ಳು ತಪ್ಪಿಸಿ, ಬುಟ್ಟಿಗೆ ಹಾಕುವ ಕೈ ಚಳಕ ಬೇಕು. ಮೊದಲಿನ ಕಾಲದಲ್ಲಿ ಬೇಸಗೆ ರಜೆಯಲ್ಲಿ ಹಳ್ಳಿ ಶಾಲೆ ಮಕ್ಕಳು, ಅಥವಾ ಪೇಟೆ ಮಕ್ಕಳು ‘ಅಜ್ಜಿ ಮನೆ’ ಹೋಗುವ ಸಂದರ್ಭ ಇಂತಹ ಕಾಡು ಹಣ್ಣುಗಳಾದ ಮುಳ್ಳು ಹಣ್ಣು, ಕುಂಟಾಲ, ನೇರಳೆ, ಕೇಪುಳೆ, ಸರಳಿ, ಪುಚ್ಚೆ ಹಣ್ಣು, ಚೂರಿ ಮುಳ್ಳು, ರೆಂಜೆ, ಅಬ್ಬಳುಕ ಹಣ್ಣು ಇತ್ಯಾದಿ ಅನ್ವೇಷಣೆಗೆ ಗುಡ್ಡ ತಿರುಗುವುದು ಸಾಮಾನ್ಯ.

ಹಿರಿಯವರಾದ ಆಯುರ್ವೇದ ಪಂಡಿತರೊಬ್ಬರಿಗೆ ಹಣ್ಣುಗಳನ್ನು ತೋರಿಸಿದಾಗ ಇದರ ಒಂದೆರಡು ಔಷಧೀಯ ಗುಣಗಳನ್ನು ಪರಿಚಯಿಸಿದರು. ಗಿಡದ ತೊಗಟೆಯ ಕಷಾಯ ಅಥವಾ ಗಂಜಿ ಬಾಯಿ ಹುಣ್ಣು ನಿವಾರಕ. ಉದರ ಸಂಬಂಧಿ ರೋಗ, ಪಿತ್ತ ಬಾಧೆ, ಮಲಬದ್ಧತೆಗೂ ಉಪಯೋಗಿಸ ಬಹುದೆಂದರು. ಹಂಡೆಯಲ್ಲಿ ಸ್ವಲ್ಪ ತೊಗಟೆ ಹಾಕಿದ ನೀರಲ್ಲಿ ಸ್ನಾನ ಮೈತುರಿಕೆ ನಿವಾರಕವೆಂದು ಅವರ ಅಭಿಪ್ರಾಯ.

 

ಪ್ರಾಯಶಃ ಮಾರುಕಟ್ಟೆಯಲ್ಲಿ ಈ ಹಣ್ಣು ದೊರಕುವುದು ದುರ್ಲಭ. ಪಟ್ಟಣದ ಜನರಿಗೆ ಕಾಣಸಿಗುವುದೂ ಕಷ್ಟ ಅನಿಸುತ್ತದೆ. ನೀರು ನಿಲ್ಲದ ಇಳಿಜಾರಿನಲ್ಲಿ ಆಗುವ ಹಣ್ಣು, ಕೀಟನಾಶಕಗಳಿಂದ ಮುಕ್ತ. ರುಚಿ ಮತ್ತು ಆರೋಗ್ಯವರ್ಧಕ. ನಿಮ್ಮ ಜಮೀನಿನ ಸುತ್ತಮುತ್ತ ಹಣ್ಣು ಸಿಗುವುದಿದ್ದರೆ ರುಚಿ ನೋಡಿ, ಇತರರಿಗೂ ನೀಡಿ. ಅಪರೂಪದ ಇಂತಹ ಹಣ್ಣುಗಳನ್ನು ಉಳಿಸೋಣವಾಗಲಿ.

ಮುಳ್ಳಣ್ಣು , ಕೊಟ್ಪೆಮುಳ್ಳಣ್ಣು : Zizyphus rugosa . Rhamnaceae ಕುಟುಂಬ.. ಇದು Zizyphus jujuba ಅಂದರೆ ಬೋರೆ ಹಣ್ಣು., ಬಾರೆ ಹಣ್ಣು ಜಾತಿಗೆ ಸೇರಿದೆ ..

 – ಸಾವಿತ್ರಿ ಎಸ್. ಭಟ್, ಪುತ್ತೂರು

5 Comments on “ಕೊಡಲಾರೆ ಮುಳ್ಳು, ಕೊಟ್ಟೆ ಹಣ್ಣು..!’

  1. ಔಷಧೀಯ ಸಸ್ಯ. ಆದರೆ ಈಗ ಅಪರೂಪವಾಗುತ್ತಿದೆ.

  2. ನಮ್ಮೂರಲ್ಲಿ ಇದನ್ನು ಬೆಮ್ಮರಲೆ ಹಣ್ಣು ಅಂತಿದ್ವಿ….

  3. ಸಣ್ಣಂದಿನಲ್ಲಿ ತಿನ್ನುತ್ತಿದ್ದ ಕೊಟ್ಟೆ ಮುಳ್ಳು ಹಣ್ಣಿನ ರುಚಿ ಬಾಯಿಗೆ ಬಂತು..! ಲೇಖನ ಚೆನ್ನಾಗಿದೆ..

  4. ಮಲೆನಾಡಿನ ಕಾಡುಗಳಲ್ಲಿ ಈ ಹಣ್ಣುಗಳು ಜಾಸ್ತಿ ಸಿಗುತ್ತೆ.. ಬೆಂಬರ್ಲು ಹಣ್ಣು ಅಂತೀವಿ..

Leave a Reply to Manju Cancel reply

 Click this button or press Ctrl+G to toggle between Kannada and English

Your email address will not be published. Required fields are marked *