ಖಿನ್ನತೆ ತಂದಿಕ್ಕುವ ನೆನಪೇ..
ಮನಸಾಗುತಿದೆ ಖಿನ್ನ, ನಿನ್ನಾ ನೆನಪಲ್ಲಿ
ಮರೆತಿದ್ದ ನೆನಪ ಮೆರವಣಿಗೆ ಹೂ ಚೆಲ್ಲಿ
ಮಣ್ಣಾಗಿ ಒಣಗಿ ತರಗೆಲೆ ಸದ್ದಲ್ಲಿ ಮೌನ
ಹುಡುಕುತಿದೆ ನೆಲದಡಿ ಬೇರಲ್ಲಿಳಿದು ನಿನ್ನ..
ಯಾರೇನಂದರೂ ಲೆಕ್ಕಿಸದೆ ನಡೆದ ನಡಿಗೆ
‘ಅನ್ನುವವರ ನಡುವೆ ಬದುಕುವುದೆ ಹೀಗೆ’
ಎಂದೆಲ್ಲ ಧೈರ್ಯ ತುಂಬಿಸಿದ ಸ್ಫೂರ್ತಿ ನೀನು
ಬಿಟ್ಟು ನಡೆದೆ ಹೇಳದೆ, ಕೇಳಲಿಲ್ಲ ಯಾಕೊ ನಾನು..
ಹೇಳಲಿತ್ತು ದೂರು, ಕೇಳಲಿತ್ತು ಪ್ರಶ್ನೆ ನೂರಾರು
ಗಂಟಲುಬ್ಬಿ, ಹೊರ ಬರಲಿಲ್ಲ ಎದೆಯ ತಕರಾರು
ಹೇಳಲೆಂದೆ ಬಂದೆ, ಉರು ಹೊಡೆದು ಸಾಲುಗಳು
ಪಸೆಯಾರಿದ ನಾಲಿಗೆ, ತುಟಿ ಅಸಹಕಾರ ಗೋಳು..
ಅದ್ಭುತವೆನಿಸಿತ್ತಲ್ಲ, ನಿನ್ನ ಮಾತಿನ ವಾದ ಸರಣಿ
ಮನದ ರಾಡಿ ಸೆಗಣಿ, ಕಲಸಿ ತಟ್ಟಿತ್ತೆಲ್ಲೆಡೆ ಬೆರಣಿ
ಗಂಜಲದ ಕೊಟ್ಟಿಗೆಯ ವಾಸನೆಯಲ್ಲೂ ಸಂಭ್ರಮ
ಹಂಚಿತ್ತಲ್ಲೆ ನಿನ್ನ ಗೆಜ್ಜೆಯನಾದ, ಕೊನೆಗುಳಿಸಿ ಕ್ಷಾಮ..
ಕಾದು ಕುಳಿತವನಾಸೆ, ಕಾಡು ಸೇರಾಯ್ತು ವನಸುಮ
ದಿಗಿಲುಗಳಾಗಿ ದಟ್ಟ, ಹಗಲಿರುಳು ಕೊರೆದಿಟ್ಟ ಕರ್ಮ
ನೋಡೀಗ ಚಿತ್ರಗಳಾಗಿ ಅರಳಿವೆ ಸಾರುತ ಕಥೆಯ
ಸಂತೈಸದೆ ಮರುಕಳಿಸಿ, ಖಿನ್ನತೆಯ ಚಂದ ಸಂದಾಯ..!
– ನಾಗೇಶ ಮೈಸೂರು