ಪಾದುಕ ಪ್ರಸಂಗ

Share Button

Smitha Amritaraj-05082016

ಬರಿಗಾಲಲ್ಲಿ ನಡೆಯುವ ಕಾಲದ ಅಧ್ಯಾಯ ಅದು ಯಾವಾಗಲೋ ಸಂದು ಓಬಿರಾಯನ ಕಾಲವಾಯಿತೋ ಏನೋ. ಈಗ ಪಾದಕ್ಕೊಂದು ಪಾದುಕೆ ಬೇಕೇ ಬೇಕು. ಇನ್ನೂ ಸರಿಯಾಗಿ ನಡೆಯಲು ಬಾರದ ಎಳೆ ಪಾಪುವಿನ ಗುಲಾಬಿ ಬಣ್ಣದ ಪಾದಕ್ಕೆ ಕೂಡ ಗೊಂಬೆ ಗೊಂಬೆ ಚಿತ್ರದ ಪಾದುಕೆ ತೊಡಿಸಿ ಸಂಭ್ರಮಿಸುತ್ತಾರೆ.ಹಾಗಾಗಿ ಪಾದುಕೆಯೊಂದು ಪಾದದ ಅನಿವಾರ್ಯತೆಯೋ ,ಅವಶ್ಯಕತೆಯೋ ಗೊತ್ತಿಲ್ಲ.ಅದು ಅಂತಿಂತ ಪಾದುಕೆ ಅಲ್ಲ.ಚೆಂದದ ಪಾದುಕೆ ಇರಲೇ ಬೇಕು.ಇವತ್ತು ನಮ್ಮ ಉಡುಗೆ ತೊಡುಗೆಗೆ ಅನುಗುಣವಾಗಿ ಪಾದ ರಕ್ಷೆಯೊಂದು ಇವತ್ತು ಡ್ರೆಸ್ ಸೆನ್ಸ್‌ನ ಪರಿಪೂರ್ಣತೆಗೆ ಸವಾಲಾಗಿ ನಿಂತಿದೆ.

ಬರಿಗಾಲಲ್ಲಿ,ಕಲ್ಲುಮುಳ್ಳುಗಳ ಹಾದಿಯಲ್ಲಿ ನಡೆದು ಪಾದ ಬೊಕ್ಕೆ ಬಂದು ನಡೆಯಲಾಗದ ಸ್ಥಿತಿ ತಲುಪಿದರ ಪರಿಣಾಮವಾಗಿಯೋ ಏನೋ ಪಾದರಕ್ಷೆಯ ಅವಿಷ್ಕಾರವಾಯಿತೆನ್ನಬಹುದು.ಹಿಂದಿನ ಕಾಲದಲ್ಲಿ ಸಾದು ಸಂತರೂ ಕೂಡ ಎಕ್ಕಡವನ್ನು ಧರಿಸಿ ಹೋಗುತ್ತಿದ್ದ ಉಲ್ಲೇಖ ಪುರಾಣ ಕಥೆಗಳಲ್ಲಿ ಬರುತ್ತದೆ.ಪಾದಕ್ಕೆ ರಕ್ಷೆ ಕೊಡುವ ಪಾದುಕೆ ಇಂದು ಅಲಂಕಾರವನ್ನು ಹೆಚ್ಚಿಸಿ,ನಮ್ಮ ವ್ಯಕ್ತಿತ್ವಕ್ಕೂ ಹೊಸ ಶೋಭೆ ಕೊಡುತ್ತಿದೆ,ಘನತೆ ತಂದು ಕೊಡುತ್ತಿದೆ ಎಂಬುದು ಈ ಫ್ಯಾಷನ್ ಲೋಕದ ಸಾರ್ವಕಾಲಿಕ ಸತ್ಯದ ಸಂಗತಿ.

ಇಷ್ಟೆಲ್ಲಾ ಚಪ್ಪಲಿ ಪುರಾಣ ಹೇಳಿದರೂ ನನಗಂತೂ ಏಳನೇ ತರಗತಿಯವರೆಗೆ ಕಾಲಿಗೆ ಚಪ್ಪಲೇ ಇರಲಿಲ್ಲ.ಬರಿಗಾಲಿನಲ್ಲಿಯೇ ಶಾಲೆಗೆ ಹೋಗಬೇಕಾದ ಪ್ರಸಂಗ.ಇದು ನನ್ನೊಬ್ಬಳ ಕತೆಯಲ್ಲ.ನನ್ನಂತೆ ಅನೇಕ ಮಕ್ಕಳೂ ಬರಿಗಾಲಿನ ದಾಸರೇ.ಆದರೆ ಒಂದೇ ಒಂದು ಹವಾಯಿ ಚಪ್ಪಲಿ ತೆಗೆದಿಟ್ಟಿರುತ್ತಿದ್ದರು.ಅದೂ ನೆಂಟರ ಮನೆಗೆ ಹೋಗುವಾಗ ಮಾತ್ರ.ವರುಷಕ್ಕೊಮ್ಮೆಯೋ,ಎರಡು ಸರ್ತಿಯೋ ಸಿಗುವ ಈ ಸಂಧರ್ಭಕ್ಕೆ ಮಾತ್ರ ಚಪ್ಪಲಿಗೆ ಕಾಲಿಗೇರುವ ಭಾಗ್ಯ.ಉಳಿದಂತೆ ಅದನ್ನು ಚೆನ್ನಾಗಿ ತೊಳೆದು ರಟ್ಟಿನ ಬಾಕ್ಸಿನೊಳಗೆ ಇಟ್ಟು ಜೋಕೆ ಮಾಡಬೇಕಿತ್ತು.ನಮ್ಮ ಪಾದ ಉದ್ದ ಬೆಳೆದು ಚಪ್ಪಲಿಯೊಳಗೆ ನುಗ್ಗದಿದ್ದರೂ ಪರವಾಗಿಲ್ಲ,ಚಪ್ಪಲಿ ಮಾತ್ರ ಏನೇ ಆದರೂ ಹಾಳಾಗಬಾರದು,ಕೊಳೆಯಾಗಬಾರದು.ಇನ್ನು ಮನೆಯಲ್ಲಿ ನಮಗಿಂತ ಎಳೆಯರಿದ್ದರೆ,ಅವರ ಕಾಲಿಗೆ ಅದು ಹಸ್ತಾಂತರವಾಗಿ ಬಿಡುತ್ತಿತ್ತು.ಇನ್ನು ತೋಟದ ಕೆಲಸ ಮಾಡುವಾಗಲೂ ಅಷ್ಟೆ,ಕಲ್ಲು ಮುಳ್ಳು ಚುಚ್ಚಿ ಪಾದ ಘಾಸಿಕೊಂಡರೂ ಅಡ್ಡಿಯಿಲ್ಲ.ಚಪ್ಪಲಿ ಹಾಕಿಕೊಂಡು ಕೆಲಸ ಮಾಡಿದರೆ ದೊಡ್ಡಸ್ತಿಕೆ ಅಂದುಕೊಳ್ಳುವರೇನೋ ಎಂಬ ಏಕೈಕ ಕಾರಣಕ್ಕೆ ಚಪ್ಪಲಿಯನ್ನು ಧರಿಸದೇ ಇರುತ್ತಿದ್ದದ್ದನ್ನು ನೆನೆದರೆ ವಿನೋದವೂ ವಿಷಾದವೂ ಒಟ್ಟಿಗೇ ಆಗುತ್ತದೆ.

barefoot

ಇಂತಿಪ್ಪ ಚಪ್ಪಲಿಯನ್ನು ಕೆಲವರು ಮನೆಯ ಹೊರಗೆ ಇಟ್ಟು ಯಾಕೆ ಅವಮರ್ಯಾದೆ ಮಾಡುತ್ತಾರೋ ಅಂತ ನನಗೆ ಅನೇಕ ಭಾರಿ ಅನ್ನಿಸಿದ್ದಿದೆ.ಉಳ್ಳವರಿಗೆ ಚಪ್ಪಲಿ ಒಂದು ಅಸ್ಪೃಶ್ಯ ವಸ್ತುವಾಗಿದ್ದರೆ,ನಮಗದು ಗೌರವ ಮತ್ತು ಬೆಲೆಬಾಳುವ ಸಂಗತಿಯಾಗಿತ್ತು.ಅಷ್ಟಕ್ಕೂ ಆದರ ಅನಾದರಗಳೆಲ್ಲವೂ ಅವರವರ ಮನಸಿನ ಪ್ರತಿಬಿಂಬ ತಾನೇ?.ಭರತ ಚಕ್ರವರ್ತಿ ಅಣ್ಣ ರಾಮನ ಪಾದುಕೆಯನ್ನೇ ಸಿಂಹಾಸನದ ಮೇಲಿಟ್ಟು ರಾಜ್ಯವಾಳಿದ ಕತೆ ರಾಮಾಯಣದಲ್ಲೇ ಬಂದಿಲ್ಲವೇ?.ಹಾಗಿದ್ದ ಮೇಲೆ,ಊರು ಪೂರಾ ತಿರುಗುವ ಚಪ್ಪಲಿ,ಸಮಯ ಸಂಧರ್ಭ ಬಂದರೆ,ಎಲ್ಲವನ್ನೂ ಮೀರಿ ನಿಲ್ಲಲು ಸಮರ್ಥವಾಗಬಲ್ಲದಲ್ಲ?.ಒಟ್ಟಿನಲ್ಲಿ,ಎಲ್ಲದ್ದಕ್ಕೂ ಅದು ನಮ್ಮೊಳಗಿನ ಮನಸ್ಥಿತಿ ತಾನೇ?.ಅವರವರ ಭಾವಕ್ಕೆ,ಅವರವರ ಭಕುತಿಗೆ ತಕ್ಕಂತೆ.

ಈಗಿನ ಜಮಾನವೇ ಬೇರೆ.ಚಪ್ಪಲಿಗೆ ನಾವು ಅದೆಷ್ಟು ಪ್ರಾಮುಖ್ಯತೆ ಕೊಡುತ್ತೇವೆಯೆಂದರೆ,ಎಷ್ಟು ತರೇವಾರಿ ಚಪ್ಪಲಿಗಳಿದ್ದರೂ ಸಾಕಾಗೋದೇ ಇಲ್ಲ.ಹೈ ಹೀಲ್ಡ್,ಪ್ಲಾಟ್.ಲೆದರ್,ಪ್ಲಾಸ್ಟಿಕ್,ಬೆಲ್ಟ್,ಮತ್ತೊಂದು ಮಗದೊಂದು..ಹೀಗೆ ಮುಗಿಯದಷ್ಟು ವಿನ್ಯಾಸಗಳು.ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತಾಗಿದೆ.ಚಪ್ಪಲಿಗೆ ಹಣ ಹೊಂದಿಸುವುದೇ ಒಂದು ಹರಸಾಹಸ.ಇನ್ನು ಮನೆಯಲ್ಲಿ ಕಾಲೇಜು ಓದುವ ಮಗಳಿದ್ದರೆ ಮುಗಿಯಿತು.ಪಾದಕ್ಕೂ ಪಾದುಕೆಗೂ ಕೊಡುವ ಧ್ಯಾನ ಅಷ್ಟಿಷ್ಟಲ್ಲ.ಅಷ್ಟೇಕೇ? ಚಪ್ಪಲಿಯೆಂದರೆ ಕೆಲವು ಮನೆಯ ನಾಯಿಗಳಿಗೂ ಪಂಚಪ್ರಾಣ.ಅವಕ್ಕೆ ಚಪ್ಪಲಿ ತಿನ್ನುವ ಚಪಲ ಅಷ್ಟಿಷ್ಟಲ್ಲ.ಆದರೆ ಅದಕ್ಕೂ ಸಕತ್ ಬುದ್ದಿ ಇದೆ.ಯಾಕೆಂದರೆ ಮನೆಯವರ ಚಪ್ಪಲಿಯ ಕಡೆ ಅದು ಕಣ್ಣೆತ್ತಿಯೂ ನೋಡುವುದಿಲ್ಲ.ಮನೆಗೆ ಒಮ್ಮಿಂದೊಮ್ಮೆಗೇ ಹೇಳದೇ ಕೇಳದೇ ಬರುವ ಅತಿಥಿಗಳ ಚಪ್ಪಲಿಯ ಮೇಲೆಯೇ ಅದಕ್ಕೆ ಕಣ್ಣು.ಹೀಗೆ ಚಪ್ಪಲಿ ಪ್ರಿಯ ನಾಯಿ ಇದ್ದರೆ ,ಎಷ್ಟು ಜನ ಅತಿಥಿಗಳು ಮನೆಗೆ ಬಂದಾರು ಹೇಳಿ?.ಒಮ್ಮೆ ಬಂದವರಿಗೆ ಬರಿಗಾಲಿನಲ್ಲಿ ಹೋಗಬೇಕಾದ ಆತಿಥ್ಯವೇ ಸಾಕಾಗುತ್ತದೆ.ಅದಕ್ಕೆ ಹೇಳುವುದು ನೋಡಿ!.ನಾಯಿ ನಿಯತ್ತಿನ ಪ್ರಾಣಿ ಎಂದು.ಯಾವ ರೀತಿಯಿಂದಲಾದರೂ ಯಜಮಾನನನ್ನು ಬಚಾವು ಮಾಡುವ ಕಲೆ ಅದಕ್ಕೆ ಗೊತ್ತಿರುತ್ತದೆ.ನಾವು ಸುಮ್ಮಗೆ ಚಪ್ಪಲಿ ತಿಂದಿತು ಅಂತ ಬಂದವರೆದುರು ಅದಕ್ಕೆ ಚಪ್ಪಲಿಯಲ್ಲಿಯೇ ಹಿಗ್ಗಾ ಮುಗ್ಗಾ ಹೊಡೆದು ಅದರ ಮಾನ ತೆಗೆಯುತ್ತೇವೆ.ಬಿಡಿ.ನಾಯಿಗಳಿಗೆ ಬುದ್ದಿ ಇಲ್ಲವೋ ,ಇದೆಯೋ,ಅದು ಮತ್ತಿನ ವಿಚಾರ.ಆದರೆ ನಾಯಿಗಳಿಲ್ಲದ ಜಾಗದಲ್ಲಿಯೂ ಕೆಲವೊಮ್ಮೆ ಚಪ್ಪಲಿ ಕಾಣೆಯಾಗುತ್ತಿದೆಯೆಂಬುದು ಸೋಜಿಗವೇ ಸರಿ.

dog- chappal

ಈಗಿನ ಕಾಲದಲ್ಲಿ ಮೆಟ್ಟುವ ಚಪ್ಪಲಿ ಅಂತ ಖಂಡಿತಾ ಉದಾಸೀನ ಮಾಡಿ ಎಲ್ಲೆಂದರಲ್ಲಿ ಹಾಕಿ ಬಿಡುವಂತಿಲ್ಲ.ಮದುವೆ ಮನೆಯೇ ಆಗಿರಲಿ,ಅಥವಾ ಇನ್ಯಾವುದೋ ಸಮಾರಂಭವಾಗಿರಲಿ,ಅದು ಹೇಗೋ ಚಪ್ಪಲಿ ಮಂಗ ಮಾಯವಾಗಿಬಿಟ್ಟಿರುತ್ತದೆ.ಮೂಲೆಯಲ್ಲಿ ಬಿಚ್ಚಿಟ್ಟ ಚಪ್ಪಲಿ ನಿಜಕ್ಕೂ ಏನಾಯಿತು?. ಕಾದು ಕಾದು ,ಬೇಸರ ಬಂದು ಅದುವೇ ಸುತ್ತಾಡಲು ಹೊರಟಿತೋ?ಅಥವಾ ಯವುದೋ ಧ್ಯಾನದಲ್ಲಿ ಚಪ್ಪಲಿ ಅದಲು ಬದಲು ಆಗಿ ಹೋಯಿತಾ?.ತಿಳಿಯದೆ,ನೋಡದೇ ಚಪ್ಪಲಿ ಕಳುವಾಗಿದೆ ಅಂತ ತೀರ್ಮಾನಕ್ಕೆ ಬರುವುದಾದರು ಹೇಗೆ?.ಅಂತು ಕೆಲವೊಮ್ಮೆ ಚಪ್ಪಲಿ ಅದಲು ಬದಲಾದದ್ದಕ್ಕೆ ಕುರುಹಾಗಿ ಕೆಲವೊಮ್ಮೆ ಯಾವುದೋ ಜೋಡಿ ಚಪ್ಪಲಿಗಳು ಮಂಕು ಹಿಡಿದುಕೊಂಡು ಮೂಲೆಯಲ್ಲಿ ಕಾಯುತ್ತಿರುತ್ತವೆ.ಕೆಲವೊಮ್ಮೆ ಅದೂ ಇರುವುದಿಲ್ಲ.ಹಾಗಾಗಿ ಈಗೀಗ ಚಪ್ಪಲಿ ಇಡುವಲ್ಲಿಯೂ ಸಿ.ಸಿ.ಕ್ಯಾಮರದ ಅಗತ್ಯತೆ ಇದೆ ಎಂಬುದು ಚಪ್ಪಲಿ ಕಳೆದುಕೊಂಡವರ ಅಂಬೋಣ.ಚಪ್ಪಲಿಗೇನು ಕಡಿಮೆ ರೇಟಾ ?ಈಗ.ಹೋದ ಹೋದ ಕಡೆ ನಾವು ಚಪ್ಪಲಿ ಬಿತ್ತಿ ಬಂದರೆ,ಅದು ಮರವಾಗಿ ಚಪ್ಪಲಿಗಳನ್ನು ಉದುರಿಸಿದ್ದರೆಯಾದರೂ ಆಗುತ್ತಿತ್ತು.ಈಗೀಗ ಸರಬರ ರೇಷಿಮೆ ಸೀರೆ ಉಟ್ಟೋ,ಸೂಟುಬೂಟು ತೊಟ್ಟೋ,ಗತ್ತಿನಿಂದ ಸಮಾರಂಭಗಳಿಗೆ ಹೋದರೂ,ನಮ್ಮ ತಲೆಯಲ್ಲಿ ಯೋಚನೆ ,ಹೊರಗೆ ಬಿಟ್ಟ ಚಪ್ಪಲಿಯ ಮೇಲೆಯೇ.ಎಲ್ಲಾ ಬಿಡಿ.ದೇವಾಸ್ಥಾನಕ್ಕೆ ಬಂದವರೆಲ್ಲಾ ನಾವು ಒಳ್ಳೆಯವರೆಂದು ಪರಿಗಣಿಸಿ ಬಿಡುತ್ತೇವೆ.ಅಲ್ಲೂ ಚಪ್ಪಲಿ ಕಳುವಾಗಿ ಬಿಡುತ್ತದೆಯೆಂದರೆ,ಯಾರು ಒಳ್ಳೆಯವರು?ಯಾರು ಕೆಟ್ಟವರು?ಅಂತ ದೇವಾಸ್ಥಾನದ ಪ್ರಾಂಗಾಣದಲ್ಲಿ ತೀರ್ಪು ಕೊಡುವುದೆಂತು?.ಆ ಪರಮಾತ್ಮನಿಗಷ್ಟೇ ತಿಳಿದಿರಬಹುದಾದ ಸತ್ಯ.ಇಷ್ಟಕ್ಕೆಲ್ಲಾ ಹೆದರಿ ,ಚಪ್ಪಲಿ ಹಾಕೋದ ಬಿಡೋಕ್ಕಾಗುತ್ತದೆಯಾ?.

ಇನ್ನು ಕೆಲವೊಮ್ಮೆ ತಮಾಷೆಯೆಂದರೆ,ಎಷ್ಟೇ ಬೆಲೆಬಾಳುವ ಚಪ್ಪಲಿಯೇ ಆಗಲಿ,ನಮ್ಮ ಕಾಲಿಗೂ ಅದಕ್ಕೂ ಒಗ್ಗಿ ಬರುವುದೇ ಇಲ್ಲ.ಕಾಲಿಗೇರಿಸಿ ಬಿಂಕದಲ್ಲಿ ನಡೆದಾಕ್ಷಣ,ಪಾದದ ಅಕ್ಕಪಕ್ಕ ಕಚ್ಚಿ ಬೊಕ್ಕೆಗಳೇಳಿಸಿ ಬಿಡುತ್ತವೆ.ಬರಿಗಾಲಲ್ಲೂ ನಡೆಯದ ಹಾಗೆ ಮಾಡಿಬಿಟ್ಟಿರುತ್ತದೆ.ಚಪ್ಪಲಿ ಕಾಲಿಗೆ ಹಾಕಲು ಬಳಸಿದರೂ,ಹೊರಗೆ,ಮಣ್ಣು,ದೂಳು,ಕೊಳಕು ಮೆಟ್ಟಲು ಉಪಯೋಗಿಸುವಂತಾದರೂ ,ಅದರ ಬೆಲೆಯೇನೂ ಕಡಿಮೆಯಿಲ್ಲ.ಕೆಲವರಿಗಂತೂ ಒಂದೆರಡು ಚಪ್ಪಲಿ ಸಾಕಾಗುವುದೇ ಇಲ್ಲ.ಬಟ್ಟೆಗೆ ಅನುಗುಣವಾಗಿ ಒಪ್ಪುವಂತ ಮ್ಯಾಚಿಂಗ್,ಮ್ಯಾಚಿಂಗ್ ಚಪ್ಪಲಿಗಳು.ಕೆಲವು ಚಪ್ಪಲಿಗಳ ಹಿಮ್ಮುಡಿ ನೋಡಬೇಕು,ಮೊನಚು ತುದಿಯವು.ಒಳ್ಳೆ ಸರ್ಕಸ್‌ನಲ್ಲಿ ನಡೆದ ಹಾಗೆ ನಡಿಯ ಬೇಕಷ್ಟೆ.ಚೂರು ಆಯ ತಪ್ಪಿದರೂ ಕಾಲು ಸೊಂಟ ಎರಡೂ ಉಳುಕಿ ಆಸ್ಪತ್ರೆವಾಸ ತಪ್ಪಿದ್ದಲ್ಲ.ಈಗ ಒಳಗೊಂದು,ಹೊರಗೊಂದು,ಆಟಕ್ಕೊಂದು,ಪಾಠಕ್ಕೊಂದು, ಕಾಲೇಜಿಗೊಂದು, ಪೇಷೆಂಟ್‌ಗಳಿಗೆ ಮತ್ತೊಂದು.ಡೈಲಿ ವೇರ್, ಒಕೇಶನಲ್ ವೇರ್ ಅಂತ ಮಗದೊಂದು. ಇನ್ನು ಆಯಾ ಕಾಲಕ್ಕಣುಗುಣವಾಗಿ..ಇರುವ ಎರಡೇ ಕಾಲಿಗೆ ಲೆಕ್ಕವಿಲ್ಲದಷ್ಟು ಪಾದುಕೆಗಳು.ಚಪ್ಪಲಿ ಅಂಗಡಿಯಿಟ್ಟವರೆಲ್ಲಾ ಬೇಗ ಹೇಗೆ ಶ್ರೀಮಂತರಾಗೋದು ಅಂತ ಈಗ ಗೊತ್ತಾಯ್ತು ನೋಡಿ.

ಹೇಳಬೇಕಾದುದ್ದನ್ನೇ ಹೇಳೋಕೆ ಮರೆತೆ ನೋಡಿ.ನಮ್ಮ ಕಿಲಾಡಿ ಹುಡುಗರು,ಹುಡುಗಿಯ ಕಾಲಿನ ಚಪ್ಪಲಿಗೆ ಹೆದರುವಷ್ಟು ಮತ್ಯಾವುದಕ್ಕೂ ಹೆದರಲಿಕ್ಕಿಲ್ಲ ಅಂತ ಅನ್ನಿಸುತ್ತದೆ.ನಮ್ಮ ಹುಡುಗಿಯರಿಗೆ ಈ ಚಪ್ಪಲಿ ಸಾಕಷ್ಟು ಬಲ ಮತ್ತು ಧೈರ್ಯವನ್ನು ನೀಡುತ್ತದೆಯೆಂದರೂ ಸುಳ್ಳಲ್ಲ.ಪಾದಕ್ಕೆ ಮಾತ್ರ ಅಲ್ಲ,ಎಲ್ಲಾ ವಿಧದಿಂದಲೂ ರಕ್ಷಣೆ ಕೊಡುವ ಚಪ್ಪಲಿಯನ್ನು ನಾವು ಹಗುರವಾಗಿ ಹೀಗೆಳೆಯುವಂತಿಲ್ಲ ನೋಡಿ!.ಸುಂದರವಾದ ಪಾದ ರಕ್ಷೆ ತೊಟ್ಟ ಹುಡುಗಿ ಎಲ್ಲೂ ಹೋದರೂ ಆತ್ಮವಿಶ್ವಾಸದಿಂದ ಏಕೆ ನಡೆಯುತ್ತಾಳೆಂಬುದರ ಹಿಂದಿನ ಅರ್ಥ ಈಗ‌ಎಲ್ಲರಿಗೂ ಮನವರಿಕೆಯಾಗಿರಬಹುದು.

ನಾನಂತೂ ಯಾರು ಏನು ಹೇಳಲಿ,ಬಿಡಲಿ,ಚಪ್ಪಲಿ ಸವೆದು ತುಂಡಾಗುವವರೆಗೆ ಒಂದೇ ಚಪ್ಪಲಿಯನ್ನು ಬಳಸುವುದೆಂದು ತೀರ್ಮಾನಿಸಿರುವೆ. ಯಾಕೋ ಬೀದಿಗಿಳಿಯುವ ಚಪ್ಪಲಿ ಮೇಲೆ ವೃಥಾ ದುಡ್ಡು ಸುರಿಯಲು ಮನಸು ಸುತಾರಾಂ ಒಪ್ಪುವುದಿಲ್ಲ ನೋಡಿ. ಹಿಂದೊಮ್ಮೆ ಅಪರೂಪಕ್ಕೆ ಹೇಗೋ ಎಳವೆಯಲ್ಲಿ ಸಿಕ್ಕ 40  ರೂಪಾಯಿಯ ಕೆಂಪು ಲೆದರ್ ಚಪ್ಪಲಿಯನ್ನು ಗತ್ತಿನಿಂದ ಶಾಲೆಗೆ ಹಾಕಿಕೊಂಡು ಹೋಗಿ ಉಳಿದ ಮಕ್ಕಳ ಹೊಟ್ಟೆಯನ್ನೆಲ್ಲಾ ಉರಿಸಿಬಿಟ್ಟಿದ್ದೆ.ನಾನೊಮ್ಮೆ ಹಾಕಿ ನೋಡ್ತೇನೆ ಕಣೇ,ಅಲ್ಲಿಯವರೆಗೆ ಹಾಕಿ ನಡಿತೇನೆ ಕೊಡೇ..ಅಂತ ಎಲ್ಲಾ ಮಕ್ಕಳು ಆಸೆ ಪಟ್ಟು ದುಂಬಾಲು ಬಿದ್ದು,ನಾನು ಅವರಿಗೆ ಕೊಟ್ಟ ಹಾಗೇ ಮಾಡಿ ವಾಪಸ್ ನನ್ನ ಕಾಲಿಗೇರಿಸಿಕೊಂಡದ್ದು ಎಲ್ಲಾ ಈಗ ನೆನಪಿಗೆ ಬರುವ ಹೊತ್ತಲ್ಲಿ,ಬೆಳೆದು ವಯಸ್ಕರಾದ ಅವರೆಲ್ಲಾ ಈಗ ಯಾವ ಬಣ್ಣ ಬಣ್ಣದ ಚಪ್ಪಲಿ ಹಾಕಿಕೊಂಡು,ದಿನಕ್ಕೊಂದು ಚಪ್ಪಲಿ ಏರಿಸಿಕೊಂಡು,ಎಲ್ಲವನ್ನೂ ಮರೆತಿರುವರಂತೆ ಓಡುತ್ತಿರುವರಾ..?ಅಂತ ಅನ್ನಿಸತೊಡಗಿ, ನನಗಂತೂ ಪರಮ ಜ್ಞಾನ ಮೈಮೇಲೆ ಹೊಕ್ಕವರ ಹಾಗೆ,ಎಲ್ಲಾ ನನಗೊಬ್ಬಳಿಗೇ ನೆನಪಿಗೆ ಬಂದಂತೆ ಭಾಸವಾಗಿ,ನಿಜಕ್ಕೂ ಚಪ್ಪಲಿಯ ಮತ್ತಷ್ಟು ಕತೆಗಳು ನೆನಪಿಗೆ ಬಂದು ಸಿಕ್ಕಾಪಟ್ಟೆ ನಗು ತರಿಸಿಕೊಂಡು,ಅದೇ ಹಳೇ ಚಪ್ಪಲಿ ಕೀಲಿಸಿಕೊಂಡು ,ಎಲ್ಲರ ಕಾಲಿನ ಚಪ್ಪಲಿಗಳನ್ನು ಸೂಕ್ಷವಾಗಿ ನೋಡುತ್ತಾ ..ಮತ್ತಷ್ಟು ಚಪ್ಪಲಿಯ ರೋಚಕ ಅನುಭವಗಳಿಗೆ ಕಾಯುತ್ತಾ ,ಎಷ್ಟು ದೂರ ನಡೆದರೂ ಚಪ್ಪಲಿ ಮಾತ್ರ ಸವೆಯದಷ್ಟು ಮೆಲ್ಲಗೆ ಹೆಜ್ಜೆ ಹಾಕುತ್ತಾ ಸಾಗುತ್ತಿರುವೆ.

.
– ಸ್ಮಿತಾ ಅಮೃತರಾಜ್, ಸಂಪಾಜೆ

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: