ನುಗ್ಗೆಕಾಯಿಯ ಸೂಪ್
ಹಸಿವನ್ನು ಹೆಚ್ಚಿಸುವ ವಿವಿಧ ಸೂಪ್ ಗಳು ನಾಲಿಗೆಗೂ ರುಚಿ, ಆರೋಗ್ಯಕ್ಕೂ ಹಿತ. ವರ್ಷದ ಹೆಚ್ಚಿನ ಋತುಗಳಲ್ಲೂ ಸಿಗುವ ಸುಗ್ಗೆಕಾಯಿಯ ಸೂಪ್ ಮಾಡಿ ಕುಡಿಯಬಹುದು:
ಬೇಕಾಗಿರುವ ಸಾಮಗ್ರಿಗಳು:
- ನುಗ್ಗೆಕಾಯಿ : 5
- ತುಪ್ಪ : 2 ಚಮಚ
- ಅಕ್ಕಿ ಹಿಟ್ಟು : 1 ಚಮಚ (ಅಕ್ಕಿ ಹಿಟ್ಟಿನ ಬದಲು ಮೈದಾ, ರಾಗಿ, ಕೋರ್ನ್ ಫ್ಲೋರ್ ಇತ್ಯಾದಿ ಕೂಡಾ ಬಳಸಬಹುದು)
- ರುಚಿಗೆ ತಕ್ಕಷ್ಟು : ಉಪ್ಪು, ಪೆಪ್ಪರ್ ಪೌಡರ್
- ಹೆಚ್ಚಿದ ನಿಂಬೆ ಹಣ್ಣು : ಅರ್ಧ
- ಕರಿದ ಬ್ರೆಡ್ ಚೂರುಗಳು : ಸ್ವಲ್ಪ
- ಕೊತ್ತಂಬರಿ ಸೊಪ್ಪು : ಸ್ವಲ್ಪ
ತಯಾರಿಸುವ ವಿಧಾನ:
- ಮೊದಲು ನುಗ್ಗೆಕಾಯಿಗಳನ್ನು ಹೆಚ್ಚಿ, ಹೋಳುಗಳು ಮುಳುಗಷ್ಟು ನೀರು ಹಾಕಿ ಕುಕ್ಕರಿನಲ್ಲಿ ಒಂದು ವಿಸಿಲ್ ಬರುವಲ್ಲಿ ವರೆಗೆ ಬೇಯಿಸಿ. ಬಿಸಿ ಆರಿದ ಮೇಲೆ ಹೋಳುಗಳನ್ನು ಹಿಂಡಿ, ನುಗ್ಗೆಕಾಯಿಯ ತಿರುಳನ್ನು ಬೇರ್ಪಡಿಸಿ ಒಂದು ಪಾತ್ರೆಯಲ್ಲಿ ಶೇಖರಿಸಿ.
- ಅಕ್ಕಿಹಿಟ್ಟನ್ನು ಬಾಣಲೆಗೆ ಹಾಕಿ, ಎರಡು ಚಮಚ ತುಪ್ಪ ಸೇರಿಸಿ, ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವಷ್ಟು ಹುರಿಯಿರಿ.
- ಹುರಿದ ಅಕ್ಕಿ ಹಿಟ್ಟನ್ನು, ನುಗ್ಗೆಕಾಯಿಯ ತಿರುಳಿಗೆ ಸೇರಿಸಿ ಸೂಪಿನ ಹದಕ್ಕೆ ನೀರು ಬೇಕಿದ್ದರೆ ಸೇರಿಸಿ ಕುದಿಸಿ.
- ರುಚಿಗೆ ತಕ್ಕಷ್ಟು ಉಪ್ಪು, ಪೆಪ್ಪರ್ ಬೆರೆಸಿ.
- ನಿಂಬೆರಸ ಸೇರಿಸಿ.
- ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ತುಪ್ಪದಲ್ಲಿ ಕರಿದ ಬ್ರೆಡ್ ಚೂರುಗಳನ್ನು ಸೇರಿಸಿ ಸವಿಯಲು ಕೊಡಿ.
– ಪ್ರಸನ್ನ ನಂಬೀಶನ್ , ಮೈಸೂರು