ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 1
ನಮ್ಮ ನೆರೆ ರಾಷ್ಟ್ರವಾದ ನೇಪಾಳದಲ್ಲಿ ಮಾನವ ನಿರ್ಮಿತ ಅನುಕೂಲತೆಗಳು ಕಡಿಮೆ ಇದೆಯಾದರೂ, ಪ್ರಾಕೃತಿಕ ಸೊಬಗು ಮೊಗೆದಷ್ಟೂ ಮುಗಿಯದು. ನೇಪಾಳ ಪ್ರವಾಸದ ದಾರಿಯಲ್ಲಿ ದೃಷ್ಟಿ ಹಾಯಿಸಿದಲ್ಲೆಲ್ಲ ಹಸಿರು ಬೆಟ್ಟ, ಕಂದು ಬಣ್ಣದ ಪರ್ವತ ಅಥವಾ ಹಿಮಕಿರೀಟ ತೊಟ್ಟ ಹಿಮಾಲಯದ ಬೆಟ್ಟಗಳು. ಅಲ್ಲಲ್ಲಿ ಕಾಣಸಿಗುವ ಪ್ರಪಾತಗಳು, ಕಣಿವೆಗಳು. ಇವುಗಳ ಮಧ್ಯೆ ಆಗೊಮ್ಮೆ, ಈಗೊಮ್ಮೆ ಕಾಣಸಿಗುವ ಸಮತಟ್ಟಾದ ಪ್ರದೇಶದಲ್ಲಿ ಯಾವುದೋ ಸಣ್ಣ ಹಳ್ಳಿ , ಹೊಲಗದ್ದೆಗಳು ಇರುತ್ತವೆ.
ಇಲ್ಲಿನ ಭೌಗೋಳಿಕ ಅನಾನುಕೂಲತೆ ಮತ್ತೆ ರಾಜಕೀಯ ಅತಂತ್ರ ಸ್ಥಿತಿ ದೇಶದ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡುತ್ತಿರಬಹುದು. ಒಟ್ಟಿನಲ್ಲಿ ನೇಪಾಳವು ಭಾರತಕ್ಕಿಂತ ಬಡರಾಷ್ಟ್ರ ಮತ್ತು ಅಭಿವೃದ್ದಿಯಲ್ಲೂ ಹಿಂದುಳಿದಿದೆ. ನೇಪಾಳದಲ್ಲಿ ಎಲ್ಲಾ ಅಂಗಡಿಗಳಲ್ಲೂ ಭಾರತದ ಹಣವನ್ನು ಪಡೆದುಕೊಳ್ಳುತ್ತಾರೆ. ಭಾರತದ 10 ರೂ. ಗೆ ನೇಪಾಳದ 15 ರೂ. ವಿನಿಮಯವನ್ನೂ ಮಾಡುತ್ತಾರೆ. ಹಾಗಾಗಿ, ನಮಗೆ ಕರೆನ್ಸಿಯ ಬಗ್ಗೆ ಯಾವುದೇ ತೊಂದರೆಯಾಗುವುದಿಲ್ಲ.
ರಸ್ತೆ ಮೂಲಕ ನೇಪಾಳವನ್ನು ಪ್ರವೇಶಿಸಲು ಬಲು ಸುಲಭ. ಭಾರತೀಯರಿಗೆ ನೇಪಾಳದಲ್ಲಿ ವೀಸಾ ಬೇಕಿಲ್ಲ. ಭಾರತದ ಗಡಿಯಲ್ಲಿರುವ ಸೋನಾಲಿ ಬಾರ್ಡರ್ ನಲ್ಲಿರುವ ಇಮಿಗ್ರೇಷನ್ ಸೆಂಟರ್ ನಲ್ಲಿ ನಮ್ಮ ಸರಕಾರದ ಅಂಗೀಕೃತವಾದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಚುನಾವಾಣಾ ಗುರುತಿನ ಚೀಟಿ – ಹೀಗೆ ಯಾವುದಾದರೂ ಒಂದನ್ನು ತೋರಿಸಿ ನೇಪಾಳಕ್ಕೆ ಪ್ರವೇಶಿಸಬಹುದು.
20 ಫೆಬ್ರವರಿ 2017 ರಂದು, ಸೋನಾಲಿ ಬಾರ್ಡರ್ ಮೂಲಕ ನೇಪಾಳದ ‘ಪೋಖ್ರಾ’ ಕಡೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆವು. ಟ್ರಾವೆಲ್ಸ್ ನವರ ನಿಗದಿತ ವೇಳಾಪಟ್ಟಿ ಪ್ರಕಾರ, ನಮಗೆ ಅಂದು ಪೋಖ್ರಾ ನಗರವನ್ನು ತಲಪಿ, ಮರುದಿನ ಅಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿಕೊಡುವ ಕಾರ್ಯಕ್ರಮವಿತ್ತು. ನಮ್ಮ ತಂಡದಲ್ಲಿದ್ದ ಕೆಲವರು, ನಮಗೆ ಪೋಖ್ರಾ ಸೈಟ್ ಸೀಯಿಂಗ್ ಬೇಡ, ಮುಕ್ತಿನಾಥ ದೇವಾಲಯಕ್ಕೆ ಹೋಗಬೇಕು, ಇಲ್ಲಿ ವರೆಗೆ ಬಂದು ಮುಕ್ತಿನಾಥನ ದರ್ಶನ ಮಾಡದೆ ಹಿಂತಿರುಗಲಾರೆವು ಎಂದು ಪಟ್ಟು ಹಿಡಿದರು.
ನೇಪಾಳದ ಮುಸ್ತಾಂಗ್ ಜಿಲ್ಲೆಯಲ್ಲಿ , ಹಿಮಾಲಯ ಪರ್ವತ ಶ್ರೇಣಿಗಳ ನಡುವೆ, ಶೋಭಿಸುತ್ತಿರುವ ಮುಕ್ತಿನಾಥ ಕ್ಷೇತ್ರವು ಹಿಂದೂ ಮತ್ತು ಬೌದ್ಧರ ಆರಾಧನಾ ಸ್ಥಳ. ಮುಕ್ತಿನಾಥದಲ್ಲಿ ವಿಷ್ಣುವಿನ ಮಂದಿರವೂ ಬೌದ್ಧರ ಸ್ತೂಪವೂ ಇದೆ. ನೇಪಾಳದ ಮುಖ್ಯನಗರವಾದ ಪೋಖ್ರಾದಿಂದ ಇಲ್ಲಿಗೆ 110 ಕಿ.ಮೀ ದೂರವಿದೆ. ಮುಕ್ತಿನಾಥವು ಸಮುದ್ರ ಮಟ್ಟದಿಂದ 12300 ಅಡಿ ಎತ್ತರದಲ್ಲಿದೆ. ಹಿಂದೂಗಳ ಪಾಲಿಗೆ ‘ಮುಕ್ತಿನಾಥ’ನ ದರ್ಶನದಿಂದ ಜನನ-ಮರಣಗಳ ಜನ್ಮಾಂತರಗಳಿಂದ ಮುಕ್ತಿ ಲಭಿಸುತ್ತದೆ ಎಂಬ ನಂಬಿಕೆ. ಒಂದೇ ಕ್ಷೇತ್ರ ಸ್ಥಾಪಿಸಲಾದ ದೇವಾಲಯದಲ್ಲಿ, ಒಂದೇ ಮೂರ್ತಿಯನ್ನು ಎರಡು ಧರ್ಮೀಯರು ಪೂಜಿಸುವುದರ ಜೊತೆಗೆ, ಪರಸ್ಪರ ಸೌಹಾರ್ದ ಹಾಗೂ ಗೌರವವನ್ನು ಕಾಯ್ದುಕೊಂಡು ಬರುತ್ತಿರುವುದು ಗಮನಾರ್ಹ. ವರ್ಷದ ಎಲ್ಲಾ ಕಾಲದಲ್ಲಿ ದೇವಾಲಯವು ತೆರೆದಿದ್ದರೂ, ಮಾರ್ಚ್ ನಿಂದ ನವೆಂಬರ್ ವರೆಗಿನ ಅವಧಿಯಲ್ಲಿ ಹವಾಮಾನವು ಹೆಚ್ಚು ಅನುಕೂಲಕರವಾಗಿರುತ್ತದೆ.
ಮುಕ್ತಿನಾಥದಲ್ಲಿ ಒಟ್ಟು ಮೂರು ಹಿಂದೂ ಮಂದಿರಗಳಿವೆ. ಅವುಗಳಲ್ಲಿ ಪ್ರಧಾನವಾದುದು ಲಕ್ಷ್ಮೀನಾರಾಯಣ ದೇವಾಲಯ. ಇಲ್ಲಿ ಹಿಂದೂಗಳು ಆರಾಧಿಸುವ ‘ನಾರಾಯಣ’ನು, ಬೌದ್ಧರು ಪೂಜಿಸುವ ‘ಅವಲೋಕಿತೇಶ್ವರ’ನೂ ಹೌದು. ಕಲ್ಲಿನಿಂದ ಕಟ್ಟಲ್ಪಟ್ಟ ನೇಪಾಳಿ ಶೈಲಿಯ ದೇವಾಲಯವು ಪುಟ್ಟದಾಗಿದ್ದು ಸೊಗಸಾಗಿದೆ, ದೇವಾಲಯದ ಸುತ್ತಲೂ ಕೋಟೆ ಕಟ್ಟಿದಂತಹ ಪರ್ವತವಿದೆ. ಈ ಪರ್ವತದಿಂದ 108 ನೀರಿನ ಝರಿಗಳು ಹರಿಯುತ್ತಿವೆ.
ಬೌದ್ಧರು ಈ ಕ್ಷೇತ್ರವನ್ನು ‘ಚುಮಿಗ್ ಗ್ಯಾತ್ಸಾ’ ಅಂದರೆ 108 ನೀರಿನ ಸನ್ನಿಧಿ ಎಂಬ ಅರ್ಥ ಕರೆಯುತ್ತಾರೆ. ಬೌದ್ಧರ ನಂಬಿಕೆ ಪ್ರಕಾರ ತಮ್ಮ ಗುರುವಾದ ರಿಂಪೋಚೆ ಅಥವಾ ಪದ್ಮಸಂಭವ ಅವರು 12 ನೆಯ ಶತಮಾನದಲ್ಲಿ ಟಿಬೆಟ್ ಗೆ ಹೋಗುವ ದಾರಿಯಾಗಿ, ಇಲ್ಲಿ ಧ್ಯಾನಸ್ಥರಾಗಿ ವಿಶಿಷ್ಟ ಜ್ಞಾನವನ್ನು ಪಡೆದರು. ಜ್ಯೋತಿಶ್ಶಾಸ್ತ್ರದ ಪ್ರಕಾರ ಒಟ್ಟು 12 ರಾಶಿಗಳು ಮತ್ತು 9 ಗ್ರಹಗಳು. ಇವು ಒಟ್ಟು 108 ಸಂಯೋಜನೆಯಲ್ಲಿ ಬರುತ್ತವೆ. ಹಾಗೆಯೇ, ಒಟ್ಟು 27 ನಕ್ಷತ್ರಗಳು 4 ಪಾದಗಳಾಗಿ ವಿಂಗಡಿಸಲ್ಪಟ್ಟು ಅವುಗಳ ಸಂಯೋಜನೆಯೂ 108 ಆಗುತ್ತದೆ ಈ ನೀರಿನ ಸೆಲೆಗಳು ಕಲ್ಲಿನಲ್ಲಿ ಕೆತ್ತಿದ ಹಸುವಿನ ಮುಖದ ಮೂಲಕ ಬರುವಂತೆ ಮಾಡಿರುವುದು ತೀರ್ಥಸ್ನಾನ ಮಾಡಲು ಅನುಕೂಲಕರವಾಗಿದೆ. ಮುಕ್ತಿನಾಥನ ದೇವಾಲಯದ ಮುಂದೆ ಎರಡು ನೀರಿನ ಕುಂಡಗಳಿವೆ. ಇವುಗಳಲ್ಲಿಯೂ ಭಕ್ತರು ತೀರ್ಥಸ್ನಾನ ಮಾಡುತ್ತಾರೆ.
(ಮುಂದುವರಿಯುವುದು)
ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 2 http://surahonne.com/?p=13700
– ಹೇಮಮಾಲಾ.ಬಿ
Very good . ತುಂಬಾ ಒಳ್ಳೆ ಮಾಹಿತಿಗಳನ್ನು ಕೊಟ್ಟಿದ್ದೀರಿ
ಸ್ಥಳದ ಯಥಾಸ್ಥಿತಿ, ಸಚಿತ್ರವಾಗಿ, ಸರಳವಾಗಿ, ಪೂರ್ಣ ವಿವರಗಳೊಂದಿಗೆ ಚೆನ್ನಾಗಿ ನಿರೂಪಿಸಿರುವಿರಿ. ಧನ್ಯವಾದ.
ನಿಮ್ಮ ಪ್ರತಿ ಬರಹ ಓದ್ತೇನೆ. ಜ್ಞಾನ ವೃದ್ಧಿ ಮಾಡ್ಕೋತೇನೆ. ಬಹುಶಃ ನಿಮ್ಮ ಪ್ರವಾಸ ಕಥನ, ನಡುವೆ ಬರುವ ಅಡುಗೆ ವಿಷಯ, ಇವೆಲ್ಲವೂ ಒಂದು ಪುಸ್ತಕ ವಾಗಬಹುದು. ನಿಮ್ಮ ಬರಹದ ಭಾಷೆ ಅತ್ಯುತ್ತಮ .