ಮತ್ತೆಂದೂ ಮರೆಯಲಿಲ್ಲ
ಆಷಾಡದ ಬೀಸುಗಾಳಿಯ ಜೊತೆ ಸುರಿದ ಮಳೆಯ
ನಟ್ಟಿರುಳಲ್ಲಿ ಕಿಟಕಿಯಿಂದ ಕದ್ದುಬಂದ ಬೆಕ್ಕಿಗೆ
ಅಪರಿಚಿತವೇನಲ್ಲ ಅಡುಗೆ ಮನೆ.
ಮಲಗುವ ಮುಂಚೆ ಕಾಯಿಸಿ
ಕಟ್ಟೆಯ ಮೇಲಿಟ್ಟ ಹಾಲಿನ ಪಾತ್ರೆ
ಫ್ರಿಜ್ಜಿನಲ್ಲಿಡಲು ಮರೆತು
ಮಲಗಿದವಳಿಗೆ
ನಟ್ಟಿರುಳಲ್ಲಿ ಚಪ್ಪರಿಸುವ ನಾಲಿಗೆಯ ಸದ್ದು
ಕೇಳಿ
ಗಾಬರಿಯೊಳಗೆ ಕಣ್ಬಿಟ್ಟು
ದೀಪ ಹಾಕಿ ಓಡುವಷ್ಟರಲ್ಲಿ
ತೆರೆದ ಕಿಟಕಿಯಾಚೆಗೆ ಕಾಣಿಸಿದ್ದು
ಹೊರಹಾರುತಿರುವ ಬೆಕ್ಕಿನ ಬಾಲ ಮಾತ್ರ!
ಉರುಳಿಬಿದ್ದಿದ್ದ ಪಾತ್ರೆಯ ಎತ್ತಿಟ್ಟು ಮಲಗಿದವಳಿಗೆ
ಮತ್ತೆ ನಿದ್ದೆ ಬರಲಿಲ್ಲ
ಬಂದ ಮಂಪರಿನೊಳಗೂ ಬೆಕ್ಕಿನ ಮೃದುವಾದ ತುಪ್ಪಳದ ಮೈ
ಮತ್ತದರ ಕಣ್ಣುಗಳೆ ಕಂಡಂತಾಗಿ
ಬೆಚ್ಚಿ ಕಣ್ತೆರೆದರೆ ಪಕ್ಕದಲಿ ಮಲಗಿದ್ದ ಗಂಡಮಗ್ಗುಲು ಬದಲಾಯಿಸುತ್ತಿದ್ದ!
ಮತ್ತವಳೆಂದೂ ಮೈಮರೆತು ಮಲಗಲಿಲ್ಲ
ಹಾಲಿನ ಪಾತ್ರೆ ಮುಚ್ಚಿಡುವುದ ಮರೆಯಲಿಲ್ಲ!
– ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ